ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನ ಸವಾರಿ: ಅಪ್ಪ - ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು

Last Updated 25 ಫೆಬ್ರುವರಿ 2019, 9:18 IST
ಅಕ್ಷರ ಗಾತ್ರ

ನಾವು ನೋಡಿದ ಸಿನಿಮಾ

–––

ಚಿತ್ರ: ರಾಮನ ಸವಾರಿ (Ramana Savari)
ನಿರ್ದೇಶನ: ಕೆ. ಶಿವರುದ್ರಯ್ಯ
ತಾರಾಗಣ: ಸೋನುಗೌಡ, ರಾಜೇಶ್‌ ನಟರಂಗ, ಶೃಂಗೇರಿ ರಾಮಣ್ಣ, ಸುಧಾ ಬೆಳವಾಡಿ, ಭಾರ್ಗವಿ ನಾರಾಯಣನ್‌

---

ಸಾಹಿತಿ ಕೆ. ಸದಾಶಿವ ಅವರ ಕಥೆ ಆಧಾರಿತ ಚಿತ್ರ ‘ರಾಮನ ಸವಾರಿ’.ಕೆ. ಶಿವರುದ್ರಯ್ಯ ನಿರ್ದೇಶನವಿರುವ ಈ ಚಿತ್ರವು ಕುಟುಂಬ ವ್ಯವಸ್ಥೆ, ಗಂಡು–ಹೆಣ್ಣಿನ ಸಂಬಂಧ, ಪೋಷಕರ ಹೊಣೆಗಾರಿಕೆ ಹಾಗೂ ಸಾಮಾಜಿಕ ನ್ಯಾಯದ ವೈಫಲ್ಯಗಳನ್ನು ಬಿಂಬಿಸುವ ಕಥಾ ಹಂದರವನ್ನು ಹೊಂದಿದೆ. ಮಲೆನಾಡಿನಲ್ಲಿ 70ರ ದಶಕದಲ್ಲಿ ಗಂಡ–ಹೆಂಡತಿ ಹಾಗೂ ಮಗನ ನಡುವೆ ನಡೆಯುವ ಕಥೆ ಇದಾಗಿದ್ದು, ನಟಿ ಸೋನುಗೌಡ ಹಾಗೂ ರಾಜೇಶ್‌ ನಟರಂಗ ದಂಪತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರುವರ್ಷದ ಆರೋನ್‌ ಮಗನಾಗಿ ಅಭಿನಯಿಸಿದ್ದಾನೆ.

ಮದುವೆಯಾಗಿ ಅತ್ತೆ ಮನೆಗೆ ತೆರಳುವ ಸೋನುಗೌಡಗೆ (ಪಾರ್ವತಿ) ಗಂಡನ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಆಗುವುದಿಲ್ಲ. ಗಂಡನೊಂದಿಗೆ ಜಗಳ ಮಾಡಿಕೊಂಡು ಮಗ ಆರೋನ್‌ (ರಾಮ) ಜೊತೆಗೆ ತವರು ಮನೆಗೆ ವಾಪಸ್ಸಾಗುತ್ತಾಳೆ. ರಾಮ, ತನ್ನ ತಾಯಿ, ಅಜ್ಜ– ಅಜ್ಜಿಯ ಅಶ್ರಯದಲ್ಲಿ ಬೆಳೆದು ದೊಡ್ಡವನಾಗುತ್ತಾನೆ. ಒಂದು ದಿನ ಸ್ನೇಹಿತನೊಂದಿಗೆ ಸಂತೆ ಹೋಗಿರುತ್ತಾನೆ. ಅಲ್ಲಿ ಆತ ತಂದೆಯ ಕಣ್ಣಿಗೆ ಬೀಳುತ್ತಾನೆ. ಬಹಳ ವರ್ಷಗಳ ಬಳಿಕ ಮಗನನ್ನು ನೋಡಿ ಮಾತನಾಡಿಸುತ್ತಾನೆ. ಆಟವಾಡಲು ಗೊಂಬೆ ಹಾಗೂ ಆಟಿಕೆಗಳನ್ನು ಕೊಡಿಸುತ್ತಾನೆ. ಆದರೆ ಈತನೇ ತನ್ನ ತಂದೆ ಎಂಬುದು ರಾಮನಿಗೆ ತಕ್ಷಣಕ್ಕೆ ಗೊತ್ತಾಗುವುದಿಲ್ಲ.

ಸಂತೆಯಿಂದ ಮನೆಗೆ ತೆರಳುವ ರಾಮ ಅಪರಿಚಿತ ವ್ಯಕ್ತಿಯೊಬ್ಬರು ಗೊಂಬೆಗಳನ್ನು ಕೊಡಿಸಿದ್ದ ಬಗ್ಗೆ ತಾಯಿಗೆ ತಿಳಿಸುತ್ತಾನೆ. ಬಹುದಿನಗಳ ಬಳಿಕ ಮತ್ತೊಮ್ಮೆ ರಾಮ ಸಂತೆಗೆ ಬಂದಿರುವುದನ್ನು ತಿಳಿದ ತಂದೆ ಪಾತ್ರಧಾರಿ ರಾಜೇಶ್‌, ಅವನನ್ನು ಮಾತನಾಡಿಸಲು ಯತ್ನಿಸಿ, ತನ್ನ ಮನೆಗೆ ಕರೆದುಕೊಂಡು ಬರಲು ಮುಂದಾಗುತ್ತಾನೆ. ಅಷ್ಟರಲ್ಲಿ ವಿಷಯ ಹೆಂಡತಿ ಮನೆ ತಲುಪುತ್ತದೆ. ಪಾರ್ವತಿಗೆ ಗಂಡನ ಮನೆಗೆ ಮರಳಲು ಇಷ್ಟವಿರುವುದಿಲ್ಲ. ಹಿರಿಯರ ರಾಜಿ ಸಂಧಾನ ನಡೆಯುತ್ತದೆ.

ಗಂಡ ಮತ್ತು ಹೆಂಡತಿ ನಡುವೆ ವೈಮನಸ್ಸು ಮೂಡಿದಾಗ ಮಗು ಹೇಗೆ ಮಾನಸಿಕವಾಗಿ ತೊಂದರೆಗೆ ಸಿಲುಕುತ್ತದೆ ಎನ್ನುವುದನ್ನು ಸಿನಿಮಾದಲ್ಲಿ ಸಮರ್ಥವಾಗಿ ಕಟ್ಟಿಕೊಡಲಾಗಿದೆ. ಚಿತ್ರಕ್ಕೆ ಗಿರೀಶ ಕಾಸರವಳ್ಳಿ ಸಂಭಾಷಣೆ ಬರೆದಿದ್ದಾರೆ. ಎರಡು ಹಾಡುಗಳಿದ್ದು, ‘ಬೆಳ್ಳಕ್ಕಿ, ಬೆಳ್ಳಕ್ಕಿ ನೀನು ನನಗೆ ಬಣ್ಣ ಕೊಡ್ತೀಯಾ... ನಾನು ನಿನಗೆ ನನ್ನ ಉಗುರು ಕೊಡ್ತೀನಿ...' ಎಂಬ ಹಾಡು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ.

ಕೆ. ಕಲ್ಯಾಣ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿಶ್ವನಾಥ್‌ ಅವರದ್ದು.ಶಿವಮ್ಮೊಗ್ಗ, ತೀರ್ಥಹಳ್ಳಿ, ಹೊಸನಗರದ ಸುತ್ತಮುತ್ತ ಚಿತ್ರವನ್ನು ಚಿತ್ರೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT