ಶನಿವಾರ, ಜುಲೈ 31, 2021
20 °C

ಒಟಿಟಿಯಲಿ ‘83’ ಬಿಡುಗಡೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘1983’ ಭಾರತೀಯ ಕ್ರಿಕೆಟ್ ಜಗತ್ತಿನ ಪಾಲಿಗೆ ಸ್ಮರಣೀಯ ವರ್ಷ. ಕಪಿಲ್‌ ದೇವ್‌ ನಾಯಕತ್ವದ ಭಾರತೀಯ ಕ್ರಿಕೆಟ್‌ ತಂಡ ವೆಸ್ಟ್‌ಇಂಡೀಸ್‌ ವಿರುದ್ಧ ಫೈನಲ್‌ನಲ್ಲಿ ಗೆಲುವಿನ ಕೇಕೆ ಹಾಕಿ ವಿಶ್ವಕಪ್‌ ಗೆದ್ದಿದ್ದು ಇಂದಿಗೂ ಕ್ರೀಡಾಪಟುಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಮೈದಾನದಲ್ಲಿನ ಆಗಿನ ಅಪರೂಪದ ಕ್ಷಣಗಳನ್ನು ತೆರೆಯ ಮೇಲೆ ತರಲು ನಿರ್ದೇಶಕ ಕಬೀರ್‌ ಖಾನ್‌ ಮುಂದಾಗಿರುವುದು ಎಲ್ಲರಿಗೂ ಗೊತ್ತು. ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ‘83’ ಎಂಬ ಟೈಟಲ್ ಇಡಲಾಗಿದೆ‌. ಈ ಸಂಖ್ಯೆಯು ಕ್ರಿಕೆಟ್‌ ಪ್ರೇಮಿಗಳಿಗೆ ಹಾಗೂ ಮೈದಾನದಲ್ಲಿ ಬ್ಯಾಟ್‌ ಹಿಡಿದು ರನ್‌ ಬಾರಿಸುವ ದಾಂಡಿಗನ ಪಾಲಿಗೂ ಮಹತ್ವದ್ದು.

ಕಪಿಲ್ ದೇವ್‌ ಪಾತ್ರದಲ್ಲಿ ನಟ ರಣವೀರ್‌ ಸಿಂಗ್‌ ನಟಿಸಿದ್ದಾರೆ. ಕಪಿಲ್‌ ಅವರ ಪತ್ನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಕಪಿಲ್ ದೇವ್‌ ಅವರ ಜೀವನ ಚರಿತ್ರೆ ಕುರಿತ ಚಿತ್ರ ಇದು. ಹಾಗಾಗಿ, ಅವರ ವೃತ್ತಿಬದುಕಿನ ಏಳುಬೀಳುಗಳ ಮೇಲೂ ಬೆಳಕು ಚೆಲ್ಲಲಿದೆ. ಹಾಗಾಗಿ, ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ, ಇದರ ಶೂಟಿಂಗ್‌ ಪೂರ್ಣಗೊಂಡಿದೆ. ವಿಎಫ್‌ಎಕ್ಸ್‌ ಸೇರಿದಂತೆ ಪೋಸ್ಟ್‌ ಪ್ರೊಡಕ್ಷನ್‌ ಬಾಕಿ ಇದೆಯಂತೆ. ಏಪ್ರಿಲ್‌ ಮೊದಲ ವಾರದಲ್ಲಿಯೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.

ಈ ನಡುವೆಯೇ ಒಟಿಟಿ ಪ್ಲಾಟ್‌ಫಾರ್ಮ್‌ ಮೂಲಕ ‘83’ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆದಿದೆ. ಇದಕ್ಕಾಗಿ ನಿರ್ಮಾಪಕರಿಗೆ ₹ 143 ಕೋಟಿ ಸಂದಾಯವಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಚಿತ್ರ ವಿತರಣೆಯ ಹಕ್ಕು ಪಡೆದಿರುವ ರಿಲೆಯನ್ಸ್‌ ಎಂಟರ್‌ಟೈನ್‌ಮೆಂಟ್ಸ್‌ ಇದನ್ನು ಅಲ್ಲಗೆಳೆದಿದೆ.

‘ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಒಟಿಟಿ ಮೂಲಕ ಸಿನಿಮಾ ಬಿಡುಗಡೆ ಮಾಡುವ ಉದ್ದೇಶವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಕಪೋಲಕಲ್ಪಿತ ಸುದ್ದಿ. ಕೊರೊನಾ ಭೀತಿ ಕಡಿಮೆಯಾದ ಬಳಿಕ ಥಿಯೇಟರ್‌ ಮೂಲಕವೇ ಜನರ ಮುಂದೆ ಬರುತ್ತೇವೆ. ಚಿತ್ರ ಬಿಡುಗಡೆಗೆ ನಾವು ಅವಸರಪಡುತ್ತಿಲ್ಲ. ನಾವು ಇನ್ನೂ ಐದಾರು ತಿಂಗಳ ಕಾಲ ಕಾಯಲು ಸಿದ್ಧರಿಸಿದ್ದೇವೆ’ ಎಂದು ರಿಲೆಯನ್ಸ್ ಎಂಟರ್‌ಟೈನ್‌ಮೆಂಟ್ಸ್‌ನ ಸಿಇಒ ಶಿಬಾಶಿಶ್ ಸರ್ಕಾರ್ ಸ್ಪಷ್ಟಪಡಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು