ಮಂಗಳವಾರ, ನವೆಂಬರ್ 12, 2019
28 °C

ನಟ ದರ್ಶನ್ ಹೊಸ ಅವತಾರ ‘ಒಡೆಯ’

Published:
Updated:
Prajavani

ದರ್ಶನ್‌ ನಟನೆಯ ‘ಯಜಮಾನ’ ಮತ್ತು ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ಕೊಯ್ದಿದ್ದು ಎಲ್ಲರಿಗೂ ತಿಳಿದ ವಿಚಾರ. ಇದರ ಯಶಸ್ಸಿನ ಬೆನ್ನಲ್ಲೇ ಮತ್ತೆ ತೆರೆಯ ಮೇಲೆ ‘ಒಡೆಯ’ನಾಗಿ ಮಿಂಚಲು ದರ್ಶನ್‌ ಸಜ್ಜಾಗಿದ್ದಾರೆ. ಅವರ ಬತ್ತಳಿಕೆಯಲ್ಲಿ ಹಲವು ಬಿಗ್‌ ಬಜೆಟ್‌ ಸಿನಿಮಾಗಳಿವೆ. ಆ ಪೈಕಿ ಎಂ.ಡಿ. ಶ್ರೀಧರ್‌ ನಿರ್ದೇಶನದ ‘ಒಡೆಯ’ ಕೂಡ ಒಂದಾಗಿದೆ.

ಸದ್ಯ ದರ್ಶನ್‌ ದುರ್ಯೋಧನನಾಗಿ ನಟಿಸಿದ್ದ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ₹ 100 ಕೋಟಿ ಕ್ಲಬ್‌ಗೆ ಸೇರಿದೆ. ‘ಕೆಜಿಎಫ್ ಚಾಪ್ಟರ್‌ 1’ರ ಬಳಿಕ ಈ ಕ್ಲಬ್‌ ಸೇರಿದ ಕನ್ನಡದ ಎರಡನೇ ಚಿತ್ರ ಇದು. 

‘ಒಡೆಯ’ ಚಿತ್ರದ ಶೂಟಿಂಗ್‌ ಬಹುತೇಕ ಪೂರ್ಣಗೊಂಡಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಚಿತ್ರದಲ್ಲಿ ಅವರದು ಗಜೇಂದ್ರನ ಪಾತ್ರವಂತೆ. ಇದು ತಮಿಳಿನ ‘ವೀರಂ’ ಚಿತ್ರದ ರಿಮೇಕ್. ‘ಒಡೆಯ’ದಲ್ಲಿ ಐವರು ಸಹೋದರರ ಪ್ರೀತಿಯ ಅಣ್ಣನ ಕಥೆ ಹೊಸೆಯಲಾಗಿದೆ. ತಮಿಳಿನಲ್ಲಿ ಅಜಿತ್‌ ನಿರ್ವಹಿಸಿದ್ದ ಪಾತ್ರದಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. 

‘ಪೊರ್ಕಿ’, ‘ಬುಲ್‌ಬುಲ್‌’ ಚಿತ್ರದ ಬಳಿಕ ದರ್ಶನ್‌ ಮತ್ತು ಶ್ರೀಧರ್‌ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಮೂರನೇ ಚಿತ್ರ ಇದು. ಸಂದೇಶ್‌ ಪ್ರೊಡಕ್ಷನ್‌ನಡಿ ಎನ್‌. ಸಂದೇಶ್‌ ಆರ್ಥಿಕ ಇಂಧನ ಒದಗಿಸಿರುವ ಈ ಚಿತ್ರ ನವೆಂಬರ್‌ ಒಂದರಂದು ತೆರೆಕಾಣುವ ನಿರೀಕ್ಷೆ ಇದೆ. ಛಾಯಾಗ್ರಹಣ ಎ.ವಿ. ಕೃಷ್ಣಕುಮಾರ್‌(ಕೆಕೆ) ಅವರದು. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. 

ನಿರಂಜನ್‌, ಪಂಕಜ್‌, ಯಶಸ್‌ ಸೂರ್ಯ, ಸಾಧುಕೋಕಿಲ, ಚಿಕ್ಕಣ್, ಅವಿನಾಶ್‌, ರವಿಶಂಕರ್‌ ತಾರಾಗಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)