ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಹತ್ಯೆ ಪ್ರಕರಣ | ನಟ ಚಿಕ್ಕಣ್ಣ ವಿಚಾರಣೆ: ಹೇಳಿಕೆ ದಾಖಲು

ಪಾರ್ಟಿ ಸ್ಥಳದಲ್ಲಿ ದರ್ಶನ್‌ ಜತೆಗಿದ್ದ ಆರೋಪ
Published 17 ಜೂನ್ 2024, 14:40 IST
Last Updated 17 ಜೂನ್ 2024, 14:40 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿ ನಟ ದರ್ಶನ್‌ ಸ್ನೇಹಿತರೂ ಆಗಿರುವ ನಟ ಚಿಕ್ಕಣ್ಣ ಅವರನ್ನು ಸೋಮವಾರ ಪಶ್ಚಿಮ ವಿಭಾಗದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದರು.

ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ಬರುವಂತೆ ಸೂಚಿಸಿ ಸೋಮವಾರ ಬೆಳಿಗ್ಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಸಂಜೆ 4 ಗಂಟೆ ಸುಮಾರಿಗೆ ವಿಚಾರಣೆಗೆ ಬರುತ್ತಿದ್ದಂತೆ ಚಿಕ್ಕಣ್ಣ ಅವರನ್ನು ರಾಜರಾಜೇಶ್ವರಿ ನಗರದಲ್ಲಿರುವ ಸ್ಟೋನಿ ಬ್ರೂಕ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಆರೋಪಿ ದರ್ಶನ್‌ ಹಾಗೂ ಅದರ ಮಾಲೀಕರೂ ಆಗಿರುವ ಆರೋಪಿ ವಿನಯ್‌ ಜತೆಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು. ಅಲ್ಲಿಂದ ಚಿಕ್ಕಣ್ಣ ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆ ತಂದ ಪೊಲೀಸರು ವಿಚಾರಣೆ ನಡೆಸಿದರು.

ಕೃತ್ಯ ಎಸಗುವುದಕ್ಕೂ ಮುನ್ನ ರಾಜರಾಜೇಶ್ವರಿ ನಗರದ ರೆಸ್ಟೋರೆಂಟ್‌ನಲ್ಲಿ ಜೂನ್‌ 8ರ ಸಂಜೆ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ದರ್ಶನ್‌ ಜತೆಗೆ ಚಿಕ್ಕಣ್ಣ ಇದ್ದರು ಎಂಬುದಕ್ಕೆ ಪುರಾವೆ ಲಭಿಸಿದ್ದು ಅದರ ಆಧಾರದಲ್ಲಿ ನೋಟಿಸ್‌ ಜಾರಿ ಮಾಡಲಾಗಿತ್ತು. ಪಾರ್ಟಿ ವೇಳೆ ಕೃತ್ಯದ ಬಗ್ಗೆ ಏನಾದರೂ ಚರ್ಚೆ ನಡೆದಿತ್ತೇ? ಪಾರ್ಟಿಯಲ್ಲಿ ಯಾರು ಭಾಗಿಯಾಗಿದ್ದರು ಎಂಬುದರ ಬಗ್ಗೆ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಪಾರ್ಟಿಯಲ್ಲಿ ಇದ್ದವರನ್ನು ಗುರುತಿಸುವಂತೆ ಬಂಧಿತ ಆರೋಪಿಗಳ ಚಿತ್ರ ತೋರಿಸಿ ಹೇಳಿಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಶೆಡ್‌ಗೆ ಚಿಕ್ಕಣ್ಣ ತೆರಳಿದ್ದರು ಎಂಬುದಕ್ಕೆ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಪಾರ್ಟಿಯಲ್ಲಿದ್ದರು ಎಂಬುದಕ್ಕೆ ಸಿ.ಸಿ. ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳು ಸಿಕ್ಕಿವೆ. ಅಲ್ಲದೇ ಬಂಧಿತರು ಚಿಕ್ಕಣ್ಣ ಹೆಸರು ಬಾಯ್ಬಿಟ್ಟಿದ್ದರು’ ಎಂದು ತನಿಖಾ ಮೂಲಗಳು ಸಿಕ್ಕಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT