ಶನಿವಾರ, ಮಾರ್ಚ್ 6, 2021
18 °C

ರಣವೀರ್‌ ಲುಕ್‌ಗೆ ಕಪಿಲ್‌ ಬೌಲ್ಡ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನ ಕಥೆಯಾಧಾರಿತ ಚಿತ್ರ ‘83’ನಲ್ಲಿ ರಣವೀರ್ ಸಿಂಗ್ ಹೇಗೆ ಕಾಣಬಹುದು ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಈಗ ರಣವೀರ್‌ ತಮ್ಮ 34ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ್ದು, ಇದರಲ್ಲಿ ಅವರು ಕಪಿಲ್‌ ದೇವ್‌ ಪಡಿಯಚ್ಚಿನಂತೆ ಕಾಣುತ್ತಿದ್ದಾರೆ, ಬಾಲಿವುಡ್‌ ನಟರು ಹಾಗೂ ಕ್ರಿಕೆಟಿಗರು ಫಸ್ಟ್‌ಲುಕ್‌ಗೆ ವಾಹ್‌ ಎಂದು ಉದ್ಗರಿಸಿದ್ದಾರೆ. ರಣವೀರ್‌ ಫಸ್ಟ್‌ಲುಕ್‌ಗೆ ಕಪಿಲ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1983ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಕಪಿಲ್ ದೇವ್ ಅವರ ನೇತೃತ್ವದ ಟೀಂ ಇಂಡಿಯಾದ ಕತೆ ಈ ಚಿತ್ರದ್ದು. 
ಪೊದೆ ಮೀಸೆ, ವಿಭಿನ್ನ ಕೇಶವಿನ್ಯಾಸದ ರಣವೀರ್‌, ಬಿಳಿ ಜೆರ್ಸಿಯಲ್ಲಿ ಚೆಂಡನ್ನು ಸ್ಪಿನ್ ಮಾಡುವ ಫೋಟೊವನ್ನು ಹಂಚಿಕೊಂಡಿದ್ದು, ಇದರಲ್ಲಿ ಥೇಟ್‌ ಕಪಿಲ್‌ನಂತೆ ಕಾಣುತ್ತಿದ್ದಾರೆ. ‘ಈ ನನ್ನ ವಿಶೇಷ ದಿನದಂದು ಹರಿಯಾಣದ ಚಂಡಮಾರುತ ಕಪಿಲ್‌ ದೇವ್‌ ಅವರ ಕುರಿತಾದ ಚಿತ್ರದ ಫಸ್ಟ್‌ಲುಕ್‌ ಇಲ್ಲಿ ಪ್ರಕಟಿಸುತ್ತಿದ್ದೇನೆ’ ಎಂದು ಅಡಿಬರಹ ಬರೆದುಕೊಂಡಿದ್ದಾರೆ. 

ಇದಕ್ಕೆ ಸಾವಿರಾರು ಅಭಿಮಾನಿಗಳು ಹಾಗೂ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಆಯುಷ್ಮಾನ್‌ ಖುರಾನ ‘ವಾಹ್‌ ವಾಹ್‌ ವಾಹ್‌’ ಎಂದು ಕಮೆಂಟ್‌ ಮಾಡಿದ್ದರೆ, ಕ್ರಿಕೆಟಿಗ ಶಿಖರ್‌ ಧವನ್‌ ‘ನೋಡಲು ಥೇಟ್‌ ಕಪಿಲ್‌ರಂತೆಯೇ ಕಾಣುತ್ತಿದ್ದೀರಾ’ ಎಂದಿದ್ದಾರೆ. ಧಡಕ್‌ ನಿರ್ದೇಶಕ ಶಶಾಂಕ್‌ ಖೇತನ್‌ ಅವರು ‘ಓಹ್‌, ಪಾತ್ರಗಳಿಗೆ ನೀವು ಜೀವ ತುಂಬಿ ಉಸಿರಾಡುತ್ತಿರಿ’ ಎಂದು ಹೊಗಳಿದ್ದಾರೆ. 

ಈ ಚಿತ್ರದ ಪಾತ್ರ ತಯಾರಿಗಾಗಿ ರಣವೀರ್‌ 10ಕ್ಕೂ ಹೆಚ್ಚು ದಿನ ಕಪಿಲ್‌ ದೇವ್‌ ಮನೆಯಲ್ಲಿ ತಂಗಿದ್ದರಂತೆ. ಕಪಿಲ್‌ ಅವರ ದೆಹಲಿಯಲ್ಲಿನ ಮನೆಯಲ್ಲಿ ಉಳಿದು ಅವರ ಗುಣ,ಸ್ವಭಾವದ ಸೂಕ್ಷ್ಮ ವಿಷಯಗಳ ಬಗ್ಗೆಯೂ ತಿಳಿದುಕೊಂಡರಂತೆ. ಧರ್ಮಶಾಲಾದಲ್ಲಿ ಸ್ವತಃ ಕಪಿಲ್‌ ಅವರೇ ರಣವೀರ್‌ ಅವರಿಗೆ ಕ್ರಿಕೆಟ್‌ ಬಗ್ಗೆ ತರಬೇತಿ ನೀಡಿದ್ದರಂತೆ. ಕಪಿಲ್‌ ಅವರನ್ನು ಹೊಗಳಿರುವ ರಣವೀರ್‌, ‘ಅವರ ಬದ್ಧತೆ ಹಾಗೂ ಉತ್ಸಾಹದ ಬಗ್ಗೆ ಎರಡು ಮಾತಿಲ್ಲ. ಅವರ ಪರಿಚಯ ಮಾಡಿಕೊಂಡೊಡನೆ ಈ ಎರಡು ಗುಣಗಳು ನಮಗೆ ಪರಿಚಯವಾಗುತ್ತವೆ. ಯಾವುದಾದರೂ ವಿಷಯವನ್ನು ಅವರು ಕೈಗೆತ್ತಿಕೊಂಡರೆ ಅದರಲ್ಲಿ ಪರಿಣತಿ ಪಡೆಯುವವರೆಗೂ ಅವರು ಕೈಬಿಡುವುದಿಲ್ಲ’ ಎಂದು ರಣವೀರ್‌ ಶ್ಲಾಘಿಸಿದ್ದಾರೆ.

ಈ ಚಿತ್ರವನ್ನು ಕಬೀರ್‌ ಖಾನ್‌ ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ರಣವೀರ್‌ ಪತ್ನಿ ದೀಪಿಕಾ ಪಡುಕೋಣೆಯೇ ಕಪಿಲ್‌ ಪತ್ನಿ ರೋಮಿ ದೇವ್‌ ಅವರ ಪಾತ್ರ ನಿರ್ವಹಿಸಲಿರುವುದು ವಿಶೇಷ. ಚಿತ್ರತಂಡ ಸದ್ಯ ಸ್ಕಾಟ್ಲೆಂಡ್‌ನಲ್ಲಿ ಚಿತ್ರೀಕರಣದಲ್ಲಿ ನಿರತವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು