ಇವ ಪ್ರೀತಿಯ ‘ಅಯೋಗ್ಯ’

7

ಇವ ಪ್ರೀತಿಯ ‘ಅಯೋಗ್ಯ’

Published:
Updated:
Deccan Herald

* ‘ಅಯೋಗ್ಯ’ ಚಿತ್ರದ ವಿಶೇಷತೆ ಏನು?

ಸ್ವಮೇಕ್‌ ಚಿತ್ರ ಇದು. ಚಿತ್ರಕಥೆಯಲ್ಲಿ ಹೊಸತನವಿದೆ. ಬಚ್ಚೇಗೌಡ ಮತ್ತು ಸಿದ್ದೇಗೌಡನ ನಡುವೆ ನಡೆಯುವ ಕಥೆ. ಗ್ರಾಮೀಣ ಸೊಗಡಿನಲ್ಲಿ ಸಾಗುತ್ತದೆ. ಇನ್ನೊಂದೆಡೆ ನನ್ನ ಮತ್ತು ರಚಿತಾ ರಾಮ್‌ ನಡುವಿನ ಪ್ರೇಮ ಪಯಣವೂ ಸಾಗುತ್ತದೆ. ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕರ ಮನದಲ್ಲಿ ಅಚ್ಚರಿ ಮೂಡಿಸುತ್ತದೆ. ಸಿನಿಮಾ ನೋಡಿದ ಹಳ್ಳಿಯ ಜನರಿಗೆ ಇದು ನಮ್ಮ ನಡುವೆಯೇ ನಡೆಯುತ್ತಿರುವ ಕಥೆ ಎನಿಸುತ್ತದೆ. ನಗರ ಪ್ರದೇಶದವರಿಗೆ ಹೊಸ ಪಂಚತಂತ್ರ, ಚಂದಮಾಮನ ಕಥೆಯಂತೆ ಖುಷಿ ಕೊಡುತ್ತದೆ. ಎಲ್ಲಿಯೂ ಬೋರ್‌ ಎನಿಸುವುದಿಲ್ಲ. ಸಿನಿಮಾ ನವೀರಾಗಿ ಮೂಡಿಬಂದಿದೆ. 

* ಚಿತ್ರದ ಟೈಟಲ್‌ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಗ್ರಾಮೀಣರು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆಯೇ?

ದೊಡ್ಡಮಟ್ಟದ ವಿವಾದಕ್ಕೆ ಎಡೆಮಾಡಿಕೊಡುವಂತಹ ಟೈಟಲ್‌ ಇದಲ್ಲ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ‘ಅಯೋಗ್ಯ’ ಪದ ಬಳಸುತ್ತಾರೆ. ನಮ್ಮ ಮನೆಯೂ ಇದರಿಂದ ಹೊರತಲ್ಲ. ಜೊತೆಗೆ, ಇದು ದೊಡ್ಡ ಬೈಗುಳ ಪದವಲ್ಲ. ಇದನ್ನು ಪ್ರೀತಿಯ ಬೈಗುಳವಾಗಿಯೂ ಕರೆಯುತ್ತಾರೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಅವಮಾನ ಮಾಡಲು ಚಿತ್ರಕ್ಕೆ ಈ ಟೈಟಲ್‌ ಇಟ್ಟಿಲ್ಲ. ಕಥೆಗೆ ಅಗತ್ಯ ಇದ್ದದ್ದರಿಂದ ಇಡಲಾಗಿದೆ. ಸಿನಿಮಾ ನೋಡಿದ ನಂತರ ಏಕೆ ಈ ಟೈಟಲ್‌ ಇಡಲಾಗಿದೆ ಎನ್ನುವುದು ಗೊತ್ತಾಗುತ್ತದೆ. 

* ಈ ಪಾತ್ರಕ್ಕೆ ಸಿದ್ಧತೆ ಹೇಗಿತ್ತು? 

ಪಾತ್ರಕ್ಕಾಗಿ ವಿಶೇಷ ಸಿದ್ಧತೆ ಮಾಡಿದ್ದೇನೆ. ಒಂದು ತಿಂಗಳ ಕಾಲ ಡಾನ್ಸ್‌ ಕಲಿತೆ. ಕಥೆಯ ಪಾತ್ರಕ್ಕೆ ಅನುಗುಣವಾಗಿಯೇ ಗಡ್ಡ ಬೆಳೆಸಿದೆ. ವ್ಯಾಯಾಮ ಶಾಲೆಯಲ್ಲಿ ಸಾಕಷ್ಟು ಬೆವರು ಹರಿಸಿದೆ. ಚಿತ್ರ ಚೆನ್ನಾಗಿ ಮೂಡಿಬರಬೇಕೆಂಬುದೇ ಈ ಕಸರತ್ತಿನ ಹಿಂದಿನ ಆಶಯ. ಪ್ರೇಕ್ಷಕರಿಗೆ ಒಳ್ಳೆಯ ಪ್ಯಾಕೇಜ್‌ ನೀಡಿರುವುದು ಸಂತಸವಿದೆ.

* ನಿಮ್ಮ ಮತ್ತು ನಟಿ ರಚಿತಾ ರಾಮ್‌ ಅವರ ಕಾಂಬಿನೇಷನ್‌ ಬಗ್ಗೆ ಹೇಳಿ?

ನಾವಿಬ್ಬರು ಮೊದಲ ಬಾರಿಗೆ ಒಟ್ಟಾಗಿ ನಟಿರುವ ಚಿತ್ರ ಇದು. ಜನರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ನನಗಿದೆ. ರಚಿತಾ ಅವರು ಮಂಡ್ಯದ ಭಾಷೆಯಲ್ಲಿ ಡಬ್ಬಿಂಗ್‌ ಮಾಡಿದ್ದಾರೆ. ಸಾಧುಕೋಕಿಲ, ರವಿಶಂಕರ್‌ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಚಿತ್ರದಲ್ಲಿ ಹಳ್ಳಿಯ ಸೊಗಡಿದೆ. ಜೊತೆಗೆ, ಹಾಸ್ಯವೂ ಮಿಳಿತವಾಗಿದೆ.

* ಸ್ಥಳೀಯ ಸರ್ಕಾರಗಳು ಸುಭದ್ರವಾಗಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನಿಮಗನಿಸುತ್ತಿದೆಯೇ?

ಖಂಡಿತ. ದೇಶದ ಮೂಲಬೇರುಗಳು ಇರುವುದೇ ಹಳ್ಳಿಗಳಲ್ಲಿ. ಜೊತೆಗೆ, ಗ್ರಾಮೀಣ ಪ್ರದೇಶ ‍ಪ್ರಗತಿ ಕಂಡರೆ ಮಾತ್ರ ದೇಶದ ಅಭ್ಯುದಯ ಸಾಧ್ಯ. ಸ್ಥಳೀಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅಂತಹ ವಾತಾವರಣವೇ ಇಲ್ಲ. ಅಗತ್ಯವಿರುವ ಸ್ವಾತಂತ್ರ್ಯ ಸಿಕ್ಕಿಲ್ಲ. ಇನ್ನೊಂದೆಡೆ ಗ್ರಾಮಾಭಿವೃದ್ಧಿಗೆ ನೀಡುತ್ತಿರುವುದು ಅನುದಾನವೂ ಅತ್ಯಲ್ಪ. ಇದರಿಂದ ಯಾವುದೇ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿ ಆಡಳಿತಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಆಗ ಮಾತ್ರ ಹಳ್ಳಿಗಳ ಪ್ರಗತಿಯನ್ನು ನಿರೀಕ್ಷಿಸಬಹುದು.

* ನಿರ್ದೇಶಕ ಎಸ್. ಮಹೇಶ್‌ಕುಮಾರ್‌ ಅವರೊಟ್ಟಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಮಹೇಶ್‌ಕುಮಾರ್‌ ಶ್ರಮಜೀವಿ. ಒಳ್ಳೆಯ ನಿರ್ದೇಶಕ. ಪ್ರತಿಯೊಂದು ದೃಶ್ಯವೂ ಚೆನ್ನಾಗಿ ಮೂಡಿಬರಬೇಕೆಂದು ಸಾಕಷ್ಟು ದುಡಿದಿದ್ದಾರೆ. ಚಿತ್ರ ನೋಡಿದರೆ ಅವರ ಶ್ರಮ ಎದ್ದುಕಾಣುತ್ತಿದೆ. ದೊಡ್ಡ ಬಜೆಟ್‌ನ ಚಿತ್ರ ಇದು. ಚಿತ್ರದ ನಾಲ್ಕು ಹಾಡುಗಳಿಗೂ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಖುಷಿ ಕೊಟ್ಟಿದೆ. ಏನಮ್ಮಿ... ಹಾಡು ನಮ್ಮ ನಿರೀಕ್ಷೆಗೂ ಮೀರಿ ಜನರ ಪ್ರೀತಿ ದಕ್ಕಿಸಿಕೊಂಡಿದೆ. ಇದು ಚಿತ್ರತಂಡದಲ್ಲಿ ಹೊಸ ಭರವಸೆ ಮೂಡಿಸಿದೆ.

* ಈ ಚಿತ್ರದ ಮೂಲಕ ಯಾವ ಸಂದೇಶ ಹೇಳಲು ಹೊರಟಿದ್ದೀರಿ?

ಚಿತ್ರದ ಬಿಡುಗಡೆಗೂ ಮೊದಲೇ ಸಂದೇಶ ಹೇಳಲಾರೆ. ಸಿನಿಮಾ ನೋಡಿದ ಜನರಿಗೆ ನಾವು ಹೇಳಲು ಹೊರಟಿರುವ ಸಂದೇಶ ಅರ್ಥವಾಗಲಿದೆ. ಜನರು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದನ್ನು ನಾವೂ ಮುಟ್ಟುತ್ತೇವೆ ಎಂಬ ನಂಬಿಕೆಯಂತೂ ನನಗಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !