ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸಮಾಜದ ಕನಸನ್ನು ಕಂಡಿದ್ದ ಕವಿ ಸಾಹಿರ್‌

Last Updated 8 ಮಾರ್ಚ್ 2021, 7:24 IST
ಅಕ್ಷರ ಗಾತ್ರ

ಉರ್ದು ಮತ್ತು ಹಿಂದಿ ಕವಿಯಾಗಿ, ಸದಾ ನೆನಪಿನಲ್ಲಿ ಉಳಿಯುವ ಹಿಂದಿ ಚಿತ್ರಗೀತೆಗಳನ್ನು ಬರೆದ ಸಾಹಿರ್‌ ಲೂಧಿಯಾನ್ವಿ ಅವರು ಬದುಕಿದ್ದಿದ್ದರೆ ಇಂದಿಗೆ ನೂರು ವರ್ಷವಾಗುತಿತ್ತು. ಸಮಕಾಲೀನ ಚಿತ್ರಸಾಹಿತಿಗಳಾದ ಫಿರಾಕ್‌ ಗೋರಕ್‌ಪುರಿ, ಶಕೀಲ್ ಬದಾಯೂನಿ, ಮಜ್ರೂ ಸುಲ್ತಾನ್‌ಪುರಿ, ಕೈಫಿ ಆಜ್ಮಿ ಅವರ ನಡುವೆಯೂ ಸ್ವಂತಿಕೆಯಿಂದ ಬರೆದವರು ಸಾಹಿರ್‌ ಲೂಧ್ವಿಯಾನ್ವಿ.

ಎಡಪಂಥೀಯ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದ ಸಾಹಿರ್‌, ಸಮ ಸಮಾಜದ ಕನಸನ್ನು ಕಂಡವರು. ಪ್ರಗತಿಪರ ಬರಹಗಾರರ ಆಂದೋಲನದಲ್ಲೂ ಸಕ್ರಿಯರಾಗಿದ್ದರು. ಆಡಂಬರದ ಬದುಕನ್ನು ಬಯಸಲಿಲ್ಲ. ದಂತಗೋಪುರದಲ್ಲಿ ಬದುಕಲಿಲ್ಲ. ಸಮಾನತೆಯ ಅವರ ಆಶಯಗಳು ಅವರ ಗೀತೆಗಳಲ್ಲಿ ಪ್ರತಿಫಲನಗೊಂಡವು.

ಸಾಹಿರ್‌ ಅವರ ಕಾವ್ಯನಾಮ. ಸಾಹಿರ್‌ ಲೂಧಿಯಾನ್ವಿ ಅವರ ಮೂಲಹೆಸರು ಅಬ್ದುಲ್‌ ಹಾಯಿ ಫಜಲ್‌ ಮೊಹಮ್ಮದ್ (ಜನನ: 8-3-1921 ಮರಣ: 25–10–1980). ಹುಟ್ಟಿದ್ದು ಲೂಧಿಯಾನದ ಜಮೀನುದಾರಿ ಮನೆತನದಲ್ಲಿ. ಅವರಿಗೆ ಪ್ರಪಂಚ ತಿಳಿಯುವ ಮೊದಲೇ ತಂದೆ, ತಾಯಿ ದೂರವಾಗಿದ್ದರು. ಅಬ್ದುಲ್‌ ಹಾಯಿ, ತಾಯಿ ಸರ್ದಾರ್‌ ಬೇಗಂ ಅವರ ಜೊತೆ ಬೆಳೆದರು. ಲೂಧಿಯಾನದ ಖಾಲ್ಸಾ ಹೈಸ್ಕೂಲ್‌ನಲ್ಲಿ ಓದಿದರು. ಹದಿಹರೆಯದಲ್ಲೇ ಕವನ ಬರೆಯುವ ಹವ್ಯಾಸ ಅವರನ್ನು ಕಾಡಿತು.

ಕವಿತೆಗಳನ್ನು ಬರೆದು, ಆ ಕ್ಷೇತ್ರದಲ್ಲಿ ಹೆಸರು ಮಾಡುವ ಉದ್ದೇಶದಿಂದ ಲಾಹೋರ್‌ಗೆ ಹೋದರು (1943). ಅಲ್ಲಿ ದಯಾಳ್‌ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿದರು. ಕಾಲೇಜು ಶಿಕ್ಷಣ ಅರ್ಧಕ್ಕೆ ಬಿಟ್ಟು ಅಲ್ಲಿಯೇ ಉರ್ದು ಪತ್ರಿಕೆಗಳಲ್ಲಿ ಕೆಲಸ ಮಾಡತೊಡಗಿದರು. ಮೊದಲ ಕವನಸಂಗ್ರಹ ‘ತಲ್ಕಿಯಾ’ ಬಿಡುಗಡೆಯಾಗಿದ್ದು 1944ರಲ್ಲಿ. ದೇಶ ವಿಭಜನೆಯ ವೇಳೆ ದೆಹಲಿಗೆ ಬಂದ ಅವರು ಕೆಲವೇ ತಿಂಗಳಲ್ಲಿ ಮುಂಬೈಗೆ ಹೋದರು. ಈ ಮಾಯಾನಗರಿಯನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಹಿಂದಿ ಚಿತ್ರರಂಗಕ್ಕೆ ಕೆಲವು ಅಮರ ಗೀತೆಗಳನ್ನು ಕೊಟ್ಟರು.

ಹಿಂದಿ ಚಿತ್ರರಂಗದಲ್ಲಿ ಅವರಿಗೆ ಹೆಸರು ತಂದ ಮೊದಲ ಗೀತೆ ನೌಜವಾನ್‌ ಚಿತ್ರದ, ಲತಾ ಮಂಗೇಶಕರ್ ಅವರು ಹಾಡಿದ್ದ ‘ಥಂಡಿ ಹವಾಯೇ, ಲೆಹರಾ ಕೇ ಆಯೆ....’ ನಂತರ ಹಲವಾರು ಗೀತೆಗಳನ್ನು ಬರೆದರು.

ಪ್ರೀತಿ ಪ್ರೇಮಗಳ ವಿಷಯಕ್ಕೆ ಗಂಟುಬೀಳದ ಮಾನವ ಸಂಬಂಧ, ತಾತ್ವಿಕ ಆಶಯದ ಗೀತೆಗಳನ್ನು ಬರೆದರು. ದೇವಾನಂದ್‌ ನಾಯಕರಾಗಿದ್ದ ಹಮ್‌ ದೋನೊ (1961) ಚಿತ್ರಕ್ಕಾಗಿ ಅವರು ಬರೆದ ‘ಮೇ ಜಿಂದಗೀ ಕಾ ಸಾಥ್‌ ನಿಭಾ ತಾ ಚಲಾ ಗಯಾ, ಹರ್‌ ಫಿಖ್ರ್‌ ಕೊ ಧುಂವೆ ಮೇ ಉಡಾ ತಾ ಚಲಾಗಯಾ... ಗೀತೆ ಅಪಾರ ಜನಪ್ರಿಯತೆ ಪಡೆಯಿತು. ಹಾಡಿನುದ್ದಕ್ಕೂ ದೇವಾನಂದ್‌ ಸಿಗರೇಟು ಸೇದುತ್ತಾ ಸಾಗುವ ದೃಶ್ಯವಿರುವ ಕಾರಣ ಇದನ್ನು ‘ಧೂಮಪಾನಿಗಳ ರಾಷ್ಟ್ರಗೀತೆ’ ಎಂದು ಕರೆದವರೂ ಇದ್ದರು!

ಫಿರ್‌ ಸುಬಹ ಹೋಗಿ (1958) ಚಿತ್ರದ ‘ವೊ ಸುಬಹ ಕಭೀ ತೊ ಆಯೇಗಿ.....’ (ಆ ಬೆಳಗು ಬಂದೇ ಬರುತ್ತದೆ ಎನ್ನುವ ಅರ್ಥ ಹೊಂದಿದೆ) ಎನ್ನುವ ಹಾಡು ಅವರ ಕ್ರಾಂತಿಕಾರಿ ಆಶಯವನ್ನು ಧ್ವನಿಸುತಿತ್ತು. ಖಯ್ಯಾಂ ಈ ಹಾಡಿಗೆ ಅಲ್ಪವೇ ವಾದ್ಯ ಬಳಸಿ, ‍ಪರಿಣಾಮಕಾರಿಯಾಗಿ ಸಂಗೀತ ನೀಡಿದ್ದರು.

ಗುರುದತ್‌ ನಾಯಕರಾಗಿದ್ದ ‘ಪ್ಯಾಸಾ‘ ಚಿತ್ರದ ಹಾಡುಗಳೂ ಪರಿಣಾಮಕಾರಿಯಾಗಿದ್ದವು. ಈ ಚಿತ್ರ ಗಮನ ಸೆಳೆಯಲು ತಮ್ಮ ಹಾಡುಗಳೂ ಕಾರಣ ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದು, ಸಂಗೀತ ನಿರ್ದೇಶಕ ಆರ್‌.ಡಿ.ಬರ್ಮನ್‌ ಅವರಿಗೆ ರುಚಿಸಲಿಲ್ಲ. ಇವರಿಬ್ಬರ ಸಂಬಂಧ ಕೆಡಲೂ ಇದು ಕಾರಣವಾಯಿತು.

ಈ ಚಿತ್ರದಲ್ಲಿ ಮೊಹಮದ್‌ ರಫಿ ಹಾಡಿದ, ಏ ಮಹಲೊ, ತಖ್ತೊ, ಯೇ ತಾಜೋಂಕಿ ದುನಿಯಾ... ಏ ಇನ್ಸಾನ್‌ ಕೇ ದುಶ್ಮನ್‌, ಸಮಜೋಂಕಿ ದುನಿಯಾ.... (ಅರಮನೆ, ಗದ್ದುಗೆ ಕಿರೀಟಗಳ ಈ ಜಗತ್ತಿನಲ್ಲಿ, ಮಾನವೀಯತೆಯ ವೈರಿಗಳ ಜಗದಲ್ಲಿ, ಧನದಾಹದ ಜಗತ್ತಿನಲ್ಲಿ ಎಲ್ಲ ಇದ್ದರೂ ಏನು ಉಪಯೋಗ?‘ ಎಂಬರ್ಥದ ಹಾಡು) ಅವರ ನಂಬಿದ ಸಿದ್ಧಾಂತ ಸಾರುವಂತಿತ್ತು

ಯೇ ಕೂಚೆ ಯೆ ನಿಲಾಮ್‌ ಘರ್‌ ದಿಲ್ಕಶಿ ಕೆ, ಯೆ ಲುಟಾಟೆ ಹುಯೆ ಕಾರವಾನ್‌ ಜಿಂದಗಿ ಕೆ, ಕಹಾ ಹೈ ಕಹಾ ಹೇ, ಮಹಫಿಜ್‌ ಖುದಿ ಕೆ, ಜಿಹ್ನೆ ನಾಝ್‌ ಹೈ ಹಿಂದ್‌ ಪರ ವೊ ಕಹಾ ಹೇ...(ಹೃನ್ಮನೆಗಳ ಹರಾಜು ಆಗುತ್ತಿರುವುದೇಕೆ ಎಂದು ಕೇಳಿ, ಜೀವನ ಪಯಣದ ಲೂಟಿಯಾಗುತ್ತಿದೆ, ಅವರೆಲ್ಲಿ, ಅವರೆಲ್ಲಿ, ದೇವದೂತರೆಂದೆನಿಸಿಕೊಂಡವರು, ಹಿಂದ್‌ (ದೇಶದ) ಬಗೆಗೆ ಹೆಮ್ಮೆಯಿರಿಸಿಕೊಂಡವರೆಲ್ಲಿ, ಅವರೆಲ್ಲಿ, ಅವರೆಲ್ಲಿ, ಅವರೆಲ್ಲಿ...? ಕೂಡ ಸಿದ್ಧಾಂತದ ದಾಟಿಯಲ್ಲಿದೆ.

ಧೂಲ್‌ ಕಾ ಪೂಲ್‌ (1959) ಚಿತ್ರಕ್ಕೆ ಬರೆದ ‘ತು ಹಿಂದೂ ಬನೇಗಾ ನಾ ಮುಸಲ್ಮಾನ್‌ ಬನೇಗಾ.....’ ಹಾಡು, ಇದೇ ಚಿತ್ರದ ಅಲ್ಲಾ ತೇರೊ ನಾಮ್‌, ಈಶ್ವರ್‌ ತೇರೊ ನಾಮ್‌..... ಹಾಡುಗಳೂ ಜನಪ್ರಿಯವಾದವು. ಸಾಥಿ ಹಾಥ್‌ ಬಢಾನಾ ಮತ್ತು ದೇಶಪ್ರೇಮ ಸಾರುವ ‘ಯೇ ದೇಶ್‌ ಹೈ ವೀರ್‌ ಜವಾನೋಂಕಾ....’ (ನಯಾ ದೌರ್‌, 1957), ಅಭಿನಾ ಜಾವೊ ಛೋಡಕರ್‌, ದಿಲ್‌ ಅಭೀ ಭರಾ ನಹೀ (ಹಮ್‌ ದೋನೊ, 1961) ಗೀತೆಗಳೂ ನೆನಪಿನಲ್ಲಿ ಉಳಿಯುವಂತಿವೆ.

ಮುಖೇಶ್‌ ಹಾಡಿದ್ದ ‘ಮೈ ಪಲ್‌ ದೊ ಪಲ್‌ ಕಾ ಶಾಯರ್‌ ಹ್ಙೂ, ಪಲ್‌ ದೊ ಪಲ್‌ ಮೆರೀ ಕಹಾನಿ ಹೇ....’ (ಕಬೀ ಕಬೀ, 1976) ಗೀತೆಯೂ ಸಾಹಿರ್‌ ಅವರ ಜನಪ್ರಿಯ ರಚನೆಗಳಲ್ಲೊಂದು. ಈ ಚಿತ್ರ ತುಂಬಾ ಯಶಸ್ಸು ಗಳಿಸಿತು. ಮನ್ನಾ ಡೆ ಹಾಡಿದ ‘ಯೇ ಮೇರೆ ಜೊಹರಾ ಜಬೀ, ತುಝೇ ಮಾಲೂಮ್‌ ನಹೀ....(ವಕ್ತ್‌, 1965) ಹಾಡು ಕೇಳದವರಾರು? ತಂದೆ, ತಮ್ಮ ಬಾಲ್ಯದಲ್ಲಿ ತಾಯಿಯನ್ನು ತೊರೆದುಹೋದ ಪ್ರಸಂಗ ಅವರು ಮರೆತಿರಲಿಲ್ಲವೇನೊ, ಅವರು ಅವಿವಾಹಿತರಾಗಿಯೇ ಉಳಿದರು. ಬಾಲ್ಯದಲ್ಲಿ ತಾಯಿ ಅನುಭವಿಸಿದ್ದ ಪಾಡನ್ನು ಕಣ್ಣಾರೆ ಕಂಡಿದ್ದ ಅವರು ಪುರುಷ ಶೋಷಣೆಯನ್ನು ಹಾಡುಗಳಲ್ಲೂ ಖಂಡಿಸಿದರು.

ಆಗ ಆಕಾಶವಾಣಿಗಳಲ್ಲಿ ಬರೇ ಚಿತ್ರದ ಹೆಸರು ಮತ್ತು ಗಾಯಕರ ಹೆಸರುಗಳನ್ನಷ್ಟೇ ಹೇಳುತ್ತಿದ್ದರು. ಸಾಹಿರ್ ಒತ್ತಡ ಹೇರಿದ್ದರ ಫಲ ಚಿತ್ರಸಾಹಿತಿ ಮತ್ತು ಸಂಗೀತನಿರ್ದೇಶಕರ ಹೆಸರುಗಳನ್ನೂ ಹೇಳುವ ಪರಿಪಾಠ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT