ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲನ ಡಬಲ್‌ ರೋಲ್

Last Updated 23 ಜನವರಿ 2020, 19:30 IST
ಅಕ್ಷರ ಗಾತ್ರ

ನಟಿ ಮಿಲನ ನಾಗರಾಜ್‌ ಅಭಿನಯಿಸಿದ ಮೊದಲ ಚಿತ್ರ ‘ನಮ್‌ ದುನಿಯಾ ನಮ್‌ ಸ್ಟೈಲ್‌’. ‘ನಾನು ನಟಿಯಾಗಿದ್ದೇನೆ; ವರ್ಷಕ್ಕೆ ಇಂತಿಷ್ಟು ಸಿನಿಮಾಗಳಲ್ಲಿ ನಟಿಸಬೇಕು’ ಎಂಬ ಗುರಿ ಅವರಿಗಿಲ್ಲ. ಜೊತೆಗೆ, ನಟನೆಗಾಗಿ ಅವಕಾಶಗಳ ಬೆನ್ನುಹತ್ತಿದವರಲ್ಲ. ಎರಡು ವರ್ಷದ ಹಿಂದೆ ಒಂದೂ ಸಿನಿಮಾದಲ್ಲೂ ಅವರು ನಟಿಸಲಿಲ್ಲ. ಕಳೆದ ವರ್ಷ ನಟಿಸಿದ್ದ ನಾಲ್ಕು ಚಿತ್ರಗಳು ಈಗ ಬಿಡುಗಡೆಗೆ ಸಿದ್ಧವಾಗಿವೆ.

ಹೊಸ ವರ್ಷದಲ್ಲಿ ಭರ್ಜರಿಯಾಗಿಯೇ ಸಿನಿಪಯಣ ಆರಂಭಿಸಿರುವ ಅವರದ್ದು ಈ ಸಲ ಡಬಲ್‌ ಪಾರ್ಟ್‌! ಅದು ಸಿನಿಮಾದೊಳಗಿನ ದ್ವಿಪಾತ್ರವಲ್ಲ. ‘ಲವ್‌ ಮಾಕ್ಟೇಲ್‌’ ಚಿತ್ರದಲ್ಲಿ ನಟನೆ ಮತ್ತು ನಿರ್ಮಾಣದ ಎರಡೂ ಪಾತ್ರಗಳನ್ನು ಅವರು ನಿರ್ವಹಿಸುತ್ತಿದ್ದಾರೆ.

ನಿಮಗೆ ನಿರ್ಮಾಪಕಿಯಾಗುವ ಕನಸಿತ್ತೇ? ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ. ‘ನಾನು ಎಂದಿಗೂ ಅಂತಹ ಕನಸು ಕಂಡವಳಲ್ಲ. ‘ನಮ್‌ ದುನಿಯಾ...’ದಲ್ಲಿ ನಾನು ಮತ್ತು ಕೃಷ್ಣ ಒಟ್ಟಾಗಿ ನಟಿಸಿದ್ದೆವು. ಒಳ್ಳೆಯ ಚಿತ್ರ ನಿರ್ಮಿಸುವ ಕುರಿತು ಚರ್ಚಿಸುತ್ತಿದ್ದೆವು. ಜನರ ಹೃದಯಕ್ಕೆ ಹತ್ತಿರವಾಗುವ ಚಿತ್ರ ಮಾಡಬೇಕೆಂಬುದು ನನ್ನಾಸೆ. ಎಲ್ಲರೂ ಒಂದೇ ಮಾದರಿಯ ಸಿನಿಮಾ ಮಾಡ್ತಾರೆ. ಇಂತಹ ಸಿನಿಮಾ ತೋರಿಸಿ ಜನರನ್ನು ಮೆಚ್ಚಿಸುವುದು ಕಷ್ಟ. ವಿಭಿನ್ನವಾಗಿ ಚಿತ್ರ ಮಾಡಬೇಕು ಎಂದು ಅನಿಸಿತು. ಆಗ ಹೊಳೆದಿದ್ದೆ ‘ಲವ್‌ ಮಾಕ್ಟೇಲ್’ ಕಥೆ. ಬೇರೆ ನಿರ್ಮಾಪಕರು ಬಂಡವಾಳ ಹೂಡಿದರೆ ಎಲ್ಲಾ ಹಂತದಲ್ಲೂ ಅವರನ್ನು ಒಪ್ಪಿಸುವುದು ತ್ರಾಸದಾಯಕ. ನಾನು ಮತ್ತು ಕೃಷ್ಣ ದೊಡ್ಡಮಟ್ಟದ ಸಿನಿಮಾ ಮಾಡಿಲ್ಲ. ಸಣ್ಣ ಬಜೆಟ್‌ನಲ್ಲೇ ಜನರ ಅಭಿರುಚಿ ತಕ್ಕಂತಹ ಚಿತ್ರ ಮಾಡಿದ್ದೇವೆ’ ಎಂದು ವಿವರಿಸುತ್ತಾರೆ.

‘ಈ ಚಿತ್ರದ ಟ್ರೇಲರ್‌ ಹೊಸತನದ ಅನುಭವ ನೀಡುತ್ತದೆ. ಇದರಲ್ಲಿ ಸಿನಿಮ್ಯಾಟಿಕ್‌ ಶೈಲಿ ಕಡಿಮೆ. ಮೇಕ‍ಪ್‌ನಿಂದ ಹಿಡಿದು ನಟನೆವರೆಗೂ ಎಲ್ಲವೂ ನ್ಯಾಚುರಲ್‌ ಆಗಿದೆ. ಪ್ರತಿಯೊಬ್ಬ ಪ್ರೇಕ್ಷಕನೂ ಸಿನಿಮಾದ ಒಂದೊಂದು ಪಾತ್ರಕ್ಕೆ ಕನೆಕ್ಟ್‌ ಆಗುತ್ತಾನೆ. ಇದರಲ್ಲೂ ಅಂತಹ ಪ್ರಯತ್ನಕ್ಕೆ ಮುಂದಾಗಿದ್ದೇವೆ’ ಎನ್ನುತ್ತಾರೆ.

‘ಲವ್‌ ಮಾಕ್ಟೇಲ್’ ಈ ಮಾಸಾಂತ್ಯಕ್ಕೆ ಬಿಡುಗಡೆಯಾಗಲಿದೆ. ವ್ಯಕ್ತಿಯೊಬ್ಬನ ಜೀವನದ ಕಾಲಘಟ್ಟಗಳ ಕುರಿತಾದ ಕಥೆ ಇದು. ಅದನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಲಾಗಿದೆಯಂತೆ. ಚಿತ್ರದಲ್ಲಿ ಅವರ ಪಾತ್ರದ ಹೆಸರು ನಿಧಿ. ‘ಆಕೆ ತುಂಬಾ ಮುಗ್ಧೆ. ದೊಡ್ಡ ಕನಸು ಕಂಡವಳಲ್ಲ. ನನ್ನದು ಹುಡುಗಾಟಿಕೆಯ ಪಾತ್ರ’ ಎಂದು ತುಟಿಯಂಚಿನಲ್ಲಿಯೇ ನಗುತ್ತಾರೆ.

ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಮತ್ತೆ!! ಉದ್ಭವ’ ಚಿತ್ರಕ್ಕೂ ಮಿಲನ ಅವರೇ ನಾಯಕಿ. ಇದರಲ್ಲಿ ಅವರದು ಎರಡು ಭಿನ್ನ ಛಾಯೆಯ ಪಾತ್ರ. ‘ಈ ಚಿತ್ರದಲ್ಲಿ ನನ್ನದು ನಟಿ ಮತ್ತು ರಾಜಕಾರಣಿಯ ಪಾತ್ರ. ‘o' ಚಿತ್ರದಲ್ಲೂ ನಟಿಸಿರುವೆ. ಇದು ಹಾರರ್‌ ಚಿತ್ರ. ಮಾರ್ಚ್‌ನಲ್ಲಿ ತೆರೆ ಕಾಣಲಿದೆ’ ಎಂದು ಮಾಹಿತಿ ನೀಡುತ್ತಾರೆ.

ನಟನೆಗೆ ಹೆಚ್ಚಿನ ಅವಕಾಶ ಇರುವಂತಹ ಪಾತ್ರಗಳನ್ನೇ ಆಯ್ದುಕೊಂಡು ನಟಿಸುವುದು ಅವರಿಗೆ ಇಷ್ಟವಂತೆ. ನಟನಾ ಕೌಶಲ ಅಭಿವ್ಯಕ್ತಿಪಡಿಸುವ ಅವಕಾಶ ಇರಬೇಕು. ಅಂತಹ ಚಿತ್ರಗಳಿಗೆ ನನ್ನ ಮೊದಲ ಆದ್ಯತೆ ಎನ್ನುತ್ತಾರೆ.

‘ನಿಮ್ಮಲ್ಲಿ ಪ್ರತಿಭೆ ಇದೆ. ನೀವು ಚೆನ್ನಾಗಿ ನಟಿಸುತ್ತೀರಾ ಎಂದು ಬಹಳಷ್ಟು ಜನರು ಹೇಳುತ್ತಾರೆ. ಆದರೆ, ನಾನು ಯಾವತ್ತೂ ಅವಕಾಶ ಹುಡುಕಿಕೊಂಡು ಹೋದವಳಲ್ಲ. ತಾನಾಗಿಯೇ ಬರುವ ಅವಕಾಶ ಸ್ವೀಕರಿಸಿದರೆ ಅದಕ್ಕೆ ಬೆಲೆ ಹೆಚ್ಚು ಎಂಬುದು ನನ್ನ ನಂಬಿಕೆ. ಎರಡು ವರ್ಷದ ಹಿಂದೆ ಒಂದೂ ಚಿತ್ರದಲ್ಲೂ ನಟಿಸಲಿಲ್ಲ. ಗೆಲುವು, ಸೋಲನ್ನು ನಾವು ನಿರ್ಧರಿಸಲು ಆಗುವುದಿಲ್ಲ.ಸಿನಿಮಾಗಳ ಆಯ್ಕೆಯಲ್ಲಿ ನಾನು ಈಗಲೂ ಚ್ಯೂಸಿ’ ಎಂದು ದೃಢವಾಗಿ ಹೇಳುತ್ತಾರೆ.

ನಟನೆಯ ಜೊತೆಗೆ ಆಭರಣಗಳ ಕಮರ್ಷಿಯಲ್‌ ಜಾಹೀರಾತುಗಳಲ್ಲೂ ಅವರು ನಟಿಸುತ್ತಾರೆ. ‘ಎಂಜಿನಿಯರಿಂಗ್ ಪದವಿ ಶಿಕ್ಷಣ ಮುಗಿಸಿಕೊಂಡು ನೇರವಾಗಿ ನಟನಾ ಕ್ಷೇತ್ರಕ್ಕೆ ಬಂದೆ. ದುಡಿಮೆ ಅನಿವಾರ್ಯವಾಗಿತ್ತು. ಸಿನಿಮಾದಲ್ಲಿ ನಟಿಸುತ್ತಲೇ ಕಮರ್ಷಿಯಲ್‌ ಜಾಹೀರಾತುಗಳಲ್ಲೂ ಕೆಲಸ ಮಾಡುತ್ತೇನೆ. ಎರಡೂ ಕ್ಷೇತ್ರದಲ್ಲೂ ಬ್ಯಾಲೆನ್ಸ್‌ ಮಾಡುತ್ತೇನೆ’ ಎನ್ನುವ ಅವರಿಗೆ ನಿರ್ಮಾಪಕಿಯ ಸ್ಥಾನಮಾನ ಜವಾಬ್ದಾರಿ ಹೆಚ್ಚಿಸಿದೆಯಂತೆ.

‘ನಾನು ಎಂದಿಗೂ ಸಿನಿಮಾ ನಿರ್ದೇಶನ ಮಾಡುವುದಿಲ್ಲ. ಒಳ್ಳೆಯ ಕಥೆಗಳು ಸಿಕ್ಕಿದರೆ ನಿರ್ಮಾಣ ಮಾಡುತ್ತೇನೆ’ ಎನ್ನುವುದು ಅವರ ದೃಢ ನಿಲುವು.

ಮಿಲನ ತಮಿಳಿನಲ್ಲಿ ನಟಿಸಿರುವ ‘ತಕ್ಕುಮುಕ್ಕು ತಿಕ್ಕು ತಾಳಂ’ ಚಿತ್ರ ಫೆಬ್ರುವರಿಯಲ್ಲಿ ಬಿಡುಗಡೆಯಾಗಲಿದೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ತಂಗರ್‌ ಬಚ್ಚನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT