ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೇದಾ’ ಚಿತ್ರ ಪ್ರಚಾರ: ಅಪ್ಪು ಧ್ಯಾನದಲ್ಲಿ ಶಿವಣ್ಣನ ಗಾನ

ಶಿವರಾಜಕುಮಾರ್ ದಂಪತಿ ಪ್ರವಾಸ
Last Updated 6 ಜನವರಿ 2023, 12:45 IST
ಅಕ್ಷರ ಗಾತ್ರ

ಧಾರವಾಡ: ಬೊಂಬೇ ಹೇಳುತೈತೆ ಮತ್ತೆ ಹೇಳುತೈತೆ... ಎಂದು ಚಿತ್ರನಟ ಶಿವರಾಜ್‌ಕುಮಾರ್ ಹಾಡು ಆರಂಭಿಸುತ್ತಿದ್ದಂತೆ ಸಂಗಮ್ ಚಿತ್ರಮಂದಿರದಲ್ಲಿ ಕಿಕ್ಕಿರಿದು ನೆರೆದಿದ್ದ ಜನರೂ ಹಾಡು ಗುನುಗಲು ಆರಂಭಿಸಿದರು. ‘ಬಾನ ದಾರಿಯಲ್ಲಿ ತೇಲು ಬಂದ...’ ಹಾಡಿಗೆ ಅಪ್ಪು ಚಿತ್ರ ಹಿಡಿದು ಧನಿಗೂಡಿಸಿದರು.

ವೇದ ಚಿತ್ರದ ಯಶಸ್ಸಿಗಾಗಿ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಲು ಶುಕ್ರವಾರ ನಗರಕ್ಕೆ ಭೇಟಿ ನೀಡಿದ ಶಿವರಾಜಕುಮಾರ್ ಚಿತ್ರದ ಕುರಿತು ಮಾತನಾಡಿದರು. ‘ಅಪ್ಪು... ಅಪ್ಪು...’ ಎಂಬ ಅಭಿಮಾನಿಗಳ ಕೋರಿಕೆಗೆ ತಮ್ಮನನ್ನು ನೆನೆದು ಭಾವುಕರಾದರು. ‘ಅಪ್ಪುವನ್ನು ಪ್ರೀತಿಸಿ ಹಾಗೂ ಪೂಜಿಸಿ. ಆತ ನಮ್ಮೆಲ್ಲರನ್ನೂ ನೋಡುತ್ತಿರುತ್ತಾನೆ. ಆತ ಖುಷಿ ಪಟ್ಟರೆ ಸಾಕು, ಅದುವೇ ನನಗೆ ಖುಷಿ’ ಎಂದರು.

‘ನನ್ನ ಮೊದಲ ಸಿನಿಮಾ ‘ಆನಂದ್‌’ ಚಿತ್ರವನ್ನು ಅಮ್ಮ ನಿರ್ಮಿಸಿದ್ದರು. ಇದೀಗ 125ನೇ ಚಿತ್ರವನ್ನು ಗೀತಾ ಪಿಚ್ಚರ್ಸ್ ಮೂಲಕ ನನ್ನ ಪತ್ನಿ ಗೀತಾ ನಿರ್ಮಿಸಿದ್ದಾರೆ. ಚಿತ್ರ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಂಡಿದೆ. ಜನರ ಪ್ರತಿಕ್ರಿಯೆಯೂ ಉತ್ತಮವಾಗಿದೆ. ಹೀಗಾಗಿ ನಾವು ಎಲ್ಲರಿಗೂ ಆಭಾರಿಯಾಗಿದ್ದೇವೆ’ ಎಂದರು.

‘ಎರಡು ಚಿತ್ರಗಳು ಸಧ್ಯ ನಿರ್ಮಾಣ ಹಂತದಲ್ಲಿವೆ. ಉತ್ತರ ಕರ್ನಾಟಕದ ಕಥೆ ಹಾಗೂ ಇಲ್ಲಿನ ನೆಲ ಸಂಸ್ಕೃತಿಯನ್ನು ಇಟ್ಟುಕೊಂಡ ಕಥೆಗಳು ಬಂದಿವೆ. ನನಗೂ ಈ ಭಾಗದ ಚಿತ್ರ ಮಾಡಬೇಕೆಂಬ ಆಸೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ, ಅಂಥದ್ದೊಂದು ಚಿತ್ರ ಶೀಘ್ರವೇ ಸೆಟ್ಟೇರಲಿದೆ. ನನ್ನ ಪ್ರತಿ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಪುನೀತ್ ಇರುತ್ತಿದ್ದ. ಆತನ ಅಗಲಿಕೆಯ ನಂತರ ಕಳೆದುಕೊಂಡ ಭಾವ ನಮ್ಮ ಕುಟುಂಬವನ್ನು ಆವರಿಸಿದೆ’ ಎಂದರು.

ಇದಕ್ಕೂ ಮೊದಲು ಮಾತನಾಡಿದ ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್, ‘ಅಭಿಮಾನಿಗಳ ಅಪೇಕ್ಷೆಯಂತೆ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಪ್ರೇಕ್ಷಕರು ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಚಿತ್ರ ಯಶಸ್ವಿಗೊಳಿಸಿದ್ದಾರೆ. ಹೀಗಾಗಿ ಅವರೆಲ್ಲರಿಗೂ ಧನ್ಯವಾದ ತಿಳಿಸಲು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದೇವೆ’ ಎಂದರು.

ವೇದಾ ಸಿನಿಮಾದ ‘ಇಲ್ನೋಡೆ ಪುಷ್ಪಾ...’, ‘ಯಾವನೋ ಇವ್ನು ಗಿಲ್ಲಕ್ಕು...’ ಎಂದು ಶಿವಣ್ಣ ಹಾಡುತ್ತಿದ್ದಂತೆ ಪ್ರೇಕ್ಷಕರು ಕೇಕೆ ಹಾಕಿ ಸಂಭ್ರಮಿಸಿದರು.

ಬೆಳಗಾವಿಯಿಂದ ಬಂದ ಶಿವರಾಜಕುಮಾರ್ ದಂಪತಿಯನ್ನು ಸಾಮಾಜಿಕ ಹೋರಾಟಗಾರ ಬಸವರಾಜ ಮಲಕಾರಿ ಅವರ ನೇತೃತ್ವದಲ್ಲಿ ಅಭಿಮಾನಿಗಳು ಬರಮಾಡಿಕೊಂಡರು. ಸ್ವಾಗತಕ್ಕೆ ಜಾನಪದ ಕಲಾತಂಡಗಳು ಪ್ರದರ್ಶನ ಮುಗಿಲುಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT