ಎಸ್ಟೇಟ್‌ನಲ್ಲಿ ಕಾಡಿದ ದೆವ್ವ

7

ಎಸ್ಟೇಟ್‌ನಲ್ಲಿ ಕಾಡಿದ ದೆವ್ವ

Published:
Updated:

ಅದೊಂದು ಸುಂದರವಾದ ಎಸ್ಟೇಟ್‌. ಆ ಎಸ್ಟೇಟ್‌ ಹೆಸರು ಕೇಳಿದಾಕ್ಷಣ ಎಲ್ಲರೂ ಭಯಪಡುತ್ತಾರೆ. ಆದರೆ, ಗೆಳೆಯರ ಗುಂಪೊಂದು ಅಲ್ಲಿಗೆ ತೆರಳಿ ದೆವ್ವದ ಕಾಟಕ್ಕೆ ಸಿಲುಕುತ್ತದೆ. ‘ಮೂರ್ಕಲ್‌ ಎಸ್ಟೇಟ್‌’ ಚಿತ್ರದಲ್ಲಿರುವ ದೆವ್ವವನ್ನು ಟ್ರೇಲರ್‌ನಲ್ಲಿ ತೋರಿಸಿದ ಬಳಿಕ ಮಾತಿಗಿಳಿದರು ನಿರ್ದೇಶಕ ಪ್ರಮೋದ್ ಕುಮಾರ್.

ಇದು ಅವರ ನಿರ್ದೇಶನದ ಮೊದಲ ಚಿತ್ರ. ಅವರಿಗೆ ದೇವರು ಮತ್ತು ದೆವ್ವದ ಬಗ್ಗೆ ನಂಬಿಕೆ ಇಲ್ಲವಂತೆ. ‘ಇದು ಹಾರರ್‌ ಚಿತ್ರ. ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆ ಈ ಸಿನಿಮಾ ಮಾಡಿದ್ದೇನೆ. ಚಿತ್ರದಲ್ಲಿರುವ ಎಲ್ಲರೂ ಹೊಸಬರು. ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಇದರ ಹಿಂದೆ ಎಲ್ಲರ ಪರಿಶ್ರಮ ಅಡಗಿದೆ’ ಎಂದರು.

ಮೈಸೂರು, ಚಿಕ್ಕಮಗಳೂರು ಮತ್ತು ಬೆಂಗಳೂರಿನ ಸುತ್ತಮುತ್ರ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣದ ವೇಳೆ ಚಿತ್ರವಿಚಿತ್ರ ಸನ್ನಿವೇಶಗಳು ಚಿತ್ರತಂಡಕ್ಕೆ ಎದುರಾದವಂತೆ. ಎಲ್ಲವನ್ನೂ ನಿಭಾಯಿಸಿಕೊಂಡು ಶೂಟಿಂಗ್‌ ಪೂರ್ಣಗೊಳಿಸಲಾಯಿತು ಎಂದು ಚಿತ್ರತಂಡ ಹೇಳಿಕೊಂಡಿತು.

ನಿರ್ಮಾಪಕ ಕುಮಾರ್‌ ಎನ್‌. ಭದ್ರಾವತಿ, ‘ಚಿತ್ರದಲ್ಲಿ ತಾಂತ್ರಿಕ ವರ್ಗದ ಶ್ರಮ ಹೆಚ್ಚಿದೆ. ಟ್ರೇಲರ್‌ ನೋಡಿದರೆ ಇದು ಅರ್ಥವಾಗುತ್ತದೆ’ ಎಂದು ಹೊಗಳಿದರು. ಟ್ರೇಲರ್‌ ಅನ್ನು ಬಿಡುಗಡೆಗೊಳಿಸಿದ ಹಿರಿಯ ನಟ ದೊಡ್ಡಣ್ಣ, ‘ಚಿತ್ರರಂಗಕ್ಕೆ ಹೊಸಬರ ಪ್ರವೇಶವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಆರಂಭದಲ್ಲಿ ನಿರೀಕ್ಷೆಗಳು ಹೆಚ್ಚಿರುತ್ತವೆ. ಆದರೆ, ವೃತ್ತಿಬದುಕಿನಲ್ಲಿ ಯಶಸ್ಸುಗಳಿಸಲು ಸಹನೆ ಮುಖ್ಯ’ ಎಂದು ಸಲಹೆ ನೀಡಿದರು.

‘ಡಾ.ರಾಜ್‌ಕುಮಾರ್‌ ನಾಡು ಕಂಡ ಶ್ರೇಷ್ಠ ನಟ. ಅವರ ಸರಳತೆ ನಮಗೆ ಮಾದರಿಯಾಗಬೇಕು. ಹೊಸ ಕಲಾವಿದರು ಅವರ ಹಾದಿಯಲ್ಲಿ ಸಾಗಬೇಕು’ ಎಂದು ಆಶಿಸಿದರು. ಪ್ರಕೃತಿ ಈ ಚಿತ್ರದ ನಾಯಕಿ. ಪ್ರವೀಣ್‌ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಹಣ ರಾಕೇಶ್‌ ಅವರದ್ದು. ಸುದ್ದು ರಾಯ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !