ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ರಾಘಣ್ಣನ ರಾಜತಂತ್ರ

Last Updated 9 ಅಕ್ಟೋಬರ್ 2020, 5:04 IST
ಅಕ್ಷರ ಗಾತ್ರ

‘ಅಮ್ಮನ ಮನೆ’ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ವರ್ಷದ ಶ್ರೇಷ್ಠ ನಟ ಪ್ರಶಸ್ತಿ ಪಡೆದುಕೊಂಡವರು ರಾಘವೇಂದ್ರ ರಾಜ್‍ಕುಮಾರ್ ಅವರು. ಈಗ ದೇಶಾಭಿಮಾನ ಉಕ್ಕಿಸುವಂತಹ ಸದಭಿರುಚಿಯ ಚಿತ್ರ‘ರಾಜತಂತ್ರ’ದಲ್ಲಿ ಲೀಡ್‌ ರೋಲ್‌ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ ರಾಘಣ್ಣ. ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿರುವ ಕ್ಯಾಮೆರಾಮನ್‌ಪಿ.ವಿ.ಆರ್. ಸ್ವಾಮಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಟೊಪ್ಪಿಯನ್ನು ಧರಿಸುತ್ತಿದ್ದಾರೆ.

ತಮ್ಮ ಚಿತ್ರ ಬದುಕಿನಲ್ಲಿ ಈವರೆಗೆ ಕಾಣಿಸಿಕೊಳ್ಳದಿದ್ದ ಅಪರೂಪದ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ರಾಘಣ್ಣ ‘ಪ್ರಜಾಪ್ಲಸ್‌’ ಸಂದರ್ಶನದಲ್ಲಿ ಹಲವು ಕುತೂಹಲದ ಮಾಹಿತಿಗಳನ್ನು ತೆರೆದಿಟ್ಟಿದ್ದಾರೆ.

l ಈ ಸಿನಿಮಾ ಒಪ್ಪಿಕೊಂಡ ಹಿನ್ನೆಲೆ ಬಗ್ಗೆ ಹೇಳಿ..

ಪಿ.ವಿ.ಆರ್. ಸ್ವಾಮಿ ಅವರು ಈ ಹಿಂದೆ ‘ಅಮ್ಮನ ಮನೆ’ ಚಿತ್ರಕ್ಕೆ ಡಿಒಪಿಯಾಗಿ ಕೆಲಸ ಮಾಡಿದ್ದರು. 25 ದಿನಗಳು ನನ್ನೊಟ್ಟಿಗೆ ಅವರು ಕೆಲಸ ಮಾಡುವಾಗ ನಮ್ಮ ನಡುವೆ ಒಡನಾಟ ಬೆಳೆದಿತ್ತು. ಒಂದು ಒಳ್ಳೆಯ ಸಂದೇಶ ಬೀರುವ ಚಿತ್ರವನ್ನು ನನ್ನಿಂದ ಮಾಡಿಸುವ ಆಲೋಚನೆ ಅವರಲ್ಲಿಆಗಲೇ ಬಂದಿತ್ತಂತೆ. ಚಿತ್ರ ನಿರ್ದೇಶನ ಮಾಡುತ್ತಿರುವುದಾಗಿ ಅವರು, ನಮ್ಮ ಮನೆಗೆ ಬಂದು ಕಥೆ ಹೇಳಿದರು. ಒಂದೊಳ್ಳೆಯ ಕಥೆ ಸಿಕ್ಕಾಗ ನಟಿಸಲು ಸಜ್ಜಾದೆ. ದೇವರ ದಯೆ ಎನ್ನುವಂತೆ ನನಗೆ ಈಗೀಗ ಒಳ್ಳೊಳ್ಳೆಯ ಕಥೆಗಳ ಸಿನಿಮಾ ಬರುತ್ತಿವೆ. ನಟನೆಯೇ ನನ್ನ ಆರೋಗ್ಯ ಸಮಸ್ಯೆಗೆ ದಿವ್ಯೌಷಧ ಎಂದು ಭಾವಿಸಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ.

ಯಾವ ಕಾಲಘಟ್ಟದ ಕಥೆ ಇದರಲ್ಲಿರಲಿದೆ?

ಈಗಿನ ಕಾಲಘಟ್ಟದಲ್ಲಿ ನಡೆಯುವ ಯೂನಿವರ್ಸಲ್ ಕಥೆಯಿದು. ಹಾಗಂಥ ಇದು ನೈಜ ಘಟನೆಯಲ್ಲ.ಗಡಿಯಲ್ಲಿ ಹೊರಗಿನ ಶತ್ರುಗಳಿಂದ ದೇಶವನ್ನು ರಕ್ಷಿಸುತ್ತಿದ್ದ ಒಬ್ಬ ಯೋಧ ನಾಡಿಗೆ ಮರಳಿದ ಮೇಲೆ ತನ್ನ ಬುದ್ಧಿಶಕ್ತಿಯಿಂದ ಯಾವ ರೀತಿ ಸಮಾಜ ಮತ್ತು ದೇಶವನ್ನು ದುಷ್ಟರಿಂದ ರಕ್ಷಿಸುತ್ತಾನೆ ಎನ್ನುವುದು ಇದರಲ್ಲಿದೆ. ನಿವೃತ್ತಿ ಬದುಕಿನಲ್ಲೂ ಆತ ದೇಶಕ್ಕಾಗಿ ಹೇಗೆ ಸೇವೆ ಮಾಡಲಿದ್ದಾನೆ ಎನ್ನುವ ಸಂದೇಶವನ್ನು ಇದು ನೀಡಲಿದೆ.

ನಿಮ್ಮ ಪಾತ್ರ ಯಾವ ರೀತಿ ವಿಭಿನ್ನವಾಗಿರಲಿದೆ?

ನಾನು ತುಂಬಾ ಸಿನಿಮಾಗಳನ್ನು ಮಾಡಿಲ್ಲ. ಆದರೆ, ಮೊದಲ ಬಾರಿಗೆ ನಿವೃತ್ತ ಸೇನಾಧಿಕಾರಿಯ ಪಾತ್ರ ಮಾಡುತ್ತಿರುವೆ. ಪಾತ್ರವನ್ನು ತುಂಬಾ ಚೆನ್ನಾಗಿ ಕಟ್ಟಿದ್ದಾರೆ. ಈ ಪಾತ್ರದ ಹೆಸರುಕ್ಯಾಪ್ಟನ್ ರಾಜಾರಾಂ. ಇಲ್ಲಿ ಕ್ಯಾಪ್ಟನ್ ರಾಜನೂ ಹೌದು, ರಾಮನೂ ಹೌದು.ಈ ಚಿತ್ರದಲ್ಲಿ ಯಾವುದೇ ವಿವಾದಾತ್ಮಕ ಅಂಶಗಳಿಲ್ಲ, ಈ ದೇಶಕ್ಕೆ ಜವಾನ‌ (ಯೋಧ) ಮತ್ತು ಕಿಸಾನ (ರೈತ) ಇಬ್ಬರ ಸೇವೆಯೂ ಅಪಾರವಾಗಿದೆ. ಈ ಇಬ್ಬರು ಮಣ್ಣು ಸೇರುವವರೆಗೂ, ಇವರ ಸೇವೆ ನಾಡಿಗೆನಿರಂತರವಾಗಿರುತ್ತದೆ. ಇವರ ಸೇವೆ ಇದ್ದಾಗ ಈ ದೇಶ ಯಾವಾಗಲೂ ಮೇಲ್ಮಟ್ಟದಲ್ಲೇ ಇರುತ್ತದೆ ಎನ್ನುವ ಸಂದೇಶವನ್ನು ನನ್ನ ಪಾತ್ರದ ಮೂಲಕ ಹೇಳಿಸಲು ಹೊರಟಿದ್ದಾರೆ ನಿರ್ದೇಶಕರು.

ಪಾತ್ರಕ್ಕಾಗಿ ವಿಶೇಷ ತಯಾರಿ ಮಾಡಿಕೊಳ್ಳುತ್ತಿದ್ದೀರಾ?

ನಿಜಕ್ಕೂ ನನಗೆ ಸವಾಲಿನಿಂದ ಕೂಡಿರುವ ಪಾತ್ರವಿದು. ಶೂಟಿಂಗ್‌ ಶುರುವಾಗಿ ನಾಲ್ಕು ದಿನಗಳಾಗಿವೆ. ದೇಹಭಾಷೆ ಮತ್ತು ಧ್ವನಿಯನ್ನು ಪಾತ್ರಕ್ಕೆ ಒಗ್ಗಿಸಬೇಕಲ್ಲಾ, ಪಾತ್ರದ ಪರಕಾಯ ಪ್ರವೇಶಿಸಲು ಸಾಕಷ್ಟು ಪ್ರಯತ್ನಿಸುತ್ತಿರುವೆ. ನೈಜ ಫಲಿತಾಂಶ ಬರುವವರೆಗೂ ಬಿಡಬೇಡಿ, ಎಷ್ಟೇ ರೀಟೇಕ್‌ಗೂ ನಾನು ರೆಡಿ ಇದ್ದೇನೆ ಎನ್ನುವ ಮಾತನ್ನು ನಿರ್ದೇಶಕರಿಗೂ ಹೇಳಿರುವೆ. ದಿನದಿಂದ ದಿನಕ್ಕೆ ಪಾತ್ರ ನಿರ್ವಹಣೆಯು ತೃಪ್ತಿ ನೀಡುತ್ತಿದೆ.

ಎಲ್ಲೆಲ್ಲಿ ಮತ್ತು ಎಷ್ಟು ದಿನ ಚಿತ್ರೀಕರಣ ನಡೆಯಲಿದೆ?

ಬೆಂಗಳೂರು, ನೆಲಮಂಗಲ ಸುತ್ತಮುತ್ತ 20 ದಿನಗಳ ಕಾಲ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಿದ್ದಾರೆ. ಈ ವರ್ಷದಲ್ಲೇ ಚಿತ್ರವನ್ನು ಪೂರ್ಣಗೊಳಿಸಿ ಸೆನ್ಸಾರ್‌ಗೆ ಸಲ್ಲಿಸಲು ಚಿತ್ರತಂಡ ನಿರ್ಧರಿಸಿದೆ.

ಮುಂದಿನ ಚಿತ್ರದ ಬಗ್ಗೆ ಹೇಳಿ..

ಗುರುಕುಲದಲ್ಲಿ ಬೆಳೆಯುವ ಮಕ್ಕಳಲ್ಲಿ ತಿಳಿವಳಿಕೆ ಮತ್ತು ನಡವಳಿಕೆ ಹೇಗೆ ಬರುತ್ತದೆ ಮತ್ತು ಆ ಮಕ್ಕಳುಹೇಗೆ ದೇಶಕ್ಕೆ ಸಲ್ಲುವವರಾಗುತ್ತಾರೆ ಎನ್ನುವ ಸಂದೇಶ ಬೀರುವ ‘ಶ್ರೀ’ ಸಿನಿಮಾದಲ್ಲಿ ನಾಯಕನ ತಂದೆಯ ಪಾತ್ರದಲ್ಲಿ ನಟಿಸುತ್ತಿರುವೆ. ಹಾಗೆಯೇ ‘ವಾರ್ಡ್‌ ನಂ.11’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದರಲ್ಲಿ ರಾಜಕಾರಣಿಯ ಪಾತ್ರ ನನ್ನದು. ಈ ಎರಡು ಚಿತ್ರಗಳ ಒಂದಿಷ್ಟು ಚಿತ್ರೀಕರಣ ಲಾಕ್‌ಡೌನ್‌ ಕಾರಣಕ್ಕೆ ಸ್ಥಗಿತಗೊಂಡಿದೆ. ಎರಡೂ ಚಿತ್ರಗಳು ಸದ್ಯದಲ್ಲೇ ಶುರುವಾಗುವ ನಿರೀಕ್ಷೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT