ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇದಿತಾ ಹೇಳಿದ ಪಾಪ್‌ಕಾರ್ನ್‌ ಕಥೆ

Last Updated 21 ಫೆಬ್ರುವರಿ 2020, 2:22 IST
ಅಕ್ಷರ ಗಾತ್ರ

‘ಎಲ್ಲಾ ಪಾತ್ರಗಳು ಒಂದೊಂದು ಬಣ್ಣ. ನಾನು ಕ್ಯಾನ್ವಾಸ್‌ ಮೇಲೆ ಬಣ್ಣಗಳನ್ನು ಎರಚುತ್ತೇನೆ. ಒಂದು ಬಣ್ಣದ ಮೇಲೆ ಮತ್ತೊಂದು ಬಣ್ಣ ಬಿದ್ದಾಗ ಹೊಸದೊಂದು ಬಣ್ಣ ಮೂಡುತ್ತದೆ. ಅದನ್ನು ನೋಡಿಕೊಂಡು ಹೋಗೋಣ ಎಂದಿದ್ದರು ದುನಿಯಾ ಸೂರಿ. ಅವರ ಮಾತು ಶೂಟಿಂಗ್‌ನಲ್ಲಿ ಕಾಣಿಸಿತು. ಅಲ್ಲಿಯವರೆಗೂ ನಾನು ಗೊಂದಲದಲ್ಲಿಯೇ ಇದ್ದೆ’

–ಇಷ್ಟನ್ನು ಪಟಪಟನೆ ಹೇಳಿ ನಕ್ಕರು ನಟಿ ನಿವೇದಿತಾ. ‘ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರದಲ್ಲಿ ಅವರೊಂದು ಬಣ್ಣ ಮೆತ್ತಿಕೊಂಡಿರುವುದಕ್ಕೆ ಹೆಮ್ಮೆಯಿದೆಯಂತೆ. ಬಣ್ಣವಾಗುವುದಕ್ಕೂ ಮೊದಲು ಸೂರಿ ಅವರ ನಿರ್ದೇಶನದ ಶೈಲಿ ಅರ್ಥವಾಗಲು ಅವರಿಗೆ ಸಾಕಷ್ಟು ಸಮಯ ಹಿಡಿಯಿತಂತೆ. ‘ಅರ್ಥೈಸಿಕೊಂಡಾಗ ಅವರ ಬಗ್ಗೆ ಗೌರವ ಮೂಡಿತು’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ದುನಿಯಾ ಸೂರಿ ನಿರ್ದೇಶನದ, ಧನಂಜಯ್‌ ‘ಮಂಕಿ ಸೀನ’ನಾಗಿ ನಟಿಸಿರುವ ‘ಪಾಪ್‌ಕಾರ್ನ್‌ ಮಂಕಿ ಟೈಗರ್’ ಚಿತ್ರ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಚಿತ್ರದಲ್ಲಿ ನಿವೇದಿತಾ ಅವರ ಪಾತ್ರದ ಹೆಸರು ದೇವಿಕಾ. ‘ಮಂಕಿ ಸೀನನ ಒಂದಷ್ಟು ವರ್ಷದ ಕಥೆ ಇದು. ಕೆಲವು ಘಟನೆಗಳಿಂದ ದೇವಿಕಾಳ ಬದುಕಿನಲ್ಲಿ ಹೇಗೆಲ್ಲಾ ಪರಿವರ್ತನೆಯಾಗುತ್ತದೆ; ಯಾವ ಹಾದಿಯಲ್ಲಿ ಹೋಗುತ್ತಾಳೆ ಎನ್ನುವುದೇ ಕಥೆ’ ಎಂದ ಅವರು ತಮ್ಮ ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ.

ಸೂರಿಯ ಕಾರ್ಯವೈಖರಿ ಬಗ್ಗೆ ಅವರಿಗೆ ಹೆಮ್ಮೆಯಿದೆ. ‘ಅವರ ಕಾರ್ಯವಿಧಾನ ತುಂಬಾ ಭಿನ್ನ. ಈ ಕಥೆಯ ಬಗ್ಗೆ ಒಂದು ಸಾವಿರ ಪುಟಗಳನ್ನು ಬರೆದಿರಬಹುದು. ನಾನು ಅವರ ಕಚೇರಿಗೆ ಹೋದಾಗಲೆಲ್ಲಾ ಟೇಬಲ್‌ ಮೇಲೆ ಬರೆಯುತ್ತಾ ಕುಳಿತಿರುತ್ತಿದ್ದರು. ಅವರು ಯಾವುದಕ್ಕೂ ಅಂಟಿಕೊಳ್ಳುತ್ತಿರಲಿಲ್ಲ; ಎಲ್ಲವನ್ನೂ ಬರೆದು ಸೆಟ್‌ಗೆ ಬಂದಾಗ ಹೊಸದನ್ನು ದಕ್ಕಿಸಿಕೊಳ್ಳಲು ಹವಣಿಸುತ್ತಿದ್ದರು. ಅದು ಸಿಕ್ಕಿದರೆ ಸ್ಥಳದಲ್ಲಿಯೇ ಅದನ್ನು ಅನುಷ್ಠಾನಗೊಳಿಸುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ.

‘ಅವರೊಬ್ಬ ಚಿತ್ರ ಕಲಾವಿದ. ಅವರ ಮನಸ್ಸಿನಲ್ಲಿ ಒಂದು ಚಿತ್ರವಿರುತ್ತದೆ. ಅದನ್ನು ಕ್ಯಾನ್ವಾಸ್‌ ಮೇಲೆ ತರಲು ಯತ್ನಿಸುತ್ತಾರೆ. ಬರೆಯುತ್ತಾ ಹೋದಂತೆ ಹೊಸ ಬಣ್ಣ, ಛಾಯೆಗಳು ಮೂಡುತ್ತವೆ. ಹೊಸ ಆಲೋಚನೆ ಮೂಡಿದರೆ ಅದಕ್ಕೆ ಪುಷ್ಟಿ ನೀಡುತ್ತಾರೆ. ಹಾಗೆ ರೂಪುಗೊಂಡಿರುವುದೇ ‘ಪಾಪ್‌ಕಾರ್ನ್‌...’ ಸಿನಿಮಾ ಎಂದು ವಿವರಿಸುತ್ತಾರೆ.

‘ಪ್ರತೀ ನಿರ್ದೇಶಕರಿಗೂ ಅವರದ್ದೇ ಆದ ಶೈಲಿ ಇರುತ್ತದೆ. ನನ್ನ ಹಿಂದಿನ ಎಲ್ಲಾ ಸಿನಿಮಾಗಳು ನಿರ್ಮಾಣವಾಗಿರುವುದು ಒಂದು ಚೌಕಟ್ಟಿನಲ್ಲಿಯೇ. ಈ ಚಿತ್ರದಲ್ಲಿ ಸೂರಿ ಚೌಕಟ್ಟನ್ನು ಮುರಿದಿದ್ದಾರೆ. ಕೆಲವೆಡೆ ಆಕಾರಕ್ಕೆ ತಕ್ಕಂತೆ ಚೌಕಟ್ಟು ಬದಲಾಯಿಸಿದ್ದಾರೆ’ ಎನ್ನುವ ಅವರಿಗೆ ಅದೊಂದು ಹೊಸ ಅನುಭವವನ್ನು ನೀಡಿದೆ.

‘ನಾನು ಅವರ ಕಚೇರಿಗೆ ಹೋದಾಗ ಕಥೆ ಇನ್ನೂ ಬೆಳವಣಿಗೆಯ ಹಂತದಲ್ಲಿತ್ತು. ದಿನ ಕಳೆದಂತೆ ಮತ್ತಷ್ಟು ಬದಲಾವಣೆಯಾಯಿತು. ನಮ್ಮನ್ನೂ ಆ ಕಥೆಯ ಭಾಗವಾಗಿಸುತ್ತಿದ್ದರು. ಎಲ್ಲರನ್ನೂ ಒಟ್ಟುಗೂಡಿಸಿ ಒಂದು ತಂಡವಾಗಿ ರೂಪಿಸಿದ್ದು ಅವರ ಹೆಗ್ಗಳಿಕೆ’ ಎನ್ನುತ್ತಾರೆ.

ನಿವೇದಿತಾ ಮತ್ತು ಧನಂಜಯ್‌ ಇಬ್ಬರೂ ಮೈಸೂರಿನವರು. ಓದಿದ್ದು ಮರಿಮಲ್ಲಪ್ಪ ಸಂಸ್ಥೆಯಲ್ಲಿ. ಇಬ್ಬರೂ ಇನ್ಫೊಸಿಸ್‌ನಲ್ಲಿ ಕೆಲಸ ಮಾಡಿದ್ದರು. ‘ಧನಂಜಯ್‌ ಅವರದ್ದು ಶಾಂತ ಸ್ವಭಾವ. ನಾನು ತುಂಬಾ ಹೈಪರ್. ಒಂದು ಸೀನ್‌ ಅಂದರೆ ಅದರಲ್ಲಿಯೇ ಮುಳುಗಿರುತ್ತೇನೆ. ದುಃಖದ ಸೀನ್‌ ಎಂದರೆ ಇಡೀ ದಿನ ದುಃಖದಲ್ಲಿ ಇರುತ್ತೇನೆ. ನಾನು ಕೆಲಸ ಮಾಡುವುದು ಹಾಗೆಯೇ. ಅವರು ಬಹುಬೇಗ ಸ್ವಿಚ್‌ ಆನ್‌; ಸ್ವಿಚ್‌ ಆಫ್‌ ಆಗುತ್ತಾರೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT