ಗುರುವಾರ , ಜುಲೈ 16, 2020
26 °C

ಮತ್ತೆ ರೀರೆಕಾರ್ಡಿಂಗ್‌ಗೆ ಕುಳಿತ ‘ಸಲಗ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ದುನಿಯಾ ವಿಜಯ್‌ ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ಚಿತ್ರ ‘ಸಲಗ’. ಶೂಟಿಂಗ್‌ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿದ್ದ ಚಿತ್ರತಂಡ ಬೇಸಿಗೆ ರಜೆ ವೇಳೆಗೆ ಥಿಯೇಟರ್‌ಗೆ ಬರಲು ನಿರ್ಧರಿಸಿತ್ತು. ತಂಡದ ಈ ಆಸೆಗೆ ಕೊರೊನಾ ಅಡ್ಡಿಪಡಿಸಿತು.

ಕರ್ನಾಟಕದಲ್ಲಿ ಚಿತ್ರಮಂದಿರಗಳು ಯಾವಾಗ ತೆರೆಯುತ್ತವೆ ಎಂಬುದು ಇನ್ನೂ ಖಚಿತವಾಗಿಲ್ಲ. ಹಾಗಾಗಿ, ಥಿಯೇಟರ್‌ಗೆ ಬರಲು ಸರದಿ ಸಾಲಿನಲ್ಲಿ ನಿಂತಿರುವ ಸಿನಿಮಾಗಳ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿರುವುದು ಸಹಜ. ಭೂಗತಲೋಕದ ಕಥಾಹಂದರ ಹೊಂದಿರುವ ‘ಸಲಗ’ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ. ಕೊರೊನಾ ಭೀತಿಯ ಪರಿಣಾಮ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಈ ನಡುವೆಯೇ ಚಿತ್ರತಂಡ ಮತ್ತೆ ರೀರೆಕಾರ್ಡಿಂಗ್‌ ಮತ್ತು ಎಡಿಟಿಂಗ್‌ ಕೆಲಸದಲ್ಲಿ ತೊಡಗಿದೆಯಂತೆ.

‘ಪಾತಕಲೋಕ, ಪೊಲೀಸ್‌ ಮತ್ತು ವ್ಯವಸ್ಥೆಯ ಸುತ್ತ ಇದರ ಚಿತ್ರಕಥೆ ಹೆಣೆಯಲಾಗಿದೆ. ಹಾಗಾಗಿ, ದುನಿಯಾ ವಿಜಯ್ ಮತ್ತು ಸಂಗೀತ ನಿರ್ದೇಶಕ ಚರಣ್‌ರಾಜ್‌ ಮತ್ತೆ ರೀರೆಕಾರ್ಡಿಂಗ್‌ ಕೆಲಸದಲ್ಲಿ ತೊಡಗಿದ್ದಾರೆ. ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಶೀಘ್ರವೇ, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮುಂದೆ ಸಿನಿಮಾ ಹೋಗಲಿದೆ’ ಎಂದು ಚಿತ್ರತಂಡದ ಸದಸ್ಯ ಹಾಗೂ ಸಂಭಾಷಣೆ ಬರೆದಿರುವ ಮಾಸ್ತಿ ‘ಪ್ರಜಾ ಪ್ಲಸ್‌’ಗೆ ವಿವರಿಸಿದರು.

ಈಗಾಗಲೇ, ‘ಸಲಗ’ದ ಹಾಡುಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮತ್ತೊಂದೆಡೆ ದೊಡ್ಡ ಸಿನಿಮಾಗಳ ಮೂಲಕ ಮತ್ತೆ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವುದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಉದ್ದೇಶ. ಕೊರೊನಾ ಭೀತಿ ಕಡಿಮೆಯಾದ ಬಳಿಕ ಸಿನಿಮಾ ಚಟುವಟಿಕೆಗಳು ಗರಿಗೆದರಲಿವೆ. ಹಾಗಾಗಿ, ಸೂಕ್ತ ಸಮಯ ನೋಡಿಕೊಂಡು ಸಿನಿಮಾ ಬಿಡುಗಡೆಗೆ ನಿರ್ಧರಿಸಿದ್ದಾರೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್.

ಕಳೆದ ಎರಡು ವರ್ಷಗಳಿಂದ ದುನಿಯಾ ವಿಜಯ್‌ ನಟನೆಯ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಹಾಗಾಗಿ, ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಬೆಂಗಳೂರಿನ ರೌಡಿಗಳ ಅಡ್ಡಗಳಲ್ಲಿಯೇ ‘ಸಲಗ’ದ ಬಹುತೇಕ ಭಾಗದ ಚಿತ್ರೀಕರಣ ನಡೆದಿದೆ. ವ್ಯವಸ್ಥೆಯು ಭೂಗತ ಪಾತಕಿಯನ್ನು ಹೇಗೆಲ್ಲಾ ಬಳಸಿಕೊಳ್ಳುತ್ತದೆ ಎನ್ನುವುದೇ ಇದರ ತಿರುಳು. ರೌಡಿಗಳ ಪಶ್ಚಾತ್ತಾಪ, ಅವರು ಆ ಕೃತ್ಯಕ್ಕೆ ಇಳಿಯಲು ಕಾರಣ ಮತ್ತು ಅದರ ಪರಿಣಾಮದ ಸುತ್ತ ಚಿತ್ರಕಥೆ ಸಾಗಲಿದೆಯಂತೆ.

ಇದರಲ್ಲಿ ನಟ ಧನಂಜಯ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಜನಾ ಆನಂದ್‌ ಈ ಚಿತ್ರದ ನಾಯಕಿ. ಅವರದು ತನ್ನ ಪ್ರಿಯಕರನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಿರುವ ಬೋಲ್ಡ್‌ ಹುಡುಗಿಯ ಪಾತ್ರ. ಅಚ್ಯುತ್‌ ಕುಮಾರ್‌ ಮತ್ತು ರಂಗಾಯಣ ರಘು ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.