ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸ ಹಾದಿ ತೋರಿಸಿ ಹೋದ ಅಪ್ಪು’: ಪುನೀತ್‌ ರಾಜ್‌ಕುಮಾರ್‌ಗೆ ರಂಗನಮನ

‘ನಿನ್ನಂಥೋರ್‌ ಯಾರೂ ಇಲ್ವಲ್ಲೋ ಈ ಲೋಕದಾ ಮ್ಯಾಲೆ’ ಕಾರ್ಯಕ್ರಮ
Last Updated 22 ನವೆಂಬರ್ 2021, 5:01 IST
ಅಕ್ಷರ ಗಾತ್ರ

ಬೆಂಗಳೂರು: ‘ಅಪ್ಪು ಜನಿಸಿದಾಗ ಆಸ್ಪತ್ರೆಗೆ ಹೋಗಿ ಆತನನ್ನು ಎರಡೂ ಕೈಗಳಲ್ಲಿ ಎತ್ತಿ ಆಡಿಸಿದ್ದೆ. ಅವನ ನಟನೆ ನೋಡಲು ಚಿತ್ರೀಕರಣದ ಸ್ಥಳಗಳಿಗೂ ಹೋಗುತ್ತಿದ್ದೆ. ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸುವಾಗಲೂ ಜೊತೆಗೇ ಇದ್ದೆ. ಆತ ನನ್ನ ಪಾಲಿಗೆ ತಮ್ಮನಲ್ಲ. ಮಗನಂತಿದ್ದ...’

ನಟರಾಘವೇಂದ್ರ ರಾಜ್‌ಕುಮಾರ್‌ ಮನದಂತರಾಳದಿಂದ ಹೊಮ್ಮಿದ ನುಡಿಗಳಿವು.‘ಅಪ್ಪು ನಮಗೆಲ್ಲಾ ಹೊಸ ದಾರಿ ತೋರಿಸಿಕೊಟ್ಟಿದ್ದಾನೆ. ಬದುಕಿರುವವರೆಗೂ ಆತನ ಹೆಜ್ಜೆಯನ್ನೇ ಹಿಂಬಾಲಿಸುತ್ತೇನೆ’ ಎಂದು ಅವರು ತಿಳಿಸಿದರು.

ಸಾಹಿತಿ ಮತ್ತು ಕಲಾವಿದರ ವೇದಿಕೆಯು ರಂಗ ವಿಜಯಾ ಸಂಘಟನೆಯ ಸಹಯೋಗದಲ್ಲಿ ನಟ ದಿ.ಪುನೀತ್‌ ರಾಜ್‌ಕುಮಾರ್‌ ಅವರಿಗೆ ರಂಗನಮನ ಸಲ್ಲಿಸಲು ಹಮ್ಮಿಕೊಂಡಿದ್ದ ‘ನಿನ್ನಂಥೋರ್‌ ಯಾರೂ ಇಲ್ವಲ್ಲೋ ಈ ಲೋಕದಾ ಮ್ಯಾಲೆ’ ಕಾರ್ಯಕ್ರಮದಲ್ಲಿ ಭಾನುವಾರ ಅವರು ಪುನೀತ್‌ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.

‘ಅಪ್ಪು ನಿಧನವಾದ ದಿನ ದೂರವಾಣಿ ಕರೆಯೊಂದು ಬಂದಿತ್ತು. ಪುನೀತ್‌ಗೆ ಹುಷಾರಿಲ್ಲ ಬೇಗನೇ ಹೊರಟು ಆಸ್ಪತ್ರೆಗೆ ಬಂದು ಬಿಡಿ ಎಂದು ತಿಳಿಸಿದರು. ಏನೋ ತೊಂದರೆಯಾಗಿರಬಹುದು ಎಂದು ಒಳಮನಸ್ಸು ಹೇಳುತ್ತಲೇ ಇತ್ತು. ಆಸ್ಪತ್ರೆ ತಲುಪಿದ ಬಳಿಕವೇ ಸಾವಿನ ವಿಚಾರ ಗೊತ್ತಾಯಿತು. ಅಲ್ಲಿಂದ ಮೂರು ದಿನ ಆತ ಪರಮಾತ್ಮನ ಹಾಗೆ ತಣ್ಣಗೆ ಮಲಗಿದ್ದ. ಇಡೀ ಸರ್ಕಾರ, ಪೊಲೀಸರು ಹಾಗೂ ಮಾಧ್ಯಮದವರು ಸುತ್ತುವರಿದಿದ್ದರು’ ಎಂದು ತಿಳಿಸಿದರು.

‘ಅಪ್ಪುವಿನ ಅಗಲಿಕೆಯ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಅಭಿಮಾನಿಯೊಬ್ಬನ ಮನೆಗೆ ಭೇಟಿ ನೀಡಿದ್ದೆ. ಮನೆಯವರನ್ನು ಸಂತೈಸಲು ಹೋಗಿದ್ದ ನನಗೆ ಅವರೇ ಸಮಾಧಾನ ಹೇಳಿದ್ದರು. ಮಗನನ್ನು ಕಳೆದುಕೊಂಡಿದ್ದಕ್ಕಿಂತಲೂ ಅಪ್ಪು ತೀರಿಕೊಂಡ ವಿಚಾರ ಕೇಳಿ ಆಘಾತವಾಗಿದೆ ಎಂದರು. ಜನ ಅವನ ಮೇಲೆ ಇಟ್ಟಿರುವ ಪ್ರೀತಿಗೆ ಅದು ಸಾಕ್ಷಿ’ ಎಂದು ತಿಳಿಸಿದರು.

ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ‘ಅಪ್ಪು ಹೆಸರು ಕೇಳಿದಾಕ್ಷಣ ಜನರ ಕಣ್ಣುಗಳು ಈಗಲೂ ಹನಿಗೂಡುತ್ತವೆ. ಹಿರಿಯರನ್ನು ಕಂಡೊಡನೆ ಆತ ಶಿರಬಾಗಿ ನಮಿಸುತ್ತಿದ್ದ ರೀತಿ ಕಣ್ಣೆದುರೇ ಬರುತ್ತದೆ’ ಎಂದರು.

ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಡಾ.ರಾಜ್‌ಕುಮಾರ್‌ ಅವರಲ್ಲಿದ್ದ ಸರಳತೆ, ಸೌಜನ್ಯ, ಸ್ನೇಹಭಾವ ಅಪ್ಪು ಅವರಲ್ಲಿತ್ತು. ಪ್ರಚಾರವಿಲ್ಲದೆ ಜನಸೇವೆ ಮಾಡುವುದು ಹೇಗೆ ಎಂಬುದನ್ನು ರಾಜ್‌ ಕುಟುಂಬ ತೋರಿಸಿಕೊಟ್ಟಿದೆ. ಪುನೀತ್‌ ನಿಧನ ಸಾಮಾಜಿಕ ದುರಂತ’ ಎಂದು ಹೇಳಿದರು.

ಗಾಯಕಿ ಬಿ.ಜಯಶ್ರೀ, ‘ಅಪ್ಪುಗೆ ರಾಜಣ್ಣ ನೆರಳಾಗಿ ನಿಂತಿದ್ದರು ಎನಿಸುತ್ತಿದೆ. ಸಾವಿನ ನಂತರ ಅಪ್ಪು ಎಲ್ಲರ ಹೃದಯವನ್ನೂ ಅಪ್ಪಿಕೊಂಡಿದ್ದಾನೆ’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ‘ಯಾರಾದರೂ ಹೊಗಳಿದರೆ ನಾಚಿಕೊಳ್ಳುತ್ತಿದ್ದ ಅಪ್ಪು ಸ್ವಭಾವ ನನಗಿಷ್ಟ. ಎಲ್ಲರೂ ನಮ್ಮವರೇ ಎಂಬ ಶರಣ ತತ್ವವನ್ನು ಮೈಗೂಡಿಸಿಕೊಂಡಿದ್ದರು’ ಎಂದು ತಿಳಿಸಿದರು.

ನಟ ಪ್ರಕಾಶ್‌ ಬೆಳವಾಡಿ, ‘ಅಪ್ಪು ಅವರಿಗೆ ದೊಡ್ಡ ದೊಡ್ಡ ಕೆಲಸಗಳನ್ನು ಮಾಡುವ ಆಸೆ ಇತ್ತು. ಒಟಿಟಿ ವೇದಿಕೆಯಲ್ಲಿ ಕನ್ನಡದ ಚಿತ್ರಗಳಿಗೂ ಬೇಡಿಕೆ ತಂದುಕೊಡುವ ದಿಸೆಯಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಸ್ಮರಿಸಿದರು.

ನಟಿ ಸುಧಾ ಬೆಳವಾಡಿ, ‘ಅಪ್ಪು ಅಂದಾಕ್ಷಣ ನೆನಪಾಗುವುದು ನಿಷ್ಕಲ್ಮಶ ನಗು. ಎಲ್ಲಾ ಅಮ್ಮಂದಿರಿಗೂ ಇಂಥ ಮಗ ಇರಬಾರದೇ ಎಂಬ ವ್ಯಕ್ತಿತ್ವ. ಅಪ್ಪು ಮತ್ತೆ ಹುಟ್ಟಿ ಬರಲಿ’ ಎಂದರು.

ನಿರ್ದೇಶಕ ಟಿ.ಎನ್‌.ಸೀತಾರಾಂ, ‘ಕರ್ನಾಟಕದ ಮನೆಯ ಮಗು ನಿಧನವಾಗಿದೆ. ಆ ಸಂಕಟವನ್ನು ತಡೆದುಕೊಳ್ಳುವುದಕ್ಕೆ ಯಾರಿಗೂ ಆಗುತ್ತಿಲ್ಲ. ಇಡೀ ರಾಜ್ಯ ಈಗಲೂ ದುಃಖದ ಮಡುವಿನಿಂದ ಹೊರಬಂದಿಲ್ಲ’ ಎಂದರು.

‘ನಾವು ಮಾಡುವ ಸಿನಿಮಾಗಳು ಜಗತ್ತಿನಾದ್ಯಂತ ಜನ ನೋಡುವಂತಾಗಬೇಕು ಎಂಬ ಒಳನೋಟ ಅವರಿಗಿತ್ತು. ಆ ಬಗ್ಗೆ ಆಗಾಗ ಮಾತನಾಡುತ್ತಿದ್ದರು’ ಎಂದು ನಿರ್ದೇಶಕಬಿ.ಸುರೇಶ್‌ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT