ಸೋಮವಾರ, ಸೆಪ್ಟೆಂಬರ್ 16, 2019
26 °C

‘ಸಾಹೊ’ಗಾಗಿ ಸಸ್ಯಾಹಾರಿಯಾದ ಪ್ರಭಾಸ್

Published:
Updated:
Prajavani

‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಅಭಿನಯದ ‘ಸಾಹೊ’ ಚಿತ್ರ ಮುಂದಿನ ಶುಕ್ರವಾರ (ಆಗಸ್ಟ್‌ 30) ತೆರೆಗೆ ಬರಲಿದೆ. ತೆಲುಗು ಮಾತ್ರವಲ್ಲದೆ ಇದು ಹಿಂದಿ, ತಮಿಳು ಮತ್ತು ಮಲಯಾಳ ಭಾಷೆಗಳಲ್ಲಿ ಕೂಡ ತೆರೆಗೆ ಬರಲಿದೆ.

₹ 350 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಪ್ರಭಾಸ್‌ ಪಾಲಿಗೆ ಅತ್ಯಂತ ಮಹತ್ವದ್ದು. ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ–1 ಮತ್ತು ಬಾಹುಬಲಿ–2 ಸಿನಿಮಾಗಳಲ್ಲಿ ಅಭಿನಯಿಸಿದ ನಂತರ ಪ್ರಭಾಸ್‌ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ‘ಸಾಹೊ’ದಲ್ಲಿ. ಅಂದರೆ, ಬರೋಬ್ಬರಿ ಎರಡು ವರ್ಷಗಳ ನಂತರ ಪ್ರಭಾಸ್‌ ಅಭಿಮಾನಿಗಳನ್ನು ರಂಜಿಸಲು ಮತ್ತೆ ಅಣಿಯಾಗಿದ್ದಾರೆ.

ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಪ್ರಭಾಸ್‌ ಎದುರಿಸಿದ ‍ಪ್ರಶ್ನೆ, ‘ಅಭಿಮಾನಿಗಳು ಕಾಯುತ್ತಿದ್ದರೂ, ನೀವು ಹೊಸ ಸಿನಿಮಾ ಕೊಡಲು ಎರಡು ವರ್ಷ ಸಮಯ ತೆಗೆದುಕೊಂಡಿದ್ದು ಏಕೆ’ ಎಂಬುದು. ಇದಕ್ಕೆ ನಗುತ್ತಲೇ ಉತ್ತರಿಸಿದ ಅವರು, ‘ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಹಾಗಾಗಿ ಇಷ್ಟು ಸಮಯ ಬೇಕಾಯಿತು’ ಎನ್ನುವ ಚುಟುಕಿನ ಉತ್ತರ.

‘ಸಾಹೊ’ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿಲ್ಲ. ‘ಏಕೆ ಹೀಗೆ, ಇಲ್ಲೂ ನಿಮ್ಮ ಅಭಿಮಾನಿಗಳು ಇದ್ದಾರಲ್ಲ’  ಎಂದು ಕೇಳಿದಾಗ, ‘ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳು ಬರುವುದು ಈಗಷ್ಟೇ ಶುರುವಾಗಿದೆ. ನನ್ನ ಮುಂದಿನ ಸಿನಿಮಾ ಕನ್ನಡಲ್ಲೂ ಬರಬಹುದು’ ಎಂದರು. ಅಷ್ಟೇ ಅಲ್ಲ, ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳ ಕನಿಷ್ಠ ಒಂದಾದರೂ ಸಿನಿಮಾದಲ್ಲಿ ಅಭಿನಯಿಸಬೇಕು ಎಂದು ಹೇಳುವ ಮೂಲಕ ತಮ್ಮ ನಟನೆಯ ಅಭಿರುಚಿ ಏನು ಎಂಬುದನ್ನು ಸೂಚ್ಯವಾಗಿ ತಿಳಿಸಿದರು.

ಬಾಹುಬಲಿ ಚಿತ್ರಕ್ಕಾಗಿ ಚೆನ್ನಾಗಿ ತಿಂದು–ಉಂಡು, ದೇಹದಾರ್ಢ್ಯತೆ ಹೆಚ್ಚಿಸಿಕೊಂಡಿದ್ದ ಪ್ರಭಾಸ್‌ ‘ಸಾಹೊ’ ಚಿತ್ರಕ್ಕಾಗಿ ಮಾಂಸಾಹಾರ ತ್ಯಜಿಸಿದ್ದರು. ‘ನಾನು ಈ ಚಿತ್ರದಲ್ಲಿ ತುಸು ಸಣ್ಣಗೆ ಕಾಣಿಸಬೇಕಿತ್ತು. ಹಾಗಾಗಿ ಸಸ್ಯಾಹಾರಿಯಾದೆ’ ಎಂದರು. ಸಾಹೊ ಚಿತ್ರ ಆ್ಯಕ್ಷನ್‌–ಥ್ರಿಲ್ಲರ್ ಸಿನಿಮಾ. ಇದನ್ನು ವೀಕ್ಷಿಸುವವರಿಗೆ ತೃಪ್ತಿಯಾಗುವಷ್ಟು ಥ್ರಿಲ್‌ ಸಿಗುತ್ತದೆ ಎಂದು ಭಾವಿಸಿರುವುದಾಗಿ ಹೇಳಿದರು.

ಈ ಚಿತ್ರದ ಕಥೆಯನ್ನು ಪ್ರಭಾಸ್‌ ಅವರಿಗ ಬಾಹುಬಲಿ ಚಿತ್ರದ ಕೆಲಸಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಹೇಳಲಾಗಿತ್ತು. ಬಾಹುಬಲಿ ಸಿನಿಮಾ ಕೆಲಸಗಳನ್ನು ಪ್ರಭಾಸ್‌ ಪೂರ್ಣಗೊಳಿಸಲಿ ಎಂದು ಈ ಚಿತ್ರದ ನಿರ್ದೇಶಕರು ಕಾದಿದ್ದರು ಕೂಡ.

Post Comments (+)