ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುನೀತ್ ಅಭಿನಯಕ್ಕೆ ಬೆರಗಾಗಿದ್ದ ರಾಜ್‌ಕುಮಾರ್’

ಚಿತ್ರೋತ್ಸವದಲ್ಲಿ ಪುನೀತ್‌ ರಾಜ್‌ಕುಮಾರ್ ನೆನಪು: ಒಡನಾಟ ಮೆಲುಕು ಹಾಕಿದ ಭಗವಾನ್
Last Updated 5 ಮಾರ್ಚ್ 2022, 19:24 IST
ಅಕ್ಷರ ಗಾತ್ರ

ಬೆಂಗಳೂರು: ‘ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಪುನೀತ್ ಅವರ ಅಭಿನಯ ಕಂಡು ಸ್ವತಃ ರಾಜ್‌ಕುಮಾರ್ ಅವರೇ ಬೆರಗಾಗಿದ್ದರು. ಅಭಿನಯದಲ್ಲಿ ನನ್ನನ್ನೇ ಮೀರಿಸುವನೋ ಏನೋ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದು ಸಿನಿಮಾ ನಿರ್ದೇಶಕ ಎಸ್.ಕೆ. ಭಗವಾನ್ ನೆನಪಿನ ಬುತ್ತಿ ಬಿಚ್ಚಿಟ್ಟರು.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶನಿವಾರ ‘ಮೆಮೊರಿಸ್ ಆಫ್ ಹೀರೊ–ಪುನೀತ್‌ ರಾಜ್‌ಕುಮಾರ್’ ಕಾರ್ಯಕ್ರಮದಲ್ಲಿ ಪುನೀತ್ ಜತೆಗಿನ ಒಡನಾಟವನ್ನು ಅವರು ಮೆಲುಕು ಹಾಕಿದರು.

‘ರಾಜ್‌ಕುಮಾರ್ ಅವರು ಕೆಲವು ದೃಶ್ಯಗಳಲ್ಲಿ ಅಭಿನಯಿಸುವಾಗ ಎರಡು– ಮೂರು ಟೇಕ್ ತಗೆದುಕೊಂಡರೆ, ಪುನೀತ್ ಒಂದೇ ಟೇಕ್‌ನಲ್ಲಿ ಯಶಸ್ವಿಯಾಗುತ್ತಿದ್ದರು. ಪಾತ್ರವನ್ನು ಗ್ರಹಿಸುವ ಶಕ್ತಿ ಆ ವಯಸ್ಸಿನಲ್ಲೇ ಹೇಗೆ ಬಂದಿತ್ತೊ ಗೊತ್ತಿಲ್ಲ’ ಎಂದು ಬಣ್ಣಿಸಿದರು.

‘ಅಪ್ಪು ಹುಟ್ಟಿದ ದಿನವೇ ನಿನ್ನ ಕೈಗೆ ಬಿದ್ದಿದ್ದಾನೆ. ಅವನು ಕೀರ್ತಿಯ ಶಿಖರ ಏರೇ ಏರುತ್ತಾನೆ ಎಂಬುದು ನನ್ನ ನಂಬಿಕೆ ಎಂದು ಪಾರ್ವತಮ್ಮ ರಾಜ್‌ಕುಮಾರ್‌ ಹೇಳಿದ್ದರು. ಯಾವ ಮನಸಿನಿಂದ ಅದನ್ನು ಹೇಳಿದ್ದರೋ ಗೊತ್ತಿಲ್ಲ, ನಿಜವಾಯಿತು. ಇದ್ದಾಗ ಕೀರ್ತಿ ಸಂಪಾದಿಸಿದರು, ಹೋದ ನಂತರವೂ ಅವರ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಹಾಗಾಗಿ, ಅವರ ಕೀರ್ತಿ ಸೂರ್ಯ– ಚಂದ್ರ ಇರುವ ತನಕ ಇದ್ದೇ ಇರುತ್ತದೆ’ ಎಂದರು.

‘ಶಕ್ತಿಧಾಮದ 4 ಎಕರೆ ಜಾಗದಲ್ಲಿ ದೊಡ್ಡ ಶಾಲೆ ಕಟ್ಟಬೇಕು ಎಂಬುದು ಅವರ ಆಸೆಯಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಅಂದಾಜಿಸಿದ್ದ ₹8 ಕೋಟಿ ವ್ಯವಸ್ಥೆ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದರು. ಈ ಶಾಲೆಯಲ್ಲಿ ಎಲ್ಲಾ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಸಿಗಬೇಕು ಎಂದು ಬಯಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ಅವರು ಇಲ್ಲವಾದರು. ಅವರ ಅದೊಂದು ಆಸೆ ಈಡೇರದೆ ಉಳಿದುಕೊಂಡಿತು’ ಎಂದು ಭಗವಾನ್ ಭಾವುಕರಾದರು.

ಸಿನಿಮಾ ನಿರ್ದೇಶಕ ಪವನ್ ಒಡೆಯರ್, ‘ಸಿನಿಮಾದಲ್ಲಿ ಅಭಿನಯಿಸಲು ನಾನು ಹಣ ಪಡೆಯುತ್ತೇನೆ. ಜನ ಹಣ ಕೊಟ್ಟು ಸಿನಿಮಾ ನೋಡುತ್ತಾರೆ. ಆದರೂ, ಜನ ನಮ್ಮನ್ನು ಇಷ್ಟೊಂದು ಪ್ರೀತಿ, ಅಭಿಮಾನ ಇಟ್ಟುಕೊಂಡಿರುವುದು ಏಕೆ ಎಂಬುದೇ ಅರ್ಥವಾಗುವುದಿಲ್ಲ. ಅವರಿಗೆ ನಾವು ಏನು ಕೊಟ್ಟರೂ ಕಡಿಮೆಯೇ ಎನ್ನುತ್ತಿದ್ದರು ಪುನೀತ್ ಸರ್‌’ ಎಂದು ನೆನಪು ಮಾಡಿಕೊಂಡರು.

ಸಿನಿಮಾ ನಿರ್ದೇಶಕ ಚೇತನ್‌ಕುಮಾರ್, ‘ಜೇಮ್ಸ್ ಚಿತ್ರದಲ್ಲಿ ಸೈನಿಕನ ಪಾತ್ರವನ್ನು ಅಪ್ಪು ಸರ್ ಮಾಡಿದ್ದಾರೆ. ಸೈನಿಕರ ರೀತಿಯ ವಸ್ತ್ರ ಧರಿಸುವಾಗ ಅತ್ಯಂತ ಜಾಗರೂಕತೆ ವಹಿಸುತ್ತಿದ್ದರು. ಸೈನಿಕರ ಗೌರವ ಕಡಿಮೆ ಆಗುವ ರೀತಿಯಲ್ಲಿ ನಮ್ಮ ವೇಷ ಇರಬಾರದು ಎಂಬುದು ಅವರ ಆಶಯವಾಗಿತ್ತು. ಜೇಮ್ಸ್ ಚಿತ್ರ ಸೆನ್ಸಾರ್‌ ಮಂಡಳಿಯ ಮುಂದಿದೆ. ಮಾ.17ರಂದು ಅವರ ಹುಟ್ಟು ಹಬ್ಬದ ದಿನವೇ ಅಮೆರಿಕದ 72 ಕೇಂದ್ರಗಳಲ್ಲಿ ಸೇರಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ’ ಎಂದು ಹೇಳಿದರು.

ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಅವರು ‘ಪೃಥ್ವಿ’ ಚಿತ್ರ ನಿರ್ಮಾಣ ಸಂದರ್ಭದಲ್ಲಿನ ಪುನೀತ್ ಅವರ ಒಡನಾಟ ಹೇಗಿತ್ತು ಎಂಬುದನ್ನು ಹಂಚಿಕೊಂಡರು.

‘ಪುನೀತ್ 14 ವರ್ಷದ ಹುಡುಗನಾಗಿದ್ದಾಗ ‘ಆಕಸ್ಮಿಕ’ ಸಿನಿಮಾ ನಿರ್ಮಾಣವಾಯಿತು. ಚಿತ್ರೀಕರಣದ ತಂಡ ತಂದಿದ್ದ ವಸ್ತ್ರಗಳನ್ನು ವಾಪಸ್ ಕಳುಹಿಸಿ ಅಪ್ಪು ಸ್ವತಃ ಅಂಗಡಿಗೆ ಹೋಗಿ ಹೊಸ ವಸ್ತ್ರಗಳನ್ನು ಖರೀದಿಸಿ ತಂದಿದ್ದರು. ಅವುಗಳನ್ನೇ ಧರಿಸಿ ರಾಜ್‌ಕುಮಾರ್ ಅವರು ಅಭಿನಯಿಸಿದ್ದರು’ ಎಂದು ಸಿನಿಮಾ ನಿರ್ದೇಶಕ ಪಿ. ಶೇಷಾದ್ರಿ ನೆನಪಿಸಿಕೊಂಡರು.

ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಸಿನಿಮಾ ನಿರ್ದೇಶಕ ಬಿ.ರಾಮಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT