ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರು ಹೇಳಿದ ಪ್ರೇಮ ಕಹಾನಿ

Last Updated 30 ಮೇ 2019, 19:30 IST
ಅಕ್ಷರ ಗಾತ್ರ

ಆರ್. ಚಂದ್ರು ನಿರ್ದೇಶನದ ‘ಐ ಲವ್‌ ಯು’ ಸಿನಿಮಾ ಏಕಕಾಲಕ್ಕೆ ಒಂದು ಸಾವಿರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಕೆಜಿಎಫ್‌ ಚಿತ್ರದ ಬಳಿಕ ಕನ್ನಡ ಸಿನಿಮಾವೊಂದು ಅತಿಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು.

‘ನನ್ನ ತಲೆಯಲ್ಲಿ ಕಂಟೆಂಟ್‌ ಬಂದು ಹೀರೊ ಆಗಿ ನಿಂತ ಮೇಲೆಯೇ ನಾನು ಸಿನಿಮಾ ಮಾಡೋದು. ಹಾಗಾಗಿ, ನನಗೆ ಕಥೆಯೇ ಹೀರೊ’–ಕಥೆ ಬರೆಯುವಾಗ ಯಾವ ಅಂಶಗಳಿಗೆ ಒತ್ತು ನೀಡುತ್ತೀರಿ ಎನ್ನುವ ಪ್ರಶ್ನೆಗೆ ನಿರ್ದೇಶಕ ಆರ್‌. ಚಂದ್ರು ನೀಡಿದ ವ್ಯಾಖ್ಯಾನ ಇದು.

‘ನನ್ನ ಸಿನಿಮಾಗಳಿಗೆ ನಾನೇ ಕಥೆ ಬರೆಯುತ್ತೇನೆ. ಬರೆದ ಮೇಲೆ ಹಣವನ್ನೂ ಹೊಂದಿಸಿಕೊಳ್ಳುತ್ತೇನೆ. ಅದಾದ ಮೇಲೆ ನಾನೇ ನಿರ್ದೇಶನ ಮಾಡುತ್ತೇನೆ’ ಎಂದು ಮಾತು ವಿಸ್ತರಿಸಿ ನಕ್ಕರು.

‘ಬ್ರಹ್ಮ’ ಚಿತ್ರದ ಬಳಿಕ ನಟ ಉಪೇಂದ್ರ ಮತ್ತು ಚಂದ್ರು ‘ಐ ಲವ್‌ ಯು’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಜೂನ್‌ 14ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ. ಉಪ್ಪಿ ಶೈಲಿ ಮತ್ತು ಚಂದ್ರುಶೈಲಿ ಹದವಾಗಿ ಬೆರೆತಿರುವ ಚಿತ್ರ ಇದು. ಸಿನಿಮಾದ ಟ್ರೇಲರ್‌ ಒಂದು ಕೋಟಿ ವ್ಯೂವ್ಸ್‌ ಗಿಟ್ಟಿಸಿಕೊಂಡಿದೆ.

‘ಪ್ರತಿ ಮನುಷ್ಯನಲ್ಲೂ ಪ್ರೀತಿ ಇರುತ್ತದೆ. ಎಲ್ಲರಲ್ಲೂ ಪ್ರೀತಿ ಅರಳುತ್ತದೆ. ಒಂದು ನಿರ್ದಿಷ್ಟ ವಯಸ್ಸಿಗೆ ಬಂದಾಗ ಪಕ್ವವಾಗುತ್ತದೆ. ಆಗ ಹುಡುಗಿಯ ಮುಂದೆ ಪ್ರೀತಿ ತೋಡಿಕೊಳ್ಳಬೇಕು ಅನಿಸುತ್ತದೆ.ಆದರೆ, ಎಲ್ಲಿ ಅದನ್ನು ಲ್ಯಾಂಡಿಂಗ್‌ ಮಾಡಬೇಕು ಎನ್ನುವುದು ಗೊತ್ತಿರುವುದಿಲ್ಲ. ಹಾಗಾಗಿ, ಒಬ್ಬರದು ದುರಂತವಾದರೆ, ಮತ್ತೊಬ್ಬರ ಬದುಕಿನಲ್ಲಿ ಅದು ಕವಲುದಾರಿಯಾಗಿ ಹರಿಯುತ್ತದೆ. ನನಗೆ ಇದಕ್ಕೊಂದು ನಿಜವಾದ ವ್ಯಾಖ್ಯಾನ ಕೊಡಬೇಕು ಅನಿಸಿತು. ಆಗ ಜೀವ ತಳೆದಿದ್ದೇ ಐ ಲವ್‌ ಯು ಸಿನಿಮಾ’ ಎಂದು ಕಥೆ ಹುಟ್ಟಿದ ಬಗೆಯನ್ನು ವಿವರಿಸಿದರು.

‘ಚಿತ್ರದ ಮೊದಲಾರ್ಧ ಯುವಜನರಿಗೆ ಮೀಸಲು. ದ್ವಿತೀಯಾರ್ಧ ಕೌಟುಂಬಿಕ ಪ್ರೇಕ್ಷಕರಿಗೆ. ಎರಡೂ ವರ್ಗದ ಪ್ರೇಕ್ಷಕರನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಉಪ್ಪಿ ಸರ್‌ ಅವರದ್ದು ವಿಭಿನ್ನವಾದ ಶೈಲಿ. ನನ್ನದು ಭಾವುಕತೆಯ ಹಾದಿ. ಒಂದೇ ದಾರಿಯಲ್ಲಿ ಈ ಎರಡನ್ನೂ ಬೆಸೆದಿದ್ದೇನೆ’ ಎಂದರು.

ಈ ಸಿನಿಮಾದ ಕಥೆ ಹುಟ್ಟಿದ್ದು ಹೇಗೆ?

ನಮ್ಮ ಜನರೇಷನ್‌ನಲ್ಲಿ ಪ್ರೀತಿ ಚಿಗುರೊಡೆದು, ಭಾವನೆಗಳು ಒಂದು ಹದಕ್ಕೆ ಬರುವಾಗ 20ರಿಂದ 22 ವರ್ಷ ಹಿಡಿಯುತ್ತಿತ್ತು. ಇದು ಡಿಜಿಟಲ್‌ ಯುಗ. ಯುವಜನಾಂಗದ ಮನಸ್ಥಿತಿ ತುಂಬಾ ಭಿನ್ನವಾಗಿದೆ. ನಿರ್ದಿಷ್ಟ ವಯಸ್ಸಿಗೆ ಬರುವ ಮೊದಲೇ ಅವರ ಬದುಕಿನಲ್ಲಿ ಎಲ್ಲವೂ ನಡೆದು ಹೋಗಿರುತ್ತದೆ. ಸೆಕ್ಸ್‌ ಕೂಡ ಇದರಿಂದ ಹೊರತಲ್ಲ. ಇದನ್ನು ನೋಡಿದಾಗ ನಾವು ಬದಲಾಗಬೇಕಾ ಅಥವಾ ಜನರೇಷನ್‌ ಬದಲಾಗಬೇಕಾ ಎನಿಸುತ್ತದೆ. ನಾನು ತೆಲುಗಿನ ‘ಅರ್ಜುನ್‌ ರೆಡ್ಡಿ’ ಸಿನಿಮಾ ನೋಡಿದೆ. ಅದರಲ್ಲಿ ಎಲ್ಲವನ್ನೂ ಹಸಿ ಹಸಿಯಾಗಿ ಹೇಳಿದ್ದಾರೆ. ಪ್ರೇಕ್ಷಕರ ಅಭಿರುಚಿ ಎಷ್ಟೊಂದು ಬದಲಾಗಿದೆ ಎಂದು ಅನಿಸಿತು. ಆಯಾ ಕಾಲಘಟ್ಟದ ಯುವಜನರು ಏನು ಬಯಸುತ್ತಾರೋ ಅದನ್ನೇ ನಾವು ಕೊಡಬೇಕು. ಆಗಲೇ ಚಿತ್ರಕ್ಕೆ ಯಶಸ್ಸು ಸಿಗುವುದು.

ಉಪೇಂದ್ರ ಅವರೊಟ್ಟಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಪ್ರಸ್ತುತ ತೆಲುಗು ಚಿತ್ರರಂಗದಲ್ಲಿ ಹೊಸ ಅಲೆಯೊಂದು ಎದ್ದಿದೆ. ಹೊಸ ಬಗೆಯ ಕಥೆಗಳು ತೆರೆಯ ಮೇಲೆ ಬರುತ್ತಿವೆ. ಎರಡು ದಶಕದ ಹಿಂದೆಯೇ ಕನ್ನಡದಲ್ಲಿ ಉಪೇಂದ್ರ ಅವರು ಈ ಟ್ರೆಂಡ್‌ ಸೃಷ್ಟಿಸಿದ್ದರು. ಹಾಗಾಗಿ, ಐ ಲವ್‌ ಯು ಚಿತ್ರದ ಕಥೆ ಬಗ್ಗೆ ಅವರಿಗೆ ಹೇಳಿದಾಗ ತಕ್ಷಣವೇ ಒಪ್ಪಿಕೊಂಡರು. ಉಪ್ಪಿ ಮತ್ತು ರಚಿತಾ ರಾಮ್‌ ಕಾಂಬಿನೇಷನ್‌ ಚೆನ್ನಾಗಿ ಮೂಡಿಬಂದಿದೆ.

ಯುವಜನರಿಗೆ ಈ ಚಿತ್ರದ ಮೂಲಕ ಏನನ್ನು ಹೇಳಲು ಹೊರಟಿದ್ದೀರಿ.

ಕಾಲೇಜು ಹುಡುಗರು ಹುಡುಗಿಯರ ಮುಂದೆ ಪ್ರೀತಿ ತೋಡಿಕೊಳ್ಳಲು ಮಾನಸಿಕವಾಗಿ ತೊಳಲಾಟ ಅನುಭವಿಸುತ್ತಾರೆ. ಓದಿನ ಹಂತದಲ್ಲಿ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ. ಕೊನೆಗೆ ಅವಳು ಸಿಗದಿದ್ದಾಗ ಜೀವನಪೂರ್ತಿ ಪರದಾಡುತ್ತಾರೆ. ಸುಂದರ ಹುಡುಗಿಯರನ್ನು ಕಂಡಾಗ ಅವರ ಮೇಲೆ ಕ್ರಷ್‌ ಆಗುವುದು ಸಹಜ. ಕೆಲವರು ಪ್ರೇಯಸಿಗಾಗಿ ಪ್ರಾಣ ಕೊಡಲು ಹೋಗುತ್ತಾರೆ. ಆದರೆ ಅವಳು ಸಿಗುತ್ತಾಳೋ, ಇಲ್ಲವೋ ಎನ್ನುವುದು ಗೊತ್ತಿರುವುದಿಲ್ಲ. ‘ಪ್ರೀತಿ’ ಎಂಬ ಪದ ಇಟ್ಟುಕೊಂಡು ಸಮಾಜದಲ್ಲಿ ಕೆಲವರು ಉದ್ಧಾರ ಆಗುತ್ತಾರೆ. ಮತ್ತೆ ಕೆಲವರು ಹಾಳಾಗುತ್ತಾರೆ. ಪ್ರೀತಿಯನ್ನು ಬದುಕಿನಲ್ಲಿ ಹೇಗೆ ನಿಭಾಯಿಸಬೇಕು ಎನ್ನುವುದನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇನೆ.

ನಿಮ್ಮ ಹಿಂದಿನ ಚಿತ್ರಗಳಿಗಿಂತ ಈ ಸಿನಿಮಾ ಹೇಗೆ ಭಿನ್ನವಾಗಿದೆ?

‘ತಾಜ್‌ಮಹಲ್‌’ನಲ್ಲಿ ಪ್ರೀತಿ ಇತ್ತು. ‘ಮೈಲಾರಿ’ಯಲ್ಲಿ ಆ್ಯಕ್ಷನ್‌ ಮೇಳೈಸಿತ್ತು. ‘ಬ್ರಹ್ಮ’ ಪಿರಿಯಾಡಿಕ್‌ ಚಿತ್ರ. ‘ಕೋ.. ಕೋ’ ಚಿತ್ರದಲ್ಲಿ ಫನ್‌ ಇತ್ತು. ನಾನು ಎಲ್ಲಾ ತರಹದ ಸಿನಿಮಾ ಮಾಡಿರುವೆ. ರಿಮೇಕ್‌ ಕೂಡ ಮಾಡಿದ್ದೇನೆ. ನನ್ನ ಸಿನಿಮಾ ಎಂದಾಗ ಎಮೋಷನ್‌ ಮತ್ತು ಪಕ್ಕಾ ಸಂದೇಶ ಇರುತ್ತದೆ ಎಂಬುದು ಪ್ರೇಕ್ಷಕರಿಗೆ ಗೊತ್ತು. ಆ ಎಮೋಷನ್‌ಗಿಂತಲೂ ಆಚೆಚಂದ್ರುಸಿನಿಮಾ ಮಾಡುತ್ತಾರೆ ಎನ್ನುವುದನ್ನು ಇದನ್ನು ನೋಡಿದಾಗ ಗೊತ್ತಾಗುತ್ತದೆ.

ಕೌಟುಂಬಿಕ ವರ್ಗದ ಪ್ರೇಕ್ಷಕರಿಗೆ ಯಾವ ಸಂದೇಶವಿದೆ?

ಪ್ರತಿಯೊಬ್ಬರು ನೋಡಬೇಕಾದ ಸಿನಿಮಾ ಇದು. ಕ್ಲೈಮ್ಯಾಕ್ಸ್ ನೋಡಿದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾರೆ. ಒಮ್ಮೆ ನೋಡಿದವರು ಇಡೀ ಕುಟುಂಬವನ್ನು ಕರೆದುಕೊಂಡು ಥಿಯೇಟರ್‌ ಬರುತ್ತಾರೆ. ಹಾಗಾಗಿಯೇ, ನಾನು ‘ಕಡ್ಡಾಯವಾಗಿ ಕುಟುಂಬ ಸಮೇತರಾಗಿ ಬನ್ನಿ’ ಎಂದು ಹಾಕಿದ್ದೇನೆ. ಚಿತ್ರದಲ್ಲಿ ‘ಎರಾಟಿಕ್‌’ ಇದೆ. ಅದು ಅಶ್ಲೀಲತೆ ಅಲ್ಲ. ನವೀರಾದ ಪ್ರೀತಿ ಅಷ್ಟೇ. ಕೊನೆಯಲ್ಲಿ ಎಲ್ಲರ ಮನದಲ್ಲೂ ಐ ಲವ್‌ ಯು ಉಳಿಯುತ್ತದೆ. ಅವರ ಮನೆಯಲ್ಲಿ ನೆಲೆಸುತ್ತದೆ.

ಮುಂದಿನ ಯೋಜನೆಗಳ ಬಗ್ಗೆ ಹೇಳಿ.

ಎರಡು ಕಥೆಗಳನ್ನು ಬರೆದುಕೊಂಡಿರುವೆ. ಇನ್ನೂ ಅವುಗಳ ಕುಸುರಿ ಕೆಲಸ ಬಾಕಿ ಇದೆ. ಪಕ್ಕಾ ರೌಡಿಸಂ ಸಿನಿಮಾ ಮಾಡುತ್ತೇನೆ. ಅದು ಪ್ರಯೋಗಾತ್ಮಕ ಚಿತ್ರವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT