ಸೋಮವಾರ, ಜುಲೈ 26, 2021
26 °C

ಎಲ್ಲಿಯೂ ನಿಲ್ಲದ ಪಯಣಿಗ: ನಾಗತಿಹಳ್ಳಿ ಚಂದ್ರಶೇಖರ್

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Writer & Film maker Nagatihalli Chandrashekhar. -Photo/ Anand BakshiMy07_Nagathihalli_Interview

ಒಂದು ತಲೆಮಾರಿನ ತರುಣ ತರುಣಿಯರಿಗೆ ರಮ್ಯ ರೋಚಕ ಕನಸುಗಳನ್ನು ಕೊಟ್ಟ ಕಥೆಗಾರ, ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿದ ಮೇಷ್ಟ್ರು, ಕನ್ನಡ ಚಿತ್ರರಂಗಕ್ಕೆ ಅಮೆರಿಕವನ್ನು ಹತ್ತಿರವಾಗಿಸಿದ ಸಿನಿಮಾ ನಿರ್ದೇಶಕ – ನಾಗತಿಹಳ್ಳಿ ಚಂದ್ರಶೇಖರ ಅವರ ಬಗ್ಗೆ ಮಾತನಾಡಲು ಹೊರಟರೆ ಅವರ ವ್ಯಕ್ತಿತ್ವದ ಹಲವು ಮುಖಗಳು ಒಂದರ ಮೇಲೊಂದು ಮುನ್ನೆಲೆಗೆ ಬರಲು ಪ್ರಯತ್ನಿಸುತ್ತವೆ.

ಬೆಂಗಳೂರಿನ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ಗೆ ಕೂಗಳತೆ ದೂರದಲ್ಲಿರುವ ಅವರ ‘ಟೆಂಟ್‌ ಶಾಲೆ’ಗೆ ಹೋದಾಗ, ಸಂದರ್ಶನಕ್ಕೆಂದು ಎದುರಿಗೆ ಕೂತವರಲ್ಲಿ ಮೊದಲಿಗೆ ಹಣಕಿದ್ದು ಅಲೆಮಾರಿಯ ಮುಖ. ಜಪಾನ್‌ನಿಂದ ತಂದಿದ್ದ ‘ಶಕುಹಚಿ’ ಎನ್ನುವ ಕೊಳಲು ರೀತಿಯ ವಾದ್ಯವನ್ನು ನೇವರಿಸುತ್ತ, ಜಪಾನ್‌ ಪ್ರವಾಸದ ಅನುಭವಗಳನ್ನು ನೆನಪಿಸಿಕೊಳ್ಳತೊಡಗಿದರು. ‘ಸಿನಿಮಾ ನಿರ್ದೇಶಕ ಅಕಿರಾ ಕುರೋಸಾವಾ ಇಂದಿನ ಯುವ ಜಪಾನೀಯರಿಗೆ ಗೊತ್ತಿಲ್ಲ. ಅವನು ಯಾರು ಎನ್ನುತ್ತಾರೆ. ಅವನ ಹೆಸರಿನಲ್ಲಿ ಸ್ಟುಡಿಯೊ ಇದೆ. ಆದರೆ, ಆ ಸ್ಟುಡಿಯೊಗೂ ಕುರೋಸಾವಾಗೂ ಯಾವುದೇ ಸಂಬಂಧ ಇಲ್ಲ; ನಮ್ಮಲ್ಲಿ ಪುಟ್ಟಣ್ಣ ಕಣಗಾಲ್‌ ಹೆಸರಿನ ಸ್ಟುಡಿಯೊ ಇರುವಂತೆ. ಅವನ ಸಮಾಧಿಯನ್ನು ಹುಡುಕಿಕೊಂಡು ಹೋದದ್ದು ರೋಚಕ ಗಳಿಗೆ’ ಎಂದರು.

ನಾಗತಿಹಳ್ಳಿಯವರ ಪ್ರಧಾನ ಆಸಕ್ತಿಗಳಲ್ಲಿ ಪ್ರವಾಸ ಮುಖ್ಯವಾದುದು. ಅಲೆಮಾರಿಯಾಗಿ ಅವರು ಎಡತಾಕಿದ ದೇಶಗಳಲ್ಲಿ ಜಪಾನ್‌ 46ನೆಯದು. ‘ಈ ಅಲೆದಾಟದಿಂದ ನನ್ನ ಆಲೋಚನಾಕ್ರಮದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಲೆದಾಟ ಪ್ಯಾಷನ್ ಆದಾಗ ಲೇಖಕನಿಗೆ ಬಹಳಷ್ಟು ಉಪಯೋಗವಾಗುತ್ತದೆ. ಇಂಗ್ಲೆಂಡ್‌ನಲ್ಲಿದ್ದಾಗ ಸಚಿವನೊಬ್ಬ ತನ್ನ ಖಾತೆಗೆ ಸಂಬಂಧಿಸಿದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ 15 ನಿಮಿಷ ತಡವಾಗಿ ಬಂದುದಕ್ಕೆ ರಾಜೀನಾಮೆ ಕೊಟ್ಟ. ನಮ್ಮಲ್ಲಿನ ರಾಜಕೀಯ ಪ್ರಸಂಗಗಳನ್ನು ನೆನಪಿಸಿಕೊಂಡರೆ ಅಲ್ಲಿನ ಘಟನೆ ಆಶ್ಚರ್ಯಹುಟ್ಟಿಸುತ್ತದೆ’ ಎಂದರು. ಜಪಾನ್‌ ಪ್ರವಾಸದ ಬಗ್ಗೆ ಉತ್ಸುಕತೆಯಿಂದ ಮಾತನಾಡುತ್ತಿದ್ದ ಅವರು ಮತ್ತೆ ಹಿತ್ತಲಿಗೆ ಬಂದುದು, ನಾಗತಿಹಳ್ಳಿ ಕುರಿತು ಪ್ರಶ್ನೆ ಕೇಳಿದಾಗ.

* ನಿಮ್ಮ ಹೆಸರಿನೊಂದಿಗೆ ಸೇರಿಕೊಂಡಿರುವ ನಾಗತಿಹಳ್ಳಿಗೆ ನಿಮ್ಮ ಜೀವನದಲ್ಲಿ ಇರುವ ಪಾತ್ರ ಯಾವ ಬಗೆಯದು?
ಈಗ ಹಿಂತಿರುಗಿ ನೋಡಿದರೆ – ನನ್ನ ಬಾಲ್ಯದ ಹಳ್ಳಿ ನನಗೆ ತುಂಬಾ ನೋವು ಕೊಟ್ಟಿದೆ, ತುಂಬಾ ಅವಮಾನಿಸಿದೆ. ಇದನ್ನು ನಾನು ಸಿಟ್ಟಿನಿಂದ, ಬೇಸರದಿಂದ ಹೇಳುತ್ತಿಲ್ಲ. ಎಲ್ಲ ಹಳ್ಳಿಗಳೂ ಎಲ್ಲರ ಪಾಲಿಗೆ ಒಂದು ಸಂದರ್ಭದಲ್ಲಿ ಹಾಗೆಯೇ ಇರುತ್ತವೇನೋ. ನಮ್ಮ ಬೆಳವಣಿಗೆಗೆ ಅವಮಾನಗಳು ಕೂಡ ಬೇಕೇನೋ. ಹಳ್ಳಿಗಾಡಿನ ಅನೇಕ ಯುವಕರು ಅನುಭವಿಸಿರುವ ಅನುಭವಗಳೇ ನನ್ನವೂ ಹೌದು. ಅಪ್ಪ ನಮ್ಮನ್ನೆಲ್ಲ ತುಂಬಾ ಕಷ್ಟದಿಂದ ಓದಿಸುತ್ತಿದ್ದರು. ಶಾಲೆಯ ಮೇಷ್ಟರುಗಳೆಲ್ಲ ದುಡ್ಡು ಹಾಕಿ ನನ್ನ ಹೈಸ್ಕೂಲ್ ಶುಲ್ಕವನ್ನು ತುಂಬಿದ್ದೂ ಇದೆ. ನನ್ನ ಹಳ್ಳಿ, ಅಲ್ಲಿನ ಬಡತನ, ಅಪ್ಪನ ಸಾಲಗಳು – ಇದರಾಚೆಗೆ ಜಿಗಿಯಲಿಕ್ಕೆ ಮನಸ್ಸು ತಹತಹಿಸುತ್ತಿತ್ತು. ನಾಟಕದ ಕಂಪನಿ ಜೊತೆ ಓಡಿಹೋಗಿ ಮತ್ತೆ ಹಿಂದಿರುಗಿ ಬಂದು ಹಳ್ಳಿಯಲ್ಲಿ ನಾಟಕ ಆಡಿಸಲು ಪ್ರಯತ್ನಿಸುತ್ತಿದ್ದೆ. ಅದೇ ವೇಳೆ ಪಿಯುಸಿಯಲ್ಲಿ ಫೇಲಾದೆ. ಗಣಿತ ಹಾಗೂ ವಿಜ್ಞಾನ ನನ್ನ ಪರಮಶತ್ರುಗಳು. ಪ್ರೈಮರಿ ಸ್ಕೂಲ್ ಮೇಷ್ಟ್ರಾಗಿದ್ದ ನನ್ನ ಅಪ್ಪ ಪಿಯುಸಿ ವಿಜ್ಞಾನ ವಿಭಾಗಕ್ಕೆ ನನ್ನನ್ನು ಹಾಕಿದ್ದರು – ಮಗ ಡಾರ್ವಿನ್ ಆಗ್ತಾನೆ ಎಂದು ತಿಳಕೊಂಡು. ಊರಿಗೆ ಬಂದು ವಿಫಲ ಕ್ರಾಂತಿಕಾರಿಗಳ ಹಾಗೆ ಸಂಘ ಕಟ್ಟಿಕೊಂಡು ಓಡಾಡುತ್ತಿದ್ದೆ. ಊರವರು ಅನುಮಾನದಿಂದ ನೋಡುತ್ತಿದ್ದರು. ಈಗ ಊರಲ್ಲಿ ಒಂದಷ್ಟು ಸಾಂಸ್ಥಿಕ ಕೆಲಸಗಳನ್ನು ಮಾಡುತ್ತಿದ್ದೇನೆ; ಆ ಕೆಲಸವನ್ನು ಊರು ಗೌರವದಿಂದ ನೋಡುತ್ತಿದೆ. ಇದೇ ಕೆಲಸವನ್ನು ಆಗಲೂ ಅಷ್ಟೇ ತೀವ್ರತೆಯಿಂದ ಹಾಗೂ ಭಾವನಾತ್ಮಕವಾಗಿ ಮಾಡುತ್ತಿದ್ದೆ. ಊರಿನಲ್ಲೊಂದು ಬೀದಿದೀಪ ಉರಿಸಬೇಕೆಂದಾದಾಗ, ಮನೆಗೊಂದು ತೆಂಗಿನಕಾಯಿ ಸಂಗ್ರಹಿಸುತ್ತಿದ್ದೆವು. ಜನ ದುಡ್ಡು ಕೊಡುತ್ತಿರಲಿಲ್ಲವಾದ್ದರಿಂದ ತೆಂಗಿನಕಾಯಿ ಸಂಗ್ರಹಿಸುತ್ತಿದ್ದೆವು. ಈ ಕಾಯಿಗಳನ್ನು ಹರಾಜು ಹಾಕಿ ಇಡೀ ವರ್ಷ ದೀಪ ಉರಿಸುತ್ತಿದ್ದೆವು. ಆದರೆ, ಇಂಥ ಕೆಲಸಗಳನ್ನು ಊರು ಗೇಲಿಯ ದೃಷ್ಟಿಯಿಂದ ನೋಡುತ್ತಿತ್ತು. ಆಗಲೇ ನಾವು ಊರಲ್ಲಿ ಒಂದು ಸಣ್ಣ ರಂಗಮಂದಿರ ಮಾಡಿಕೊಂಡಿದ್ದೆವು. ಈ ಕೆಲಸಗಳನ್ನು ಸತತವಾಗಿ ಇಪ್ಪತ್ತೈದು ವರ್ಷ ಮಾಡಿಕೊಂಡು ಬಂದ ನಂತರ ಊರಿನ ನೋಟವೂ ಬದಲಾಗಿದೆ.

* ಬಾಲ್ಯದಲ್ಲಿ ನಿಮ್ಮನ್ನು ತುಂಬಾ ಸೆಳೆದುದು ಏನು?
ನನ್ನೂರನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48 ಹಾಗೂ ಶಾಲೆ ನನ್ನ ಮೇಲೆ ತುಂಬಾ ಪರಿಣಾಮ ಬೀರಿವೆ. ಹಳ್ಳಿಯಿಂದ ಹೊರಹೋಗುವ ಜಗತ್ತನ್ನು ಹೈವೇ ಕಾಣಿಸುತ್ತಿದೆ ಎನ್ನಿಸುತ್ತಿತ್ತು. ಒಮ್ಮೆ ಸ್ಕೂಲ್‌ಗೆ ಬಂದಿದ್ದ ಇನ್‌ಸ್ಪೆಕ್ಟರ್‌, ‘ಮುಂದೆ ಏನಾಗುವೆ?’ ಎಂದು ಕೇಳಿದ ಪ್ರಶ್ನೆಗೆ – ‘ಲಾರಿ ಡ್ರೈವರ್ ಆಗ್ತೇನೆ’ ಎಂದು ಹೇಳಿ ಹೊಡೆಸಿಕೊಂಡಿದ್ದೆ.

ನಮ್ಮೂರಲ್ಲಿ ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್ ಪರವಾಗಿ ಹೋರಾಡಿದ ಕೆಲವರಿದ್ದರು. ‘ಜರ್ಮನಿಯಮ್ಮನ ಮನೆ’ ಎನ್ನುವ ಒಂದು ಮನೆ ಈಗಲೂ ಇದೆ. ಈ ಜರ್ಮನಿಯಮ್ಮನ ಮೊಮ್ಮಗ ಯುದ್ಧಕ್ಕೆ ಹೋಗಿದ್ದ. ಈ ಯುದ್ಧವೀರರ ಬಗ್ಗೆ ಅನೇಕ ಕಥೆಗಳಿವೆ. ಸಿಕ್ಕಾಪಟ್ಟೆ ಮೇಷ್ಟ್ರುಗಳು ನಮ್ಮೂರಲ್ಲಿದ್ದರು. ಸುಮಾರು 100 ಜನ ಶಿಕ್ಷಕರು ಊರಲ್ಲಿದ್ದರು (2,000 ಜನಸಂಖ್ಯೆ). ಈಗಲೂ ಎಪ್ಪತ್ತು ಎಂಬತ್ತು ಜನ ಶಿಕ್ಷಕರಿದ್ದಾರೆ. 1925ರಲ್ಲೇ ಬ್ರಿಟಿಷರು ನಮ್ಮೂರಲ್ಲಿ ಸ್ಕೂಲ್‌ ಮಾಡಿದ್ದರು. ಎಚ್‌.ಎಲ್‌. ನಾಗೇಗೌಡ, ಎಚ್‌.ಟಿ. ಕೃಷ್ಣಪ್ಪನವರು ಓದಿದ್ದು ಇದೇ ಶಾಲೆಯಲ್ಲಿ. ಈ ಶಾಲೆ ಮತ್ತು ಹೆದ್ದಾರಿ ಇಲ್ಲದೆ ಹೋಗಿದ್ದರೆ ಇವತ್ತಿನ ನಾನು ಇರುತ್ತಿರಲಿಲ್ಲವೇನೊ?

* ನಾಟಕದ ಕಂಪನಿ ಜೊತೆ ಓಡಿಹೋಗಿದ್ದೆ ಅಂದಿರಿ. ನಿಮ್ಮ ನಾಟಕದ ನಂಟು ಯಾವ ಬಗೆಯದು?
ವಿದ್ಯಾರ್ಥಿ ದೆಸೆಯಿಂದಲೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ‘ಕುರುಕ್ಷೇತ್ರ’ ನಾಟಕದಲ್ಲಿ ಕೃಷ್ಣನ ಪಾತ್ರವನ್ನು ಸಾಮಾನ್ಯವಾಗಿ ಇಬ್ಬರಿಗೆ ನೀಡುವುದು (ಕೃಷ್ಣ 1, ಕೃಷ್ಣ 2) ರೂಢಿ. ಆದರೆ, ಕಂಠಪಾಠ ಮಾಡುವ ನನ್ನ ಸಾಮರ್ಥ್ಯವನ್ನು ಗಮನಿಸಿ ಕೃಷ್ಣನ ಸಂಪೂರ್ಣ ಪಾತ್ರವನ್ನು ನನಗೊಬ್ಬನಿಗೇ ನೀಡುತ್ತಿದ್ದರು. ‘ಬಯಲುಸೀಮೆ ಕಟ್ಟೇಪುರಾಣ’ ಖ್ಯಾತಿಯ ಬಿ. ಚಂದ್ರೇಗೌಡ ಕೂಡ ನನ್ನ ಜೊತೆ ನಟಿಸುತ್ತಿದ್ದರು. ಒಂದು ಹಂತದ ನಂತರ ಈ ನಾಟಕಗಳು ಬೇಸರ ಹುಟ್ಟಿಸತೊಡಗಿದವು. ಹೊಸದೇನೋ ಬೇಕು ಅನ್ನಿಸುತ್ತಿದ್ದ ಸಂದರ್ಭದಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಹಳ್ಳಿ ಚಿತ್ರ’ ಎನ್ನುವ ನಾಟಕ ನಿರ್ದೇಶಿಸಿದೆ. ಈ ನಾಟಕವನ್ನು ಬೆಂಗಳೂರಿನಲ್ಲೂ ಪ್ರದರ್ಶಿಸಿ ಪ್ರಶಸ್ತಿ ಪಡೆದೆವು. ಆಮೇಲೆ ಸಾಮಾಜಿಕ ಹಾಗೂ ಪ್ರಾಯೋಗಿಕ ನಾಟಕಗಳತ್ತ ಮನಸ್ಸು ಹರಿಯಿತು. ಈಗಲೂ ನಮ್ಮೂರಿನಲ್ಲಿ ನಾಟಕಗಳನ್ನು ಆಡಿಸುತ್ತೇನೆ. ನನ್ನ ಮಕ್ಕಳ ಹೆಸರಿನಲ್ಲಿ ‘ಸಿಹಿ ಕನಸು’ ಎನ್ನುವ ರಂಗಮಂದಿರ ಆಗಿದೆ.

* ನಾಟಕ ಆಡಿಕೊಂಡಿದ್ದ ನೀವು ಮೇಷ್ಟರಾದುದು ಹೇಗೆ?
‘ಏನಾದರೂ ಆಗು, ಮೊದಲು ಶಿಕ್ಷಕನಾಗಿ ಒಂದು ಕಡೆ ಇರು’ ಎಂದು ಅಪ್ಪ ಯಾವಾಗಲೂ ಹೇಳುತ್ತಿದ್ದರು. ಅಪ್ಪನ ಒತ್ತಡ ತಡೆಯಲಾರದೆ, ಮುದ್ದೇನಹಳ್ಳಿಯ ಶಾಲೆಯೊಂದರಲ್ಲಿ ಕೆಲಸಕ್ಕೆ ಅರ್ಜಿ ಹಾಕಿದೆ. ಕೆಲಸವೂ ಸಿಕ್ಕಿತ್ತು. ಆದರೆ, ಆ ಕೆಲಸಕ್ಕೆ ಕುತ್ತು ತಂದುದು ನನ್ನದೊಂದು ಕಥೆ. ಖೋಟಾ ಸ್ವಾಮಿಯೊಬ್ಬನ ಕುರಿತು ಕಥೆ ಬರೆದಿದ್ದೆ. ಆ ಕಥೆಗೊಂದು ಹಿನ್ನೆಲೆಯೂ ಇತ್ತು. ಒಂದು ರಾತ್ರಿ ಅಮ್ಮ ಹಾಲು ಕಾಯಿಸುವಾಗ, ಅಲ್ಲಿಯೇ ಕುಳಿತಿದ್ದ ನಾನು ಕೈಯಲ್ಲಿದ್ದ ಉಂಗುರ ತೆಗೆದು ಒಲೆಗೆ ಹಾಕಿದ್ದೆ. ‘ಇದನ್ನು ಹಾಕ್ಕೊಂಡರೆ ಪಾಸಾಗ್ತೀಯ’ ಎಂದು ಅಮ್ಮ ತೊಡಿಸಿದ್ದ ಉಂಗುರವದು. ನಮ್ಮ ಊರಿಗೆ ಬಂದಿದ್ದ ಸ್ವಾಮೀಜಿ ಆ ಉಂಗುರ ಕೊಟ್ಟಿದ್ದರು. ಅಪಾರ ಮಹಿಮೆಯ ಉಂಗುರ ಬಿಸಾಡಿದ್ದರಿಂದ ಅಮ್ಮನಿಗೆ ಆತಂಕವಾಗಿತ್ತು. ನನಗೆ ಏನಾದರೂ ಆಗಬಹುದು ಎನ್ನುವ ಆತಂಕದಲ್ಲಿ ರಾತ್ರಿಯಿಡೀ ಒದ್ದಾಡಿದ್ದರು. ಬೆಳಗಾದಾಗ ನನ್ನ ಕೈಕಾಲೆಲ್ಲ ಸರಿಯಾಗಿದ್ದುದನ್ನು ನೋಡಿದ ಮೇಲೆಯೇ ಅವರಿಗೆ ಸಮಾಧಾನ. ‘ರಾತ್ರಿಯೆಲ್ಲ ಹರಕೆ ಹೊತ್ತುಕೊಂಡಿದ್ದರಿಂದ ನಿನ್ನ ಕೈ ಉಳೀತು’ ಎಂದು ಹೇಳಿದರು. ಆ ಘಟನೆ ಆಧರಿಸಿ ‘ದೌರ್ಬಲ್ಯ’ ಎನ್ನುವ ಕಥೆ ಬರೆದಿದ್ದೆ. ಆ ಕಥೆ ಓದಿದ್ದ ಶಾಲೆಯ ಅಧ್ಯಕ್ಷರು – ‘ನೀವು ಇಲ್ಲಿಗೆ ಹೊಂದುವುದಿಲ್ಲ’ ಎಂದರು. ಅಲ್ಲಿಗೆ ಒಂದು ವಾರ ಕಾಲದ ಮೇಷ್ಟ್ರು ಕೆಲಸ ಕೊನೆಗೊಂಡಿತು.

ಓದು ಮುಂದುವರೆಸಬೇಕು ಎಂದು ಮೈಸೂರಿಗೆ ಬಂದೆ. ಮೈಸೂರು ಡೈರಿಯಲ್ಲಿ ಐದು ವರ್ಷ ದಿನಗೂಲಿ ಕೆಲಸ ಮಾಡಿಕೊಂಡು ಪದವಿ, ಸ್ನಾತಕೋತ್ತರ ಪದವಿ ಮಾಡಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಕೊಂಡು ಡಿಗ್ರಿ ಮುಗಿಸಿದೆ. ಪಿಯುಸಿಯಲ್ಲಿ ಫೇಲಾಗಿದ್ದುದರ ಸೇಡನ್ನು ತೀರಿಸಿಕೊಳ್ಳುವಂತೆ ಡಿಗ್ರಿಯಲ್ಲಿ ಅಂಕಗಳನ್ನು ಗುಡ್ಡೆ ಹಾಕಿಕೊಂಡಿದ್ದೆ. ಈ ಸಾಹಸವನ್ನು ಊರಲ್ಲಿ ಹೇಳಿಕೊಂಡರೆ, ನನ್ನ ಇತಿಹಾಸವನ್ನು ನೆನಪಿನಲ್ಲಿಟ್ಟುಕೊಂಡಿದ್ದ ಊರಲ್ಲಿನ ಯಾರೂ ನಾನು ಡಿಗ್ರಿ ಪಾಸಾದುದನ್ನು ನಂಬಲಿಲ್ಲ.

ಡಿಗ್ರಿ ಮುಗಿದ ನಂತರ ಎಂ.ಎ ಓದುವ ನನ್ನ ಬಯಕೆಗೆ ತೊಡಕೊಂದು ಎದುರಾಯಿತು. ನೈಟ್‌ ಷಿಫ್ಟ್‌ ಕೊಡಲು ಆಗುವುದಿಲ್ಲ ಎಂದು ಡೈರಿಯಲ್ಲಿ ಹೇಳಿದರು. ಗಂಗೋತ್ರಿಯಲ್ಲಿ ಎಂ.ಎಂ ಪದವಿ ಸಂಜೆ ತರಗತಿಗಳು ಇರಲಿಲ್ಲ. ಹಗಲಿನ ತರಗತಿಗಳಿಗೆ ಹೋಗಬೇಕೆಂದರೆ ಕೆಲಸ ಬಿಡಬೇಕಾಗಿತ್ತು. ಅಂದಿನ ಸಂದರ್ಭದಲ್ಲಿ ಕೆಲಸ ಬಿಟ್ಟು ಓದು ಮುಂದುವರಿಸುವುದು ಸಾಧ್ಯವಿರಲಿಲ್ಲ. ಆಗ ಮಂಚಯ್ಯ ಎನ್ನುವ ಜಿ.ಎಂ. ಇದ್ದರು. ‘ದಿನಗೂಲಿ ನೌಕರರು ಸತತವಾಗಿ ರಾತ್ರಿಪಾಳಿ ಮಾಡುವುದು ಸಾಧ್ಯವಿಲ್ಲ. ಕೆಲಸ–ಓದು ಎರಡರಲ್ಲಿ ಒಂದನ್ನು ಆರಿಸಿಕೋ’ ಎಂದರು. ಅದೇ ಸಮಯದಲ್ಲಿ ನನ್ನ ‘ಬಿಳಿಯ ಹಾಲಿನ ಕಪ್ಪು ಕತೆ’ ಎನ್ನುವ ಕಥೆ ‘ಸುಧಾ’ದಲ್ಲಿ ಪ್ರಕಟವಾಯಿತು. ಡೈರಿಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ವಿಡಂಬಿಸಿ ಬರೆದ ಕಥೆ ಅದಾಗಿತ್ತು. ‘ಸೆಕೆಂಡ್‌ ಡಿವಿಜನ್ ಕ್ಲರ್ಕಿನ ಸಾವಿನ ಉತ್ತರಾರ್ಧ’ ಎನ್ನುವ ಮತ್ತೊಂದು ಕಥೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಯಿತು. ಈ ಕಥೆಗಳು ಡೈರಿಯವರಿಗೆ ನನ್ನ ಬಗ್ಗೆ ಬೇರೆಯದೇ ಸುದ್ದಿ ಮುಟ್ಟಿಸಿದವು. ಬಹುಶಃ ಅವರು ನನ್ನ ಬಗ್ಗೆ ಅಳುಕಿರಬೇಕು. ನನ್ನನ್ನು ಕರೆದು, ರಾತ್ರಿ ಪಾಳಿ ನೀಡಲು ಒಪ್ಪಿಕೊಂಡರು. ಹಾಲಿನ ಲಾರಿಗಳಿಗೆ ಪೆಟ್ರೋಲ್ ಹಾಕುವ ಬಂಕ್‌ನಲ್ಲಿ ಕೆಲಸ ಮಾಡಲು ಹೇಳಿದರು. ರಾತ್ರಿ 10ರಿಂದ ಬೆಳಗ್ಗೆಯವರೆಗೆ ಕೆಲಸ. 1983ರಿಂದ ಎರಡು ವರ್ಷಗಳ ಕಾಲ ಹೀಗೆ ದುಡಿದೆ. ಬೆಳಗ್ಗೆ ಲಲಿತಮಹಲ್‌ ತುದಿಯಿಂದ ಮಾನಸಗಂಗೋತ್ರಿಗೆ ಸೈಕಲ್‌ನಲ್ಲಿ ಹೋಗುತ್ತಿದ್ದೆ. ಗಂಗೋತ್ರಿಯಲ್ಲಿನ ದಿನಗಳು ನನಗೆ ಅದ್ಭುತ ಜಗತ್ತನ್ನು ತೆರೆದವು. ಹಾ.ಮಾ. ನಾಯಕ, ಶಂಕರ ಮೊಕಾಶಿ ಪುಣೇಕರ, ತಿಪ್ಪೇರುದ್ರಸ್ವಾಮಿ, ಪ್ರಧಾನ ಗುರುದತ್ತ, ಸುಧಾಕರ, ಟಿ.ವಿ. ವೆಂಕಟಾಚಲಶಾಸ್ತ್ರಿ, ಜಿ.ಎಚ್. ನಾಯಕ, ವಿಜಯಾ ದಬ್ಬೆ, ಎಚ್‌.ಎಂ. ಚನ್ನಯ್ಯ, ಸಿಪಿಕೆ – ಹೀಗೆ ಘಟಾನುಘಟಿ ಮೇಷ್ಟ್ರುಗಳು ದೊರೆತರು.

1985ರಲ್ಲಿ ಗಂಗೋತ್ರಿಯಿಂದ ಹೊರಬೀಳುವ ವೇಳೆಗೆ ಪ್ರಜ್ಞಾಪೂರ್ವಕವಾಗಿ ಪ್ರೇಮವೊಂದರಲ್ಲಿ ಸಿಕ್ಕಿಬಿದ್ದಿದ್ದೆ. ನನ್ನ ಕಥೆಗಳಂತೂ ಯಾವ ಪತ್ರಿಕೆ ತೆಗೆದರೂ ಇರುತ್ತಿದ್ದವು. ನಾನು, ಜಯಂತ ಕಾಯ್ಕಿಣಿ, ರವಿ ಬೆಳಗೆರೆ ಪೈಪೋಟಿ ಎನ್ನುವಂತೆ ಕಥೆ ಬರೆಯುತ್ತಿದ್ದ, ಕಥೆಗಾರನಾಗಿ ಸ್ಟಾರ್‌ಗಿರಿ ಇದ್ದ ದಿನಗಳವು. ಪೋಸ್ಟ್‌ಮ್ಯಾನ್‌ ಪ್ರತಿದಿನ ಲಗ್ಗೇಜ್‌ ರೀತಿ ಓದುಗರ ಪತ್ರಗಳನ್ನು ತಂದುಕೊಡುತ್ತಿದ್ದ. ಈಗ ಓದುಗರ ಸಂಖ್ಯೆಯನ್ನು ನೆನಪಿಸಿಕೊಂಡರೆ ಆತಂಕವಾಗುತ್ತದೆ.

ನಾನು ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದೆ. ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಗುಮಾಸ್ತನ ಕೆಲಸ ಸಿಕ್ಕಿತು. ನನ್ನ ಹೆಂಡತಿಗೆ ಭೌತಶಾಸ್ತ್ರದಲ್ಲಿ ಪಾರ್ಟ್ ಟೈಂ ಲೆಕ್ಚರರ್ ಕೆಲಸ ಸಿಕ್ಕಿತು. ನನಗೆ ಕೋರ್ಟ್‌ನಲ್ಲಿ ಬೆಂಚ್‌ ಕ್ಲರ್ಕ್ ಕೆಲಸ ಕೊಟ್ಟರು. ನಾನು ಬೇಡ ಎಂದೆ. ಜನರೇ ಇಲ್ಲದ ಜಾಗ ಕೇಳಿಕೊಂಡೆ. ರೆಕಾರ್ಡ್ ರೂಂ ಕೊಟ್ಟರು. ಮನುಷ್ಯರು ಹೆಚ್ಚು ಸುಳಿದಾಡದ, ಕಡತಗಳೇ ತುಂಬಿದ್ದ ಆ ಕೊಠಡಿಯಲ್ಲಿ ಕಥೆ ಬರೆಯಲು ಬಿಡುವು ದೊರೆಯುತ್ತಿತ್ತು. ಅದೇ ವೇಳೆಗೆ ‘ಲಂಕೇಶ್ ಪತ್ರಿಕೆ’ ಶುರುವಾಯಿತು. ಪುಟ್ಟದೊಂದು ಅಂಕಣ ಬರೆಯತೊಡಗಿದೆ. ಕಾಲೇಜುಗಳಲ್ಲಿ ಉಪನ್ಯಾಸಕ ಹುದ್ದೆಗಾಗಿ ಪ್ರಯತ್ನಿಸತೊಡಗಿದಂತೆ ನಾನು ಪಡೆದ ಚಿನ್ನದ ಪದಕಗಳು ವ್ಯರ್ಥ ಎನ್ನುವುದು ಅರ್ಥವಾಯಿತು.

ಮೇಷ್ಟ್ರಾಗುವ ಕನಸು ಕೈಗೂಡದಿದ್ದರೂ ನನ್ನ ಕಥೆಗಳಿಗೆ ಓದುಗರಿಂದ ದೊರೆಯುತ್ತಿದ್ದ ಸ್ಪಂದನ ಖುಷಿಕೊಡುತ್ತಿತ್ತು. ಸಿನಿಮಾ ನಿರ್ದೇಶಕರು ಕೂಡ ಆಸಕ್ತಿ ವ್ಯಕ್ತಪಡಿಸುತ್ತಿದ್ದರು. ಈ ಸಿನಿಮಾ ಸಹವಾಸದಲ್ಲಿ ನಟ, ಅಧ್ಯಾಪಕ ಮಾನು ಅವರ ಪರಿಚಯವಾಯಿತು. ನನ್ನ ಉಪನ್ಯಾಸಕನಾಗುವ ಆಸೆ ಅವರಿಗೆ ತಿಳಿಯಿತು. ಸಂಜೆ ಕಾಲೇಜೊಂದರಲ್ಲಿ ತಾತ್ಕಾಲಿಕ ಹುದ್ದೆ ಇತ್ತು. ಕೋರ್ಟ್‌ನಲ್ಲಿನ ನನ್ನ ಸೀನಿಯರ್‌ಗಳು ಕೂಡ ಅನುಮತಿ ಕೊಟ್ಟರು. ಬೆಳಗ್ಗೆ ಕೋರ್ಟ್, ಸಂಜೆ ಕಾಲೇಜು – ಒಂದು ವರ್ಷ ಹೀಗೇ ಎರಡೂ ಕೆಲಸ ಮಾಡುತ್ತಿರುವಾಗ, ಅದೇ ಕಾಲೇಜಿನಲ್ಲಿ ಹಗಲು ಕಾಲೇಜಿನ ಉಪನ್ಯಾಸಕ ಹುದ್ದೆಯೊಂದಕ್ಕೆ ಅರ್ಜಿ ಕರೆದರು. ನನ್ನ ಪರವಾಗಿ ಮಾನು ವಕೀಲಿಕೆ ಮಾಡಿದ್ದರಿಂದಾಗಿ ಕೆಲಸ ದೊರೆಯಿತು. ಕೋರ್ಟ್ ಬಿಟ್ಟೆ. ಉಪನ್ಯಾಸಕನಾಗಿ 12 ವರ್ಷ ಕೆಲಸ ಮಾಡಿದೆ. ಆನಂತರ ದೃಶ್ಯಮಾಧ್ಯಮದಲ್ಲಿ ಎಷ್ಟು ಕೆಲಸ ದೊರಕಿತು ಎಂದರೆ, ನನ್ನ ಪ್ರೀತಿಯ ಉಪನ್ಯಾಸಕ ಹುದ್ದೆಯನ್ನು ಬಿಡಬೇಕಾಯಿತು.

* ಆಮೇಲೆ ನೀವು ಪೂರ್ಣ ಪ್ರಮಾಣದ ನಿರ್ದೇಶಕರಾದಿರಿ. ನೀವು ನಿರ್ದೇಶಕನಾದ ಕಥೆ ಹೇಳಿ.
‘ಅಮೆರಿಕ ಅಮೆರಿಕ’, ‘ಹೂಮಳೆ’ ಚಿತ್ರಗಳನ್ನು ಉಪನ್ಯಾಸಕನಾಗಿದ್ದಾಗ ರಜೆ ಸಮಯದಲ್ಲಿಯೇ ಶೂಟಿಂಗ್ ಮುಗಿಸಿದ್ದೆ. ಆದರೆ ನಿರ್ದೇಶಕನಾಗುವಂತೆ ನನಗೆ ಮೊದಲು ಆಫರ್‌ ನೀಡಿದ್ದು ಡಾ. ಅಶೋಕ್ ಪೈ. ಅವರು ‘ಕಾಡಿನಬೆಂಕಿ’ ಚಿತ್ರವನ್ನು ನಿರ್ದೇಶಿಸಲು ಒತ್ತಾಯಿಸಿದ್ದರು. ನನಗೆ ಆತ್ಮವಿಶ್ವಾಸವಿರಲಿಲ್ಲ. ಅಶೋಕ್ ಅವರಿಗೆ ಸುರೇಶ್ ಹೆಬ್ಳೀಕರ್ ಅವರನ್ನು ಪರಿಚಯಿಸಿದೆ. ಆ ಚಿತ್ರಕ್ಕೆ ನಾನು ಚಿತ್ರಕಥೆ ಬರೆದೆ. ಕೋಡ್ಲು ರಾಮಕೃಷ್ಣರ ‘ಉದ್ಭವ’ಕ್ಕೆ ಚಿತ್ರಕತೆ, ಸಂಭಾಷಣೆ, ಹಾಡುಗಳನ್ನು ಬರೆದೆ. ನಾನೇ ಬರೆಯಬೇಕು ಎಂದು ಬಿ.ವಿ. ವೈಕುಂಠರಾಜು ಸೂಚಿಸಿದ್ದರಂತೆ. ಆ ಚಿತ್ರಕಥೆ ಅನಂತ್‌ನಾಗ್‌ ಅವರಿಗೆ ತುಂಬಾ ಇಷ್ಟವಾಯಿತು. ‘ಎಷ್ಟೊಂದು ಚೆನ್ನಾಗಿ ಬರೆಯುತ್ತೀರಿ. ನೀವು ನಿರ್ದೇಶನವನ್ನೂ ಮಾಡಬೇಕು’ ಎಂದು ಒತ್ತಾಯಿಸಿದರು. ಅದೇ ಸಮಯದಲ್ಲಿ ನನ್ನ ಪತ್ನಿ ಉದ್ಯೋಗನಿಮಿತ್ತ ಅಮೆರಿಕದಲ್ಲಿದ್ದರು. ಅಲ್ಲಿಗೆ ತೆರಳಿದ ನಾನು, ಸುಮಾರು ಒಂದು ವರ್ಷ ಕಾಲ ಸಿನಿಮಾ ವ್ಯಾಕರಣಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಅಧ್ಯಯನ ಮಾಡಿದೆ. ಅಲ್ಲಿಂದ ಬಂದಮೇಲೆ ಬೆಸಗರಹಳ್ಳಿ ರಾಮಣ್ಣನವರ ‘ಸುಗ್ಗಿ’ ಕಥೆಯನ್ನು ದೂರದರ್ಶನಕ್ಕಾಗಿ ಕಿರುಚಿತ್ರ ಮಾಡಿದೆ. ಆನಂತರ ಕೆಲವು ಸಾಕ್ಷ್ಯಚಿತ್ರಗಳನ್ನು ಮಾಡಿದೆ. ಇದೆಲ್ಲ ಸಿನಿಮಾಕ್ಕೆ ತಯಾರಿ ಎನ್ನಬಹುದು. ಆ ವೇಳೆಗೆ ‘ಉದ್ಭವ’ ಶತದಿನ ಪ್ರದರ್ಶನ ಕಂಡು, ನನಗೆ ಅತ್ಯುತ್ತಮ ಸಂಭಾಷಣೆಕಾರ ರಾಜ್ಯಪ್ರಶಸ್ತಿಯೂ ಬಂದಿತ್ತು. ಅದೇ ಚಿತ್ರದ ನಿರ್ಮಾಪಕರು ಸಿನಿಮಾ ಮಾಡಿಕೊಡುವಂತೆ ಕೇಳಿದಾಗ, ನನ್ನದೇ ಕಥೆಯನ್ನು ಆಧರಿಸಿ ‘ಉಂಡೂ ಹೋದ ಕೊಂಡೂ ಹೋದ’ ಸಿನಿಮಾ ರೂಪಿಸಿದೆ.

* ಲೇಖಕರು ಸಿನಿಮಾ ಮಾಡಿರುವ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟಿವೆ. ಆದರೆ, ಕನ್ನಡದ ಬಹುತೇಕ ಲೇಖಕರು ಸಾಹಿತ್ಯದ ಆಶಯಗಳ ಮುಂದುವರಿಕೆಯಾಗಿ ಸಿನಿಮಾ ಮಾಧ್ಯಮವನ್ನು ಬಳಸಿಕೊಂಡಿದ್ದಾರೆ. ನಿಮ್ಮ ಪಾಲಿಗೆ ಸಿನಿಮಾ ಮಾಧ್ಯಮ ಒದಗಿಬಂದಿರುವುದು ಹೇಗೆ?
‘ನೀವು ಬಹಳ ಕೆಟ್ಟ ನಿರ್ದೇಶಕರು’ ಎಂದು ಲಂಕೇಶರಿಗೆ ಒಮ್ಮೆ ಹೇಳಿದ್ದೆ. ‘ನಿನಗೆ ಗೊತ್ತಾಗಲ್ಲ. ಏನೆಲ್ಲ ಕಷ್ಟಗಳ ನಡುವೆ ನಾವು ಸಿನಿಮಾ ಮಾಡೋದೆ ಹೆಚ್ಚು’ ಎಂದು ಅವರು ಹೇಳಿದ್ದರು. ಸಾಹಿತ್ಯದ ಕಣ್ಣಿನಿಂದ ಸಿನಿಮಾ ಮಾಡುವ ಚೌಕಟ್ಟನ್ನು ನಮ್ಮ ಬಹುತೇಕ ಲೇಖಕರು ಮೀರಲಿಲ್ಲ. ನನ್ನ ಅನುಭವದಂತೆ, ಅನೇಕ ಸಾಹಿತಿಗಳಿಗೆ ಸಿನಿಮಾ ಬಗ್ಗೆ ಗುಪ್ತಪ್ರೀತಿ ಇರುತ್ತದೆ; ಜೊತೆಗೆ ಅಸ್ಪೃಶ್ಯ ಮನೋಭಾವವೂ ಇರುತ್ತದೆ. ಅವಕಾಶ ಕೊಟ್ಟರೆ ಶ್ರದ್ಧೆಯಿಂದ ಬರೆಯುವುದಿಲ್ಲ. ಸಿನಿಮಾಕ್ಕೆ ಕೆಲಸ ಮಾಡುವುದು ಒಂದು ಕವಿತೆಯನ್ನೋ ಕಥೆಯನ್ನೋ ಬರೆದಂತಲ್ಲ. ವೈಯಕ್ತಿಕವಾಗಿ ಸಿನಿಮಾದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಅದೊಂದು ಸಮೂಹಕಲೆ. ಸಾಹಿತ್ಯದ ಸ್ಪರ್ಶವನ್ನು ಉಳಿಸಿಕೊಂಡೂ ಸಿನಿಮಾ ಮಾಡಲು ಸಾಧ್ಯವಿದೆ. ಕಮರ್ಷಿಯಲ್ ಸಕ್ಸಸ್‌ ಬಗ್ಗೆ ಮುಜುಗರ ಪಡಬೇಕಿಲ್ಲ. ನನ್ನ ‘ಅಮೆರಿಕ ಅಮೆರಿಕ’ ಒಂದು ವರ್ಷ ಓಡಿತು. ಸಾಹಿತ್ಯದ ಹಿನ್ನೆಲೆಯಿಂದ ಬಂದ ಕಾರಣದಿಂದಲೋ ಏನೋ ಜನ ಬಹಳಷ್ಟು ಪ್ರೀತಿ–ಯಶಸ್ಸು ಕೊಟ್ಟಿದ್ದಾರೆ. ಆ ಕಾರಣದಿಂದಲೇ ಮೂರೂವರೆ ದಶಕಗಳ ಕಾಲ ದೃಶ್ಯಮಾಧ್ಯಮದಲ್ಲಿ ಕೆಲಸ ಮಾಡಲು ಸಾಧ್ಯವಾಯಿತು.

* ಯಶಸ್ಸುಗಳ ನಡುವೆಯೂ ನೀವು ಅನೇಕ ಸಿನಿಮಾಗಳಲ್ಲಿ ರಾಜಿ ಮಾಡಿಕೊಂಡಂತೆ ಕಾಣಿಸುತ್ತದೆ. ಈ ನಿಟ್ಟಿನಲ್ಲಿ ‘ಮಾತಾಡ್‌ ಮಾತಾಡ್‌ ಮಲ್ಲಿಗೆ’ ಚಿತ್ರವನ್ನು ಉದಾಹರಣೆ ಕೊಡಬಹುದೆನ್ನಿಸುತ್ತದೆ?
ಮಾರುಕಟ್ಟೆ ಬಗ್ಗೆ ನಮಗಿರುವ ಭಯ ರಾಜಿಗೆ ಕಾರಣವಾಗುತ್ತದೆ. ವಿಷ್ಣುವರ್ಧನ್‌ ಇದ್ದಾಗ, ಸುದೀಪ್‌ ಬಂದಾಗ, ಮಾರುಕಟ್ಟೆಯ ಸೂತ್ರಗಳು ನಮ್ಮನ್ನು ಜಗ್ಗುತ್ತವೆ. ಸಿನಿಮಾದಲ್ಲಿ ವ್ಯಾಪಾರ ಮತ್ತು ಕಲೆಯ ಪ್ರಮಾಣ ಎಷ್ಟಿರಬೇಕೆನ್ನುವ ಜಿಜ್ಞಾಸೆ ಶುರುವಾಗುತ್ತದೆ. ‘ಮಾತಾಡ್‌ ಮಾತಾಡ್‌ ಮಲ್ಲಿಗೆ’ ಸಿನಿಮಾಕ್ಕಾಗಿ ನಾನು ಸಾಕಷ್ಟು ಅಧ್ಯಯನ ನಡೆಸಿದ್ದೆ. ಪುಷ್ಪಕೃಷಿ, ನಕ್ಸಲಿಸಂ, ಗಣಿಗಾರಿಕೆ – ಎಲ್ಲದರ ಬಗ್ಗೆಯೂ ಓದಿಕೊಂಡಿದ್ದೆ. ಆದರೆ, ಇದೆಲ್ಲವೂ ಸಿನಿಮಾದಲ್ಲಿ ಪ್ರತಿಫಲಿತವಾಗಲು ಸಾಧ್ಯವಾಗಲಿಲ್ಲ. ಸಿನಿಮಾಕ್ಕಿರುವ ವ್ಯಾವಹಾರಿಕ ಜೂಜಿನ ಒತ್ತಡ ಇದು. ಸೂಕ್ಷ್ಮಮನಸ್ಸಿನ ವ್ಯಕ್ತಿಗಳನ್ನು ಇದು ಹಣ್ಣಾಗಿಸುತ್ತದೆ. ನಟ ವಿಷ್ಣುವರ್ಧನ್ ಅವರ ಆರೋಗ್ಯ ಕೂಡ ಕ್ಷೀಣಿಸಿತ್ತು. ತೆರೆಯ ಹಿಂದಿನ ಪರದಾಟಗಳಿಂದಾಗಿ ರಾಜಿ ಮಾಡಿಕೊಳ್ಳಬೇಕಾಯಿತು. ಈಗ, ಸಿನಿಮಾ ಎನ್ನುವುದು ಎಂದೂ ತುದಿಮುಟ್ಟದ ಪರ್ವತಾರೋಹಣ ಎನ್ನಿಸುತ್ತಿದೆ. ಶಿಖರ ಎಲ್ಲಿಯೋ ಇದೆ ಎನ್ನುವುದಷ್ಟೇ ಗೊತ್ತು.

* ಮೇಷ್ಟ್ರು, ಕಥೆಗಾರ, ಸಿನಿಮಾ ನಿರ್ದೇಶಕ – ಈ ಮೂರರಲ್ಲಿ ನಿಮಗೆ ಯಾವುದು ತುಂಬಾ ಇಷ್ಟ? ಏಕೆ?
ಮೊದಲೆರಡು ತುಂಬಾ ಖುಷಿಕೊಟ್ಟ ಪಾತ್ರಗಳು. ಈಗಲೂ ಕೆಲವೊಮ್ಮೆ ಗಂಗೋತ್ರಿಗೆ ಹೋಗಿ ಪಾಠ ಮಾಡಿ, ಸಂಜೆ ನಾಗತಿಹಳ್ಳಿಗೆ ಹೋಗಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಪಾಠ ಹೇಳುವುದಿದೆ. ಇದು ಅಪ್ಪ ಮತ್ತು ಊರಿನಿಂದ ಬಂದ ಶಿಕ್ಷಕ ಪರಂಪರೆಯ ಪ್ರೇಮ. ನಿರ್ದೇಶಕನಾಗಿದ್ದಾಗ ಅಜ್ಞಾತ ಪ್ರೇಕ್ಷಕರ ಜೊತೆ ಸಂವಾದ ಸಾಧ್ಯವಾಗಬಹುದು. ಆದರೆ, ತರಗತಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ಸಾಧ್ಯವಾಗುತ್ತದೆ. ವರ್ಷದ ಕೊನೆಗೆ ನಾನು ರೂಪಿಸಿದ ವಿದ್ಯಾರ್ಥಿಗಳ ಯಶಸ್ಸು ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ, ಸಿನಿಮಾದ ಬಗ್ಗೆ, ಓದುಗರ ಬಗ್ಗೆ ಈ ಮಾತನ್ನು ಹೇಳಲು ಸಾಧ್ಯವಿಲ್ಲ.

ಬೋಧನೆಯ ಬಗೆಗಿನ ಪ್ರೀತಿಯಿಂದಲೇ ನನ್ನ ಕೊನೆಯ ಸಾಹಸ ಎನ್ನುವಂತೆ ‘ಟೆಂಟ್ ಸಿನಿಮಾ ಶಾಲೆ’ ನಡೆಸುತ್ತಿದ್ದೇನೆ. ಇಲ್ಲಿ ಬರುವ ವಿದ್ಯಾರ್ಥಿಗಳೊಂದಿಗಿನ ಸಂವಹನ ಅಪಾರ ಖುಷಿ ಕೊಡುತ್ತದೆ. ಉಪನ್ಯಾಸಕನಾದ ಬಗ್ಗೆ ನನಗೆ ಸ್ವಲ್ಪವೂ ವಿಷಾದವಿಲ್ಲ. ಸಿನಿಮಾ ತರಗತಿಗಳಲ್ಲಿ ‘ರಾಮಾಯಣ ದರ್ಶನಂ’ ಓದುವ ಅನುಭವವೇ ಬೇರೆ.

* ಅನೇಕ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವುದರಿಂದ ಪ್ರತಿಭೆ ಚೆಲ್ಲಾಪಿಲ್ಲಿ ಆಗಿದೆ ಎಂದು ನಿಮಗನ್ನಿಸಿದೆಯೇ?
ನಾನು ಮೈಲಿಗಲ್ಲುಗಳನ್ನು ಬರೆಯುವ ಕೆಲಸವನ್ನು ಮಾಡಿರುವೆ. ಒಂದು ಅಕ್ಷರಕ್ಕೆ 25 ಪೈಸೆ ದೊರೆಯುತ್ತಿತ್ತು. ‘ಮಂಡ್ಯ’ ಎಂದು ಬರೆದರೆ 50 ಪೈಸೆ. ಹಾಗಾಗಿ ಮಂಡ್ಯಕ್ಕಿಂತಲೂ ಪಿರಿಯಾಪಟ್ಟಣ, ಚಿಕ್ಕನಾಯಕನಹಳ್ಳಿ ಹೆಚ್ಚು ಇಷ್ಟವಾಗುತ್ತಿದ್ದವು. ಸೈಕಲ್‌ನಲ್ಲಿ ಹೋಗಿ ಬರೆಯುವುದು ಖುಷಿ ಕೊಡುತ್ತಿತ್ತು. ಚಿತ್ರಮಂದಿರಗಳಲ್ಲೂ ಕೆಲಸ ಮಾಡಿರುವೆ. ಗೇಟ್‌ಕೀಪರ್, ಟಿಕೆಟ್ ಕೊಡುವುದು, ಪ್ರೊಜೆಕ್ಷನ್ – ಎಲ್ಲವನ್ನೂ ಮಾಡಿರುವೆ. ಹೀಗೆಯೇ ಓದು, ಬರಹ, ಉಪನ್ಯಾಸ, ಸಿನಿಮಾ ಮಾಡಿರುವೆ. ಈ ಪಯಣದಲ್ಲಿ ನನ್ನ ಪ್ರತಿಭೆ ಚೆಲ್ಲಾಪಿಲ್ಲಿ ಆಗಿದೆಯೇ ಎಂದು ಹಿಂತಿರುಗಿ ನೋಡಿದ್ದಿದೆ. ಇದು ಬದುಕನ್ನು ಅಲ್ಲಾಡಿಸುವ, ಬಹಳ ಸಲ ನನ್ನನ್ನು ನಾನು ಕೇಳಿಕೊಂಡಿರುವ ಪ್ರಶ್ನೆ. ಇವತ್ತಿನವರೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಒಂದು ಪ್ರಶಸ್ತಿಯೂ ನನಗೆ ಬಂದಿಲ್ಲ. ನನ್ನ ಜೊತೆ ಬರೆಯುತ್ತಿದ್ದ ಲೇಖಕರು 2–3 ಪ್ರಶಸ್ತಿ ಪಡೆದಿದ್ದಾರೆ. ಇದಕ್ಕೆ ಕಾರಣ, ನನ್ನನ್ನು ಸಿನಿಮಾದವನು ಎಂದು ಸಾಹಿತ್ಯವಲಯ ದೂರ ಇಟ್ಟಿರುವುದು. ಚಿತ್ರರಂಗದಲ್ಲಿ ಕೂಡ ಮುಖ್ಯವಾಹಿನಿಯವರು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಅವರ ಪಾಲಿಗೆ ನಾನು ಲೇಖಕ. ಇನ್ನು ಅಕಡೆಮಿಕ್ ವಲಯ(ವಿಶ್ವವಿದ್ಯಾಲಯ)ದವರು ಸಿನಿಮಾ ಕುರಿತ ಚರ್ಚೆಗಳಿಗಷ್ಟೇ ನನ್ನನ್ನು ನೆನಪಿಸಿಕೊಳ್ಳುತ್ತಾರೆ. ಎಲ್ಲೂ ಸಲ್ಲದ ಅನಾಥಪ್ರಜ್ಞೆಯೊಂದು ಕಾಡುವುದಿದೆ.

ಸಾವು ನನ್ನನ್ನು ಸದಾ ಕಾಡುತ್ತಿರುತ್ತದೆ. ಆ ಭಯದಿಂದಲೇ ಸದಾ ಕೆಲಸವನ್ನು ಮಾಡಬೇಕನ್ನಿಸುತ್ತದೆ – ಅದು ಯಾವ ಕೆಲಸವಾದರೂ ಸರಿ. ನಿದ್ದೆಯೂ ಕಡಿಮೆ. ನಾನು ಲೇಖಕನಾ, ಅಲೆಮಾರಿಯಾ, ನಿರ್ದೇಶಕನಾ, ಮೇಷ್ಟ್ರಾ – ಪ್ರತಿ ಕ್ಷೇತ್ರದಲ್ಲೂ ಮಿತಿ ಇರುತ್ತದೆ. ನಾನು ಒಂದರಿಂದ ಇನ್ನೊಂದಕ್ಕೆ ಜಿಗಿಯುತ್ತಿರುತ್ತೇನೆ. ಎಲ್ಲ ಕ್ಷೇತ್ರಗಳಲ್ಲೂ ನನ್ನ ಮಿತಿಗೆ ಸಾಧ್ಯವಿರುವಷ್ಟು ಕೆಲಸ ಮಾಡಿರುವೆ ಎನ್ನುವ ನೆಮ್ಮದಿಯಂತೂ ಇದೆ. ಮಾಡಬೇಕಾದ ಕೆಲಸಗಳೂ ಸಾಕಷ್ಟಿವೆ. ನನ್ನೂರನ್ನು ಪೂರ್ಣ ಸೋಲಾರ್ ಮಾಡುವ ಆಸೆ ಇದೆ. ಬ್ಯಾಂಕಿಂಗ್ ವ್ಯವಸ್ಥೆಗೆ ಊರನ್ನು ಒಳಪಡಿಸುವ ಆಸೆ ಇದೆ. ಮಾಡಬೇಕಾದ ಸಿನಿಮಾಗಳು, ಬರೆಯಬೇಕಾದ ಕೃತಿಗಳು ಸಾಕಷ್ಟಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು