ಶುಕ್ರವಾರ, ಫೆಬ್ರವರಿ 21, 2020
18 °C

ಬುಡಕಟ್ಟು ಭಾಷೆಗಳ ಸಿನಿಮಾ ಸಂಭ್ರಮ

ಪ್ರೇಮಕುಮಾರ್‌ ಹರಿಯಬ್ಬೆ Updated:

ಅಕ್ಷರ ಗಾತ್ರ : | |

Prajavani

ಬುಡಕಟ್ಟು, ಗುಡ್ಡಗಾಡು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುವ ಸಾಹಸಕ್ಕೆ ಕೆಲವರು ಕೈಹಾಕಿದ್ದಾರೆ! ಈ ಸಿನಿಮಾಗಳಿಗೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವ ಅವಕಾಶಗಳೂ ಸಿಗುತ್ತಿವೆ!

‘ಒಂದು ದೇಶ, ಒಂದು ಭಾಷೆ’ ಎಂಬ ಕೂಗು ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ದೇಶದ ಬಹುತೇಕ ಜನರಿಗೆ ಗೊತ್ತೇ ಇಲ್ಲದ, ಹೆಸರೇ ಕೇಳಿಲ್ಲದ ಭಾಷೆಗಳಲ್ಲಿ ಸಿನಿಮಾಗಳು ನಿರ್ಮಾಣವಾಗುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ನಮ್ಮದು ಬಹುಭಾಷೆ, ಸಂಸ್ಕೃತಿಗಳ ದೇಶ ಎನ್ನುವುದಕ್ಕೆ ಇದು ಇತ್ತೀಚಿನ ನಿದರ್ಶನ.

ಕಳೆದ ನವೆಂಬರ್‌ನಲ್ಲಿ ನಡೆದ ಪಣಜಿ ಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ ಗುಡ್ಡಗಾಡು ಹಾಗೂ ಬುಡಕಟ್ಟು ಭಾಷೆಗಳ ನಾಲ್ಕು ಸಿನಿಮಾಗಳು ಪ್ರದರ್ಶನವಾಗಿ ಗಮನ ಸೆಳೆದವು.

ಅರುಣಾಚಲ ಪ್ರದೇಶದ (ಚೀನಾ ಗಡಿಗೆ ಹೊಂದಿಕೊಂಡ) ತವಾಂಗ್‌ ಪ್ರದೇಶದಲ್ಲಿ ಸುಮಾರು ನಾಲ್ಕು ಸಾವಿರ ಜನರಷ್ಟೇ ಮಾತನಾಡುವ ಪಂಗ್ಚೆನ್ಪಾ ಭಾಷೆಯಲ್ಲಿ ನಿರ್ಮಾಣವಾದ ಸಿನಿಮಾ ‘ದ ಲ್ಯಾಂಡ್‌ ಆಫ್‌ ಪಾಯ್ಸನಸ್‌ ವುಮನ್‌’. ಮಂಜು ಬೋರಾ ಈ ಚಿತ್ರದ ನಿರ್ದೇಶಕಿ. ಸುಮಾರು 22,000 ಜನಸಂಖ್ಯೆಯ ಕೇರಳದ ಪರಿಶಿಷ್ಟ ಬುಡಕಟ್ಟು ಜನರು ಆಡುವ ಪನಿಯಾ ಭಾಷೆಯ ಸಿನಿಮಾ ‘ಕೆಂಜೀರ’. ಮನೋಜ್‌ ಕನಾ ಇದರ ನಿರ್ದೇಶಕರು. ವಿಜೇಶ್‌ ಮಣಿ ಅವರ ನಿರ್ದೇಶನದ ನೀಲಗಿರಿ (ಊಟಿ) ಪ್ರದೇಶದ ಇರಳಿಗ ಬುಡಕಟ್ಟಿನ (1 ಲಕ್ಷ ಜನರು ಆಡುವ) ಇರುಳ ಭಾಷೆಯ ಸಿನಿಮಾ ‘ನೇತಾಜಿ’. ಮೇಘಾಲಯ ರಾಜ್ಯದ ಸುಮಾರು 16 ಲಕ್ಷ ಜನರು ಆಡುವ ಖಾಸಿ ಭಾಷೆಯ ‘ಲೇಡುಹ್’, ಪ್ರದೀಪ್‌ ಕುರುಬಾಹ್‌ ಅವರ ನಿರ್ದೇಶನದ ಸಿನಿಮಾ.

ಈ ಶತಮಾನದ ಕೊನೆಯ ಹೊತ್ತಿಗೆ ವಿಶ್ವದ ಶೇಕಡ 10ರಷ್ಟು ಭಾಷೆಗಳು ಅವಸಾನಗೊಳ್ಳುತ್ತವೆ ಎಂಬ ಆತಂಕಕಾರಿ ಮಾತುಗಳು ಆಗಾಗ ಕೇಳಿ ಬರುತ್ತಿರುವ ಈ ಹೊತ್ತಿನಲ್ಲೇ ಹೆಸರೇ ಕೇಳದ, ಲಿಪಿಯೇ ಇಲ್ಲದ ಬುಡಕಟ್ಟು ಮತ್ತು ಗುಡ್ಡಗಾಡು ಭಾಷೆಗಳಲ್ಲಿ ಸಿನಿಮಾ ಮಾಡಿ ಅವನ್ನು ಮುಖ್ಯವಾಹಿನಿಯ ಸಿನಿಮಾಗಳ ಜತೆ ಪ್ರದರ್ಶನಕ್ಕೆ ಇಡುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಮೇಲಿನ ನಾಲ್ಕೂ ಸಿನಿಮಾಗಳಲ್ಲಿ ಏನಿದೆ ಎನ್ನುವುದನ್ನು ನೋಡುವುದಾದರೆ, ‘ಕೆಂಜೀರ’ ಕೇರಳದ ಪನಿಯನ್‌ ಬುಡಕಟ್ಟು ಜನರ ಬಡತನ, ಹಸಿವು ಹಾಗೂ ಅಸಹಾಯಕ ಸ್ಥಿತಿಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾ. ಶಾಲಾ ಬಾಲಕಿ ಕೆಂಜೀರ ಸಿನಿಮಾದ ಕೇಂದ್ರ ಪಾತ್ರ. ಅವಳ ಮೇಲೆ ನಡೆದ ಲೈಂಗಿಕ ಶೋಷಣೆಯ ಪರಿಣಾಮ ಗರ್ಭ ಧರಿಸುತ್ತಾಳೆ. ಜನರ ಎದುರು ನಗೆಪಾಟಲಿಗೆ ಒಳಗಾಗುತ್ತಾಳೆ. ಪಾಲಕರು, ಅವಳ ಸಮುದಾಯ ರಕ್ಷಣೆಗೆ ಧಾವಿಸಿದರೂ, ಅವಳಿಗೆ ನ್ಯಾಯ ಒದಗಿಸುವುದು ಹೇಗೆಂಬುದು ತಿಳಿಯದೆ ಅವರೂ ಅಸಹಾಯಕರಾಗುತ್ತಾರೆ. ಪುಟ್ಟ ಕೂಸಿನ ಜತೆಗೆ ಅವಳು ಆತ್ಮಹತ್ಯೆಗೆ ಯತ್ನಿಸಿ ಬದುಕಿ ಉಳಿಯುವುದೇ ಸಿನಿಮಾದ ಕಥೆ.

ಬಡತನ, ಶಿಕ್ಷಣದ ಕೊರತೆಯಿಂದಾಗಿ ಸಮಾಜದ ಉಪೇಕ್ಷೆಗೆ ಒಳಗಾದ ಲಕ್ಷಾಂತರ ಹೆಣ್ಣುಮಕ್ಕಳ ಅಸಹಾಯಕ ಸ್ಥಿತಿಯ ಸಂಕೇತ ಈ ಕೆಂಜೀರ. ಸಿನಿಮಾ ನೋಡುಗರ ಹೃದಯಗಳನ್ನು ತಟ್ಟುತ್ತದೆ. ಸುಶಿಕ್ಷಿತ ಹೆಣ್ಣುಮಕ್ಕಳೇ ಲೈಂಗಿಕ ಶೋಷಣೆಗೆ ಒಳಗಾಗಿ ದುರಂತ ಅಂತ್ಯ ಕಾಣುತ್ತಿರುವ ಈ ಹೊತ್ತಿನಲ್ಲಿ ಬುಡಕಟ್ಟು ಬಾಲಕಿ ಕೆಂಜೀರಳಂಥ ಬಾಲಕಿಗೆ ನ್ಯಾಯ ಸಿಗಬಹುದೇ?

ಪಂಗ್ಚೆನ್ಪಾ ಭಾಷೆಯ ‘ದ ಲ್ಯಾಂಡ್‌ ಆಫ್‌ ಪಾಯ್ಸನಸ್‌ ವುಮನ್‌’ ಸಿನಿಮಾ, ದೇಶದ ಗಡಿಭಾಗದ ಗುಡ್ಡಗಾಡಿನ ಜನರ ಬದುಕು, ನಂಬಿಕೆಗಳ ಮೇಲೆ ಬೆಳಕು ಚೆಲ್ಲುತ್ತದೆ. ವಿಷ ಉಣಿಸುವ ಹೆಂಗಸರು ಇಲ್ಲಿದ್ದಾರೆ ಎಂಬ ತವಾಂಗ್‌ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಮಿಥ್‌ ಕುರಿತು ಹೇಳುವ ಪ್ರಯತ್ನ.

ವೃದ್ಧೆಯೊಬ್ಬಳು ತನ್ನಿಬ್ಬರು ಮಕ್ಕಳು ಮತ್ತು ಇತರ ನಾಲ್ಕು ಜನರಿಗೆ ತಾನೇ ತಯಾರಿಸಿದ ನಾಟಿ ಮದ್ಯದಲ್ಲಿ ವಿಷ ಬೆರೆಸಿ ಕುಡಿಸಿ ಅವರ ಸಾವಿಗೆ ಕಾರಣವಾದ ಘಟನೆಯನ್ನು ಅವಳು ತನ್ನ ಕೊನೆಗಾಲದಲ್ಲಿ ಎಲ್ಲರ ಎದುರು ಒಪ್ಪಿಕೊಂಡು ನೆಮ್ಮದಿಯಿಂದ ಸಾಯುವ ಘಟನೆ ಹಿನ್ನೆಲೆಯಲ್ಲಿ ಗುಡ್ಡಗಾಡು ಜನರ ನಂಬಿಕೆ, ಗಡಿಭಾಗದ ಆತಂಕದ ಜೀವನವನ್ನೂ ಕಟ್ಟಿಕೊಡುತ್ತದೆ.

ಇದು ಗುಡ್ಡಗಾಡು ಜನರ ಬದುಕನ್ನು ದಾಖಲಿಸುವ ಡಾಕ್ಯುಮೆಂಟರಿಯಂತಿದೆ. ಕೇವಲ ನಾಲ್ಕು ಸಾವಿರ ಜನರ ಭಾಷೆಯ ಸಿನಿಮಾ ಎನ್ನುವ ಕಾರಣಕ್ಕೆ ಮಹತ್ವ ಪಡೆಯುತ್ತದೆ. ಮಂಜು ಬೋರಾ ಅಸ್ಸಾಮಿ ಹಾಗೂ ಇತರ ಕೆಲವು ಬುಡಕಟ್ಟು ಭಾಷೆಗಳ ಸಿನಿಮಾಗಳ ಮೂಲಕ ದೇಶದ ಗಮನ ಸೆಳೆದವರು. ಅವರೇ ಚಿತ್ರದ ನಿರ್ಮಾಪಕಿ.

ಇರುಳ ಭಾಷೆಯ ಸಿನಿಮಾ ‘ನೇತಾಜಿ’ ಸುಭಾಶ್ಚಂದ್ರ ಬೋಸರು ಕಟ್ಟಿದ್ದ ಸೇನೆಯಲ್ಲಿ ದುಡಿದ ನಿವೃತ್ತ ಸೈನಿಕನೊಬ್ಬನ ಹಿನ್ನೆಲೆಯಲ್ಲಿ ಇರುಳಿಗರ ಜೀವನ ವಿಧಾನಗಳನ್ನು ನೀಲಗಿರಿಯ ಸುಂದರ ಪರಿಸರದ ಹಿನ್ನೆಲೆಯಲ್ಲಿ ಕಲಾತ್ಮಕವಾಗಿ ನಿರೂಪಿಸುವ ಸಿನಿಮಾ.

ನಗರದಲ್ಲಿ ಬೆಳೆದ ಬಾಲಕ ಹದಿನೈದು ದಿನಗಳ ಕಾಲ ಇರುಳಿಗರ ಹಾಡಿಯಲ್ಲಿರುವ ತನ್ನ ಅಜ್ಜನ ಜತೆಯಲ್ಲಿ ಕಳೆಯಲು ಬರುತ್ತಾನೆ. ಮೊದಮೊದಲು ಆ ಪರಿಸರಕ್ಕೆ ಒಗ್ಗಿಕೊಳ್ಳದ ಬಾಲಕ ಕ್ರಮೇಣ ಕಾಡಿನ ಪರಿಸರಕ್ಕೆ ಮಾರುಹೋಗುವುದು ಸಿನಿಮಾದ ಕಥೆ. ತೆಳುವಾದ ಕಥೆ ಇಟ್ಟುಕೊಂಡು ನಿರ್ದೇಶಕ ವಿಜೇಶ್‌ ಮಣಿ ಇರುಳಿಗರ ಜೀವನ ಕ್ರಮ, ದೈವಾರಾಧನೆ, ಜಾನಪದ ಕುಣಿತ, ಆಹಾರ ಪದ್ಧತಿ, ನಾಗರಿಕತೆಯ ಸೋಂಕಿಲ್ಲದ ಮಕ್ಕಳ ಮುಗ್ಧತೆಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಮನರಂಜನೆಗಾಗಿ ಸಿನಿಮಾ ನೋಡುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ನೇತಾಜಿ ಹೆಚ್ಚಿನ ಜನರನ್ನು ತಲುಪುವುದು ಕಷ್ಟ.

ಇನ್ನು ಮೇಘಾಲಯದ ಖಾಸಿ ಬುಡಕಟ್ಟು ಭಾಷೆಯ ಸಿನಿಮಾ ‘ಲೇಡುಹ್‌’. ಷಿಲ್ಲಾಂಗ್‌ನ ಲೇಡುಹ್‌ ಮಾರುಕಟ್ಟೆಯೇ ಸಿನಿಮಾದ ಕೇಂದ್ರ. ಅಲ್ಲಿ ನಿತ್ಯ ನಡೆಯುವ ಬಗೆ ಬಗೆಯ ವ್ಯಾಪಾರ, ವಹಿವಾಟುಗಳನ್ನು ವಿವರವಾಗಿ ಹೇಳುತ್ತಲೇ ಮಾರುಕಟ್ಟೆಯನ್ನೇ ಅವಲಂಬಿಸಿದವರ ನಡುವೆ ಜಾತಿ, ಧರ್ಮಗಳನ್ನು ಮೀರಿ ಬೆಸೆಯುವ ಸಾಮರಸ್ಯ ಹಾಗೂ ಸಹಬಾಳ್ವೆಯ ಜೀವನ ವಿಧಾನವನ್ನು ನಿರೂಪಿಸುತ್ತದೆ.

ಚಿತ್ರದ ನಾಯಕ ಮಾರ್ಕ್, ಲೇಡುಹ್ ಮಾರ್ಕೆಟ್‌ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯದ ನಿರ್ವಹಣೆ ಮಾಡುವ ಯುವಕ. ಶೌಚಾಲಯ ಶುಚಿಗೊಳಿಸುವ ಕೆಲಸ ಮಾಡುತ್ತಲೇ ಮಾರುಕಟ್ಟೆಯನ್ನೇ ನಂಬಿದವರ ಕಷ್ಟ, ಸುಖಗಳಿಗೆ ಸ್ಪಂದಿಸುವ ಹೃದಯವಂತ. ಮಾರುಕಟ್ಟೆಯ ಹತ್ತಾರು ಜನರ ಜೀವನದ ಅನಿರ್ವಾಯತೆಗಳು, ಅವರ ನಡುವೆ ಬೆಸೆದುಕೊಂಡ ಮಾನವೀಯತೆಯನ್ನು ನಿರೂಪಿಸುವ ಈ ಸಿನಿಮಾ ನೋಡುಗರಿಗೆ ಇಷ್ಟವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)