ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಾಫಿಂಗ್‌ ಬುದ್ಧ’ದಲ್ಲಿ ಪ್ರಮೋದ್ ಪಾತ್ರವೇನು?

Last Updated 5 ಜೂನ್ 2020, 4:18 IST
ಅಕ್ಷರ ಗಾತ್ರ

ಪ್ರಮೋದ್ ಶೆಟ್ಟಿ ಅವರು ಹುಟ್ಟಿದಾಗ, ಅವರ ಅಜ್ಜ ಒಂದು ಮಾತು ಹೇಳಿದ್ದರು. ‘ನೋಡಲು ಗುಂಡಾಗಿ ಇದ್ದಾನೆ. ಇವನು ದೊಡ್ಡವನಾದ ನಂತರ, ಪೊಲೀಸ್‌ ಕೆಲಸ ಮಾಡುತ್ತಾನೆ ಅಥವಾ ಸೇನೆಗೆ ಸೇರುತ್ತಾನೆ’ ಎನ್ನುವುದು ಆ ಮಾತು. ಆದರೆ, ನಿಜ ಜೀವನದಲ್ಲಿ ಪ್ರಮೋದ್ ಅವರು ಪೊಲೀಸ್ ಅಧಿಕಾರಿಯೂ ಆಗಲಿಲ್ಲ, ಸೇನಾ ಸಮವಸ್ತ್ರವನ್ನೂ ತೊಡಲಿಲ್ಲ.

ಹೀಗಿದ್ದರೂ, ಅವರ ಅಜ್ಜ ಆಡಿದ್ದ ಮಾತು ಒಂದಷ್ಟರಮಟ್ಟಿಗೆ ನಿಜವಾಯಿತು. ತೆರೆಯ ಮೇಲೆ ಪ್ರಮೋದ್ ಅವರು ಒಂದರ ಹಿಂದೆ ಇನ್ನೊಂದು ಎಂಬಂತೆ, ಪೊಲೀಸ್ ಪಾತ್ರಗಳನ್ನು ನಿಭಾಯಿಸಿದರು. ಈಗ ಅವರು ಮತ್ತೊಮ್ಮೆ ಖಾಕಿ ತೊಟ್ಟು, ಅಭಿನಯಿಸಲು ಸಜ್ಜಾಗಿದ್ದಾರೆ. ಭರತ್ ನಿರ್ದೇಶನದ ಹೊಸ ಸಿನಿಮಾ ‘ಲಾಫಿಂಗ್ ಬುದ್ಧ’ದಲ್ಲಿ ಪ್ರಮೋದ್ ಅವರು ಮುಖ್ಯ ಕಾನ್‌ಸ್ಟೆಬಲ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ.

‘ಈ ಚಿತ್ರದಲ್ಲಿ ನನ್ನದು ನಾಯಕನ ಪಾತ್ರ. ಇದು ಮುಖ್ಯ ಕಾನ್‌ಸ್ಟೆಬಲ್‌ ಒಬ್ಬ ತನ್ನ ತೂಕ ಇಳಿಸಿಕೊಳ್ಳಲು ಯತ್ನಿಸುವ ಕಥೆ. ಇಡೀ ಕಥೆಯು ಹಾಸ್ಯದ ಹಳಿಯ ಮೇಲೆ ಸಾಗುತ್ತದೆ. ಈ ಕಾನ್‌ಸ್ಟೆಬಲ್‌ ತೂಕವನ್ನು ಸಿಕ್ಕಾಪಟ್ಟೆ ಹೆಚ್ಚಿಸಿಕೊಂಡಿರುತ್ತಾನೆ. ಅದನ್ನು ಕಂಡು ಅವನ ಮೇಲಧಿಕಾರಿಗಳು, ಹಿಂಬಡ್ತಿ ನೀಡಿರುತ್ತಾರೆ. ಹಿಂಬಡ್ತಿಯ ‍ಪರಿಣಾಮವಾಗಿ, ಈತನಿಗೆ ಪೊಲೀಸ್ ಸ್ಟೇಷನ್ನಿನಲ್ಲಿ ಮೊದಲು ಇದ್ದ ಹಿಡಿತ ತಪ್ಪಿಹೋಗುತ್ತದೆ. ಇದಾದ ನಂತರ, ಈ ಕಾನ್‌ಸ್ಟೆಬಲ್‌ ತೂಕ ಇಳಿಸಿಕೊಳ್ಳಲು ಏನೆಲ್ಲ ಸರ್ಕಸ್ ಮಾಡುತ್ತಾನೆ ಎಂಬುದು ಸಿನಿಮಾದ ಕಥೆ’ ಎಂದು ತಿಳಿಸಿದರು ಪ್ರಮೋದ್.

ಪ್ರಮೋದ್ ನಿಭಾಯಿಸಲಿರುವುದು ವಿಪರೀತ ಹೊಟ್ಟೆಬಾಕ ಕಾನ್‌ಸ್ಟೆಬಲ್‌ನ ಪಾತ್ರವನ್ನು. ಈತನಿಗೆ ಒಳ್ಳೆಯ ತಿಂಡಿ ಕಂಡರೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ. ಜೊತೆಗೆ, ಇವನ ಪತ್ನಿ ರುಚಿರುಚಿಯಾಗಿ ಅಡುಗೆ ಮಾಡುವವಳು. ಹೀಗಿರುವಾಗ ತೂಕ ಹೇಗೆ ಇಳಿಸಿಕೊಳ್ಳುತ್ತಾನೆ?! ‘ಇದರ ವಿವರಣೆ ಸಿನಿಮಾ ಕಥೆಯಲ್ಲಿದೆ’ ಎಂದು ಚಿತ್ರತಂಡ ಹೇಳುತ್ತದೆ.

ಚಿತ್ರೀಕರಣ ಆರಂಭಿಸಲು ಸರ್ಕಾರ ಅನುಮತಿ ನೀಡಿದರೆ, ಜುಲೈ ಮೊದಲ ವಾರದಲ್ಲಿ ಇದರ ಚಿತ್ರೀಕರಣ ಶುರುವಾಗಲಿದೆ. ಒಂದು ಪೊಲೀಸ್ ಠಾಣೆಯ ಸುತ್ತ ಚಿತ್ರದ ಕಥೆ ಬಿಚ್ಚಿಕೊಳ್ಳುತ್ತದೆ. ಪೊಲೀಸರ ಕಷ್ಟಗಳು, ಅವರ ಸಮಸ್ಯೆಗಳು ಇದರಲ್ಲಿ ಅಡಕವಾಗಿರುತ್ತವೆ. ಪೊಲೀಸರ ವಾಸ್ತವ ಬದುಕನ್ನು ತೋರಿಸುವ ಯತ್ನ ಈ ಸಿನಿಮಾದಲ್ಲಿ ಇರಲಿದೆ ಎನ್ನುವುದು ಸಿನಿತಂಡದ ಹೇಳಿಕೆ.

ಪ್ರಮೋದ್ ಅವರ ಹಾವಭಾವ, ಅವರ ಮುಖಭಾವ ನೋಡಿದವರಿಗೆ ಅವರು ಹಾಸ್ಯಮಯ ಪಾತ್ರಕ್ಕೆ ಸೂಕ್ತ ವ್ಯಕ್ತಿ ಎಂದು ಅನಿಸದಿರಬಹುದು. ‘ಹೀಗಿದ್ದರೂ, ಈ ಪಾತ್ರವನ್ನು ಒಪ್ಪಿಕೊಂಡಿದ್ದು ಏಕೆ’ ಎಂದು ಪ್ರಶ್ನಿಸಿದರೆ, ‘ಇದು ಹಾಸ್ಯಮಯ ಸಿನಿಮಾ ಆಗಿದ್ದರೂ, ನಾನು ಹಾಸ್ಯ ಮಾಡುವ ಗೊಡವೆಗೆ ಹೋಗುವುದಿಲ್ಲ. ನಾನು ನಿಭಾಯಿಸಲಿರುವ ಪಾತ್ರ ಬಹಳ ಮುಗ್ಧ ಕಾನ್‌ಸ್ಟೆಬಲ್‌ನದ್ದು. ಅವನು ಎದುರಿಸುವ ಪರಿಸ್ಥಿತಿ, ಸಮಸ್ಯೆಗಳು ವೀಕ್ಷಕರಲ್ಲಿ ನಗು ಹುಟ್ಟಿಸುತ್ತವೆ’ ಎಂದು ಉತ್ತರಿಸಿದರು.

ಇಂತಹ ಪಾತ್ರಗಳನ್ನು ತಾವು ಹಿಂದೆಯೂ ನಿಭಾಯಿಸಿದ್ದಿದೆ ಎಂದ ಪ್ರಮೋದ್, ಅದಕ್ಕೆ ಪೂರಕವಾಗಿ ‘ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು’ ಸಿನಿಮಾದ ಉದಾಹರಣೆ ನೀಡಿದರು. ‘ಅದರಲ್ಲಿ ನಾನು ಮಾಡಿದ ಪಾತ್ರ ಬಹಳ ವಿಶಿಷ್ಟವಾಗಿತ್ತು. ಆ ಪಾತ್ರಕ್ಕೆ ಹೇಳಿಕೊಳ್ಳುವಂಥ ಏನನ್ನೂ ಮಾಡಲು ಆಗುವುದಿಲ್ಲ. ಆದರೂ, ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ, ಅವರನ್ನು–ಇವರನ್ನು ಕಡಿಯುತ್ತೇನೆ ಎಂದೆಲ್ಲ ಆ ಪಾತ್ರ ಆಕ್ರೋಶದಿಂದ ಮಾತನಾಡುತ್ತದೆ. ಆ ಆಕ್ರೋಶವೇ ವೀಕ್ಷಕರಲ್ಲಿ ನಗು ಸೃಷ್ಟಿಸುತ್ತಿತ್ತು’ ಎಂದರು ಪ್ರಮೋದ್.

ಪೊಲೀಸ್ ಪಾತ್ರಗಳನ್ನು ಒಂದಾದ ನಂತರ ಒಂದರಂತೆ ಮಾಡಿದ ಪ್ರಮೋದ್, ಒಂದು ಸಂದರ್ಭದಲ್ಲಿ ಈ ಪೊಲೀಸ್ ಪಾತ್ರಗಳ ಸಹವಾಸ ಸಾಕು ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದೂ ಇತ್ತು. ಆದರೂ ಈ ಕಾನ್‌ಸ್ಟೆಬಲ್‌ ಪಾತ್ರವನ್ನು ಒಪ್ಪಿಕೊಂಡರು. ‘ಈ ಪಾತ್ರ ಬಹಳ ಮಜಾ ಕೊಡುತ್ತದೆ. ಪೊಲೀಸರ ಬದುಕನ್ನು ವಾಸ್ತವಕ್ಕೆ ಹತ್ತಿರವಾಗಿರುವಂತೆ ತೋರಿಸುತ್ತದೆ ಈ ಸಿನಿಮಾ’ ಎಂದು ತಾವು ಇದನ್ನು ಒಪ್ಪಿಕೊಂಡಿದ್ದಕ್ಕೆ ಕಾರಣ ನೀಡಿದರು. ಪೊಲೀಸ್ ಪಾತ್ರಗಳಲ್ಲಿ ಹೊಸತನ ಇದ್ದರೆ ಖಂಡಿತ ಅಂತಹ ಪಾತ್ರ ನಿಭಾಯಿಸುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT