ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಯ ಮೇಲೆ ಒನಕೆ ಓಬವ್ವ

Last Updated 3 ಜೂನ್ 2019, 19:31 IST
ಅಕ್ಷರ ಗಾತ್ರ

ಪುಟ್ಟಣ್ಣ ಕಣಗಾಲ್‌ ಅವರ ನಿರ್ದೇಶನದ ‘ನಾಗರಹಾವು’ ಚಿತ್ರದಲ್ಲಿನ ‘ಕನ್ನಡ ನಾಡಿನ ವೀರ ರಮಣಿಯ...’ ಹಾಡನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಒನಕೆ ಓಬವ್ವಳ ಪಾತ್ರಕ್ಕೆ ಜೀವ ತುಂಬಿದ ಹಿರಿಮೆ ಹಿರಿಯ ನಟಿ ಜಯಂತಿ ಅವರದು. ಈಗ ‘ಚಿತ್ರದುರ್ಗದ ಒನಕೆ ಓಬವ್ವ’ ಹೆಸರಿನ ಐತಿಹಾಸಿಕ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಓಬವ್ವಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆಕೆಯ ಗುಣ, ವ್ಯಕ್ತಿತ್ವದ ಬಗ್ಗೆ ಈ ಚಿತ್ರ ಕಟ್ಟಿಕೊಡಲಿದೆ’ ಎಂದರು ನಿರ್ದೇಶಕ ಬಿ.ಎ. ಪುರುಷೋತ್ತಮ್‌.

‘ಐತಿಹಾಸಿಕ ಸಿನಿಮಾಗಳನ್ನು ನೋಡುವುದು ಕಡಿಮೆಯಾಗಿದೆ. ನಿರ್ಮಾಣ ಮಾಡುವುದು ಕೂಡ ಕಷ್ಟಕರ. ಹಾಗಾಗಿ, ನಿರ್ಮಾಪಕರ ಪರಿಶ್ರಮದಿಂದ ಈ ಚಿತ್ರ ನಿರ್ಮಾಣವಾಗಿದೆ’ ಎಂದು ಹೇಳಿದರು.

ಇದು ಹಿರಿಯ ಸಾಹಿತಿ ಬಿ.ಎಲ್‌. ವೇಣು ಅವರ ಐತಿಹಾಸಿಕ ಕಾದಂಬರಿ ಆಧಾರಿತ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ವೇಣು ಅವರೇ ಹೊತ್ತಿದ್ದಾರೆ. ‘ಒನಕೆ ಓಬವ್ವಳ ಕಥೆ ಜಾನಪದ ಪ್ರಸಂಗ ಎಂದು ಹೇಳಲಾಗುತ್ತಿತ್ತು. ಆದರೆ, ಆಕೆಯದು ಇತಿಹಾಸದ ಪ್ರಸಂಗ. ಇತಿಹಾಸಕಾರರು ಆಕೆಯ ಕಥನವನ್ನು ನಿರ್ಲಕ್ಷಿಸಿದ್ದರು. ಆದರೆ, ಆಕೆ ಹೈದರಾಲಿ ಸೈನ್ಯದ ವಿರುದ್ಧ ಹೋರಾಟ ಮಾಡಿದ್ದು ಚರಿತ್ರಾರ್ಹ ದಾಖಲಾಗಿದೆ’ ಎಂದು ವಿವರಿಸಿದರು.

‘ಮದಕರಿ ನಾಯಕನ ಆಡಳಿತದಲ್ಲಿ ಧರ್ಮ ಸಾಮರಸ್ಯ ಇತ್ತು. ಇವೆಲ್ಲವನ್ನೂ ಚಿತ್ರದಲ್ಲಿ ಹೇಳಲಾಗಿದೆ’ ಎಂದರು.

ನಟ ಗಣೇಶ್‌ ರಾವ್ ಹೈದರಾಲಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಹತ್ತು ವರ್ಷದ ಹಿಂದೆ ಟಿಪ್ಪುಸುಲ್ತಾನ್‌ ಪಾತ್ರದಲ್ಲಿ ಹೈದರಾಲಿ ಪಾತ್ರಕ್ಕೆ ಬಣ್ಣ ಹಚ್ಚಿದ್ದೆ. ಆಗ ನಿರ್ದೇಶಕರು ನನ್ನ ಸಿನಿಮಾದಲ್ಲಿ ಇದೇ ಪಾತ್ರ ನೀಡುತ್ತೇನೆ ಎಂದು ಹೇಳಿದ್ದರು. ಕೊನೆಗೆ, ಹೈದರಾಲಿಯಾಗಿ ನಟಿಸಿದ್ದೇನೆ’ ಎಂದು ಖುಷಿ ಹಂಚಿಕೊಂಡರು.

ಎ. ದೇವರಾಜ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎಸ್‌. ನಾಗು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಗೌರಿ ವೆಂಕಟೇಶ್‌ ಅವರದ್ದು.

ತಾರಾ ಅವರು ಒನಕೆ ಓಬವ್ವಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್‌, ಟಿ.ಎಂ. ಕೃಷ್ಣ, ಪುಷ್ಪಸ್ವಾಮಿ, ಚೇತನ್, ವಿಜಯಕುಮಾರ್‌, ಅನಿಲ್‌, ಪ್ರವೀಣ್ ದಾಸ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT