ಶುಕ್ರವಾರ, ಮಾರ್ಚ್ 5, 2021
29 °C

ನಿರ್ದೇಶಕರ ವಿರುದ್ಧ ರಾಧಿಕಾ ಆಪ್ಟೆ ಗರಂ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರರಂಗ ಎಂಬುದು ಗ್ಲಾಮರ್‌ ಜಗತ್ತು. ನಟ, ನಟಿಯರು ಆಡುವ ಮಾತುಗಳು ಕೆಲವರಿಗೆ ಪ್ರೇರಣೆಯಾದರೆ; ಮತ್ತೊಂದೆಡೆ ವಿವಾದಕ್ಕೂ ಮುನ್ನುಡಿ ಬರೆಯುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ಗಳ ಅಭಿಮಾನಿಗಳು ವಾಕ್ಸಮರಕ್ಕೆ ಇಳಿಯುವ ಸಾಧ್ಯತೆಯೂ ಹೆಚ್ಚು. ಈ ‘ಸ್ಟಾರ್‌ ವಾರ್’ ಕಲಾವಿದರ ವೃತ್ತಿಬದುಕಿನ ಅಂತ್ಯದವರೆಗೆ ಉಳಿದರೂ ಅಚ್ಚರಿಪಡಬೇಕಿಲ್ಲ.

ರಾಧಿಕಾ ಆಪ್ಟೆ ಬಾಲಿವುಡ್‌ನ ಪ್ರತಿಭಾನ್ವಿತ ನಟಿ. ‘ಪಾರ್ಚ್ಡ್’, ‘ಬದ್ಲಾಪುರ್’ ಮತ್ತು ‘ಅಂಧಾದುನ್’ ಸಿನಿಮಾಗಳಲ್ಲಿನ ಆಕೆಯ ನಟನೆಯನ್ನು ಮೆಚ್ಚದವರು ವಿರಳ. ‘ಕಬಾಲಿ’ ಚಿತ್ರದ ಮೂಲಕ ‘ಸೂಪರ್‌ ಸ್ಟಾರ್’ ರಜನಿಕಾಂತ್‌ ಜೊತೆಗೂ ತೆರೆ ಹಂಚಿಕೊಂಡಿದ್ದು ಆಕೆಯ ಹಿರಿಮೆ. ಆದರೆ, ಆಕೆಗೂ ಮತ್ತು ವಿವಾದಗಳಿಗೂ ಬಿಡಿಸಲಾಗದ ನಂಟು. ತಾನು ಆಡುವ ಮಾತುಗಳಿಂದ ಆಕೆ ಆಗಾಗ್ಗೆ ವಿವಾದದ ಸುಳಿಗೆ ಸಿಲುಕುವುದು ಉಂಟು. ಈಗ ರಾಧಿಕಾ ಆಪ್ಟೆ ದಕ್ಷಿಣ ಭಾರತ ಚಿತ್ರರಂಗದಲ್ಲಿನ ಲಿಂಗ ತಾರತಮ್ಯದ ಬಗ್ಗೆ ಬಹಿರಂಗವಾಗಿ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

‘ಎ’ ಗ್ರೇಡ್‌ ಕಂಟೆಂಟ್ ಇರುವ ಸಿನಿಮಾಗಳಿಗೆಯೇ ನಿರ್ದೇಶಕರು ನನಗೆ ಆಫರ್‌ ನೀಡುತ್ತಾರೆ ಎಂಬುದು ಅವರ ಆರೋಪ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಆಕೆ, ‘ಸಿನಿಮಾದ ಸ್ಕ್ರಿಪ್ಟ್‌ ಬೇಡಿದರಷ್ಟೇ ನಾನು ಮಾದಕ ದೃಶ್ಯಗಳಲ್ಲಿ ನಟಿಸುತ್ತೇನೆ’ ಎಂದಿದ್ದಾರೆ.

‘ಎಲ್ಲಾ ಸಿನಿಮಾಗಳ ಶೂಟಿಂಗ್‌ ವೇಳೆ ಲಿಂಗ ತಾರತಮ್ಯ ಮಾಡಲಾಗುತ್ತದೆ ಎಂದು ನಾನು ಹೇಳಲಾರೆ. ಆದರೆ, ನಾನು ನಟಿಸಿರುವ ಸಿನಿಮಾಗಳಲ್ಲಿ ನನಗೆ ಅಂತಹ ಅನುಭವವಾಗಿರುವುದು ದಿಟ. ಹೀರೊಗಳೇ ಪವರ್‌ಫುಲ್‌ ಆಗಿರುತ್ತಾರೆ. ಶೂಟಿಂಗ್‌ ಆರಂಭವಾಗುವುದಕ್ಕೂ ಎರಡು ಗಂಟೆ ಮೊದಲೇ ನಟಿಯರನ್ನು ಸೆಟ್‌ಗೆ ಕರೆಸುತ್ತಾರೆ. ಹೀರೊ ಬರುವವರೆಗೂ ಕಾಯಿಸುತ್ತಾರೆ. ನಟಿಯರೊಟ್ಟಿಗೆ ನಡೆದುಕೊಳ್ಳುವ ವಿಧಾನದಲ್ಲೇ ಸಾಕಷ್ಟು ವ್ಯತ್ಯಾಸ ಇರುತ್ತದೆ’ ಎಂದು ನೋವು ತೋಡಿಕೊಂಡಿದ್ದಾರೆ.

ರಾಧಿಕಾ ಆಪ್ಟೆ ಚಿತ್ರರಂಗ ಪ್ರವೇಶಿಸಿದ ಆರಂಭದ ದಿನಗಳು ಕಠಿಣವಾಗಿದ್ದವಂತೆ. ಬಣ್ಣದಲೋಕದಲ್ಲಿ ಕೆಲಸ ಮಾಡಲು ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂದಿದ್ದಾರೆ. ಅಂದಹಾಗೆ ಆಕೆ ಇತ್ತೀಚೆಗೆ ತನ್ನದೇ ಆದ ಫ್ಯಾಷನ್‌ ಬ್ರಾಂಡ್‌ಗೆ ಚಾಲನೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು