ಸೋಮವಾರ, ಮಾರ್ಚ್ 30, 2020
19 °C

ಮೇಲ್ಪಂಕ್ತಿ ಹಾಕಿದ ರಾಜರತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಪುನೀತ್‌ ರಾಜ್‌ಕುಮಾರ್‌ಗೆ ಇಂದು (ಮಾ.17) ಹುಟ್ಟುಹಬ್ಬದ ಸಂಭ್ರಮ. 1975ರ ಮಾರ್ಚ್‌ 17ರಂದು ಜನಿಸಿದ ಅವರು 45ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

ಮಾರಕ ಕೊರೊನಾ ಆತಂಕ ಇಡೀ ವಿಶ್ವವನ್ನು ಆವರಿಸಿರುವುದರಿಂದ ಅವರು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಜನರು ಒಂದೆಡೆ ಗುಂಪು ಸೇರಬಾರದು, ಸಾರ್ವಜನಿಕ ಆರೋಗ್ಯದ ಹಿತ ಕಾಪಾಡಬೇಕೆನ್ನುವ ಕಾಳಜಿಯಿಂದ ಜನ್ಮದಿನದ ಆಚರಣೆಗೆ ಬ್ರೇಕ್‌ ಹಾಕಿಕೊಂಡು, ಉಳಿದವರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

‘ಜನ್ಮದಿನಕ್ಕೆ ಶುಭ ಹರಸಲು ಮನೆ ಬಳಿ ಯಾರೂ ಬರಬೇಡಿ, ಆ ದಿನ ನಾನು ಮನೆಯಲ್ಲೂ ಇರುವುದಿಲ್ಲ. ನೀವು ಮುನ್ನೆಚ್ಚರಿಕೆವಹಿಸಿ ಸುರಕ್ಷಿತವಾಗಿರುವುದೇ ನನಗೆ ಕೊಡುವ ಒಂದು ದೊಡ್ಡ ಉಡುಗೊರೆ’ ಎಂದು ಭಾವಿಸಿರುವುದಾಗಿ ಅವರು ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿದ್ದಾರೆ.

ಜತೆಗೆ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ‘ಸಮಸ್ತ ಅಭಿಮಾನಿಗಳಿಗೆ ನಮಸ್ಕಾರ, ಈ ವರ್ಷ ನಾನು ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹಾಗಾಗಿ ಯಾರೂ ತಮ್ಮ ಊರುಗಳಿಂದ ಶುಭಾಶಯ ಹೇಳಲು ಮನೆ ಹತ್ತಿರ ಬರಬೇಡಿ. ನಾನು ಆ ದಿನ ಮನೆಯಲ್ಲೂ ಇರುವುದಿಲ್ಲ. ಏಕೆಂದರೆ ಇಡೀ ವಿಶ್ವ ಎದುರಿಸುತ್ತಿರುವ ಸಮಸ್ಯೆಗೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವೆಲ್ಲರೂ ಸೇರಿ ಕೈಜೋಡಿಸಬೇಕು. ಬೇರೆ ಬೇರೆ ಊರುಗಳಿಂದ ಬಂದು ನನಗೆ ಪ್ರೀತಿ ವಿಶ್ವಾಸ ತೋರಿಸುತ್ತಿದ್ದೀರಿ. ಆ ಪ್ರೀತಿ, ವಿಶ್ವಾಸ ಯಾವಾಗಲೂ ನನ್ನ ಮೇಲೆ ಇದ್ದೇ ಇರುತ್ತದೆ ಎಂದು ಭಾವಿಸಿರುತ್ತೇನೆ. ಹುಷಾರಾಗಿರಿ, ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಕೋರಿದ್ದಾರೆ.

‘ಯಾವೊಬ್ಬ ಅಭಿಮಾನಿಗಳು ಮನೆ ಬಳಿ ಬಂದು ನಿರಾಸೆ ಅನುಭವಿಸುವುದು ಬೇಡ. ಪುನೀತ್‌ ಮನೆಯಲ್ಲಿ ಇರುವುದಿಲ್ಲವೆಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳು ತಮ್ಮೆಲ್ಲರ ಆರೋಗ್ಯದ ಸುರಕ್ಷತೆಯ ಕಡೆಗೆ ಗಮನ ಕೊಟ್ಟರೆ ಅಷ್ಟೇಸಾಕು’ ಎಂದು ಅವರ ಆಪ್ತರು ‘ಪ್ರಜಾಪ್ಲಸ್‌’ಗೆ ತಿಳಿಸಿದರು.

ಶುಭಾಶಯಗಳ ಸುರಿಮಳೆ

‘ಬೆಟ್ಟದ ಹೂವು’ ಚಿತ್ರದಲ್ಲಿ ಬಾಲನಟನಾಗಿ ಮತ್ತು ‘ಅರಸು’, ‘ಹುಡುಗರು’, ‘ರಣವಿಕ್ರಮ’, ‘ರಾಜಕುಮಾರ’ ಚಿತ್ರಗಳಲ್ಲಿ ಅತ್ಯುತ್ತಮ ನಟ, ಫಿಲ್ಮ್‌ಫೇರ್‌ ಪ್ರಶಸ್ತಿಗಳನ್ನು ಪಡೆದಿರುವ ಪುನೀತ್‌ಗೆ ಸಾಮಾಜಿಕ ಜಾಲತಾಣದಲ್ಲೂ ಜನ್ಮದಿನ ಶುಭಕಾಮನೆಗಳ ಸುರಿಮಳೆಯೇ ಹರಿದುಬಂದಿದೆ. ಚಿತ್ರರಂಗದ ದಿಗ್ಗಜರು, ನಟ–ನಟಿಯರು, ರಾಜಕೀಯ ಮುಖಂಡರು ಹಾಗೂ ಪುನೀತ್‌ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸಿದ್ದಾರೆ.

ಟೀಸರ್‌ ಬಿಡುಗಡೆ 

ಪುನೀತ್‌ ನಟಿಸುತ್ತಿರುವ ‘ಯುವರತ್ನ’ ಚಿತ್ರದ ಪವರ್‌ಫುಲ್‌ ಡೈಲಾಗ್‌ನ ಟೀಸರ್‌ವೊಂದನ್ನು ಚಿತ್ರತಂಡವು  ಪುನೀತ್‌ ಜನ್ಮದಿನದ ಉಡುಗೊರೆಯಾಗಿ ಹೊಂಬಾಳೆ ಪ್ರೊಡಕ್ಷನ್‌ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ. ‘ಜೇಮ್ಸ್‌’ನ ಮೋಷನ್‌ ಪೋಸ್ಟರ್‌ವೊಂದನ್ನು ಆ ಚಿತ್ರತಂಡ ಪುನೀತ್‌ ಜನ್ಮದಿನವೇ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುತ್ತಿದೆ. 

ನವರಸ ನಾಯಕನಿಗೂ ಜನ್ಮದಿನದ ಸಂಭ್ರಮ 

ನವರಸ ನಾಯಕ ಜಗ್ಗೇಶ್‌ಗೂ ಮಾ.17 ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬ ಅದ್ದೂರಿ ಆಚರಣೆಗೆ ಬ್ರೇಕ್‌ ಹಾಕಿರುವ ಅವರು ಪ್ರತಿವರ್ಷದಂತೆ ಮಂತ್ರಾಲಯದ ರಾಯರ ಬೃಂದಾವನ ದರ್ಶನಕ್ಕೆ ಸ್ನೇಹಿತರ ಜತೆಗೆ ಹೊರಟಿದ್ದಾರೆ.

57ನೇ ವಸಂತಕ್ಕೆ ಕಾಲಿಡುತ್ತಿರುವ ಕಾಮಿಡಿ ಕಿಂಗ್‌ ಜಗ್ಗೇಶ್‌ ‘ಅಪ್ಪ ಕಾಲವಾದ ಬಳಿಕ ನನ್ನ ಪ್ರತಿವರ್ಷದ ಹುಟ್ಟುಹಬ್ಬದ ಆಚರಣೆ ರಾಯರ ಬೃಂದಾವನದ ಮುಂದೆ ನಡೆಸುತ್ತೇನೆ. ನನ್ನ ಯುವ ಮಿತ್ರರ ಜೊತೆಗೆ ಮಂತ್ರಾಲಯಕ್ಕೆ ಪ್ರಯಾಣ ಹೊರಟಿದ್ದೇನೆ. ನಿಮ್ಮ ಶುಭಹಾರೈಕೆ ನನ್ನ ಮೇಲಿರಲಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು