ಗುರುವಾರ , ಏಪ್ರಿಲ್ 2, 2020
19 °C

ಪ್ರೀಮಿಯರ್ ಪದ್ಮಿನಿ: ಹಿತವಾಗಿ ತಾಕುವ ಬೆರಳಿನಂತೆ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ಹಿಂದಿನ ಒಂದು ತಲೆಮಾರಿನವರ ಪ್ರೀತಿಯ ಕಾರು ಪ್ರೀಮಿಯರ್ ಪದ್ಮಿನಿ. ಹಿಂದಿನ ತಲೆಮಾರೊಂದರ ಕೆಲವರಿಗೆ ಇಷ್ಟದ ನಟ ಜಗ್ಗೇಶ್. ಪ್ರೀಮಿಯರ್ ಪದ್ಮಿನಿ ಕಾರಿನಲ್ಲಿ ಒಂದಿಷ್ಟು ಬದಲಾವಣೆ ಮಾಡಿಸಿಕೊಂಡು, ಅದನ್ನು ಚೆಂದಗೆ ಇರಿಸಿಕೊಂಡು, ಹೆಮ್ಮೆಯಿಂದ ಅದರಲ್ಲಿ ಸುತ್ತಾಡುವವರು ಇದ್ದಾರೆ. ಹಾಗೆಯೇ, ನವರಸ ನಾಯಕ ಜಗ್ಗೇಶ್, ನವರಸಗಳಲ್ಲಿ ಕೆಲವಷ್ಟು ರಸಗಳನ್ನು ಆಯ್ಕೆ ಮಾಡಿಕೊಂಡು ಇನ್ನೊಂದು ರೂಪದಲ್ಲಿ ಕಾಣಿಸಿಕೊಂಡರೆ?!

ಆಗ, ‘ಪ್ರೀಮಿಯರ್ ‍ಪದ್ಮಿನಿ’ ಎನ್ನುವ ಸಿನಿಮಾ ಮೈದಳೆಯುತ್ತದೆ. ಇದು ಹೊಸ ಕಾಲದ ಕಥೆಯೂ ಹೌದು, ಕಾಲದ ಎಲ್ಲೆಗಳನ್ನು ಮೀರಿದ ಸಂಬಂಧಗಳ ಕಥೆಯೂ ಹೌದು. ಈ ಕಥೆ ಸುತ್ತುವುದು ವಿನಾಯಕನ (ಜಗ್ಗೇಶ್) ಸುತ್ತ.

ವಿನಾಯಕ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವವ. ಮೇಲ್ಮಧ್ಯಮ ವರ್ಗದ, 40–50 ವರ್ಷ ವಯಸ್ಸಿನವ. ಆತನ ಪತ್ನಿ ಶ್ರುತಿ. ನೆಮ್ಮದಿ ಕಾಣದ ದಾಂಪತ್ಯ ಅವರದ್ದು. ಹಾಗಾಗಿ, ವಿಚ್ಛೇದನ ಪಡೆಯುವ ತೀರ್ಮಾನಕ್ಕೆ ಬಂದಿರುತ್ತಾರೆ ವಿನಾಯಕ ಮತ್ತು ಶ್ರುತಿ. ವಿನಾಯಕನ ಪ್ರೀತಿಯ ‘ಪದ್ಮಿನಿ’ ಕಾರಿನ ಚಾಲಕ ನಂಜುಂಡಿ (ಪ್ರಮೋದ್). ಈತ ಕೊನೆಯವರೆಗೂ ತನ್ನ ಯಜಮಾನನಿಗೆ ನಿಷ್ಠವಾಗಿರುವವ.

ಈ ಚಿತ್ರವನ್ನು ಸಂಬಂಧಗಳ ಸಂಕೀರ್ಣತೆಗಳನ್ನು ವಿವರಿಸುವ ಕಥೆಯಾಗಿ ರೂಪಿಸಿದ್ದಾರೆ ನಿರ್ದೇಶಕ ರಮೇಶ್ ಇಂದಿರಾ. ಪರಸ್ಪರ ಪ್ರೀತಿಸಿ ಮದುವೆ ಆದ ನಂತರವೂ, ದಾಂಪತ್ಯವನ್ನು ಉಳಿಸಿಕೊಳ್ಳುವಲ್ಲಿ ಸೋಲುವವರ ಸಂಕೇತವಾಗಿ ಕಾಣುತ್ತಾರೆ ವಿನಾಯಕ ಮತ್ತು ಶ್ರುತಿ. ಇವರ ಮಗ ಸುಮುಖ್ (ವಿವೇಕ್ ಸಿಂಹ) ತನ್ನ ಅಪ್ಪ–ಅಮ್ಮ ತನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ, ತನಗೆ ಕೊಡಬೇಕಾದ ಪ್ರೀತಿಯನ್ನು ಕೊಡಲಿಲ್ಲ, ಹಾಗಾಗಿ ತಾನೇಕೆ ಅವರನ್ನು ಪ್ರೀತಿಯಿಂದ ಕಾಣಲಿ ಎನ್ನುವ ರೆಬೆಲ್ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದುದ್ದಕ್ಕೂ ಆಗಾಗ ಮಾತ್ರ ಎಂಬಂತೆ ಬಂದುಹೋಗುವ ಪಾತ್ರ ಸ್ಪಂದನಾ (ಸುಧಾರಾಣಿ). ಇಬ್ಬರು ಮಧ್ಯವಯಸ್ಕರ ನಡುವೆ ಮೂಡುವ ಮೋಹ ಮೀರಿದ ಪ್ರೀತಿಯನ್ನು ಆಪ್ತವಾಗಿ ತೋರಿಸಿದ್ದಾರೆ. ಶ್ರುತಿ ತನ್ನಿಂದ ದೂರವಾದ ನಂತರ ವಿನಾಯಕನಲ್ಲಿ ಬೇಸರ ಆವರಿಸಿಕೊಳ್ಳುತ್ತದೆ. ಆಗ ಆತನಿಗೆ ಚಿಕ್ಕದಾದ ಭಾವನಾತ್ಮಕ ಆಸರೆ ನೀಡುವವಳು ಸ್ಪಂದನಾ. ನಾಲ್ಕೈದು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಸ್ಪಂದನಾ, ಮಧ್ಯವಯಸ್ಕರ ನಡುವಿನ ಸಂಬಂಧವನ್ನು ಮನಃಸ್ಪರ್ಶಿಯಾಗಿ ತೋರಿಸಿದ್ದಾರೆ.

ವಿಫಲ ದಾಂಪತ್ಯ, ಕೈಗೆ ಸಿಗದ ಮಗ, ಕೊನೆಗೆ ಅದೇ ಮಗನ ಸಾವು... ಇವೆಲ್ಲ ಈ ಚಿತ್ರದ ಕಥೆಯ ಎಳೆಗಳು. ಈ ಎಳೆಗಳನ್ನೆಲ್ಲ ಒಂದೆಡೆ ತಂದು, ಎಲ್ಲವೂ ಮುಗಿಯಿತು ಎಂದು ಭಾವಿಸಿದ ನಂತರವೂ ಇನ್ನೇನೋ ತೆರೆದುಕೊಳ್ಳುತ್ತದೆ ಎಂಬುದನ್ನು ಹೇಳುವುದು ‘ಪ್ರೀಮಿಯರ್ ಪದ್ಮಿನಿ’ ಸಿನಿಮಾ. ಮಧ್ಯಮ ವಯಸ್ಸಿನ, ಮಧ್ಯಮ ಅಥವಾ ಮೇಲ್ಮಧ್ಯಮ ವರ್ಗದವರ ಮನಸ್ಸನ್ನು ಬೆರಳಿನಿಂದ ಹಿತವಾಗಿ ತಾಕುವ ಭಾವುಕ ಅಂಶಗಳಿರುವ ಸುಂದರ ಸಿನಿಮಾ ಕೂಡ ಹೌದು.

ಕೊನೆಯಲ್ಲಿ, ಜಗ್ಗೇಶ್ ಅವರ ಬಗ್ಗೆ ಒಂದೆರಡು ಮಾತುಗಳನ್ನು ಹೇಳಬೇಕು. ಚಿತ್ರದ ಆರಂಭದಲ್ಲಿ ತಮ್ಮ ಎಂದಿನ ಶೈಲಿಯ ಡೈಲಾಗ್‌ಗಳನ್ನು ಹೇಳುವ ಜಗ್ಗೇಶ್, ಕೆಲವೇ ನಿಮಿಷಗಳಲ್ಲಿ ಬೇರೆಯ ಜಗ್ಗೇಶ್ ಆಗುತ್ತಾರೆ. ಆಗ ಅವರ ಮಾತು ಕಮ್ಮಿ ಆಗುತ್ತದೆ, ಇನ್ನಷ್ಟು ಆಪ್ತವಾಗುತ್ತಾರೆ! ತನ್ನವರು ಎನ್ನುವ ಎಲ್ಲರನ್ನೂ ಇಷ್ಟಪಟ್ಟೂ, ಯಾರನ್ನೂ ಪಡೆಯಲಾಗದ ವ್ಯಕ್ತಿಯಂತೆ ಅಥವಾ ಪಡೆಯುವ ಹಪಾಹಪಿ ಇಲ್ಲದ ವ್ಯಕ್ತಿಯಂತೆ ಕಾಣಿಸತೊಡುತ್ತಾರೆ! ಹಾಗೆ ಕಾಣಿಸುವ ಮೂಲಕ, ವೀಕ್ಷಕನ ಮನಸ್ಸಿನಲ್ಲಿ ಜಾಗ ಪಡೆದುಕೊಳ್ಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು