ಮಂಗಳವಾರ, ಡಿಸೆಂಬರ್ 6, 2022
21 °C

ಕಾಂತಾರ ಇಂದು ತೆರೆಗೆ: ರಿಷಬ್‌ ಅನುಭವದ ಸುಪ್ತಶಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿರ್ದೇಶಕನಾಗಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’, ‘ಕಿರಿಕ್‌ ಪಾರ್ಟಿ’ಯಂಥ ಹಿಟ್‌ ಸಿನಿಮಾಗಳನ್ನು ತೆರೆಯ ಮೇಲೆ ತಂದ ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಇದೀಗ ‘ಕಾಂತಾರ– ಒಂದು ದಂತಕಥೆ’ ಮೂಲಕ ಕರಾವಳಿಯ ಮಣ್ಣಿನ ಕಥೆ ಹೊತ್ತು ಬಂದಿದ್ದಾರೆ. ಸಿನಿಮಾ ಶುಕ್ರವಾರ(ಸೆ.30) ತೆರೆಕಾಣುತ್ತಿದ್ದು, ಸಿನಿಮಾ ಹಿಂದಿನ ನೆನಪುಗಳ ಬುತ್ತಿ ಬಿಚ್ಚಿಟ್ಟಿದ್ದಾರೆ ಶೆಟ್ರು...

ದೈಹಿಕವಾಗಿ ಹೆಚ್ಚಿನ ಶ್ರಮಹಾಕಬೇಕಿದ್ದ ಪಾತ್ರವೊಂದನ್ನು ನಿಭಾಯಿಸುತ್ತಾ ನಿರ್ದೇಶನ ಮಾಡಿದ ಬಗೆಯಿಂದಲೇ ತಮ್ಮ ಮಾತು ಆರಂಭಿಸಿದ ರಿಷಬ್‌, ‘ಈ ಪಾತ್ರಕ್ಕಾಗಿ ನಾನು ದೈಹಿಕವಾಗಿ ಹೆಚ್ಚಿನ ಶ್ರಮ ಹಾಕಬೇಕಾಗಿ ಬಂದಿಲ್ಲ. ಏಕೆಂದರೆ ನಾನು ರೆಸ್ಲಿಂಗ್‌ ಹಾಗೂ ಜೂಡೋ ತರಬೇತಿಯನ್ನು ಮೊದಲೇ ಪಡೆದಿದ್ದೆ. ಜಿಮ್‌ ಮಾಡಿ, ಸಿಕ್ಸ್‌ ಪ್ಯಾಕ್‌ ಮಾಡಿಕೊಂಡು ಪಾತ್ರ ನಿಭಾಯಿಸುವ ಯಾವ ಅಗತ್ಯವೂ ಇರಲಿಲ್ಲ. ಆ ಪಾತ್ರಕ್ಕೆ ಫಿಟ್ನೆಸ್‌ ತುಂಬಾ ಅಗತ್ಯವಿತ್ತು. ನಾನು ಊರಿನಲ್ಲಿ ಕೆಲಸ ಮಾಡುತ್ತಾ, ಕಂಬಳದಲ್ಲಿ ಕೋಣ ಓಡಿಸುವವನು ಹೇಗೆ ಕಾಣುತ್ತಾನೋ ಹಾಗೆ ಕಾಣಬೇಕಿತ್ತು. ರಫ್‌ ಆ್ಯಂಡ್‌ ಟಫ್‌ ಕ್ಯಾರೆಕ್ಟರ್‌ ಅದು. ಹೀಗಾಗಿ ಚಿತ್ರೀಕರಣದ ವೇಳೆಯೇ ಮಿಕ್ಸ್‌ಡ್‌ ಮಾರ್ಷಲ್‌ ಆರ್ಟ್ಸ್‌ ಹಾಗೂ ಕಿಕ್‌ ಬಾಕ್ಸಿಂಗ್‌ ತರಬೇತಿ ಪಡೆಯುತ್ತಿದ್ದೆ. ಇದು ಕೋಣಗಳನ್ನು ಓಡಿಸಲೂ ಸಹಕಾರಿಯಾಯಿತು. ಒಮ್ಮೆ ಆ ದೈತ್ಯ ಕೋಣಗಳನ್ನು ಓಡಿಸಿದರೆ ಬಳಲಿ ಜೀವ ಹೋದಂತಾಗುತ್ತದೆ. ಅಂತಹುದರಲ್ಲಿ ನಾನು 36 ಸುತ್ತು ಆ ಕೋಣಗಳನ್ನು ಓಡಿಸಿದ್ದೆ’ ಎಂದು ನೆನಪಿಸಿಕೊಂಡರು.

‘ಕರಾವಳಿಯಲ್ಲಿ ದೈವಾರಾಧನೆಯನ್ನು ಭಕ್ತಿಯಿಂದ, ಕ್ರಮಬದ್ಧವಾಗಿ ಒಂದು ಸಮುದಾಯದವರೇ ಮಾಡಬೇಕೆಂದಿದೆ. ಸಿನಿಮಾಗೋಸ್ಕರ ಈ ದೃಶ್ಯಗಳನ್ನು ಮಾಡುವಾದ ಭೂತಕಟ್ಟುವವರನ್ನು ಸಂಪರ್ಕಿಸಿ, ಮಾಹಿತಿ ಪಡೆದು ನೈಜವಾಗಿ ಅಭಿನಯಿಸಲು ಪ್ರಯತ್ನಿಸಿದೆ. ಇದೊಂದು ರೀತಿಯ ಆಧ್ಯಾತ್ಮಿಕ ಪಯಣವಾಗಿತ್ತು. ನಾನು ದೈವಗಳನ್ನು ನಂಬುತ್ತೇನೆ, ಆರಾಧಿಸುತ್ತೇನೆ. ಪರಶುರಾಮನ ಸೃಷ್ಟಿಯ ಕರಾವಳಿಯಲ್ಲಿ ನಾವು ಮೊದಲು ಆರಾಧಿಸುವುದೇ ದೈವಗಳನ್ನು. ಇದು ಎಷ್ಟು ಆಳವಾಗಿ ಬೇರೂರಿದೆ ಎಂದರೆ ವಿದೇಶದಲ್ಲಿ ಕೆಲಸದಲ್ಲಿರುವವನೂ ವರ್ಷಕ್ಕೊಮ್ಮೆ ನಡೆಯುವ ಕೋಲಕ್ಕೆ(ದೈವಾರಾಧನೆ) ಬಂದೇ ಬರುತ್ತಾನೆ. ಈ ಆಚರಣೆಗಳೇ ನಮ್ಮ ಗುರುತು. ಈ ಪಾತ್ರ ಮಾಡುವುದಕ್ಕೆ ಹಿರಿಯರು ಸಲಹೆ ನೀಡಿದ್ದರು. ಭೂತಕಟ್ಟುವ ಪಾತ್ರದ ಚಿತ್ರೀಕರಣದ ತಿಂಗಳ ಮೊದಲೇ ನಾನು ಮಾಂಸಾಹಾರ ಸೇವನೆಯನ್ನು ಬಿಟ್ಟಿದ್ದೆ. ಒಂದು ವ್ರತದ ರೀತಿ ಇದನ್ನು ನಿಭಾಯಿಸಿದೆ. ಅವಲಕ್ಕಿ, ಎಳನೀರು ಕುಡಿದುಕೊಂಡೇ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ’ ಎನ್ನುತ್ತಾರೆ ರಿಷಬ್‌.

‘ಭೂತಕೋಲದ ಭಾಗದ ಚಿತ್ರೀಕರಣವನ್ನು ಸಂಪೂರ್ಣವಾಗಿ ರಾಜ್‌ ಬಿ.ಶೆಟ್ಟಿ ನಿಭಾಯಿಸಿದ್ದರು. ಏಕೆಂದರೆ ನನಗಿಂತ ಹೆಚ್ಚಾಗಿ ಈ ಆರಾಧನೆಯನ್ನು ನೋಡಿಕೊಂಡು ಬೆಳೆದವರು ಅವರು. ಇಷ್ಟೇ ಅಲ್ಲ ಆ ಪಾತ್ರದೊಳಗೆ ಸೇರಿದ ಬಳಿಕ ಕೆಲವೊಮ್ಮೆ ಹೊರಗಡೆ ಏನಾಗುತ್ತಿದೆ ಎನ್ನುವುದನ್ನೂ ಬೇರ್ಪಡಿಸಲಾಗದ ಅನುಭವ ನನಗಾಗಿತ್ತು. ಈ ಕಥೆ ನನ್ನ ಸಿನಿಮಾ ಪಟ್ಟಿಯಲ್ಲೇ ಇರಲಿಲ್ಲ. ಆದರೆ ಆ ಒಂದು ಸುಪ್ತಶಕ್ತಿಯೇ ಇದನ್ನು ಆರಿಸುವಂತೆ ಮಾಡಿತು ಎಂದು ನನ್ನ ಒಳಮನಸ್ಸು ಹೇಳುತ್ತಿದೆ. ಈ ಆರಾಧನೆಯ ಪಾವಿತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಇದನ್ನು ಚಿತ್ರೀಕರಿಸಿದ್ದೇವೆ’ ಎನ್ನುವುದು ರಿಷಬ್‌ ಮಾತು.    

‘ಮಾನವ ಮತ್ತು ಪ್ರಕೃತಿಯ ನಡುವಿನ ಸಂಘರ್ಷ ಈ ಸಿನಿಮಾದ ಕಥಾಹಂದರ. ಪ್ರಕೃತಿಯಲ್ಲಿ ಒಂದು ರೀತಿಯ ಶಕ್ತಿ, ಚೈತನ್ಯ ಇದೆ ಎನ್ನುವುದನ್ನು ಕರಾವಳಿ ಭಾಗದ ಜನರು ಸ್ವತಃ ಅನುಭವಿಸಿದ್ದಾರೆ. ಪ್ರಕೃತಿಯ ನಡುವೆ ಚಿತ್ರೀಕರಣ ಮಾಡುತ್ತಿದ್ದ ವೇಳೆ ಈ ಸುಪ್ತಶಕ್ತಿಯ ಅನುಭವ ನನಗಾಗಿದೆ, ನಮ್ಮ ತಂಡವೂ ಇದನ್ನು ಅನುಭವಿಸಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು