ಇಂದ್ರಜಿತ್ ಲಂಕೇಶ್ ತಮ್ಮ ಪುತ್ರನಿಗಾಗಿ ಆ್ಯಕ್ಷನ್–ಕಟ್ ಹೇಳಿರುವ ‘ಗೌರಿ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಕಿಚ್ಚ ಸುದೀಪ್, ನಟಿ ಪ್ರಿಯಾಂಕಾ ಉಪೇಂದ್ರ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿದ್ದು, ಮಂಡ್ಯ ಶೈಲಿಯಲ್ಲಿ ಖಡಕ್ ಡೈಲಾಗ್ ಹೇಳಿದ್ದಾರೆ. ಸಾನ್ಯ ಅಯ್ಯರ್ ಜೋಡಿಯಾಗಿದ್ದಾರೆ. ಪ್ರೇಮಕಥೆಯ ಎಳೆ ಹೊಂದಿರುವ ಚಿತ್ರದಲ್ಲಿ ಹಾಡು, ಫೈಟ್‌ಗಳು ಹೇರಳವಾಗಿವೆ.
‘ಪ್ರತಿಯೊಬ್ಬರ ಮನೆಯಲ್ಲೂ ನಡೆಯುವ ಕಥೆಯನ್ನು ಪ್ರತಿನಿಧಿಸುವ ಸಿನಿಮಾವಿದು. ಈಗಿನ ಯುವಜನತೆಗೆ ಸ್ಫೂರ್ತಿ ಸಂದೇಶವನ್ನು ಇದರಲ್ಲಿ ನಿರೀಕ್ಷೆ ಮಾಡಬಹುದು. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಐದು ಜನ ಸಂಗೀತ ನಿರ್ದೇಶಕರು ಸಂಗೀತ ನೀಡಿದ್ದಾರೆ. ದೇಶದ ಜನಪ್ರಿಯ ಗಾಯಕರು ಹಾಡಿದ್ದಾರೆ’ ಎಂದರು ನಿರ್ದೇಶಕ ಇಂದ್ರಜಿತ್ ಲಂಕೇಶ್.
ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿದ್ದು, ಮಾಸ್ತಿ ಮಂಜು ಮತ್ತು ಬಿ.ಎ. ಮಧು ಸಂಭಾಷಣೆಯಿದೆ. ಪ್ರಿಯಾಂಕಾ ಉಪೇಂದ್ರ, ಸಿಹಿಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಮಾನಸಿ ಸುಧೀರ್, ಸಂಪತ್ ಮೈತ್ರೇಯ, ಲೂಸ್‌ಮಾದ ಯೋಗಿ, ಅಕುಲ್ ಬಾಲಾಜಿ ಮುಂತಾದವರು ತಾರಾಗಣದಲ್ಲಿದ್ದಾರೆ.