ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಘೋಷಣೆ ಆಯ್ತು ಪುನೀತ್‌ ನಟನೆಯ ಕೊನೆಯ ಚಿತ್ರ ‘ಲಕ್ಕಿಮ್ಯಾನ್‌’ ರಿಲೀಸ್‌ ಡೇಟ್!

Published : 13 ಜುಲೈ 2022, 12:44 IST
ಫಾಲೋ ಮಾಡಿ
Comments

ಬೆಂಗಳೂರು: ಕಳೆದ ಮಾರ್ಚ್‌ನಲ್ಲಿ ತೆರೆಕಂಡ ನಟ, ದಿವಂಗತ ಪುನೀತ್‌ ರಾಜ್‌ಕುಮಾರ್‌ ನಾಯಕನಾಗಿ ನಟಿಸಿದ್ದ ಕೊನೆಯ ಚಿತ್ರ ‘ಜೇಮ್ಸ್‌’ ಬೆಳ್ಳಿಪರದೆಯಲ್ಲಿ ದಾಖಲೆಯನ್ನೇ ಬರೆದಿತ್ತು. ನೆಚ್ಚಿನ ನಟನನ್ನು ಮತ್ತೆ ಪರದೆಯ ಮೇಲೆ ನೋಡಲು ಅಪ್ಪು ಅಭಿಮಾನಿಗಳು ಕಾಯುತ್ತಿದ್ದರು. ಈ ಅಭಿಮಾನಿಗಳಿಗೆ ‘ಲಕ್ಕಿಮ್ಯಾನ್‌’ ಚಿತ್ರತಂಡ ಸಿಹಿಸುದ್ದಿ ನೀಡಿದೆ.

ಪವರ್‌ಸ್ಟಾರ್‌ ಅಭಿನಯಿಸಿದ ಕೊನೆಯ ಸಿನಿಮಾ ‘ಲಕ್ಕಿಮ್ಯಾನ್’. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಪುನೀತ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದೆ.

ತಮಿಳಿನ ‘ಓ ಮೈ ಕಡವುಳೆ’ ಸಿನಿಮಾ ಕಥೆಯ ಎಳೆಯನ್ನಿಟ್ಟುಕೊಂಡು,ಪ್ರಭುದೇವ ಸಹೋದರ ಎಸ್‌.ನಾಗೇಂದ್ರ ಪ್ರಸಾದ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇಲ್ಲಿ ದೇವರ ಪಾತ್ರದಲ್ಲಿ ಪುನೀತ್‌ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ಬಹುಭಾಷಾ ನಟ ಪ್ರಭುದೇವ ಕೂಡ ನಟಿಸಿದ್ದು, ಹಾಡೊಂದರಲ್ಲಿ ಇವರಿಬ್ಬರೂ ಸಖತ್ ಸ್ಟೆಪ್ ಹಾಕಿದ್ದಾರೆ. ಜಾನಿ ಮಾಸ್ಟರ್ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡನ್ನು ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಇದೇ ಮೊದಲಬಾರಿಗೆ, ತಮ್ಮ ಡ್ಯಾನ್ಸಿಂಗ್‌ನಿಂದಲೇ ಗುರುತಿಸಿಕೊಂಡಿರುವ ಪುನೀತ್ ರಾಜಕುಮಾರ್ ಹಾಗೂ ಪ್ರಭುದೇವ ಅವರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಲ್ಲದೆ, ಅದ್ಭುತವಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ಹಾಗೂ ರೋಷನಿ ಪ್ರಕಾಶ್ ಬಣ್ಣಹಚ್ಚಿದ್ದಾರೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲಾ ಚಿತ್ರತಂಡ ಪೂರ್ಣಗೊಳಿಸಿದೆ. ‘ಓ ಮೈ ಕಡವುಳೆ’ ಚಿತ್ರದ ಎಳೆಯನ್ನಿಟ್ಟುಕೊಂಡು ನಾಗೇಂದ್ರ ಪ್ರಸಾದ್ ಒಂದು ಅದ್ಭುತವಾದ ಫ್ಯಾಂಟಸಿ ಡ್ರಾಮಾ ಕಥಾಹಂದರವನ್ನು ನಿರೂಪಿಸಿದ್ದಾರೆ ಎಂದಿದೆ ಚಿತ್ರತಂಡ. ಚಿತ್ರವನ್ನು ಪಿ.ಆರ್. ಮೀನಾಕ್ಷಿ ಸುಂದರಂ ಹಾಗೂ ಪಿ.ಕಾಮರಾಜ್ ನಿರ್ಮಾಣ ಮಾಡಿದ್ದು, ಇದು ಕನ್ನಡದಲ್ಲಿ ಅವರ ಮೊದಲ ಚಿತ್ರ.

‘ಅಪ್ಪು’ ಜೊತೆಗಿನ ನಟನೆಯ ಅನುಭವವನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದ ಸಂಗೀತಾ ಶೃಂಗೇರಿ, ‘ಲಕ್ಕಿಮ್ಯಾನ್‌’ ಸಿನಿಮಾದಲ್ಲಿ ನಟನೆ ಮಾಡಿರುವಂಥ ಕಲಾವಿದರು, ತಂತ್ರಜ್ಞರೆಲ್ಲರೂ ಲಕ್ಕಿಯೇ. ಪುನೀತ್‌ ರಾಜ್‌ಕುಮಾರ್ ಅವರ ಜೊತೆ ಇದ್ದಿದ್ದೇ ಪುಣ್ಯ. ಅವರು ನಮ್ಮ ಜೊತೆಗಿಲ್ಲದೇ ಇದ್ದರೂ ಅವರ ಆಶೀರ್ವಾದ ಸದಾ ನಮ್ಮ ಮೇಲಿದೆ. ಚಿತ್ರದಲ್ಲಿ ದೇವರ ಪಾತ್ರದಲ್ಲಿ ಪುನೀತ್‌ ಅವರು ನಟಿಸಿದ್ದು, ಅದಕ್ಕಿಂತ ದೊಡ್ಡ ಆಶೀರ್ವಾದ ಬೇಕೇ? ಅವರು ನಮ್ಮ ಜೊತೆ ಸದಾ ಇರುತ್ತಾರೆ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT