ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷವೇ ‘ಮಾರ್ಟಿನ್‌’, ‘ಕೆಡಿ’ ತೆರೆಗೆ

Published 30 ಮೇ 2024, 23:30 IST
Last Updated 30 ಮೇ 2024, 23:30 IST
ಅಕ್ಷರ ಗಾತ್ರ

ಧ್ರುವ ಸರ್ಜಾ ನಟನೆಯ ಎರಡು ಬಹು ನಿರೀಕ್ಷಿತ ಚಿತ್ರಗಳು ಈ ವರ್ಷವೇ ತೆರೆಗೆ ಬರುವುದು ಖಚಿತವಾಗಿದೆ. ಎ.ಪಿ. ಅರ್ಜುನ್‌ ನಿರ್ದೇಶಿಸಿರುವ ‘ಮಾರ್ಟಿನ್‌’ ಅಕ್ಟೋಬರ್‌ 11ಕ್ಕೆ ತೆರೆಗೆ ಬರಲಿದೆ. ‘ಕೆಡಿ’ಯನ್ನು ಕ್ರಿಸ್‌ಮಸ್‌ಗೆ ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ ನಿರ್ದೇಶಕ ಪ್ರೇಮ್‌.

ಉದಯ್‌ ಮೆಹ್ತಾ ನಿರ್ಮಿಸಿ, ಅರ್ಜುನ್‌ ಸರ್ಜಾ ಚಿತ್ರಕಥೆ ಬರೆದಿರುವ ‘ಮಾರ್ಟಿನ್‌’ ಸೆಟ್ಟೇರಿ ಎರಡು ವರ್ಷಗಳ ಮೇಲಾಗಿತ್ತು. ‘ನನಗೆ ಮತ್ತು ಧ್ರುವ ಸರ್ಜಾ ಅವರಿಗೆ ಹೋದಲೆಲ್ಲ ‘ಮಾರ್ಟಿನ್‌’ ಏಕೆ ತಡ ಎಂದು ಕೇಳುತ್ತಿದ್ದರು. ಚಿತ್ರದ ವ್ಯಾಪ್ತಿ ದೊಡ್ಡದಿದೆ. ಸಿನಿಮಾದಲ್ಲಿ ಎರಡು ಗಂಟೆಗಳಷ್ಟು ಗ್ರಾಫಿಕ್ಸ್‌ ಇದೆ. ಹೀಗಾಗಿ ಚಿತ್ರ ತಡವಾಯ್ತು. ಅ.11ಕ್ಕೆ ಖಚಿತವಾಗಿ ತೆರೆಗೆ ಬರುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಹೀಗಾಗಿ ಪ್ರಚಾರಕ್ಕೆ ಸಮಯ ಬೇಕು. ಅಂತರರಾಷ್ಟ್ರೀಯ ಗುಣಮಟ್ಟದ ವಿಷ್ಯುವಲ್ಸ್‌ ಇದೆ. ಒಂದೇ ಒಂದು ದೃಶ್ಯವನ್ನು ಮರು ಚಿತ್ರೀಕರಣ ಮಾಡಿಲ್ಲ. ಕನ್ನಡದಲ್ಲಿ ಇಷ್ಟು ದೊಡ್ಡ ಬಜೆಟ್‌ನ ಸಿನಿಮಾ ಬಂದಿಲ್ಲ’ ಎಂದರು ನಿರ್ದೇಶಕ ಎ.ಪಿ. ಅರ್ಜುನ್‌.

ಕೆವಿಎನ್ ಪ್ರೊಡಕ್ಷನ್ ನಿರ್ಮಾಣದಲ್ಲಿ, ಅರ್ಜುನ್ ಜನ್ಯ ಸಂಗೀತ ನೀಡಿರುವ ‘ಕೆಡಿ’ ಚಿತ್ರದ ಆಡಿಯೊ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂದು ನಿರ್ದೇಶಕ ಪ್ರೇಮ್‌ ಘೋಷಿಸಿದ್ದಾರೆ. ‘ಈ ಚಿತ್ರದ ಕಥೆ ನಡೆಯುವುದು ಎಪ್ಪತ್ತು, ಎಂಬತ್ತರ ದಶಕದಲ್ಲಿ. ಚಿತ್ರದ ಹಾಡುಗಳಿಗೆ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ 256 ಪೀಸ್ ಆರ್ಕೆಸ್ಟ್ರಾ ಬಳಸಲಾಗಿದೆ. ಈವರೆಗೆ 150 ದಿನಗಳ ಚಿತ್ರೀಕರಣ ನಡೆಸಿದ್ದೇವೆ. ಇನ್ನೊಂದು ಮಾತಿನ ಭಾಗ ಹಾಗೂ ಮೂರು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಆಗಸ್ಟ್ 16ರ ವರಮಹಾಲಕ್ಷ್ಮಿ ಹಬ್ಬದಂದು ಮುಂಬೈನಲ್ಲಿ ಚಿತ್ರದ ಟೀಸರ್ ಹಾಗೂ 24ಕ್ಕೆ ಚಿತ್ರದ ಮೊದಲ ಹಾಡನ್ನು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ’ ಎನ್ನುತ್ತಾರೆ ಪ್ರೇಮ್‌.

‘ಮಾರ್ಟಿನ್‌ ಚಿತ್ರವನ್ನು 250 ದಿನ ಚಿತ್ರೀಕರಣ ಮಾಡಿದ್ದೇವೆ. ಇದೊಂದು ತಂತ್ರಜ್ಞರ ಸಿನಿಮಾ. ಎಲ್ಲರೂ ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ಸಿನಿಮಾದಲ್ಲಿ ಆ ಶ್ರದ್ಧೆ ಕಾಣಿಸುತ್ತದೆ. ಸಿನಿಮಾಕ್ಕೆ ಜನ ಬರುತ್ತಿಲ್ಲ, ಸ್ಟಾರ್‌ ನಟರು ಸಿನಿಮಾ ಮಾಡುತ್ತಿಲ್ಲ ಎಂಬ ದೂರಿದೆ. ಇನ್ನು ಮುಂದೆ ಎಚ್ಚರ ವಹಿಸುತ್ತೇವೆ. ಇನ್ನು ‘ಕೆಡಿ’ ಚಿತ್ರಕ್ಕೆ ಕೆವಿಎನ್ ಜೊತೆ ಸಹಿ ಮಾಡಿದಾಗ ಯಾರ ಕೈಯಲ್ಲಿ ನಿರ್ದೇಶನ ಮಾಡಿಸುವುದು ಎಂಬ ಪ್ರಶ್ನೆ ಬಂದಾಗ ಮೊದಲು ನನ್ನ ಬಾಯಲ್ಲಿ ಬಂದದ್ದು ಪ್ರೇಮ್ ಹೆಸರು. ನಾವು ಸೆಟ್‌ಗೆ ಹೋದಾಗ ಅವರು ಟೀಚರ್ ರೀತಿ ಇರುತ್ತಾರೆ. ಇಡೀ ಬೆಂಗಳೂರನ್ನೇ ಅವರು, ಇನ್ನೊಂದು ಬೆಂಗಳೂರು ಮಾಡಿಬಿಟ್ಟಿದ್ದರು. ಚಿತ್ರದ ಬಗ್ಗೆ ಎಲ್ಲ ಕಡೆಯಿಂದಲೂ ಪಾಸಿಟಿವ್ ವೈಬ್ಸ್ ಬರುತ್ತಿದೆ’ ಎಂದು ಎರಡು ಚಿತ್ರಗಳ ಅನುಭವ ಹೇಳುತ್ತಾರೆ ಧ್ರುವ ಸರ್ಜಾ.

‘ಕೆಡಿ’ಯಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿಯಂಥ ಕಲಾವಿದರು ನಟಿಸಿದ್ದಾರೆ. ವಿಲಿಯಂ ಡೇವಿಡ್ ಅವರ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಭಾರತ–ಪಾಕಿಸ್ತಾನದ ನಡುವಿನ ದೇಶಭಕ್ತಿಯ ಕಥೆ ಹೊಂದಿರುವ ‘ಮಾರ್ಟಿನ್‌’ನಲ್ಲಿ ವೈಭವಿ ಶಾಂಡಿಲ್ಯ ಧ್ರುವಗೆ ಜೋಡಿಯಾಗಿದ್ದಾರೆ. ರವಿ ಬಸ್ರೂರು ಸಂಗೀತ, ಸತ್ಯ ಹೆಗಡೆ ಛಾಯಾಚಿತ್ರಗ್ರಹಣ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT