ಸೋಮವಾರ, ಸೆಪ್ಟೆಂಬರ್ 16, 2019
29 °C
ಊರೂರಿಗೆ ಸಿನಿಮಾ; ನಿರ್ದೇಶಕರ ಪರ್ಯಾಯ ಮಾರ್ಗ

ಬರಲಿದೆ ನಿಮ್ಮೂರಿಗೂ ‘ಮೂಕಜ್ಜಿಯ ಕನಸುಗಳು’

Published:
Updated:
Prajavani

ಡಾ.ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದು ‘ಮೂಕಜ್ಜಿಯ ಕನಸುಗಳು’ ಕಾದಂಬರಿ. ಇದನ್ನು ಸಿನಿಮಾ ಮಾಡಿ ತೆರೆಗೆ ತರುವ ಸವಾಲಿನಲ್ಲಿ ಗೆದ್ದಿರುವ ಒಂಬತ್ತು ಬಾರಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ.ಶೇಷಾದ್ರಿಯವರು, ಜುಲೈ ಅಥವಾ ಆಗಸ್ಟ್‌ ತಿಂಗಳಲ್ಲಿ ಸಿನಿಮಾವನ್ನು ಥಿಯೇಟರ್‌ಗಳಿಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇದರ ಜತೆಜತೆಗೆ ಸಿನಿಮಾವನ್ನು ಊರೂರಿಗೆ ಕೊಂಡೊಯ್ಯಲು ಅವರು ಚಿತ್ರತಂಡದೊಂದಿಗೆ ಯೋಜನೆ ರೂಪಿಸುತ್ತಿದ್ದಾರೆ.

‘ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಜನಮಾನಸದಲ್ಲಿ ಬೆರೆತು ಹೋಗಿದೆ. ಈ ಕಾದಂಬರಿ ಸಿನಿಮಾ ಆಗಿರುವ ಬಗ್ಗೆ ಜನರಿಗೂ ಕುತೂಹಲ ಇದ್ದೇ ಇರುತ್ತದೆ. ಈ ಸಿನಿಮಾವನ್ನು ಜನಸಮೂಹಕ್ಕೆ ತಲುಪಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಜನರ ಬಳಿಗೆ ಕೊಂಡೊಯ್ಯುವ ಸಲುವಾಗಿ ಸಂಪರ್ಕಜಾಲ ಹೆಣೆಯುತ್ತಿದ್ದೇವೆ’ ಎನ್ನುತ್ತಾರೆ ಶೇಷಾದ್ರಿ.

ಹಿರಿಯ ಕಲಾವಿದೆ ಬಿ.ಜಯಶ್ರೀ (ಮೂಕಜ್ಜಿ), ಅರವಿಂದ ಕುಪ್ಲಿಕರ್ (ಸುಬ್ಬರಾಯ), ನಂದಿನಿ ವಿಟ್ಲ (ಸುಬ್ಬರಾಯನ ಪತ್ನಿ), ರಾಮೇಶ್ವರಿ ವರ್ಮಾ (ತಿಪ್ಪಜ್ಜಿ), ಪ್ರಗತಿ ಪ್ರಭು (ನಾಗಿ), ಪ್ರಭುದೇವ (ರಾಮಣ್ಣ) ಅವರು ಅಭಿನಯಿಸಿದ್ದಾರೆ ಎನ್ನುವುದಕ್ಕಿಂತ ಕಾದಂಬರಿಯ ಪಾತ್ರಗಳಾಗಿ ಜೀವಿಸಿದ್ದಾರೆ. ಸಿನಿಮಾವನ್ನು ಬಿಡುಗಡೆ ಪೂರ್ವ ನೋಡಿದವರೆಲ್ಲರೂ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾದಂಬರಿಯ ಆತ್ಮವನ್ನು ಹಿಡಿದು, ತೆರೆ ಮೇಲೆ ತರುವ ಕಲೆಯಲ್ಲಿ ಗೆದ್ದಿದ್ದೀರಿ ಎನ್ನುವ ಮಾತುಗಳನ್ನು ಕೇಳಿದ್ದಾರಂತೆ ಅವರು.

ಪರ್ಯಾಯ ಮಾರ್ಗ

ಕಮರ್ಷಿಯಲ್‌ ಅಲ್ಲದ, ಒಂದು ರೀತಿಯಲ್ಲಿ ಹೊಸ ಅಲೆಯ ಎನ್ನಲೂ ಆಗದ ಕಲಾತ್ಮಕ ಸಿನಿಮಾಗಳ ನಿರ್ದೇಶಕರಿಗೆ ತಮ್ಮ ಚಿತ್ರಗಳ ಬಿಡುಗಡೆಗೆ ಚಿತ್ರಮಂದಿರಗಳು ಸಿಗದೇ ಇರುವುದು ಇಂದು ನಿನ್ನೆಯ ಸಮಸ್ಯೆಯಲ್ಲ. ಇದಕ್ಕೆ ಕೆಲವು ನಿರ್ದೇಶಕರು ಕೈಕಟ್ಟಿ ಕೂರದೆ, ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಇಂತಹವರಲ್ಲಿ ಲೇಖಕ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ನಡೆಸಿದ ಪ್ರಯೋಗವೊಂದು ಯಶಸ್ವಿ ಮಾರ್ಗವಾಗಿ ನಿರ್ದೇಶಕರಿಗೆ ಕಾಣಲಾರಂಭಿಸಿದೆ.

‘ಸಮುದಾಯದತ್ತ ಸಿನಿಮಾ’ ಟೈಟಲ್‌ನೊಂದಿಗೆ ಸಿನಿಮಾ ಬಿಡುಗಡೆಗೆ ಪರ್ಯಾಯ ಮಾರ್ಗ ಹುಡುಕಿದ ಬರಗೂರು ಅವರು, ತಮ್ಮ ನಿರ್ದೇಶನದ ಶಾಂತಿ, ಏಕಲವ್ಯ, ಶಬರಿ, ಉಗ್ರಗಾಮಿ, ಭೂಮಿತಾಯಿ, ಮೂಕನಾಯಕ ಸಿನಿಮಾಗಳನ್ನು ಜನಮಾನಸದತ್ತ ತಲುಪಿಸಿದ್ದಾರೆ. ಈಗಲೂ ಅವರ ಮೂಕನಾಯಕ ಸಿನಿಮಾ ಚಾಮರಾಜನಗರದಲ್ಲಿ ಪ್ರದರ್ಶನ ಕಾಣುತ್ತಿದೆ. ಮುಂದಿನ ತಿಂಗಳು ಮೈಸೂರಿನಲ್ಲಿ ಪ್ರದರ್ಶನ ಆರಂಭವಾಗಲಿದೆ. ‘ಸಮುದಾಯದತ್ತ ಸಿನಿಮಾ’ ಮಾರ್ಗದಲ್ಲಿ ಒಂದೊಂದು ಸಿನಿಮಾವನ್ನು ನೂರ‍್ಹತ್ತು ಕಡೆಗಳಲ್ಲಿ ಪ್ರದರ್ಶನ ಮಾಡಿದ್ದೇನೆ. ಮೊದಲೇ ಟಿಕೆಟ್‌ ಮುಂಗಡ ಕಾಯ್ದಿರಿಸುವುದರಿಂದ ಇದೊಂದು ರೀತಿಯಲ್ಲಿ ನನಗೆ ನಷ್ಟವಿಲ್ಲದ ಮಾರ್ಗವಾಗಿ ಕಾಣಿಸಿದೆ’ ಎನ್ನುತ್ತಾರೆ ಬರಗೂರು.

 ‘ಮೂಕಜ್ಜಿಯ ಕನಸುಗಳು’ ಸಾಕಾರಕ್ಕೆ ಕೈಜೋಡಿಸಿರುವ ಪಿ.ಶೇಷಾದ್ರಿ ಮತ್ತು ಅವರ ಎಂಟು ಮಂದಿ ಗೆಳೆಯರು ಕೂಡ, ಈಗ ಇದೇ ಮಾದರಿಯಲ್ಲಿ ಸಿನಿಮಾವನ್ನು ಊರೂರಿಗೆ ಕೊಂಡೊಯ್ಯಲು ಯೋಜನೆ ಹೆಣೆಯುತ್ತಿದ್ದಾರೆ. ಕೆಲವೇ ದಿನಗಳಲ್ಲಿ ನಿಮ್ಮ ಊರಿಗೂ ಮೂಕಜ್ಜಿಯ ಕನಸುಗಳ ಹೊತ್ತು ಈ ತಂಡ ಬರಬಹುದು.

Post Comments (+)