ರಗಡ್ ರಾಗಿಣಿ ಕನಸು, ಕಥನ...

7

ರಗಡ್ ರಾಗಿಣಿ ಕನಸು, ಕಥನ...

Published:
Updated:
Deccan Herald

ನಟಿ ರಾಗಿಣಿ ದ್ವಿವೇದಿಗೆ ಹುಬ್ಬಳ್ಳಿ ಜನರ ಮಾತು, ಅವರ ಪ್ರೀತಿ ಮತ್ತು ಅವರ ಕೈಯಲ್ಲಿ ತಯಾರಾದ ರೊಟ್ಟಿ, ಚಟ್ನಿ, ಧಾರವಾಡ ಪೇಢಾ, ಸಕತ್ ಖಾರ ಇರೋ ಊಟ, ಒಟ್ಟಾಗಿ ಹೇಳಬೇಕಂದ್ರೆ ಪಕ್ಕಾ ಉತ್ತರ ಕರ್ನಾಟಕದ ಆಹಾರ ತುಂಬಾ ಇಷ್ಟವಂತೆ.

ರಾಗಿಣಿಗೆ ಕನಸಿನ ಪಾತ್ರ ಅಂತ ಯಾವುದೂ ಇಲ್ಲ ಎನ್ನುವುದು ಅಚ್ಚರಿಯ ವಿಷಯ. ಕಥೆ ತಮಗೆ ಒಪ್ಪುವಂತಾದರೆ ಸಾಕು, ನಟನೆಯನ್ನು ನಾನು ಆಸ್ವಾದಿಸುತ್ತೇನೆ ಎನ್ನುವ ರಾಗಿಣಿಗೆ ಯಾವುದಾದರೂ ಒಂದು ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ಅಭಿನಯಿಸುವ ಆಸೆಯಂತೆ. ಜೊತೆಗೆ ಅವಕಾಶ ಸಿಕ್ಕರೆ ಆಟ, ಓಟ ಪ್ರಧಾನವಾಗಿರುವ ಚಿತ್ರ ಮಾಡುವಾಸೆ. ಉತ್ತರ ಕರ್ನಾಟಕ ಭಾಷೆಯಲ್ಲಿ ಒಂದು ಪಿರಿಯಾಡಿಕ್ ಸಿನಿಮಾಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರಾಗಿಣಿಗೆ ಫಿಟ್‌ನೆಸ್ ಮತ್ತು ಆರೋಗ್ಯಕ್ಕೆ ಒತ್ತು ಕೊಡುವುದು ನಿಜ.

ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವುದರ ಜೊತೆ ಟ್ರಾವೆಲ್ ಮಾಡುವುದು ಅವರ ಹವ್ಯಾಸ. ‘ಬಿಯಿಂಗ್ ಕಂಫರ್ಟೆಬಲ್, ಬಿಯಿಂಗ್ ಸಿಂಪಲ್’ ಎನ್ನುವುದು ರಾಗಿಣಿಯವರ ಫ್ಯಾಷನ್ ಸ್ಟೇಟ್‌ಮೆಂಟ್.

‘ನಾವು ಯಾವಾಗಲೂ ಮತ್ತೊಬ್ಬರಾಗಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಮತ್ತೊಬ್ಬರನ್ನು ಅನುಕರಣೆ ಮಾಡುವುದ್ಯಾಕೆ’ ಎನ್ನುತ್ತಾರೆ ಅವರು. ಫ್ಯಾಷನ್‌ ಜಗತ್ತಿನ ಹೊಸ ಶೈಲಿಗಳಿಗೆ ತೆರೆದುಕೊಳ್ಳಲು ರಾಗಿಣಿ ಸದಾ ಸಿದ್ಧ. ಆದರೆ ಧರಿಸುವ ಉಡುಗೆ ತೊಡುಗೆ ತಮ್ಮ ಮನಸ್ಸಿಗೂ ಒಪ್ಪಿದರೆ ಮಾತ್ರ.

ಉತ್ತರ ಕರ್ನಾಟಕದ ಕಲಾವಿದರಿಗೆ ಚಂದನವನದಲ್ಲಿ ಪ್ರಾಶಸ್ತ್ಯ ಕೊಡುವುದಿಲ್ಲ ಎನ್ನುವ ಆಪಾದನೆಗೆ ರಾಗಿಣಿ ಖಡಕ್ ಆಗಿಯೇ ಉತ್ತರಿಸಿದರು. ‘ಉತ್ತರ ಕರ್ನಾಟಕದವರಿಂದನೇ ಅಲ್ವಾ ಚಂದನವನ ಬೆಳೆಯುತ್ತಿರುವುದು. ಕನ್ನಡ ಚಿತ್ರರಂಗದಲ್ಲಿ ತುಂಬಾ ಜನ ಕಲಾವಿದರು ಉತ್ತರ ಕರ್ನಾಟಕದವರಿದ್ದಾರೆ. ಉತ್ತರ ಕರ್ನಾಟಕದ ಮಹಿಳೆಯರು ನಿಜವಾದ ಗಟ್ಟಿಗಿತ್ತಿಯರು. ಇಲ್ಲಿನ ಕಲಾವಿದರಲ್ಲಿರುವ ನೇರ ನಡೆ, ನುಡಿ, ದಿಟ್ಟತನ ಮತ್ತು ಪ್ರತಿಭೆ ಬೇರೆ ಯಾವ ಭಾಗದಲ್ಲಿ ಕಾಣಿಸಿಗೊಲ್ಲ. ಆದರೆ ಅವಕಾಶಗಳು ಇಲ್ಲ ಅಂತ ಕೂತಲ್ಲಿಯೇ ಕೂತು ಹೇಳಿದರೆ ನಿಜವಾಗಿಯೂ ನಮಗೆ ಅವಕಾಶಗಳು ಸಿಗಲ್ಲ. ನಾವು ಮೈ ಕೊಡವಿಕೊಂಡು ಮೇಲೆದ್ದರೆ ಮಾತ್ರ ನಮಗೆ ಯಶಸ್ಸು ಸಿಗುವುದು. ಅದಕ್ಕಾಗಿ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮುಂದೆ ಬರಬೇಕು’ ಎನ್ನುತ್ತಾರೆ ನಮ್ಮ ರಗಡ್ ರಾಗಿಣಿ.

ಚಂದನವನಕ್ಕೆ ಹೊಸದಾಗಿ ಎಂಟ್ರಿ ಕೊಡುತ್ತಿರುವ ಯುವ ಪ್ರತಿಭೆಗಳಿಗೆ ರಾಗಿಣಿಯ ಕಿವಿ ಮಾತು ಏನು ಗೊತ್ತೇ? ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ತಾಳ್ಮೆಯಿಂದ ಮಾಡಬೇಕು. ನಿಮ್ಮ ಗುರಿಯನ್ನು ತಲುಪಲು ತುಂಬಾ ಸಮಯ ಬೇಕಾದರೂ ಪರವಾಗಿಲ್ಲ. ನಿಧಾನವಾಗಿ ಮುನ್ನುಗ್ಗಿ. ಕನಸು ಕಂಡಷ್ಟೇ ಬೇಗ ನನಸಾಗಬೇಕು ಅಂತ ಅಂದುಕೊಂಡರೆ ಯಶಸ್ಸು ಸಾಧಿಸಬಹುದು. ಆದರೆ ಆ ಯಶಸ್ಸು ಎಷ್ಟು ಬೇಗ ನಿಮ್ಮದಾಗಿತ್ತೋ, ಅಷ್ಟೇ ಬೇಗ ನಿಮ್ಮಿಂದ ದೂರವಾಗತ್ತೆ. ನಿಮ್ಮಲ್ಲಿ ನಿಜವಾಗಿ ಪ್ರತಿಭೆಯಿದ್ದರೆ ಅದು ಯಾವಾಗಲೂ ನಿಮ್ಮಿಂದ ದೂರ ಹೋಗಲ್ಲ. ನಿಮ್ಮನ್ನು ಯಶಸ್ಸಿನ ದಾರಿಯತ್ತ ಕೊಂಡೊಯ್ಯುವುದು ನಿಜ. ಅದಕ್ಕೆ ತಾಳ್ಮೆಯಿಂದಿರಬೇಕು ಎಂದು ಅನುಭವದ ಮಾತು ಹೇಳುತ್ತಾರೆ. 

ಅಂದ ಹಾಗೆ, ನಟನೆ ಹೊರತುಪಡಿಸಿದರೆ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಅವರು ಮುಂಚೂಣಿಯಲ್ಲಿರುತ್ತಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !