ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಯಾದ ರಾಘಣ್ಣ

Last Updated 5 ಜನವರಿ 2021, 11:12 IST
ಅಕ್ಷರ ಗಾತ್ರ

ಸ್ಯಾಂಡಲ್‌ವುಡ್‌ ನಟ ರಾಘವೇಂದ್ರ ರಾಜ್‌ಕುಮಾರ್‌ ಇದೇನು ರಾಜಕಾರಣಿಯಾಗಿಬಿಟ್ಟರು ಎಂದುಕೊಂಡ್ರಾ? ಹೌದು ರಾಘಣ್ಣ ಈಗ ಖಾದಿ ಧರಿಸಿದ ರಾಜಕಾರಣಿ, ಆದರೆ ನಿಜ ಜೀವನದಲ್ಲಿ ಅಲ್ಲ, ತೆರೆಯ ಮೇಲೆ. ‘ವಾರ್ಡ್ ನಂ. 11’ರಲ್ಲಿ ರಾಘಣ್ಣನದು ಪಕ್ಕಾ ರಾಜಕಾರಣಿಯ ಪಾತ್ರ. ಅದೂ ಒಳ್ಳೆಯ ರಾಜಕಾರಣಿಯಂತೆ!

ಪೊಲಿಟಿಕಲ್ ಥ್ರಿಲ್ಲರ್ ಕಥಾನಕ ಹೊಂದಿರುವ ‘ವಾರ್ಡ್ ನಂ.11’ ಚಿತ್ರಕ್ಕೆ ಯುವ ನಿರ್ದೇಶಕ ಶ್ರೀಕಾಂತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂದೀಪ್ ಶಿವಮೊಗ್ಗ ಬ್ಲೂಬೇಲ್ ಎಂಟರ್ಟೈನ್‍ಮೆಂಟ್ಸ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಎ. ಗುರುರಾಜ್ ಹಾಗೂ ಹೇಮಂತ್ ಕುಮಾರ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

ಈಗಾಗಲೇ ಶೇ 80ರಷ್ಟು ಚಿತ್ರೀಕರಣ ಮುಗಿದಿದ್ದು, ಒಂದು ಹಾಡು, ಫೈಟ್ ಹಾಗೂ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿದರೆ ಶೂಟಿಂಗ್ ಪೂರ್ಣವಾಗಲಿದೆ. ಇದೇ ಮೊದಲ ಬಾರಿಗೆ ರಾಘವೇಂದ್ರ ರಾಜ್‍ಕುಮಾರ್ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ.

ರಾಘಣ್ಣ, ಸುಮನ್ ನಗರಕರ್ ಹಾಗೂ ಕಬೀರ್ ಸಿಂಗ್ ಈ ಮೂವರ ಪಾತ್ರಗಳ ಸುತ್ತ ಸುತ್ತುವ ಕಥೆಯೇ ಈ ಚಿತ್ರದ ಪ್ರಮುಖ ಅಂಶ. ಚಿತ್ರದ ಬಹುತೇಕ ಕಥೆ ನಡೆಯುವುದು ಒಂದು ವಾರ್ಡ್‍ನಲ್ಲಿ. ಹಾಗಾಗಿ ಚಿತ್ರಕ್ಕೆ ವಾರ್ಡ್ ನಂ.11 ಎಂಬ ಶೀರ್ಷಿಕೆ ಇಡಲಾಗಿದೆ. ಆ ಏರಿಯಾದ ನಾಲ್ವರು ಸ್ನೇಹಿತರಲ್ಲಿ ಒಬ್ಬನ ಕೊಲೆಯಾಗುತ್ತದೆ. ಅದರ ಹಿಂದಿನ ಸತ್ಯ ಪತ್ತೆಹಚ್ಚಲು ಹೋದಾಗ ಒಂದಷ್ಟು ರಹಸ್ಯಗಳು ಬಹಿರಂಗ ಆಗುತ್ತವೆ. ಅದೇನೆನ್ನುವುದೇ ಚಿತ್ರದ ಕುತೂಹಲ.

ಚಿತ್ರದಲ್ಲಿ ರಾಜಕಾರಣ, ಪ್ರೀತಿ, ಸ್ನೇಹ... ಹೀಗೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳಿವೆ. ಚಿತ್ರದಲ್ಲಿ ರಾಜಕಾರಣಿಗಳ ಸಂಘರ್ಷದ ಜೊತೆಗೆ ಒಂದು ನವಿರಾದ ಪ್ರೇಮಕಥೆಯನ್ನೂ ನಿರ್ದೇಶಕರು ಹೇಳಿದ್ದಾರಂತೆ.

ಬೆಂಗಳೂರು ಸುತ್ತಮುತ್ತ 45 ದಿನಗಳ ಕಾಲ ಈ ಚಿತ್ರದ ಶೂಟಿಂಗ್ ಮಾಡಲಾಗಿದೆ. ಇನ್ನು ಹತ್ತು ದಿನಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಕಳೆದ ವರ್ಷವೇ ಆರಂಭವಾಗಿದ್ದ ಈ ಚಿತ್ರದ ಶೂಟಿಂಗ್ ಲಾಕ್‍ಡೌನ್‍ಗೂ ಮೊದಲೇ ಶೇ 30ರಷ್ಟು ಆಗಿತ್ತು.

ಹೊಸ ಪ್ರತಿಭೆ ರಕ್ಷಿ ಈ ಚಿತ್ರದಲ್ಲಿ ನಾಯಕನಾಗಿ, ನಾಯಕಿಯಾಗಿ ಮೇಘಶ್ರೀ ಬಣ್ಣ ಹಚ್ಚಿದ್ದಾರೆ. ಉಳಿದ ಪಾತ್ರಗಳಲ್ಲಿ ಅಚ್ಯುತ್‍ಕುಮಾರ್, ಪ್ರಮೋದ್ ಶೆಟ್ಟಿ, ಉಗ್ರಮ್ ಮಂಜು, ಗೋವಿಂದೇಗೌಡ(ಕಾಮಿಡಿ ಕಿಲಾಡಿಗಳು), ಪ್ರಕಾಶ್ ತುಮಿನಾಡು, ಸುಧಾ ಬೆಳವಾಡಿ ಕಾಣಿಸಿಕೊಂಡಿದ್ದಾರೆ.

ರಾಕೇಶ್ ಸಿ. ತಿಲಕ್ ಅವರ ಛಾಯಾಗ್ರಹಣ, ವಿಕ್ರಂಮೋರ್ (ಕೆಜಿಎಫ್) ಹಾಗೂ ಅರ್ಜುನ್ (ಮದಗಜ) ಅವರ ಸಾಹಸ ನಿರ್ದೇಶನ, ಹೈಟ್ ಮಂಜು ಅವರ ನೃತ್ಯ, ಸುರೇಂದ್ರನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಜಯಂತ ಕಾಯ್ಕಿಣಿ, ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯದ ಹಾಡುಗಳಿಗೆ ಅರ್ಮಾನ್ ಮಲಿಕ್, ಅನುರಾಧಾ ಭಟ್, ಮೆಹಬೂಬ್‍ಸಾಬ್, ಶಿವಂ(ವಿಕ್ರಂ ವೇದಂ) ದನಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT