ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದನವನ: ಕುಂಟೆಬಿಲ್ಲೆ– ಹಳ್ಳಿಗಾಡಿನ ಕಥನ

Published 16 ಮೇ 2024, 23:30 IST
Last Updated 16 ಮೇ 2024, 23:30 IST
ಅಕ್ಷರ ಗಾತ್ರ

ಮತ್ತೊಂದು ಗ್ರಾಮೀಣ ಸೊಗಡಿನ ಕಥೆಯೊಂದನ್ನು ತೆರೆ ಮೇಲೆ ತರಲು ‘ದಕ್ಷಯಜ್ಞ’, ‘ತರ್ಲೆ ವಿಲೇಜ್‌’ ಖ್ಯಾತಿಯ ನಿರ್ದೇಶಕ ಜಿಬಿಎಸ್‌ ಸಿದ್ದೇಗೌಡ ಮುಂದಾಗಿದ್ದಾರೆ.

ಅವರ ‘ಕುಂಟೆಬಿಲ್ಲೆ’ ಸಿನಿಮಾ ಚಿತ್ರೀಕರಣ ಮೈಸೂರಿನ ಮೈದನಹಳ್ಳಿಯಲ್ಲಿ ಭರದಿಂದ ನಡೆದಿದೆ. 

ಹಳೇ ಮೈಸೂರು ಭಾಗದ ಗ್ರಾಮೀಣ ಕಥನಗಳನ್ನು ತೆರೆಯ ಮೇಲೆ ತಂದು ಯಶಸ್ಸು ಗಳಿಸಿರುವ ಸಿದ್ದೇಗೌಡ ಅವರಿಗೆ ‘ಕುಂಟೆಬಿಲ್ಲೆ’  ಮೂಲಕ ಮರೆಯಾಗುತ್ತಿರುವ ದೇಸಿ ಆಟ, ಬದಲಾಗುತ್ತಿರುವ ಗ್ರಾಮಗಳ ಭೂ– ಸ್ವರೂಪ, ಸಂಸ್ಕೃತಿಯನ್ನು ಕಟ್ಟಿಕೊಡುವ ಹಂಬಲ. ನಾಯಕ ಯದುವಿಗೆ ನಾಯಕಿಯಾಗಿ ಮೇಘಶ್ರೀ ಜೊತೆಯಾಗಿದ್ದಾರೆ. 

‘ಹಳ್ಳಿಯೆಂದರೆ ಮನೆ, ಹೊಲವಷ್ಟೇ ಅಲ್ಲ. ಅಲ್ಲೊಂದು ವ್ಯಾಪಾರ– ವ್ಯವಹಾರವಿದೆ. ನೂರಾರು ಕಥೆಗಳಿವೆ. ಪ್ರೀತಿ, ಪ್ರೇಮವಿದೆ. ಆಲೆಮನೆ, ಶುಂಠಿ ಮನೆಯಲ್ಲಿ ನಡೆಯುವ ಘಟನೆಗಳು, ಅಪರಾಧಗಳನ್ನು ವಿಭಿನ್ನವಾಗಿ ಈ ಚಿತ್ರದಲ್ಲಿ ತೋರಿಸುತ್ತಿರುವೆ. ಅಸೂಯೆ, ಹೊಟ್ಟೆ ಕಿಚ್ಚು, ಜಾತೀಯತೆ ಹಳ್ಳಿಗಳನ್ನು ಸುಡುತ್ತಿದ್ದು, ಕೊನೆಗೆ ಗೆಲ್ಲುವುದು ಮನುಷ್ಯತ್ವ ಎಂಬುದನ್ನು ಚಿತ್ರದಲ್ಲಿ ನಿರೂಪಿಸುತ್ತಿದ್ದೇನೆ’ ಎಂದು ಚಿತ್ರದ ನಿರ್ದೇಶಕ ಜಿಬಿಎಸ್‌ ಸಿದ್ದೇಗೌಡ ಹೇಳಿದರು. 

‘ಮನೋರೋಗಿ ಬಗ್ಗೆ ‘ಥಿಯರಿ’ ಎಂಬ ಸಿನಿಮಾ ಮಾಡಿದ್ದೆ. ನಿರೀಕ್ಷಿತವಾಗಿ ಚಿತ್ರ ಓಡಲಿಲ್ಲ. ‘ಋತುಮತಿ’ ಚಿತ್ರ ಬಿಡುಗಡೆ ಆಗಬೇಕಿದೆ. 2015ರಿಂದಲೂ ಸಿನಿಮಾ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವೆ. ಭಿನ್ನ ಕಥೆಯೊಂದನ್ನು ಹೇಳಿದರೆ, ಸಿನಿಮಾ ಚೆನ್ನಾಗಿದ್ದರೆ ಜನರು ಟಾಕೀಸ್‌ಗಳಿಗೆ ಬಂದೇ ಬರುತ್ತಾರೆ. 40 ದಿನಗಳಲ್ಲಿ ಈ ಚಿತ್ರದ ಶೂಟಿಂಗ್ ಮುಗಿಯಲಿದೆ. ಮೈಸೂರು ಸುತ್ತಮುತ್ತಲ ಚಿತ್ರೀಕರಣದ ನಂತರ ಕೆಲವು ದೃಶ್ಯಗಳಿಗೆ ಚಿಕ್ಕಮಗಳೂರು ಹಾಗೂ ಊಟಿಗೂ ತಂಡ ತೆರಳಲಿದೆ’ ಎಂದರು. 

ಎಸ್‌.ಬಿ.ಶಿವು,ಕುಮಾರ್ ಗೌಡ ಅವರು ನಿರ್ಮಾಪಕರಾಗಿದ್ದು, ಬಿ.ಎ.ಮಧು– ಸಂಭಾಷಣೆ, ಮುಂಜಾನೆ ಮಂಜು– ಛಾಯಾಗ್ರಹಣ, ಹರಿಕಾವ್ಯ– ಸಂಗೀತ, ಸುಜಿತ್ ಅವರ ಸಂಕಲನ ಚಿತ್ರಕ್ಕಿದೆ. ಸಿನಿಮಾದ ನಟರು ಹಾಗೂ ತಂತ್ರಜ್ಞರು ಹಳೆ ಮೈಸೂರಿನ ಹಳ್ಳಿಗಾಡಿನವರೇ ಎಂಬುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT