ರಾಜಕುಮಾರ್: ಮಂತ್ರ ಕಣಾ ಶಕ್ತಿ ಕಣಾ

ಶುಕ್ರವಾರ, ಮೇ 24, 2019
22 °C

ರಾಜಕುಮಾರ್: ಮಂತ್ರ ಕಣಾ ಶಕ್ತಿ ಕಣಾ

Published:
Updated:

ರಾಜಧಾನಿ ಕನ್ನಡಿಗರ ಪಾಲಿಗೆ ರಾಜಕುಮಾರ್ ಮಂತ್ರ ಕಣಾ ಶಕ್ತಿ ಕಣಾ ದೇವಿ ಕಣಾ. ರಾಜ್ ನೆನಪಿಗೆ ಜನಸಾಮಾನ್ಯರ ದೈನಿಕವನ್ನು ಸಹನೀಯವಾಗಿಸುವ, ನೈತಿಕ ಶಕ್ತಿ ವರ್ಧಿಸುವ ಔಷಧಿ ಗುಣವಿದೆ. ಇಂಥ, ಚುಂಬಕದಂಥ, ರಾಜಕುಮಾರ್ ಹುಟ್ಟುಹಬ್ಬದ ದಿನವಿದು. ಈ ದಿನ, ರಾಜ್ ನೆನಪುಗಳ ಮೆರವಣಿಗೆಯ ದಿನ.

ಮೇಲುಸೇತುವೆಯ ಓರೆಕೋರೆಗಳು ಸೃಷ್ಟಿಸಿದೊಂದು ಮೂಲೆ. ಹಣ್ಣು ಹಣ್ಣಾದ ಮುದುಕಿಗೆ ಆ ಮೂಲೆಯೇ ಅಂಗಡಿ. ಅಲ್ಲಿ ಹತ್ತಾರು ಹಾಡಿನ ಪುಸ್ತಕ. ಪ್ರತಿ ಪುಸ್ತಕದ ಮುಖಪುಟದಲ್ಲೂ ನಗೆಮೊಗದ ರಾಜಕುಮಾರ್. ಅಜ್ಜಿಯನ್ನು ಮಾತನಾಡಿಸಿ; ಆಕೆಯ ಪಾಲಿಗೆ ರಾಜ್ ನಟನಷ್ಟೇ ಅ್ಲಲ- ರಾಜ್ ಅಂದರೆ ಅಣ್ಣ, ರಾಜ್ ಅಂದರೆ ಅನ್ನ. ಆ ಅಜ್ಜಿಯ ನೆನಪುಗಳಲ್ಲಿ ಎಷ್ಟೊಂದು ಸಿನಿಋತುಗಳು, `ರಾಜ'ಸಂಭ್ರಮಗಳು!

ಅಜ್ಜಿಯಂಗಡಿಯಿಂದ ಮುಂದಕ್ಕೆ ಬನ್ನಿ. ಕಾಲುರಸ್ತೆಯ ಬದಿಯಲ್ಲೊಬ್ಬ ಚಮ್ಮಾರ. ಅಂಗಿಯಿಲ್ಲ; ಹರಿದ ಷರಾಯಿಯೇ ಎಲ್ಲ! ಆತನ ತಲೆ ನುಣ್ಣಗೆ. ಅಲ್ಲಿಷ್ಟು ಇಲ್ಲಿಷ್ಟು ಕೂದಲು. ಆ ಕೂದಲು ಅಕ್ಷರರೂಪ ತಾಳಿವೆ; ಆ ಅಕ್ಷರಗಳನ್ನು ಕೂಡಿಸಿದರೆ- ರಾಜಕುಮಾರ್! ಚಮ್ಮಾರನ ಪಾಲಿಗೆ ರಾಜ್ ಕನಸುಗಳನ್ನು ಕೊಟ್ಟ ವರನಟ. ಆತನದ ದೈನಿಕದ ಜಂಜಡಗಳು ಕೊಂಚ ಸಹನೀಯ ಅನ್ನಿಸಿರುವುದು ರಾಜ್ ನೆನಪಿನಿಂದಲೇ.

ಚಮ್ಮಾರನ ಅಂಗಡಿಯಿಂದ ಇನ್ನೂ ಮುಂದಕ್ಕೆ ಬನ್ನಿ. ಅಲ್ಲೊಂದು ವೃತ್ತ. ಕೆಂಪುದೀಪಕ್ಕೆ ಓಗೊಟ್ಟು ನಿಂತ ಸಾಲು ಸಾಲು ವಾಹನಗಳು, ನೂರೆಂಟು ಧ್ವನಿಗಳು. ಹುಡುಗನೊಬ್ಬ ಕೈಯಲ್ಲಿ ಹತ್ತಾರು ವಸ್ತುಗಳ ಹಿಡಿದು ವಾಹನ ಸವಾರರ ಮುಂದೆ ಆಸೆಕಂಗಳಿಂದ ನಿಲ್ಲುತ್ತಾನೆ. ಕೀಚೈನ್, ಕನ್ನಡ ಬಾವುಟ, ಪುಟ್ಟ ಪುಟ್ಟ ಚಿತ್ರಪಟ- ಎಲ್ಲವೂ ರಾಜ್‍ಮಯ. ಆಗಲೇ ಕೇಳಿಸುತ್ತದೆ, ಇಳಿಸಿದ ಗಾಜಿನ ಕಾರಿನೊಳಗಿಂದ ಸಂಗೀತದ ಅಲೆ. `ನಾವಾಡುವ ನುಡಿಯೇ ಕನ್ನಡ ನುಡಿ'. ಹಾಡಿನ ಏರಿಳಿತಕ್ಕೆ ತಕ್ಕಂತೆ ತೂಗುತ್ತದೆ ಜೀನ್ಸ್ ಜಾಣೆಯ ಕತ್ತು. ಅಲ್ಲೇ, ವೃತ್ತದ ನಡುವಲ್ಲೇ ಒಂದು ಗಣೇಶಮಂದಿರ, ಅದರ ಬೆನ್ನಿಗೊಂದು ಮೂರ್ತಿ- ರಾಜಕುಮಾರ್!

ಹಸಿರು ಕಂಡೊಡನೆ ಉರುಳುತ್ತವೆ ನೂರು ನೂರು ಗಾಲಿಗಳು. ದಾರಿಯ್ದುದಕ್ಕೂ ಎಷ್ಟೊಂದು ಚಿತ್ರಗಳು. ರಸ್ತೆ, ಓಣಿ, ವೃತ್ತ, ಧ್ವಜಸ್ತಂಭ, ಫ್ಯಾನ್ಸಿಸ್ಟೋರ್ ಅಂಗಡಿ, ಕಣ್ಣಾಸ್ಪತ್ರೆ- ಈ ನಗರದಲ್ಲಿ ರಾಜ್ ಸರ್ವಾಂತರ್ಯಾಮಿ.

ಗಾಂಧಿ ಪ್ರತಿಮೆಯ ಎದುರು ಒಂದು ಸಮೂಹ. ಒಡಲಲ್ಲಿ ಉರಿ. ಕಣ್ಣಲ್ಲಿ ಕಿಡಿ. ಹಕ್ಕೊತ್ತಾಯದ ಘೋಷಣೆಗಳು. ಗಾಳಿ ಲಯಕ್ಕೆ ಓಲಾಡುತ್ತದೆ ಕನ್ನಡ ಧ್ವಜ. ಅಲ್ಲೂ ರಾಜ್ ಎನ್ನುವ ನೈತಿಕ ಶಕ್ತಿ.

ಈ ನೆಲದ ಹಂಗೇ ಬೇಡ ಎನ್ನುವಂತೆ ಲಕಲಕಿಸುತ್ತಿದೆ ನೋಡಿ ಬಹುದೇಸಿ ಕಂಪನಿಯೊಂದರ ಕಟ್ಟಡ. ಮಯ ನಿರ್ಮಿತ ಮಹಲಿನಂಥ, ಗಾಜನ್ನೇ ಹೊದ್ದ ಆ ಕಟ್ಟಡದ ನಟ್ಟ ನಡುವೆ ಸಿಂಧೂರದಂತೆ ಲಕಲಕಿಸುತ್ತಿದೆ ಒಂದು ಚಿತ್ರಪಟ. ಅದು ರಾಜಕುಮಾರ್!

***
ರಾಜಕುಮಾರ್ ಎಂದರೆ ಏನು? ವಿಶ್ಲೇಷಣೆ ಮಾತಿಗೆ, ಪದಗಳಿಗೆ ಸಿಕ್ಕುವಂತಹದ್ದಲ್ಲ. ಬೆಂಗಳೂರಿನ ರಾಜಬೀದಿಗಳಲ್ಲಿ, ಇಡಿಕಿರಿದ ಓಣಿಗಳಲ್ಲಿ, ಕೊಳಗೇರಿಗಳಲ್ಲಿ ಓಡಾಡಿದರೆ ರಾಜಕುಮಾರ್ ದರ್ಶನವಾಗುತ್ತದೆ. ಅನ್ನದ ರೀತಿಯಲ್ಲಿ, ಅಣ್ಣನ ರೂಪದಲ್ಲಿ, ರಕ್ಷಣೆಯ ಪೊಲೀಸ್ ವೇಷದಲ್ಲಿ, ಜೀವನೋತ್ಸಾಹದ ಔಷಧಿಯಾಗಿ, ನುಡಿಯ ಆತ್ಮವಿಶ್ವಾಸವಾಗಿ- ರಾಜ್ ಬಹುರೂಪಿ.

ರಾಜ್ ಇಲ್ಲ ಎನ್ನುವುದು ತರ್ಕ. ರಾಜ್ ಇದ್ದಾರೆ ಎನ್ನುವುದು ಭಾವುಕತೆ. ತರ್ಕ ಹಾಗೂ ಭಾವುಕತೆಯ ದ್ವಂದ್ವಗಳ ಅಡಿಗಟ್ಟಿನ ಈ ನಗರವೆಂಬ ಸಾಗರ ಇದೆಯಲ್ಲ, ಇದರ ಬಾಹ್ಯ ಪೋಷಾಕಿನಲ್ಲಿ ರಾಜ್ ಅಲೆ ಅಲೆ ಅಲೆ. ಇಲ್ಲಿನ ಲಕ್ಷಲಕ್ಷ ಬದುಕುಗಳಲ್ಲಿ ರಾಜ್ ಚೈತನ್ಯದ ನೊರೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !