ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಸ್ಥಳೀಯ ಪ್ರತಿಭೆ!

Last Updated 11 ಮಾರ್ಚ್ 2021, 1:36 IST
ಅಕ್ಷರ ಗಾತ್ರ

ಭದ್ರಾವತಿ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಭಾರಿ ಸದ್ದು ಮಾಡುತ್ತಿರುವ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರ ಗುರುವಾರ ತೆರೆ ಕಾಣಲಿದ್ದು, ಚಿತ್ರದಲ್ಲಿ ಸ್ಥಳೀಯ ಪ್ರತಿಭೆ ಆಶಾ ಭಟ್ ನಾಯಕಿಯಾಗಿದ್ದಾರೆ.

2019ರಲ್ಲಿ ಬಾಲಿವುಡ್ ಚಿತ್ರ ‘ಜಂಗ್ಲಿ’ಯಲ್ಲಿ ದ್ವಿತೀಯ ನಾಯಕಿಯಾಗಿ ಅಭಿನಯಿಸುವ ಮೂಲಕ ಹೆಸರು ಮಾಡಿದ್ದ ಆಶಾ, ಮೊದಲ ಬಾರಿಗೆ ಕನ್ನಡ ಚಿತ್ರದ ನಾಯಕಿ ನಟಿಯಾಗಿ ತೆರೆ ಮೇಲೆ ಕಾಣಿಸುತ್ತಿದ್ದಾರೆ.

ಭದ್ರಾವತಿಯಲ್ಲಿ ಸೇಂಟ್ ಚಾರ್ಲ್ಸ್ ಕಾನ್ವೆಂಟ್‌ನಲ್ಲಿ ವಿದ್ಯಾಭ್ಯಾಸ ಆರಂಭಿಸಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಆಶಾ, ದೆಹಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪ್ರತಿನಿಧಿಸಿದ ಹೆಗ್ಗಳಿಕೆ ಪಡೆದಿದ್ದರು.

ಕಲೆ, ಸಂಸ್ಕೃತಿ ಹಾಗೂ ಸಾಹಸಮಯ ಚಟುವಟಿಕೆಯಲ್ಲಿ ತಮ್ಮದೇ ಛಾಪು ಮೂಡಿಸುವ ಮೂಲಕ ಹೆಸರು ಮಾಡಿದ್ದ ಆಶಾ, 2014ರಲ್ಲಿ ‘ಮಿಸ್ ಸುಫ್ರಾ’ ಇಂಟರ್‌ನ್ಯಾಷನಲ್ ಸುಂದರಿಯಾಗಿ ಆಯ್ಕೆಯಾಗುವ ಮೂಲಕ ಜಾಹೀರಾತು ಕ್ಷೇತ್ರದಲ್ಲಿ ತಮ್ಮ ಹೆಜ್ಜೆಯನ್ನು ಬೆಳೆಸಿದರು.

ಇದರ ನಡುವೆ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಕಲಿಕೆ ವೇಳೆ ಸಾಕಷ್ಟು ಅವಕಾಶ ಸಿಕ್ಕಾಗಲೂ ಓದಿಗಾಗಿ ಅದನ್ನು ನಿರಾಕರಿಸುತ್ತಾ ಮಾಡೆಲಿಂಗ್ ಕ್ಷೇತ್ರಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದರು.

2020ರಲ್ಲಿ ತಾವು ಬೆಳೆದ ಕನ್ನಡದ ನೆಲದಲ್ಲಿ ಸಿಕ್ಕ ಮೊದಲ ಚಿತ್ರ ‘ರಾಬರ್ಟ್’ ಮೂಲಕ ಸ್ಯಾಂಡಲ್‌ವುಡ್ ನಾಯಕಿಯಾಗಿ ಹೊರಹೊಮ್ಮಿದ್ದಾರೆ.

2009ರಲ್ಲಿ ಸಾರ್ಕ್ ರಾಷ್ಟ್ರಗಳಲ್ಲಿ ಎನ್‌ಸಿಸಿ ವಿದ್ಯಾರ್ಥಿನಿಯಾಗಿ ಪ್ರವಾಸ ಮಾಡುವ ಮೂಲಕ ಹಲವು ಸಾಮಾಜಿಕ ಸೇವೆಗಳನ್ನು ನಡೆಸುತ್ತಾ ಬಂದಿದ್ದ ಇವರು 2014ರ ಮಿಸ್ ಸುಫ್ರಾ ಸುಂದರಿ ಆಯ್ಕೆ ನಂತರ ವಿವಿಧ ರಾಷ್ಟ್ರಗಳಿಗೆ ತೆರಳಿ ಸೇವೆಯನ್ನು ಮಾಡಿದ ಕೀರ್ತಿ ಹೊತ್ತಿದ್ದಾರೆ.

ಇಲ್ಲಿನ ಹಾಲಪ್ಪ ವೃತ್ತದಲ್ಲಿ ಮೆಡಿಕಲ್ ಲ್ಯಾಬ್ ಸೆಂಟರ್ ಹೊಂದಿದ್ದ ಸುಬ್ರಹ್ಮಣ್ಯ, ಶ್ಯಾಮಲಾ ಭಟ್ ದಂಪತಿಯ ಎರಡನೇ ಮಗಳಾದ ಆಶಾ ‘ರಾಬರ್ಟ್’ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಸ್ಯಾಂಡಲ್‌ವುಡ್ ಪ್ರಪಂಚಕ್ಕೆ ಅನಾವರಣ ಮಾಡಲು ಹೊರಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT