ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನಿನ್ನೂ ಸೆಲೆಬ್ರಿಟಿ ಎನಿಸಿಲ್ಲ: ‘ಸಿಂಪಲ್‌’ ಸಂಜನಾ

ಅಕ್ಷರ ಗಾತ್ರ

‘ನಾನಿನ್ನೂ ಸೆಲೆಬ್ರಿಟಿ ಎನಿಸಿಲ್ಲ. ನನ್ನ ಸಿನಿಮಾಗಳು ಇನ್ನೂ ರಿಲೀಸ್‌ ಆಗಿಲ್ಲ. ಸೆಲೆಬ್ರಿಟಿ ಆಗುವ ಉದ್ದೇಶದಿಂದ ಬಣ್ಣದ ಲೋಕಕ್ಕೆ ಬಂದವಳಲ್ಲ. ನಟನೆಯ ಹುಚ್ಚು ಆಸಕ್ತಿಯಿಂದ ಬಂದಿದ್ದೇನೆ. ಸಿನಿಮಾ ಮೂಲಕ ತುಂಬಾ ಜನರ ಮೇಲೆ ಪ್ರಭಾವ ಬೀರಬಹುದೆಂದು ಭಾವಿಸಿದ್ದೇನೆ’ ಎನ್ನುತ್ತಲೇ ಮಾತಿಗಿಳಿದರು ‘ವೀಕೆಂಡ್‌’ ಸಿನಿಮಾದ ಹೀರೊಯಿನ್‌ ಸಂಜನಾ ಬುರ್ಲಿ.

ಸ್ಥಿಗ್ಧ ಸೌಂದರ್ಯ, ಸೌಮ್ಯ ಸ್ವಭಾವ, ಸಹಜ ಅಭಿನಯ, ತೂಗಿ ಅಳೆಯುವ ಮಾತಿನಕಲೆಗಾರಿಕೆಯಿಂದ ಗಮನ ಸೆಳೆಯುತ್ತಾರೆ ಈಉದಯೋನ್ಮುಖ ನಟಿ. ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನಲ್ಲಿ ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ ವಿಷಯದಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದಾರೆ. ‘ಅಭಿನಯದಲ್ಲೂ ನಾನಿನ್ನೂ ವಿದ್ಯಾರ್ಥಿ’ ಎಂದುವಿನಯವಾಗಿಯೇ ಹೇಳುತ್ತಾರೆ.

ಸಂಜನಾ ಬುರ್ಲಿ ನಾಯಕಿಯಾಗಿ ನಟಿಸಿರುವ ‘ವೀಕೆಂಡ್‌’ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಈ ಸಿನಿಮಾ ತನ್ನ ವೃತ್ತಿಬದುಕಿಗೆ ಹೊಸದೊಂದು ವೇದಿಕೆ ಕಲ್ಪಿಸಲಿದೆ ಎನ್ನುವುದು ಅವರ ನಂಬಿಕೆ.

* ಬಣ್ಣದ ಲೋಕಕ್ಕೆ ಪ್ರವೇಶಿಸಿದ್ದು ಹೇಗೆ?

ನನ್ನದು ಸಿನಿಮಾ ಹಿನ್ನೆಲೆಯ ಕುಟುಂಬವಲ್ಲ. ಈ ರಂಗಕ್ಕೆ ಕಾಲಿಟ್ಟವರಲ್ಲಿ ನಾನೇ ಮೊದಲು. ಇಲ್ಲಿಗೆ ಬರಲುನನಗೆ ಯಾರೂ ದಾರಿ ತೋರಿಸಲಿಲ್ಲ. ಚಿತ್ರರಂಗದ ಪ್ರವೇಶ ಕುರಿತು ಅಂತರ್ಜಾಲ ತಾಣದ ಜಾಲಾಟ ನಡೆಸಿದೆ. ಬಹಳಷ್ಟು ನಟ– ನಟಿಯರು ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದಾರೆ ಎನ್ನುವುದು ತಿಳಿಯಿತು. ಆಗ ನನಗೂ ರಂಗಭೂಮಿ ಮೇಲೆ ಆಸಕ್ತಿ ಮೊಳೆಯಿತು.

* ನಟನೆ ಬಗ್ಗೆ ತರಬೇತಿ ಪಡೆದಿದ್ದೀರಾ?

ಚಿಕ್ಕವಯಸ್ಸಿನಿಂದಲೂ ನಟಿಯಾಗುವ ಆಸೆ ಇತ್ತು. ಅಂತರ ಶಾಲಾಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಏಕಪಾತ್ರಾಭಿನಯ ಮಾಡುತ್ತಿದ್ದೆ. ನಮ್ಮ ಶಾಲೆಯಲ್ಲಿ ‘ಶುಭಾರಂಭ’ ಎನ್ನುವ ರಂಗ ತಂಡವಿತ್ತು. ಎಸ್ಸೆಸ್ಸೆಲ್ಸಿ ಓದುವಾಗ ಆ ತಂಡದ ಜೊತೆಯಾದೆ. ತಂಡದೊಟ್ಟಿಗೆ ಮೂರು ಮೂರುಪ್ರದರ್ಶನಗಳಲ್ಲಿ ಅಭಿನಯಿಸಿದೆ. ಇದೇ ನನ್ನ ನಟನೆಗೆ ವೇದಿಕೆಯಾಯಿತು.

* ಕಿರುತೆರೆಯ ಪಯಣದ ಬಗ್ಗೆ ಹೇಳಿ.

ಜೀ ಕನ್ನಡ ವಾಹಿನಿಯಲ್ಲಿ ‘ಪತ್ತೇದಾರಿ ಪ್ರತಿಭಾ’ ಧಾರಾವಾಹಿಗೆ ಆಡಿಷನ್‌ ನಡೆಯುತ್ತಿತ್ತು. ಈ ಬಗ್ಗೆ ನನಗೆ ಮಾಹಿತಿ ಸಿಕ್ಕಿತು. ಆಡಿಷನ್‌ನಲ್ಲಿ ಆಯ್ಕೆಯಾದೆ. ಕ್ಯಾಮೆರಾ ಎದುರು ನಟನೆ ಪರೀಕ್ಷೆ ಎದುರಿಸಿದ್ದು ಅದೇ ಮೊದಲು. ನನ್ನ ಬಣ್ಣದ ಬದುಕು ಆರಂಭವಾಗಿದ್ದು ಕಿರುತೆರೆಯಿಂದಲೇ. ಆ ನಂತರದಲ್ಲಿ ಹಲವು ಧಾರಾವಾಹಿಗಳಲ್ಲಿ ಮುಖ್ಯಪಾತ್ರಗಳಲ್ಲಿ ಅವಕಾಶ ಸಿಕ್ಕಿದವು.

* ‘ವೀಕೆಂಡ್‌’ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿದ್ದು ಹೇಗೆ?

ನಾಗತಿಹಳ್ಳಿ ಪ್ರತಿಭಾ ನಿರ್ದೇಶನದ ‘ಸ್ನೇಹ ಹರ್ಷ’ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಅದರ ಡಬ್ಬಿಂಗ್‌ ಕಾರ್ಯ ಮುಗಿದಿದೆ. ಇದರಲ್ಲಿ ನನ್ನದು ಇನ್‌ಸ್ಪೆಕ್ಟರ್‌ ಪಾತ್ರ. ಇದು ಆ್ಯಕ್ಷನ್‌ ವಿತ್‌ ಲವ್‌ಸ್ಟೋರಿ ಚಿತ್ರ. ‘ವೀಕೆಂಡ್‌’ ನನ್ನ ಎರಡನೇ ಸಿನಿಮಾ. ಇದರಲ್ಲಿ ನನ್ನದು ಸಿಂಪಲ್‌ ಹಡುಗಿಯ ಪಾತ್ರ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ನಟಿಸಿದ್ದೇನೆ. ಚಿತ್ರದಲ್ಲಿ ನಾನು ತುಂಬಾ ಇನೊಸೆಂಟ್‌. ನನ್ನ ತಂಟೆಗೆ ಬರುವವರ ಪಾಲಿಗೆ ಮಾತ್ರ ವೈಲೆಂಟ್‌. ನನ್ನ ನಿರೀಕ್ಷೆಗೂ ಮೀರಿ ಸಿನಿಮಾ ಚೆನ್ನಾಗಿ ಬಂದಿದೆ. ಎಲ್ಲರಿಗೂ ರೀಚ್‌ ಆಗುವ ವಿಶ್ವಾಸವಿದೆ.

* ಅನಂತ್‌ನಾಗ್‌ ಅವರೊಂದಿಗೆ ನಟಿಸಿದ ಅನುಭವ ಹೇಗಿತ್ತು?

ಅನಂತ್ ಸರ್‌ ಅವರದು ನಾಯಕನ ತಾತನ ಪಾತ್ರ. ಅವರಜತೆಗೆ ನಟಿಸುವಾಗ ತುಂಬಾ ನರ್ವಸ್‌ ಆಗಿದ್ದೆ. ಚಿತ್ರದ ಮೊದಲ ದೃಶ್ಯಕ್ಕೆ ಆರೇಳು ಬಾರಿ ಟೇಕ್‌ ತೆಗೆದುಕೊಂಡೆ. ನನ್ನ ಪರಿಸ್ಥಿತಿ ಅವರಿಗೆ ಅರ್ಥವಾಯಿತು. ‘ಬಾ ಇಲ್ಲಿ ಮಗು. ಯಾಕೆಬೇಜರಾಗಿದ್ದೀಯಾ. ನೀನು ಮೊದಲೆಲ್ಲ ಆಕ್ಟ್‌ ಮಾಡಿದ್ದೀಯಲ್ಲ’ ಎಂದು ನನ್ನಲ್ಲಿ ಅವರು ಧೈರ್ಯ ತುಂಬಿದರು. ನನ್ನ ನಿಜವಾದ ತಾತನಂತೆ ಕಂಡರು. ಅವರು ಧೈರ್ಯ ತುಂಬಿದ್ದು ನಟನೆಗೆ ಸುಲಭವಾಯಿತು.

* ನಿಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೇಳಿ.

ಅರವಿಂದ್‌ ಕೌಶಿಕ್‌ ನಿರ್ದೇಶಿಸುತ್ತಿರುವ ‘ಸ್ಟೀಲ್‌ ಪಾತ್ರೆ ಸಾಮಾನು’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದರ ಚಿತ್ರೀಕರಣ ನಡೆಯುತ್ತಿದೆ. ಸಂಪೂರ್ಣ ಕಾಮಿಡಿ ಸಿನಿಮಾ. ‘ರಾಧಾ ಸರ್ಚಿಂಗ್‌, ರಮಣ ಮಿಸ್ಸಿಂಗ್‌’ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿರುವೆ. ಇದರ ಅರ್ಧದಷ್ಟು ಶೂಟಿಂಗ್‌ ಮುಗಿದಿದೆ. ಇದು ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರ. ಸೆಲೆಬ್ರಿಟಿ ಫೋಟೊಗ್ರಾಫರ್‌ ರಾಘವ್‌ ಇದರ ನಾಯಕ. ಇದರಲ್ಲಿ ನನ್ನದು ಆರ್ಕಿಟೆಕ್ಟ್‌ ಎಂಜಿನಿಯರಿಂಗ್‌ ಓದುತ್ತಿರುವ ವಿದ್ಯಾರ್ಥಿನಿ ಪಾತ್ರ.

* ನಿಮಗೆ ಎಂತಹ ಪಾತ್ರಗಳಲ್ಲಿ ನಟಿಸಲು ಇಷ್ಟ?

ಈಗ ನಟಿಸುತ್ತಿರುವ ಚಿತ್ರಗಳ ಪಾತ್ರಗಳು ವಿಭಿನ್ನವಾಗಿವೆ. ಆವೇಂಜರ್ಸ್‌ ಸರಣಿಯಂತಹ ಆ್ಯಕ್ಷನ್‌ ಸಿನಿಮಾಗಳಲ್ಲಿ ಫುಲ್ಪವರ್ ಪ್ಯಾಕ್‌ ಹೀರೊಯಿನ್‌ನಂತಹ ಪಾತ್ರ ಮಾಡಬೇಕು ಎಂಬ ಆಸೆಯಿದೆ. ಬಿಂದಾಸ್‌ ಪಾತ್ರಗಳಲ್ಲೂ ನಟಿಸಲು ಇಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT