ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview| ‘ಸಲಾರ್‌’ನಲ್ಲಿ ಪ್ರಮೋದ್‌ ಪ್ರಪಂಚ

Last Updated 8 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

‘ರತ್ನನ್‌ ಪ್ರಪಂಚ’ ಖ್ಯಾತಿಯ ಪ್ರಮೋದ್‌ ಸದ್ಯ ‘ಬಾಂಡ್‌ ರವಿ’ಯಾಗಿ ತೆರೆಗೆ ಬಂದಿದ್ದಾರೆ. ಅತ್ತ ಪ್ಯಾನ್‌ ಇಂಡಿಯಾ ಸಿನಿಮಾ ‘ಸಲಾರ್‌’ ಕೋಟೆಗೂ ಹೆಜ್ಜೆ ಇಟ್ಟಿರುವ ಪ್ರಮೋದ್‌ ಸಿನಿಪಯಣ ಕನಸಿನಂತೆ ಸಾಗುತ್ತಿದೆ...

ಪ್ರಮೋದ್‌ ಸಿನಿಪಯಣ ಕನಸಿನ ರೀತಿ ಸಾಗುತ್ತಿದೆ ಅಲ್ಲವೇ?

ಹೌದು... ಅಂದುಕೊಂಡಿದ್ದೆಲ್ಲವೂ ನನಸಾಗುತ್ತಿದೆ. ಅಂದುಕೊಳ್ಳದೇ ಇದ್ದ ಹೊಸ ಅವಕಾಶಗಳೂ ಕೈಸೇರುತ್ತಿವೆ. ಐದಾರನೇ ತರಗತಿಯಿಂದಲೇ ಬಣ್ಣದ ಕನಸಿನ ಮೂಟೆ ಹೊತ್ತುಮದ್ದೂರಿನ ಸಣ್ಣ ಹಳ್ಳಿಯಿಂದ ಬೆಂಗಳೂರಿನಲ್ಲಿ ಇಳಿದವನಿಗೆ, ಎದುರಾಗಿದ್ದು ಅಡೆತಡೆಗಳೇ...ಈ ಕ್ಷೇತ್ರ ನಮಗೆ ಸರಿಹೋಗುವುದಿಲ್ಲವೇನೋ ಎನ್ನುವ ಮಟ್ಟಿಗೆ ನಂಬಿಕೆ ಕಳೆದುಕೊಂಡುಬಿಟ್ಟಿದ್ದೆ. ಮೊದಮೊದಲಿಗೆ ನನ್ನ ಪಾತ್ರವನ್ನು ನೋಡುತ್ತಿದ್ದವರು ಹೊಗಳುತ್ತಿದ್ದರೇ ಹೊರತು ಕೆಲಸ ಕೊಡುತ್ತಿರಲಿಲ್ಲ. ನನಗೆ ಕೆಲಸವಷ್ಟೇ ಗೊತ್ತಿತ್ತು, ಯಾವುದೇ ಗಿಮಿಕ್‌ ಬರುತ್ತಿರಲಿಲ್ಲ. ಹೀಗೆಂದುಕೊಳ್ಳುತ್ತಿರುವಾಗ ಸಿಕ್ಕಿದ್ದೇ ‘ಪ್ರೀಮಿಯರ್‌ ಪದ್ಮಿನಿ’ ಹಾಗೂ ‘ರತ್ನನ್‌ ಪ್ರಪಂಚ’ ಸಿನಿಮಾ ಪಾತ್ರಗಳು. ಇವು ನನ್ನ ಯೋಚನೆಯನ್ನೇ ಬದಲಾಯಿಸಿದವು. ಶ್ರದ್ಧೆಯಿಂದ, ನಂಬಿಕೊಂಡ ಕೆಲಸವನ್ನು ಮಾಡಿದರೆ ಸಾಕು ಮಿಕ್ಕಿದ್ದನ್ನು ಪ್ರಕೃತಿ, ಸಮಯವೇ ನಿರ್ಧರಿಸುತ್ತದೆ ಎನ್ನುವುದನ್ನು ತಿಳಿದುಕೊಂಡೆ. ನಾನೇ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದೇನೆ. ಈ ಪಾತ್ರಕ್ಕೆ ನೀವೇ ಬೇಕು ಎಂದು ಕೇಳುವ ವಾತಾವರಣ ನಿರ್ಮಾಣವಾಗಿದೆ. ಸದ್ಯ ನನ್ನ ಸಿನಿಜೀವನ ಈ ಹಂತದ ಪಥದಲ್ಲಿದೆ.

‘ಬಾಂಡ್‌ ರವಿ’ ಸಿನಿಮಾ ಮೇಲೆ ಏಕಿಷ್ಟು ನಂಬಿಕೆ?

ಈ ಸಿನಿಮಾದಲ್ಲಿನ ನನ್ನ ಪಾತ್ರ ವಿಭಿನ್ನವಾಗಿದೆ. ‘ರತ್ನನ್‌ ಪ್ರಪಂಚ’ ಸಿನಿಮಾದಲ್ಲಿ ನನ್ನ ಪಾತ್ರ ಮಾಸ್‌ ಆಗಿ ಕಂಡರೂ, ಬಹಳ ಮೃದು ಹೃದಯದ ವ್ಯಕ್ತಿತ್ವ ಆತನದು. ಈ ಪಾತ್ರವನ್ನು ಜನರು ಮೆಚ್ಚಿಕೊಂಡರು. ಪ್ರೇಕ್ಷಕರು ಎಲ್ಲ ಭಾವನೆಗಳೂ ಮಿಶ್ರಣ ಹೊಂದಿದ ಪಾತ್ರಗಳನ್ನು ಇಷ್ಟಪಡುತ್ತಾರೆ ಎಂದು ಆ ಸಂದರ್ಭದಲ್ಲಿ ನನಗೆ ಅನಿಸಿತು. ಇಂತಹ ಒಂದು ಅವಕಾಶ ನನಗೆ ‘ಬಾಂಡ್‌ ರವಿ’ಯಲ್ಲಿ ಲಭಿಸಿತು. ನಟನೆಗೆ ಹೆಚ್ಚಿನ ಅವಕಾಶವಿರುವ, ಮಾಸ್‌ ಆಗಿ ಕಾಣಿಸಿಕೊಳ್ಳುವ ಪಾತ್ರ ಇಲ್ಲಿದೆ. ಜೊತೆಗೆ ಪಾತ್ರದ ವೇರಿಯೇಷನ್‌ ಕೂಡಾ ಅದ್ಭುತವಾಗಿದೆ. ಚಿತ್ರದ ಕಥೆ, ಸ್ಕ್ರೀನ್‌ಪ್ಲೇ ಮತ್ತು ಕ್ಲೈಮ್ಯಾಕ್ಸ್‌ ನನ್ನನ್ನು ಹೆಚ್ಚಾಗಿ ಕಾಡಿದ ಅಂಶಗಳು. ಈ ಚಿತ್ರ ನೋಡಿದ ಬಳಿಕ ಪ್ರಮೋದ್‌ ಬಹಳ ವರ್ಷಗಳ ಕಾಲ ಪ್ರೇಕ್ಷಕನ ಮನಸ್ಸಿನಲ್ಲಿ ಉಳಿಯುತ್ತಾನೆ ಎನ್ನುವ ನಂಬಿಕೆ ಇದೆ.

ಬಹಳ ವರ್ಷಗಳ ನಂತರ ನಾಯಕನಾಗಿ, ಪೂರ್ಣಾವಧಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದೀರಿ. ಈ ಅವಧಿ ನಿಮ್ಮ ಮೇಲೆ ಬೀರಿದ ಪರಿಣಾಮವೇನು?

‘ಗೀತಾ ಬ್ಯಾಂಗಲ್‌ ಸ್ಟೋರ್‌’ ಹಾಗೂ ‘ಮತ್ತೆ ಉದ್ಭವ’ ಸಿನಿಮಾ ಕಮರ್ಷಿಯಲ್‌ ಆಗಿ ಹಿಟ್‌ ಆಗಲಿಲ್ಲ. ಆದರೆ ನನ್ನ ನಟನೆಗೆ ಅಂಕ ಲಭಿಸಿತು. ಹಣಕಾಸಿನ ವಿಚಾರದಲ್ಲಿ ಸಿನಿಮಾ ಸೋತರೆ ಕಲಾವಿದನೊಬ್ಬ ಎಷ್ಟೇ ಅದ್ಭುತವಾಗಿ ನಟಿಸಿದ್ದರೂ, ಮುಂದೆ ಪ್ರಾಜೆಕ್ಟ್‌ಗಳು ಲಭಿಸುವುದಿಲ್ಲ. ನನ್ನ ಪರಿಸ್ಥಿತಿ ಇದೇ ರೀತಿಯಾಗಿತ್ತು. ಬೆಳ್ಳಿತೆರೆಯಿಂದ ಕಿರುತೆರೆಗೆ ಮತ್ತೆ ಮರಳಿದ್ದೆ. ಈ ಸಂದರ್ಭದಲ್ಲಿ ದೊರೆತಿದ್ದು, ‘ಪ್ರೀಮಿಯರ್‌ ಪದ್ಮಿನಿ’ ಹಾಗೂ ‘ರತ್ನನ್‌ ಪ್ರಪಂಚ’. ‘ರತ್ನನ್‌...’ ಸಿನಿಮಾದಲ್ಲಿ ನನ್ನ ತೆರೆಯ ಅವಧಿ ಇದ್ದಿದ್ದು ಕೇವಲ 40 ನಿಮಿಷ. ಈ ಪಾತ್ರದಲ್ಲಿ ನನಗೆ ಎಲ್ಲ ಭಾವನೆಗಳನ್ನೂ ತೋರ್ಪಡಿಸುವ ಅವಕಾಶ ಲಭಿಸಿತು. ಇದನ್ನು ನಾನು ಹೀರೊ ಮಟ್ಟಕ್ಕೇ ನೋಡಿದ್ದೇನೆ. ನನ್ನನ್ನು ಹೀರೊ ಆಗಿ ನೋಡಲು ಜನರು ಇಷ್ಟಪಡುತ್ತಿದ್ದರು. ಆದರೆ ನನಗೆ ಅವಕಾಶಗಳು ಒದಗಿಬರುತ್ತಿರಲಿಲ್ಲ. ಇದೀಗ ‘ಬಾಂಡ್‌ ರವಿ’ಯಲ್ಲಿ ನಾನು ಮತ್ತೊಮ್ಮೆ ಹೀರೊ ಆಗಿ ತೆರೆಗೆ ಬರುತ್ತಿದ್ದೇನೆ. ನನ್ನ ಒಂದು ಕೆಲಸ ನೋಡಿ ಮತ್ತೊಂದು ಕೆಲಸ ನೀಡಬೇಕು ಎನ್ನುವ ಆಸೆ ನನಗಿತ್ತು. ಅದು ಇದೀಗ ನನಸಾಗುತ್ತಿದೆ.

ಸದ್ಯದ ನಿಮ್ಮ ಪ್ರಾಜೆಕ್ಟ್‌ಗಳು ಯಾವ ಹಂತದಲ್ಲಿವೆ?

‘ಬಾಂಡ್‌ ರವಿ’ ಬಿಡುಗಡೆಯಾದ ಬಳಿಕ ‘ಇಂಗ್ಲಿಷ್‌ ಮಂಜ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ.ಗಿರೀಶ್ ಮೂಲಿಮನಿ ಅವರ ‘ಭುವನಂ ಗಗನಂ’ ಸಿನಿಮಾದ ಚಿತ್ರೀಕರಣ ಇನ್ನೂ ಇಪ್ಪತ್ತು ದಿನಗಳು ಬಾಕಿ ಇದೆ. ‘ಅಲಂಕಾರ್‌ ವಿದ್ಯಾರ್ಥಿ’ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಈ ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದೆ. ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಫೆಬ್ರುವರಿಯಲ್ಲಿ ನಡೆಯಲಿದೆ. ಈಗ ಹೆಚ್ಚಿಸಿಕೊಂಡಿರುವ ತೂಕವನ್ನು ಮತ್ತೆ ಇಳಿಸಬೇಕು. ‘ಸಲಾರ್‌’ ಚಿತ್ರದ ಶೂಟಿಂಗ್‌ ಮುಗಿದ ಬಳಿಕ, ಶ್ರುತಿ ನಾಯ್ಡು ಅವರ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರತಂಡದ ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದೇನೆ.

‘ಸಲಾರ್‌’ ದುನಿಯಾ ಹೇಗಿದೆ?

‘ರತ್ನನ್‌ ಪ್ರಪಂಚ’ ಸಿನಿಮಾ ಬಿಡುಗಡೆಯಾಗುವುದಕ್ಕೆ ವಾರದ ಮೊದಲೇ ಪ್ರಶಾಂತ್‌ ನೀಲ್‌ ಅವರು ಸಿನಿಮಾ ನೋಡಿದ್ದರು. ಬಳಿಕ ಸಹ ನಿರ್ದೇಶಕರ ಮೂಲಕ ನನ್ನನ್ನು ಸಂಪರ್ಕಿಸಿ, ಸಲಾರ್‌ ಸಿನಿಮಾದಲ್ಲಿ ಪಾತ್ರ ಮಾಡುವ ಬಗ್ಗೆ ಚರ್ಚಿಸಿದ್ದರು. ನಾನು ಒಪ್ಪಿಕೊಂಡಿದ್ದೆ. ಇದಾಗಿ ಸುಮಾರು ಎಂಟು ತಿಂಗಳು ಯಾವ ಕರೆಯೂ ಅವರ ಕಡೆಯಿಂದ ಬಂದಿರಲಿಲ್ಲ. ಹೀಗಾಗಿ ಆ ಪಾತ್ರವನ್ನು ಬೇರೆಯವರಿಗೆ ನೀಡಿದ್ದಾರೆ ಎಂದು ಅಂದುಕೊಂಡಿದ್ದೆ. ಕೆಲ ತಿಂಗಳ ಹಿಂದೆ ಅವರು ಮತ್ತೆ ಕರೆ ಮಾಡಿ ಸಿದ್ಧವಾಗುವಂತೆ ತಿಳಿಸಿದರು. ಹೈದರಾಬಾದ್‌ನಲ್ಲಿ ಫೋಟೊಶೂಟ್‌ ಮುಗಿಸಿ, ನೇರವಾಗಿ ಸೆಟ್‌ಗೆ ಕರೆದೊಯ್ದರು. ಹೀಗೆ ಕೆಲವು ಬೆಳವಣಿಗೆಗಳು ಜೀವನದಲ್ಲಿ ಅನಿರೀಕ್ಷಿತವಾಗಿ ಆಗಿಬಿಡುತ್ತವೆ.

‘ರತ್ನನ್‌ ಪ್ರಪಂಚ’ದಲ್ಲಿನ ನನ್ನ ಅಭಿನಯ ನೋಡಿ ‘ಸಲಾರ್‌’ನಲ್ಲಿ ಪ್ರಮುಖವಾದ ಪಾತ್ರವೊಂದನ್ನು ಪ್ರಶಾಂತ್‌ ನೀಲ್‌ ಅವರು ನೀಡಿದ್ದಾರೆ. ಇದು ಎನರ್ಜಿ ಕೇಳುವ ಪಾತ್ರ. ನಾನು ಈ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲೆ ಎನ್ನುವ ದೃಢವಾದ ನಂಬಿಕೆ ನೀಲ್‌ ಅವರಿಗಿತ್ತು. ಈ ಪಾತ್ರಕ್ಕೆ ದೇಶದ ಯಾವುದೇ ಕಲಾವಿದನೊಬ್ಬನನ್ನು ಕರೆದು ಕೇಳಿದರೂ ಒಪ್ಪಿಕೊಳ್ಳುತ್ತಿದ್ದರು. ಆದರೆ ಅವರು ನೇರವಾಗಿ ನನ್ನನ್ನೇ ಇದಕ್ಕೆ ಆಯ್ಕೆ ಮಾಡಿದ್ದು ಅವರ ದೊಡ್ಡಗುಣ. ಇಲ್ಲಿ ನನ್ನದು ಒಂದು ಪಾತ್ರವಷ್ಟೇ. ಸದ್ಯ ಎರಡು ಶೆಡ್ಯೂಲ್‌ ಪೂರ್ಣಗೊಂಡಿದ್ದು, ಇನ್ನೂ ಎರಡು ಶೆಡ್ಯೂಲ್‌ ಬಾಕಿ ಇದೆ. ಪ್ರಭಾಸ್‌ ಅವರ ಜೊತೆಗಿನ ನಟನೆಯ ಅನುಭವ ಅದ್ಭುತ. ಅವರಿಗೆ ‘ಬಾಂಡ್‌ ರವಿ’ ಸಿನಿಮಾದ ಸ್ಟೋರಿಲೈನ್‌ ಕೂಡಾ ಹೇಳಿದ್ದೆ. ಪರಭಾಷೆಯ ನಟರನ್ನು ಹೇಗೆ ಟ್ರೀಟ್‌ ಮಾಡಬೇಕು ಎನ್ನುವುದನ್ನು ಅವರನ್ನು ನೋಡಿ ಕಲಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT