ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಲಿಗ್ರಾಮ’ ಸಿನಿಮಾದ ಚಿತ್ರೀಕರಣ ಪೂರ್ಣ

Last Updated 4 ಆಗಸ್ಟ್ 2018, 9:36 IST
ಅಕ್ಷರ ಗಾತ್ರ

ನಿರ್ದೇಶಕ ಹರ್ಷ ನಾರಾಯಣಸ್ವಾಮಿ ಮೂಲತಃ ವನ್ಯಜೀವಿ ಛಾಯಾಗ್ರಾಹಕರು. ಕ್ಯಾಮೆರಾದ ಬಗೆಗಿನ ಮೋಹ ಅವರನ್ನು ಸಿನಿಮಾರಂಗಕ್ಕೂ ಕರೆತಂದಿದೆ. ‘ಸಾಲಿಗ್ರಾಮ’ ಹೆಸರಿನ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದು, ಜನರು ಮುಂದೆ ಬರಲು ಸಜ್ಜಾಗಿದ್ದಾರೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಚಿತ್ರದಲ್ಲಿ ಧರ್ಮದ ಸುತ್ತ ಕಥೆ ಹೆಣೆಯಲಾಗಿದೆಯಂತೆ. ವ್ಯಕ್ತಿಯೊಬ್ಬ ಮಾಡುವ ಕರ್ಮದ ಮೇಲೆ ಫಲಾಫಲಗಳು ಲಭಿಸುತ್ತವೆ ಎನ್ನುವುದು ಚಿತ್ರತಂಡದ ಹೇಳಿಕೆ.

ಸಾಲಿಗ್ರಾಮ ಎನ್ನುವುದು ನಿರ್ದೇಶಕರ ಕಲ್ಪನೆಯ ಊರು. ಅಲ್ಲಿಗೆ ಕುಟುಂಬವೊಂದು ಬರುತ್ತದೆ. ಅಲ್ಲಿನ ಮನೆಯೊಂದರಲ್ಲಿ ತಂಗುತ್ತದೆ. ಆಗ ಸಮಸ್ಯೆಗಳ ಸುಳಿಗೆ ಸಿಲುಕುತ್ತದೆ. ಅದರಿಂದ ಹೇಗೆ ಹೊರಬರುತ್ತದೆ ಎಂಬ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆಯಂತೆ.

‘ಶಿವಮೊಗ್ಗ, ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮನಾಲಿಯಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಇದು ಕೌಟುಂಬಿಕ ಚಿತ್ರ. ಹಾರರ್‌, ಥ್ರಿಲ್ಲರ್‌ ಅಂಶವೂ ಇದೆ’ ಎಂದರು ನಿರ್ದೇಶಕ ಹರ್ಷ. ಚಿತ್ರಕ್ಕೆ ಬಂಡವಾಳ ಹೂಡಿರುವ ಜೊತೆಗೆ ಛಾಯಾಗ್ರಹಣದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.

ಹರ್ಷ ನಾರಾಯಣಸ್ವಾಮಿ
ಹರ್ಷ ನಾರಾಯಣಸ್ವಾಮಿ

ಸಿದ್ಧಾರ್ಥ ಈ ಚಿತ್ರದ ನಾಯಕ. ಚಿತ್ರದಲ್ಲಿ ಅವರು ಖಾಸಗಿ ಕಂಪನಿಯೊಂದರ ಉದ್ಯೋಗಿ. ‘ಕಂಪನಿಯಿಂದ ಸಂಸಾರ ಸಮೇತ ವರ್ಗಾವಣೆಗೊಂಡು ಸಾಲಿಗ್ರಾಮಕ್ಕೆ ಬರುತ್ತೇನೆ. ಅಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತವೆ ಎನ್ನುವುದೇ ಚಿತ್ರದ ತಿರುಳು. ಸಂಸಾರ ಮತ್ತು ಪ್ರೀತಿಯ ಸುತ್ತ ಕಥೆ ಸಾಗಲಿದೆ’ ಎಂದು ವಿವರಿಸಿದರು.

ದಿಶಾ ಪೂವಯ್ಯ ಈ ಚಿತ್ರದ ನಾಯಕಿ. ‘ಚಿತ್ರದಲ್ಲಿ ನಾನು ಎರಡು ಮಕ್ಕಳ ತಾಯಿಯಾಗಿ ನಟಿಸಿದ್ದೇನೆ. ಈ ಪಾತ್ರ ನಿರ್ವಹಿಸುವಾಗ ಸಾಕಷ್ಟು ಸವಾಲು ಎದುರಿಸಿದೆ. ಸಿನಿಮಾಟೋಗ್ರಫಿ ಚಿತ್ರದ ಜೀವಾಳ. ಹಾಡುಗಳು ಕೂಡ ಅದ್ಭುತವಾಗಿ ಮೂಡಿಬಂದಿವೆ’ ಎಂದರು.

ಇನ್ನೊಬ್ಬ ನಾಯಕಿ ಪಲ್ಲವಿಗೆ ಇದು ಮೂರನೇ ಚಿತ್ರ. ಅವರು ಅನಾಥ ಹುಡುಗಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನಾನು ಅನಾಥಾಶ್ರಮದಲ್ಲಿಯೇ ಬೆಳೆಯುತ್ತೇನೆ. ಅಲ್ಲಿಯೇ ಮಕ್ಕಳಿಗೆ ಪಾಠ ಮಾಡುತ್ತಿರುತ್ತೇನೆ. ನನ್ನ ಬದುಕಿನಲ್ಲಿ ಹುಡುಗನೊಬ್ಬನ ಪ್ರವೇಶವಾದಾಗ ಬದಲಾವಣೆಗಳಾಗುತ್ತವೆ’ ಎಂದು ತಮ್ಮ ಪಾತ್ರ ಕುರಿತು ವಿವರಿಸಿದರು.

ಚಿತ್ರದ ನಾಲ್ಕು ಹಾಡುಗಳಿಗೆ ಸನ್ನಿ ರಾಜ್‌ ಸಂಗೀತ ಸಂಯೋಜಿಸಿದ್ದಾರೆ. ರಂಜಿತ್ ರಾಜಕುಮಾರ್, ಹಿತೇಶ್‌, ಬೇವಿ ಮನಸ್ವಿ ತಾರಾಗಣದಲ್ಲಿದ್ದಾರೆ.

ಬೇಬಿ ಮನಸ್ವಿ
ಬೇಬಿ ಮನಸ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT