ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ್‌ ಅರವಿಂದ್ ಅಭಿನಯದ ‘100’ ಸಿನಿಮಾ ಬಿಡುಗಡೆ ಸಿದ್ಧ

Last Updated 8 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ಅಂಕಿಗಳ ಶೀರ್ಷಿಕೆ ಇಟ್ಟು ಥಿಯೇಟರ್‌ನತ್ತ ಪ್ರೇಕ್ಷಕರನ್ನು ಸೆಳೆಯುವುದು ಹೊಸದೇನಲ್ಲ. ರಮೇಶ್‌ ಅರವಿಂದ್‌ ಅಭಿನಯದ ಸಿನಿಮಾವೊಂದಕ್ಕೆ ‘100’ ಎಂಬ ಶೀರ್ಷಿಕೆ ಇಡಲಾಗಿದೆ. ಅವರೇ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದರ ಶೂಟಿಂಗ್‌ ಕೂಡ ಪೂರ್ಣಗೊಂಡಿದ್ದು, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಸಿನಿಮಾಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಕೊರೊನಾ ಭೀತಿಯ ಮೊದಲೇ ಚಿತ್ರಕ್ಕೆ ಪ್ರಮಾಣ ಪತ್ರ ಸಿಕ್ಕಿದೆಯಂತೆ.

ಚಿತ್ರತಂಡ ಕೂಡ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿತ್ತು. ಆ ನಡುವೆಯೇ ಕಾಣಿಸಿಕೊಂಡ ಕೊರೊನಾ ಸೋಂಕಿನ ಭೀತಿಯ ಪರಿಣಾಮ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಚಿತ್ರದಲ್ಲಿ ರಮೇಶ್‌ ಅವರದು ಸೈಬರ್ ಅಪರಾಧ ವಿಭಾಗದ ತನಿಖಾಧಿಕಾರಿಯ ಪಾತ್ರ. ಸೂರಜ್‌ ಪ್ರೊಡಕ್ಷನ್‌ನಡಿ ರಮೇಶ್‌ ರೆಡ್ಡಿ ಇದಕ್ಕೆ ಬಂಡವಾಳ ಹೂಡಿದ್ದಾರೆ. ಇದೇ ಪ್ರೊಡಕ್ಷನ್‌ನಡಿ ಈ ಹಿಂದೆ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’ ಮತ್ತು ‘ಪಡ್ಡೆಹುಲಿ’ ಸಿನಿಮಾ ನಿರ್ಮಿಸಲಾಗಿತ್ತು. ಇದು ನಾಲ್ಕನೇ ಚಿತ್ರ.

‘ಪುಷ್ಪಕ ವಿಮಾನ’ ಚಿತ್ರದ ಬಳಿಕ ರಚಿತಾ ರಾಮ್‌ ಅವರು ಎರಡನೇ ಬಾರಿಗೆ ರಮೇಶ್‌ ಅರವಿಂದ್‌ ಅವರೊಟ್ಟಿಗೆ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು ರಮೇಶ್‌ ಅವರ ತಂಗಿಯಾಗಿ ನಟಿಸಿದ್ದಾರೆ. ಮೊಬೈಲ್‌ ಗೀಳಿಗೆ ಬಿದ್ದ ಹುಡುಗಿಯ ಪಾತ್ರ ಅವರದು. ಪೂಜಾ ಈ ಚಿತ್ರದ ನಾಯಕಿ.

ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಪಟ್ಟಭದ್ರರು ಸದಾಕಾಲ ಷಡ್ಯಂತ್ರ ನಡೆಸುತ್ತಲೇ ಇರುತ್ತಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಜನರ ನೆಮ್ಮದಿ ಕೆಡಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಇದೇ ‘100’ ಚಿತ್ರದ ಕಥಾಹಂದರ.

‘ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಕೊರೊನಾ ಭೀತಿಯಿಂದಾಗಿ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಚಿತ್ರಮಂದಿರಗಳನ್ನು ಯಾವಾಗ ತೆರೆಯಲಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಭೀತಿ ಕಡಿಮೆಯಾದ ಬಳಿಕ ಸಿನಿಮಾವನ್ನು ಬಿಡುಗಡೆ ಮಾಡಲಾಗುವುದು’ ಎಂದು ರಮೇಶ್‌ ಅರವಿಂದ್‌ ‘ಪ್ರಜಾ ಪ್ಲಸ್‌’ಗೆ ತಿಳಿಸಿದರು.

ಇದಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ರವಿ ಬಸ್ರೂರ್‌ ಸಂಗೀತ ಸಂಯೋಜಿಸಿದ್ದಾರೆ. ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ನೃತ್ಯ ಸಂಯೋಜನೆ ಧನು ಅವರದ್ದು. ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT