ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.3ಕ್ಕೆ ಅಂಬಿ ನಮನ

Last Updated 25 ಫೆಬ್ರುವರಿ 2019, 12:47 IST
ಅಕ್ಷರ ಗಾತ್ರ

ಬೆಂಗಳೂರು: ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ಮಾರ್ಚ್ 3ರಂದು ಸಂಜೆ 5.30ಗಂಟೆಗೆ ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜು ಆಟದ ಮೈದಾನದಲ್ಲಿ ಅಂಬಿ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂಬರೀಷ್‌ ಅಭಿಮಾನಿಗಳು ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಜೆ.ಪಿ. ನಗರದಲ್ಲಿ ಸಂಸ್ಥೆಯಿಂದ ಅಂಗವಿಕಲರ ಸ್ನೇಹಮಯಿಕಟ್ಟಡ ನಿರ್ಮಿಸಲಾಗುತ್ತಿದೆ. ಇದರ ಅಂದಾಜು ವೆಚ್ಚ ಸುಮಾರು ₹ 6 ಕೋಟಿ. ಈ ಕಟ್ಟಡದ ನಿಧಿ ಸಂಗ್ರಹಣೆಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಣದಡಿ ನಿರ್ಮಿಸುವ ಅಂಗವಿಕಲ ಕಲಾವಿದರ ಅಭ್ಯಾಸ ಭಾಗದ ಕಟ್ಟಡಕ್ಕೆ ದಿವಂಗತ ಅಂಬರೀಷ್‌ ಅವರ ಹೆಸರಿಡಲು ನಿರ್ಧರಿಸಲಾಗಿದೆ.

ಕನ್ನಡ ಚಿತ್ರರಂಗದ ನಟ, ನಟಿಯರು, ಗಾಯಕರು ಮತ್ತು ಎಸ್‌.ಪಿ. ಬಾಲಸುಬ್ರಮಣ್ಯಂ ಅವರಿಂದ ಸಂಗೀತ ರಸಸಂಜೆ ಮತ್ತು ನೃತ್ಯ ಕಾರ್ಯಕ್ರಮ ಜರುಗಲಿದೆ. ಸುಮಲತಾ ಅಂಬರೀಷ್‌, ರಾಕ್‌ಲೈನ್‌ ವೆಂಕಟೇಶ್‌, ದೊಡ್ಡಣ್ಣ, ಎಸ್‌.ಎ. ಚಿನ್ನೇಗೌಡ, ದೇವರಾಜ್, ಶ್ರೀನಾಥ್‌, ಜಯಂತಿ, ಭಾರತಿ ವಿಷ್ಣುವರ್ಧನ್, ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ರವಿಚಂದ್ರನ್, ಉಪೇಂದ್ರ, ದರ್ಶನ್, ಪ್ರೇಮ್‌, ಯೋಗಿ, ಹಂಸಲೇಖ, ಹರಿಕೃಷ್ಣ, ಗುರುಕಿರಣ್, ಅರ್ಜುನ್‌ ಜನ್ಯ, ಮಂಜುಳಾ ಗುರುರಾಜ್‌, ಅರ್ಚನಾ ಉಡುಪ ಭಾಗವಹಿಸಲಿದ್ದಾರೆ.

‘ಸಮರ್ಥನಂ ಸಂಸ್ಥೆ ಸ್ಥಾಪನೆಗೊಂಡು ಎರಡು ದಶಕ ಉರುಳಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು, ವಿವಿಧ ರಾಜ್ಯಗಳು, ಅಮೆರಿಕ, ಇಂಗ್ಲೆಂಡ್‌ನಲ್ಲೂ ಸಂಸ್ಥೆಯ ಶಾಖೆಗಳಿವೆ. ಅಂಗವಿಕಲರ ಪುನರ್ವಸತಿ, ವಿಶೇಷ ಶಾಲೆ, ಉಚಿತ ಶಿಕ್ಷಣ, ಊಟ, ವಸತಿ, ವಿವಿಧ ತರಬೇತಿ, ಕ್ರೀಡೆಗೆ ಒತ್ತು ನೀಡಿದೆ. ಸಂಸ್ಥೆಯಡಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ಇವರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದು ಹಿರಿಯ ಪೋಷಕ ನಟ ಶಿವರಾಂ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ, ನಿರ್ಮಾಪಕರ ಸಂಘಕ್ಕೂ ಮನವಿ ಮಾಡಲಾಗಿದೆ. ಸಂಘದ ಪದಾಧಿಕಾರಿಗಳು ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದರು.

ಸಮರ್ಥನಂ ಸಂಸ್ಥೆಯ ಮ್ಯಾನೇಜಿಂಗ್‌ ಟ್ರಸ್ಟಿ ಜಿ.ಕೆ. ಮಹಾಂತೇಶ್‌ ಮಾತನಾಡಿ, ಸಂಸ್ಥೆಯು ಭಾರತ ಅಂಧರ ಕ್ರಿಕೆಟ್‌ ಮಂಡಳಿಯನ್ನೂ ನಡೆಸುತ್ತಿದೆ. ಎಲ್ಲ ರಾಜ್ಯಗಳಲ್ಲಿ ಅಂಧರ ಕ್ರಿಕೆಟ್‌ ಮಂಡಳಿ ಸ್ಥಾಪಿಸಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಂಗವಿಕಲರ ಅಭಿವೃದ್ಧಿಯ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಗರಿಕರು ಸಹಕಾರ ನೀಡಬೇಕು ಎಂದು ಕೋರಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡ ಮಾತನಾಡಿ, ‘ರಸಸಂಜೆ ಕಾರ್ಯಕ್ರಮ ನಡೆಸುವುದು ಸುಲಭವಲ್ಲ. ನಾನು ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಸಂಘಟಕರು ಮುಂಜಾಗ್ರತೆಯಿಂದ ಕಾರ್ಯಕ್ರಮ ಆಯೋಜಿಸಬೇಕು. ವಾಣಿಜ್ಯ ಮಂಡಳಿಯು ಎಲ್ಲಾ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.

ಟಿಕೆಟ್‌ ದರ ನಿಗದಿ

ಈ ರಸಸಂಜೆ ಕಾರ್ಯಕ್ರಮಕ್ಕೆ ₹ 250, ₹ 500, ₹ 1000 ಮತ್ತು ₹ 2000 ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಸಮರ್ಥನಂನ ಎಲ್ಲ ಶಾಖೆಗಳಲ್ಲೂ ಟಿಕೆಟ್‌ಗಳು ಲಭ್ಯವಿವೆ. ಟಿಕೆಟ್‌ಗಾಗಿ ವಿಕಾಸ್‌ ಮೊಬೈಲ್– 94808 09596, ಸತೀಶ್‌ ಮೊಬೈಲ್– 94808 35956, ರಾಘವೇಂದ್ರ ಬಿ.ಎಸ್‌. ಮೊಬೈಲ್ 94808 09597 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT