ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ರಥಬೀದಿಯಲ್ಲಿ ಕಾಲಚಕ್ರದ ಉರುಳು

Last Updated 24 ಏಪ್ರಿಲ್ 2019, 9:04 IST
ಅಕ್ಷರ ಗಾತ್ರ

ಅರವತ್ತರ ದಶಕದ ಬೆಂಗಳೂರು ಎದುರಿಸುತ್ತಿದ್ದ ಕನ್ನಡಿಗರ ಅಸ್ಮಿತೆಯ ಪ್ರಶ್ನೆ ಹಾಗೂ ಕನ್ನಡ ಸಿನಿಮಾದ ಸಂಕಷ್ಟಗಳು ಹೊಸ ರೂಪದಲ್ಲಿ ಮರುಕಳಿಸಿದಂತಿವೆ. ಆಗ ಅನಕೃ, ರಾಮಮೂರ್ತಿ, ರಾಜಕುಮಾರರ ನೇತೃತ್ವದ್ಲಲಿ ಸಂಚರಿಸಿದ ಕನ್ನಡದ ರಥ ರಾಜಧಾನಿಯಲ್ಲಿ ಕನ್ನಡ ಪ್ರಜ್ಞೆಯನ್ನು ಜೀವಗೊಳಿಸುವ ಪ್ರಯತ್ನ ನಡೆಸಿತು. ಆದರೀಗ, ತೇರು ಎಳೆಯುವವರೇ ಕಾಣಿಸುತ್ತಿಲ್ಲ.

********

ಕನ್ನಡವನ್ನು ಕೇಂದ್ರವಾಗಿಟ್ಟುಕೊಂಡು ಬೆಂಗಳೂರಿನ ಸಾಂಸ್ಕೃತಿಕ ಚಹರೆಗಳನ್ನು ಗುರುತಿಸಲು ಹೊರಟರೆ ನಟ್ಟಿರುಳಲ್ಲಿ ದಟ್ಟಡವಿಯ್ಲಲಿ ದಾರಿ ಹುಡುಕಿದಂತಾಗುತ್ತದೆ. ಬೆಂಗಳೂರಿನಲ್ಲಿನ ಕನ್ನಡ ಸಂಸ್ಕೃತಿಯ ಚಹರೆಯಿರಲಿ, ಒಟ್ಟಾರೆ ಕನ್ನಡ ಸಂಸ್ಕೃತಿಯ ಸ್ವರೂಪವನ್ನು ಗುರುತಿಸುವುದೇ ಕಷ್ಟದ ಕೆಲಸ. `ಹಲವು ಕನ್ನಡಂಗಳ' ಸಂಸ್ಕೃತಿಯನ್ನು ಒಂದು ಪ್ರಮೇಯದಲ್ಲಿ ಹಿಡಿದಿಡಲು ಪ್ರಯತ್ನಿಸುವುದು ಕನ್ನಡಿಯಲ್ಲಿ ಆನೆಯನ್ನು ತೋರಿಸಿದಂತೆ. ಹೀಗೆ, ಕನ್ನಡ ಸಂಸ್ಕøತಿಯ ಪರಿಕಲ್ಪನೆಯೇ ಗೋಜಲಾಗಿರುವಾಗ, ರಾಜಧಾನಿಯ ಸಾಂಸ್ಕøತಿಕ ಸಿಕ್ಕುಗಳನ್ನು ಬಿಡಿಸುವುದು ಇನ್ನೂ ಕಷ್ಟ. ಇಂಥ ಸಂದರ್ಭದ್ಲಲಿ ಕೆಲವು ರೂಪಕಗಳ ಮೂಲಕ ಸಾಂಸ್ಕೃತಿಕ ಚಹರೆಗಳನ್ನು ಸ್ಪಷ್ಟಪಡಿಸುವ ಪ್ರಯತ್ನ ಮಾಡಬಹುದು. ಅಂಥದೊಂದು ರೂಪಕ - ರಾಜಕುಮಾರ್.

ಜನಸಾಮಾನ್ಯರಿಂದ ಉನ್ನತ ವರ್ಗದವರೆಗೆ ರಾಜಕುಮಾರ್ ಆವರಿಸಿಕೊಂಡಿರುವ ಬಗೆ ವಿಸ್ಮಯ ಹುಟ್ಟಿಸುವಂತಿದೆ. ರಾಜಕುಮಾರ್ ಪಟಗಳು, ಪ್ರತಿಮೆಗಳು ನಗರದ ಅನೇಕ ಕಡೆಗಳಲ್ಲಿ ಕಾಣಸಿಗುತ್ತವೆ. ರಾಜಕುಮಾರ್ ಹೆಸರಿನ ಮಹಲುಗಳಿವೆ, ರಸ್ತೆಯಿದೆ. ರಾಜ್ ಸಿನಿಮಾಗಳನ್ನು ನೋಡದವರು ಕೂಡ ತಮ್ಮ ಅಂಗಡಿ ಮಹಲುಗಳ ಮೇಲೆ ರಾಜ್ ಚಿತ್ರಪಟ ಅಂಟಿಸಿಕೊಂಡಿರುವುದಿದೆ. ಅವರ ಪಾಲಿಗೆ ಈ ಚಿತ್ರಪಟ ಗುರಾಣಿಯಿದ್ದಂತೆ.

ಬೀದಿಗೆ ಹೊಂದಿಕೊಂಡಿರುವ ಸಾರ್ವಜನಿಕ ಸ್ಥಳಗಳನ್ನು ಗಣಪ, ಏಸು, ಲಕ್ಷ್ಮಿ, ಮುಂತಾದವರ ಚಿತ್ರಪಟಗಳು ಮೂತ್ರಕೋರರಿಂದ ರಕ್ಷಿಸುತ್ತವೆ. ಅಂಥ ಔಷಧೀಯ ಗುಣ ರಾಜ್ ಚಿತ್ರಪಟಕ್ಕೂ ಇದೆ. ಭಾಷಾಭಿಮಾನ ಎಲ್ಲೆ ಮೀರಿದ ಸಂದರ್ಭದಲ್ಲಿ ದೊಡ್ಡ ದೊಡ್ಡ ಮಹಲು ಹಾಗೂ ವಾಹನಗಳ ಪಾಲಿಗೆ ರಾಜಕುಮಾರ್ ಚಿತ್ರಪಟವೇ ರಕ್ಷೆ!
ರಂಜನೆಯೇ ಸಿನಿಮಾಗಳ ಪ್ರಧಾನ ಗುಣ ಎನ್ನುವ ನಂಬಿಕೆ ಬಲಿಯುತ್ತಿರುವ ಈ ದಿನಗಳಲ್ಲಿ, ಕನ್ನಡಿಗರ ಬದುಕು-ಭಾವನೆಗಳ ಅಭಿವ್ಯಕ್ತಿಯಂತೆ ರಾಜ್ ಚಿತ್ರಗಳು ಮೂಡಿಬಂದ್ದದು ಒಂದು ಅಸಾಧಾರಣ ಸಂಗತಿಯಂತೆ ಕಾಣಿಸುತ್ತದೆ. ರಾಜಕುಮಾರ್ ಸಿನಿಮಾಗಳ ಮೂಲಕ ಕನ್ನಡ ಸಂಸ್ಕೃತಿ ಮತ್ತು ಕನ್ನಡ ನೆಲದ ಮೌಲ್ಯಗಳನ್ನು ಕಟ್ಟಿಕೊಡುವ ಒಂದು ಪ್ರಜ್ಞಾಪೂರ್ವಕ ಪ್ರಯತ್ನ ನಡೆಯಿತು. ಈ ಪ್ರಯತ್ನದ ಹಂಬಲವೇ, ಕನ್ನಡ ಚಿತ್ರಗಳಲ್ಲಷ್ಟೇ ನಟಿಸುವ ರಾಜಕುಮಾರರ ಸಂಕಲ್ಪದ ಹಿಂದೆ ಕೆಲಸ ಮಾಡಿರಬಹುದು.

ಒಂದು ಹಂತದ ನಂತರ ರಾಜಕುಮಾರ್ ಸಿನಿಮಾ ಎಂದಕೂಡಲೇ ಅಲ್ಲೊಂದು ಸಂದೇಶ ಇರಲೇಬೇಕು ಎನ್ನುವಂತಾಯಿತು. ತೀರಾ ಹಳೆಯ ಚಿತ್ರಗಳ ಮಾತಿರಲಿ, ರಾಜಕುಮಾರರ ಕೊನೆಯ ಚಿತ್ರಗಳನ್ನು ಉದಾಹರಿಸುವುದಾದರೆ- `ಜೀವನಚೈತ್ರ' ಚಿತ್ರ ಮದ್ಯಪಾನದ ವಿರುದ್ಧ ಸೊಲ್ಲೆತ್ತುತ್ತದೆ. ಕಾಮನೆಗಳ ಬೆನ್ನುಹತ್ತಿದ ಯುವಪೀಳಿಗೆ ಹೆತ್ತವರನ್ನು ಹಾಗೂ ಮೌಲ್ಯಗಳನ್ನು ಬೀದಿಪಾಲು ಮಾಡುತ್ತಿರುವ ವಿಪರ್ಯಾಸವೂ, ಕೂಡು ಕುಟುಂಬದ ಪ್ರತಿಪಾದನೆಯೂ ಆ ಚಿತ್ರದಲ್ಲಿದೆ. `ಆಕಸ್ಮಿಕ' ಚಿತ್ರ ಹೆಣ್ಣುಮಕ್ಕಳ ಮಾರಾಟದ ದಂಧೆಯನ್ನು ವಿರೋಧಿಸುವ ಕಥೆಯನ್ನು ಹೊಂದಿದೆ. `ಒಡಹುಟ್ಟಿದವರು' ಚಿತ್ರ ಸೋದರ ವಾತ್ಸಲ್ಯದ ಜೊತೆಗೆ ರೈತಪ್ರೀತಿಯನ್ನು ಸಾರುತ್ತದೆ. ರಾಜಕುಮಾರರ ಕೊನೆಯ ಚಿತ್ರ `ಶಬ್ದವೇಧಿ' ಎಳೆಯರು ಮತ್ತು ಯುವಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾದಕ ವಸ್ತುಗಳ ಕಬಂಧ ಬಾಹುಗಳ ವಿರುದ್ಧ ದನಿಯೆತ್ತುತ್ತದೆ. (ಈ ನಾಲ್ಕು ಚಿತ್ರಗಳಲ್ಲಿ ಮೂರು ಕಾದಂಬರಿ ಆಧರಿತ ಚಿತ್ರಗಳಾಗಿರುವುದು ಗಮನಾರ್ಹ). ಈ ನಾಲ್ಕು ಸಿನಿಮಾಗಳು, ನಗರಗಳು ಸೇರಿದಂತೆ ಈ ಹೊತ್ತಿನ ನಮ್ಮ ಸಮಾಜ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಮುಖಾಮುಖಿ ಆದಂತ್ಲಿಲವೇ? ಇಂಥ ಅನುಸಂಧಾನವನ್ನು ಇವತ್ತಿನ ಚಿತ್ರಗಳಲ್ಲಿ ಕಾಣಲಿಕ್ಕೆ ಸಾಧ್ಯವೇ? ಇಲ್ಲವೆನ್ನುವುದೇ ರಾಜಕುಮಾರ್ ಚಿತ್ರಗಳ ಅನನ್ಯತೆಗೆ ಕಾರಣವಾಗಿದೆ.

`ಹೊಸ ಗಾನಬಜಾನ'ದ ಈ ದಿನಗಳಲ್ಲಿ ಹಳೆಯ ಚಿತ್ರಗಳು ನಿಧಾನಗತಿಯ ಚಿತ್ರಗಳಾಗಿ ಕಾಣಿಸುತ್ತವೆ, ಈ ಕಾಲಕ್ಕೆ ಹೊಂದದ ಕಥನಗಳಾಗಿ ಭಾಸವಾಗುತ್ತವೆ. ಆದರೆ, ಇಂಥ ಗೊಣಗಾಟ ರಾಜ್ ಚಿತ್ರಗಳ ಸಂದರ್ಭದಲ್ಲಿ ಕೇಳಿಸುವುದು ಕಡಿಮೆ. ರೀಮೋಟ್‍ನ ಗುಂಡಿಗಳನ್ನು ಅಮುಕುತ್ತಾ ಸಾಗುವಾಗ ವಾಹಿನಿಯೊಂದರಲ್ಲಿ ರಾಜಕುಮಾರರ ಮುಖ ಕಾಣಿಸುತ್ತದೆ ಎಂದುಕೊಳ್ಳಿ. ತಕ್ಷಣ ಮುಂದಕ್ಕೆ ಜಿಗಿದರೆ ಬಚಾವು. ಕೆಲವು ಕ್ಷಣ ಮೈಮರೆತರೆ ಆ ಸಿನಿಮಾ ತಂತಾನೇ ಪ್ರೇಕ್ಷಕನನ್ನು ಆವರಿಸಿಕೊಳ್ಳುತ್ತದೆ. ಸತ್ಯ ಹರಿಶ್ಚಂದ್ರ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಭಕ್ತ ಪ್ರಹ್ಲಾದ, ಭಕ್ತ ಕುಂಬಾರ, ಮಯೂರ, ಶ್ರೀಕೃಷ್ಣ ದೇವರಾಯ, ಬಂಗಾರದ ಪಂಜರ- ಮುಂತಾದ ಚಿತ್ರಗಳು ಯಾವತ್ತಿಗೂ ಮಸುಕಾಗದ ಅನುಪಮ ಕಲಾಕೃತಿಗಳು.

ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎನ್ನುವುದು ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಹೆಪ್ಪುಗಟ್ಟಿರುವ ಆತಂಕ. ಈ ಅಳಲಿನ ಹಿನ್ನೆಲೆಯಲ್ಲಿಯೇ ನಿರ್ದೇಶಕ ಎಸ್.ನಾರಾಯಣ್ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದಿಂದ ಹೊರಗುಳಿದಿರುವುದಾಗಿ ಪ್ರಕಟಿಸಿದ್ದಾರೆ. ಇಂಥದೊಂದು ನಿರ್ವಾತವನ್ನು ರಾಜಕುಮಾರ್ ಕೂಡ ತಮ್ಮ ವೃತ್ತಿ ಜೀವನದ ಆರಂಭದ್ಲಲಿ ಎದುರಿಸಿದ್ದರು. ಅರವತ್ತರ ದಶಕದ ಆರಂಭದ ವರ್ಷಗಳಲ್ಲಿ ಪರಭಾಷಾ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರೋದ್ಯಮ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯಕ್ಕೀಡಾಗಿತ್ತು. ಪರಭಾಷಾ ಚಿತ್ರಗಳೊಂದಿಗೆ ಡಬ್ಬಿಂಗ್ ಚಿತ್ರಗಳು ಕೂಡ ಕನ್ನಡದ ಕಲಾವಿದರು, ತಂತ್ರಜ್ಞರ ಪಾಲಿಗೆ ಕಂಟಕವಾಗಿದ್ದವು. ಇಂಥದೊಂದು ವಿಷಮ ಪರಿಸ್ಥಿತಿಯಲ್ಲಿ, ಕನ್ನಡದ ಅಸ್ಮಿತೆಯನ್ನು ಸಾರುವ ಚಿತ್ರಗಳು ರಾಜಕುಮಾರರ ಮೂಲಕ ಸಾಲುಸಾಲಾಗಿ ಬಂದವು. ಕನ್ನಡದ ಸಾಹಿತ್ಯ ಕೃತಿಗಳನ್ನಾಧರಿಸಿ ಸಿನಿಮಾ ರೂಪಿಸುವ ಪರಂಪರೆ ಗಟ್ಟಿಯಾದ್ದದು ಆಗಲೇ. ಚಿತ್ರಗಳ ಗುಣಮಟ್ಟ ಹಾಗೂ ಕನ್ನಡದ ಸೊಗಡಿನ ಮೂಲಕವೇ ಕನ್ನಡ ಚಿತ್ರೋದ್ಯಮದ ಎಲೆಕಟ್ಟುಗಳನ್ನು ವಿಸ್ತರಿಸುವಲ್ಲಿ `ರಾಜ್ ಚಿತ್ರಗಳು' ಪ್ರಮುಖ ಪಾತ್ರವಹಿಸಿದವು. ಅಂಥದೊಂದು ಉಲ್ಲಂಘನೆ ಈಗಿನ ಜರೂರು ಕೂಡ.

ಅರವತ್ತರ ದಶಕದ ಸಂಕ್ರಮಣ ಕಾಲ ಕನ್ನಡ ಸಿನಿಮಾಗಳ ಜೊತೆಗೆ, ಬೆಂಗಳೂರಿನಲ್ಲಿನ ಕನ್ನಡಿಗರ ಅಸ್ತಿತ್ವಕ್ಕೂ ಸಂಚಕಾರ ತಂದಿತ್ತು. ಮ.ರಾಮಮೂರ್ತಿ, ಅನಕೃ ನೇತೃತ್ವದಲ್ಲಿ ರೂಪುಗೊಂಡ ಕನ್ನಡ ಚಳವಳಿ ರಾಜಧಾನಿಯಲ್ಲಿ ಕನ್ನಡಿಗರ ಅಸ್ಮಿತೆಯನ್ನು ಕಾಪಾಡಿತು. ಆ ಚಳವಳಿಯ ಕವಲಾಗಿಯೇ ಡಬ್ಬಿಂಗ್ ನಿಷೇಧ ಕರ್ನಾಟಕದಲ್ಲಿ ಜಾರಿಯಾದುದು. ಕಾಲಚಕ್ರದ ಉರುಳಿನಲ್ಲಿ ಅರವತ್ತರ ದಶಕದ ನಿರ್ವಾತ ಮರುಕಳಿಸಿದಂತಿರುವ ದಿನಗಳಿವು. ಪರಭಾಷಾ ಚಿತ್ರಗಳ ಅಬ್ಬರ ಮತ್ತೆ ಹೆಚ್ಚಾಗಿದೆ. ರೀಮೇಕ್ ಮಾಡುವುದು ಪಾಪಪ್ರಜ್ಞೆಯ ಕೆಲಸವಾಗಿ ಈಗ ಉಳಿದಿಲ್ಲ. ಈ ನಡುವೆ, ಡಬ್ಬಿಂಗ್ ಪರ ದನಿಗಳು ನಿಚ್ಚಳವಾಗಿ ಕೇಳಿಸುತ್ತಿವೆ. ಆದರೆ, ಈ ಎಡರು ತೊಡರುಗಳನ್ನು ದಾಟಿಸಲು ರಾಜ್ ರೀತಿಯ ಅಂಬಿಗ ಈಗ ಬೇಕಾಗಿದ್ದಾನೆ. ಚಿತ್ರರಂಗದಲ್ಲೀಗ ಅನೇಕ ಪಾಳೇಪಟ್ಟುಗಳಿವೆ. ಅಖಂಡ ಕನ್ನಡ ಚಿತ್ರೋದ್ಯಮದ ಕನಸು ಮಾತ್ರ ಯಾರಿಗೂ ಬೀಳುವಂತೆ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT