ಶನಿವಾರ, ಅಕ್ಟೋಬರ್ 24, 2020
24 °C
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಎಚ್ಚರಿಕೆ

ಯುಎಫ್‍ಒ, ಕ್ಯೂಬ್ ವೆಚ್ಚ ಮನ್ನಾ ಮಾಡದಿದ್ದರೆ ಹೊಸ ಚಿತ್ರಗಳ ಬಿಡುಗಡೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯುಎಫ್‍ಒ ಮತ್ತು ಕ್ಯೂಬ್ (ಡಿಜಿಟಲ್‌ ಸಿನಿಮಾ ಪ್ರದರ್ಶಕ ಸಂಸ್ಥೆಗಳು) ವೆಚ್ಚವನ್ನು ಎರಡು ವರ್ಷಗಳವರೆಗೆ ಮನ್ನಾ ಮಾಡಿದಿದ್ದರೆ ಯಾವುದೇ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಎಚ್ಚರಿಕೆ ನೀಡಿದೆ.

ಚಿತ್ರ ನಿರ್ಮಾಪಕರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿದರೂ ಪ್ರಚಾರಕ್ಕೂ ನಿರ್ಮಾಪಕರ ಬಳಿ ಹಣವಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಯುಎಫ್‍ಒ, ಕ್ಯೂಬ್‍ ವೆಚ್ಚ ಭರಿಸಲು ಬಹುತೇಕ ನಿರ್ಮಾಪಕರ ಬಳಿ ಹಣವಿಲ್ಲದಾಗಿದೆ. ಯುಎಫ್‍ಒ, ಕ್ಯೂಬ್ ವ್ಯವಸ್ಥಾಪಕರು ಮುಂದಿನ ಎರಡು ವರ್ಷಗಳವರೆಗೆ ಯಾವುದೇ ವೆಚ್ಚ ತೆಗೆದುಕೊಳ್ಳದೆ, ಉಚಿತವಾಗಿ ಚಲನಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‍ಕುಮಾರ್ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಅಂದಾಜಿನ ಪ್ರಕಾರ ಸುಮಾರು 280 ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಪೈಕಿ ಹತ್ತರಿಂದ ಹದಿನೈದು ಸ್ಟಾರ್ ಚಿತ್ರಗಳ ನಿರ್ಮಾಪಕರು ಚಿತ್ರಗಳನ್ನು ಬಿಡುಗಡೆ ಮಾಡಲು ಹಿಂಜರಿಯುತ್ತಿದ್ದಾರೆ. ನಾವು ಸ್ಥಳೀಯವಾಗಿ ಕೆಲ ಯುಎಫ್‍ಒ, ಕ್ಯೂಬ್ ನಿರ್ವಹಿಸುತ್ತಿರುವವರನ್ನು ಆಹ್ವಾನಿಸಿ, ‘ನಿರ್ಮಾಪಕರು ಸಂಕಷ್ಟದಲ್ಲಿದ್ದು, ಚಿತ್ರ ಪ್ರಸಾರಕ್ಕೆ ವಿಧಿಸುತ್ತಿರುವ ವೆಚ್ಚವನ್ನು ಎರಡು ವರ್ಷಗಳವರೆಗೆ ಮನ್ನಾಮಾಡಬೇಕು’ ಎಂದು ಕೋರಿಕೆ ಇಟ್ಟೆವು. ಇದಕ್ಕೆ ಅವರು ‘ಇದಕ್ಕೆ ಮುಂಬೈ ಪ್ರಧಾನ ಕಚೇರಿಯಿಂದ ಅನುಮತಿ ಸಿಗಬೇಕು’ ಎಂದಿದ್ದರು. ಪ್ರಧಾನ ಕಚೇರಿಗೆ ನಾಲ್ಕು ಬಾರಿ ಇಮೇಲ್‌ ಮಾಡಿದರೂ ಅವರಿಂದ ಉತ್ತರ ಬಂದಿಲ್ಲ. ಅವರು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ನಮ್ಮ ಮೊರೆಯನ್ನು ಸರ್ಕಾರದ ಮುಂದಿಡುತ್ತೇವೆ’ ಎಂದು ನಿರ್ಮಾಪಕ ಕೆ.ಮಂಜು ತಿಳಿಸಿದರು.

‘ಯುಎಫ್‍ಒ, ಕ್ಯೂಬ್ ವ್ಯವಸ್ಥಾಪಕರು ನಿರ್ಮಾಪಕರಿಂದ ಈವರೆಗೆ ಸಾಕಷ್ಟು ಲಾಭ ಪಡೆದಿದ್ದಾರೆ. ಚಿತ್ರದ ನಡುವೆ ಹಾಕುವ ಜಾಹೀರಾತುಗಳ ಲಾಭಾಂಶವನ್ನೂ ಇದುವರೆಗೆ ನಿರ್ಮಾಪಕರಿಗೆ ಕೊಟ್ಟಿಲ್ಲ. ಈಗ ಜಾಹೀರಾತುಗಳ ಲಾಭಾಂಶ ಬಳಸಿಕೊಂಡು ನಿರ್ಮಾಪರಿಗೆ ಉಚಿತವಾಗಿ ಚಿತ್ರಗಳನ್ನು ಪ್ರದರ್ಶಿಸುವ ವ್ಯವಸ್ಥೆ ಮಾಡಿಕೊಡಬೇಕು. ಈಗಾಗಲೇ ಬಹುತೇಕ ಪ್ರದರ್ಶಕರು ಪರ್ಸಂಟೇಜ್‍ ಹಂಚಿಕೆಗೆ ಒಪ್ಪಿಕೊಂಡಿದ್ದಾರೆ. ಇದರಿಂದ ನಿರ್ಮಾಪಕ ಬಾಡಿಗೆ ಪಾವತಿಸುವ ಪ್ರಮೇಯ ಬರುವುದಿಲ್ಲ, ಟಿಕೆಟ್ ದರದ ಹಣ ನಿರ್ಮಾಪಕ, ಪ್ರದರ್ಶಕ ಇಬ್ಬರಿಗೂ ಹಂಚಿಕೆಯಾಗುತ್ತದೆ. ಇಲ್ಲಿ ನಿರ್ಮಾಪಕ ಒಂದಷ್ಟು ಹಣವನ್ನು ನೋಡುತ್ತಾನೆ. ಸ್ಟಾರ್ ಚಿತ್ರ ನಿರ್ಮಾಪಕರೂ ಸಹ ಈ ವ್ಯವಸ್ಥೆಗೆ ಒಪ್ಪಬೇಕಿದೆ. ಸಣ್ಣ ಬಜೆಟ್‌ ನಿರ್ಮಾಪಕರು ಉಳಿಯಬೇಕು ಎನ್ನುವುದು ನಮ್ಮ ವಾದ’ ಎಂದರು.

‘ಸದ್ಯದ ಪರಿಸ್ಥಿತಿಯಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವ ಕೆಲಸ ತುರ್ತು ಆಗಬೇಕಿದೆ. ಚಿತ್ರರಂಗದ ಹಿತದೃಷ್ಟಿಯಿಂದ ಎಲ್ಲರೂ ಈ ನಿರ್ಧಾರಕ್ಕೆ ಬಂದಿದ್ದೇವೆ. ಚಿತ್ರಬಿಡುಗಡೆ ಮಾಡುವ ಮೊದಲು ನಿರ್ಮಾಪಕರು ಸಂಘವನ್ನು ಸಂಪರ್ಕಿಸಬೇಕು’ ಎಂದು ಮನವಿ ಮಾಡಿದರು.

‘ರಾಜ್ಯದಲ್ಲಿ 600 ಚಿತ್ರಮಂದಿರಗಳಿವೆ. ಅಷ್ಟರಲ್ಲೂ ಬಿಡುಗಡೆ ಮಾಡುವಷ್ಟು ಕನ್ನಡ ಚಿತ್ರಗಳು ನಮ್ಮಲ್ಲಿ ಇಲ್ಲ. ಒಂದು ಚಿತ್ರದ ಯುಎಫ್‍ಓ ಕ್ಯೂಬ್ ವೆಚ್ಚ ವಾರಕ್ಕೆ ₹40 ಸಾವಿರದಿಂದ ₹50 ಸಾವಿರ ತಗುಲುತ್ತಿದೆ. ಈ ವೆಚ್ಚವನ್ನು ಕೈಬಿಡದಿದ್ದರೆ ನಮ್ಮ ಬೇಡಿಕೆಯನ್ನು ಸರ್ಕಾರದ ಮುಂದಿಡಲಿದ್ದೇವೆ’ ಎಂದು ನಿರ್ಮಾಪಕ ಎ.ಗಣೇಶ್ ಹೇಳಿದರು.

‘ಸದ್ಯ ಯಾರೂ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುತ್ತಿಲ್ಲ. ಚಿತ್ರಮಂದಿರಗಳು ಪುನರಾರಂಭವಾಗುತ್ತಿದ್ದಂತೆ ಪ್ರೇಕ್ಷಕ ಚಿತ್ರಮಂದಿರಕ್ಕೆ ಬರಲಿದ್ದಾನೆ ಎನ್ನವ ಖಚಿತತೆಯೂ ಇಲ್ಲ. ಚಿತ್ರಮಂದಿರಗಳು ಬಾಗಿಲು ತೆರೆದ ನಂತರ ಎರಡುಮೂರು ದಿನಗಳಲ್ಲಿ ಪ್ರೇಕ್ಷಕರು ತೋರಿಸಲಿರುವ ಸ್ಪಂದನೆ ನೋಡಿಕೊಂಡು ಈ ವಿಚಾರದಲ್ಲಿ ಮುಂದುವರಿಯಬೇಕಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಎನ್.ಎಂ. ಸುರೇಶ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು