ಭಾನುವಾರ, ಆಗಸ್ಟ್ 1, 2021
27 °C

ಮೊದಲು ಔಷಧ: ನಂತರ ಶೂಟಿಂಗ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಸಿನಿಮಾರಂಗದಲ್ಲಿನ ಸಹಾಯಕರ ಬದುಕಿನಲ್ಲಿ ಗಾಢ ಕತ್ತಲು ಆವರಿಸಿದೆ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕಲಾ ನಿರ್ದೇಶಕ ಲೋಕಿ ಪ್ರಕರಣ ಇದಕ್ಕೆ ತಾಜಾ ನಿದರ್ಶನ.ಸಿನಿಮಾ ಚಟುವಟಿಕೆ ನಡೆಯುತ್ತಿದ್ದಾಗಲೇ ವೇತನ ಸಿಗುತ್ತಿದ್ದುದು ಅಷ್ಟಕ್ಕಷ್ಟೇ. ಇನ್ನು ಈಗ ಪರಿಸ್ಥಿತಿ ಹೇಳತೀರದು. ಸಹಾಯಕರಿಗೆ, ತಂತ್ರಜ್ಞರಿಗೆ, ಕಿರಿಯ ಕಲಾವಿದರಿಗೆ ಹಾಗೂ ಕಾರ್ಮಿಕರಿಗೆ ಸಹಾಯ ಮಾಡಲು ಭಗವಂತನೇ ಇಳಿದುಬರಬೇಕೇನೋ..? ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಿನಿಮಾರಂಗದವರ ಮೊರೆ ಕೇಳಿಸಲಿ ’– ರಾಜನಿಧಿ, ಸಹ ನಿರ್ದೇಶಕ, ಕನ್ನಡ ಚಿತ್ರರಂಗ.

‘ಕೋವಿಡ್‌ 19 ವೈರಸ್‌ ಸೋಂಕಿಗೆ ಔಷಧ ಬರುವವರೆಗೂ ನಾವು ಸಿನಿಮಾ ಶೂಟಿಂಗ್‌ಗೆ ಬರುವುದಿಲ್ಲ’. –ಇದು ಸ್ಯಾಂಡಲ್‌ವುಡ್‌ನ ಬಹಳಷ್ಟು ನಟ– ನಟಿಯರು ತೆಗೆದುಕೊಂಡಿರುವ ನಿಲುವು. ಈಗ ದಿನದಿನಕ್ಕೂ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದಕ್ಕೆ ಚಿತ್ರರಂಗವೂ ಬೆಚ್ಚಿಬಿದ್ದಿದೆ. ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡು ಸಿನಿಮಾ ಶೂಟಿಂಗ್‌ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದರೂ ಚಿತ್ರ ನಿರ್ಮಾಣ ಸಂಸ್ಥೆಗಳು ಚಿತ್ರೀಕರಣ ಆರಂಭಿಸಲು ಧೈರ್ಯ ತೋರುತ್ತಿಲ್ಲ. ನಿರ್ಮಾಪಕರು ಮತ್ತು ನಿರ್ದೇಶಕರ ಸ್ಥಿತಿ ‘ನುಂಗುವಂತಿಲ್ಲ, ಉಗುಳುವಂತಿಲ್ಲ’ ಎನ್ನುವುದು ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಮಾತು.

ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ ಬೆನ್ನಲ್ಲೇ ಸಿನಿಮಾ ನಿರ್ಮಾಣಕ್ಕೂ ಷರತ್ತು ಬದ್ಧ ಅನುಮತಿಯನ್ನು ರಾಜ್ಯ ಸರ್ಕಾರ ನೀಡಿತ್ತು. ಸರ್ಕಾರದ ಗೈಡ್‌ಲೈನ್ಸ್‌‌ ಪ್ರಕಾರವೇ ಶೂಟಿಂಗ್‌ ನಡೆಸಬೇಕು ಎನ್ನುವ ಷರತ್ತು ವಿಧಿಸಿತ್ತು. ಅರ್ಧಕ್ಕೆ ನಿಂತಿದ್ದ ಸಿನಿಮಾಗಳ ಚಿತ್ರೀಕರಣ ಮತ್ತು ಹೊಸ ಸಿನಿಮಾಗಳ ಚಿತ್ರೀಕರಣ ಇನ್ನೇನು ಆರಂಭವಾಗಲಿದೆ ಎನ್ನುವ ನಿರೀಕ್ಷೆ ಚಿತ್ರೋದ್ಯಮದಲ್ಲಿ ಗರಿಗೆದರಿತ್ತು. ಆದರೆ, ಬೆಂಗಳೂರು ಸೇರಿ ರಾಜ್ಯದಾದ್ಯಂತ ದಿನದಿನಕ್ಕೂ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಚಿತ್ರೋದ್ಯಮದ ಚಟುವಟಿಕೆಗಳಿಗೆ ತಡೆಯೊಡ್ಡಿದೆ. ಸಿನಿಮಾಗಳ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಬಾಗಿಲು ತೆರೆದಿದ್ದ ಚಿತ್ರ ನಿರ್ಮಾಣ ಸಂಸ್ಥೆಗಳೂ ಒಂದೊಂದೆ ಮತ್ತೆ ಬಾಗಿಲು ಹಾಕಲು ಶುರು ಮಾಡಿವೆಯಂತೆ. ‘ಗಾಳಿಪಟ 2’ ಚಿತ್ರದ ಬಾಕಿ ಕೆಲಸಗಳನ್ನು ಆರಂಭಿಸಲು ಕಚೇರಿ ತೆರೆದಿದ್ದ ‘ಯೋಗರಾಜ್‌ ಸಿನಿಮಾಸ್‌’ ನಿರ್ಮಾಣ ಸಂಸ್ಥೆಯು ಮುನ್ನೆಚ್ಚರಿಕೆ ಕ್ರಮವಾಗಿ ಪುನಾ ಬಾಗಿಲು ಹಾಕಿದೆ ಎನ್ನುತ್ತವೆ ಚಿತ್ರತಂಡದ ಮೂಲಗಳು.

‘ನಟ, ನಟಿಯರನ್ನು ಶೂಟಿಂಗ್‌ಗೆ ಕರೆದರೆ ‘ಸದ್ಯಕ್ಕೆ ಬೇಡ, ಕೊರೊನಾ ವೈರಸ್‌ ಮೊದಲು ನಿಯಂತ್ರಣಕ್ಕೆ ಬರಲಿ. ಈ ಕಾಯಿಲೆಗೆ ಔಷಧ ಬರುವವರೆಗೂ ನಮ್ಮನ್ನು ನಾವು ರಿಸ್ಕ್‌ಗೆ ಒಡ್ಡಿಕೊಳ್ಳುವುದು ಬೇಡ. ನಮಗೂ ಕುಟುಂಬಗಳಿವೆ ಮತ್ತು ನಮ್ಮನ್ನು ನಂಬಿಕೊಂಡವರು ಇದ್ದಾರೆ. ಇನ್ನು ಕೆಲ ನಟರು ಮೊದಲು ಥಿಯೇಟರ್‌ ಬಾಗಿಲು ತೆರೆಯಲಿ, ಆನಂತರ ಶೂಟಿಂಗ್‌ ಶುರು ಮಾಡೋಣ. ಪ್ರಧಾನಿಯೇ ‘ಜೀವ ಇದ್ದರೆ ಜಗತ್ತು’ ಎನ್ನುವ ಎಚ್ಚರಿಕೆಯ ಮಾತು ಹೇಳಿದ್ದಾರೆ. ಈಗ ಜೀವ ಉಳಿಸಿಕೊಳ್ಳುವತ್ತ ಮಾತ್ರ ನಮ್ಮ ಗಮನ’ ಎನ್ನುತ್ತಿದ್ದಾರೆ. ಸರ್ಕಾರ ಅನುಮತಿ ನೀಡಿದ್ದರೂ ಚಿತ್ರೋದ್ಯಮದ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಸದ್ಯಕ್ಕೆ ಶುರುವಾಗುವ ಲಕ್ಷಣಗಳಿಲ್ಲ’ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಚಿತ್ರ ನಿರ್ದೇಶಕರೊಬ್ಬರು.

ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತಗೊಂಡು ಸುಮಾರು ಮೂರೂವರೆ ತಿಂಗಳಾಗುತ್ತಾ ಬಂದಿದೆ. ಹಣ ಸಂಪಾದಿಸಿದ ನಿರ್ಮಾಪಕರು, ನಿರ್ದೇಶಕರು ಹಾಗೂ ನಟ, ನಟಿಯರು ಹಾಗೂ ತಂತ್ರಜ್ಞರು ಹೇಗೋ ಪರಿಸ್ಥಿತಿ ನಿಭಾಯಿಸುತ್ತಾರೆ. ಆದರೆ, ದಿನದ ಗಳಿಕೆಯನ್ನೇ ನಂಬಿಕೊಂಡು ಚಿತ್ರೋದ್ಯಮದಲ್ಲಿ ಜೀವನ ಸಾಗಿಸುತ್ತಿದ್ದವರ ಪಾಡು ಹೇಳತೀರದಾಗಿದೆ. ಒಂದೊಂದು ಸಿನಿಮಾ ನಿರ್ದೇಶನ, ಛಾಯಾಗ್ರಹಣ, ಸಂಕಲನ, ಸಾಹಸ, ನೃತ್ಯ, ಲೈಟ್ಸ್‌, ಮೇಕಪ್‌ ಹೀಗೆ ಒಂದೊಂದು ವಿಭಾಗದಲ್ಲಿ ಕನಿಷ್ಠ ಏಳೆಂಟು ಮಂದಿ ಸಹಾಯಕರು ಕೆಲಸ ಮಾಡುತ್ತಿದ್ದರು. ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಇಂಥವರ ಸಂಖ್ಯೆಯೇ ಮೂರ್ನಾಲ್ಕು ಸಾವಿರ ದಾಟುತ್ತದೆ. ಇವರಿಗೆಲ್ಲ ಆರಂಭದ ಒಂದೆರಡು ತಿಂಗಳು ಉದಾರಿಗಳಿಂದ ಆಹಾರ ಕಿಟ್‌, ಒಂದಿಷ್ಟು ನಗದು ತಕ್ಷಣದ ನೆರವಿನಂತೆ ಸಿಕ್ಕಿತು. ಈಗ ಎರಡು ತಿಂಗಳಿನಿಂದ ಈಚೆಗೆ ಯಾವ ದಿಕ್ಕಿನಿಂದಲೂ ನೆರವು ಸಿಗುತ್ತಿಲ್ಲ. ದುಡಿದು ಜೀವನ ಸಾಗಿಸಲು ಸಿನಿಮಾಗಳು ಆರಂಭವಾಗುತ್ತಿಲ್ಲ ಎನ್ನುವುದು ಸಿನಿಮಾ ರಂಗದ ಕಾರ್ಮಿಕರು ಮತ್ತು ಸಹಾಯಕರ ಅಳಲು.

ಕೆಲಸಕ್ಕೂ ಕುತ್ತು: ಇನ್ನು ಕಿರುತೆರೆಯಲ್ಲಿ ಧಾರಾವಾಹಿಗಳ ಶೂಟಿಂಗ್ ಶುರುವಾಗಿದ್ದರೂ ‘ಕ್ರೌಡ್‌ ಕಟಿಂಗ್‌, ಕಾಸ್ಟ್‌ ಕಟಿಂಗ್‌’ ನೆಪದಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಸಂಖ್ಯೆಯನ್ನು ಶೇ 50ರಷ್ಟು ಕಡಿಮೆ ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ಸದ್ಯ ಶೇ 95ರಷ್ಟು ಮಂದಿ ಈಗ ಖಾಲಿ ಕುಳಿತಿದ್ದಾರೆ. ಚಿತ್ರೋದ್ಯಮ ಚಟುವಟಿಕೆ ಆರಂಭವಾದರೂ ಶೇ 60ರಷ್ಟು ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಸದ್ಯಕ್ಕೆ ಶೂಟಿಂಗ್‌ ಶುರುವಾಗದಿದ್ದರೆ ಶೇ 99ರಷ್ಟು ಮಂದಿಯೂ ಖಾಲಿ ಕುಳಿತುಕೊಳ್ಳಬೇಕಾಗುತ್ತದೆ ಎನ್ನುವ ಮಾತು ಸಿನಿರಂಗದವರಿಂದಲೂ ಕೇಳಿಬರುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು