ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿ ಕಹಿ ಉಂಡ ವಿಜಯ್ ‘ಸರ್ಕಾರ್’

Last Updated 11 ನವೆಂಬರ್ 2018, 19:30 IST
ಅಕ್ಷರ ಗಾತ್ರ

ವಿಜಯ್ ಅಭಿನಯದ ‘ಸರ್ಕಾರ್’ ಸಿನಿಮಾ ಒಂದೆಡೆ ಮೋಡಿ ಮಾಡುತ್ತಿದ್ದರೆ, ಮತ್ತೊಂದೆಡೆ ವಿವಾದದ ಸುಳಿಯಲ್ಲಿ ಸಿಲುಕಿದೆ. ಸಿನಿಮಾ ಬಿಡುಗಡೆಗೊಂಡ ಎರಡೇ ದಿನಗಳಲ್ಲಿ ₹100 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಇನ್ನೊಂದೆಡೆ,ಚಿತ್ರದಲ್ಲಿನವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಆಗ್ರಹಿಸಿ ಎಐಎಡಿಎಂಕೆ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.ಇದರಿಂದಾಗಿ,ಚಿತ್ರತಂಡಕ್ಕೆ ಸಿಹಿಕಹಿ ಎರಡೂ ಸಮಾನವಾಗಿ ಸಿಕ್ಕಂತಾಗಿದೆ.

ಸಿನಿಮಾದ ಗಳಿಕೆಯನ್ನು ಗಮನಿಸಿದರೆ ಬಿಡುಗಡೆಗೊಂಡ ಮೊದಲ ವಾರದಲ್ಲಿ ₹ 200 ಕೋಟಿಯ ಗಡಿದಾಟಲಿದೆ ಎಂದು ಅಂದಾಜಿಸಲಾಗಿದೆ. ತಮಿಳುನಾಡಿನಲ್ಲಿ ‘ಬಾಹುಬಲಿ 2’ ಚಿತ್ರದ ಮೊದಲ ದಿನದ ಗಳಿಕೆಯ ದಾಖಲೆಯನ್ನು ‘ಸರ್ಕಾರ್’ ಪುಡಿಗಟ್ಟಿದೆ. ‘ಬಾಹುಬಲಿ 2’ ಮೊದಲ ದಿನ ₹ 19 ಕೋಟಿ ಗಳಿಸಿದರೆ, ‘ಸರ್ಕಾರ್’ ಕಲೆಕ್ಷನ್ ₹ 30 ಕೋಟಿಯ ಗಡಿ ದಾಟಿದೆ ಎನ್ನಲಾಗಿದೆ. ಸ್ವತಃ ವಿಜಯ್ ಅಭಿನಯದ ಹಿಂದಿನ‘ಮೆರ್ಸಲ್’ ಸಿನಿಮಾದ ಗಳಿಕೆಯನ್ನೂ ಈ ಸಿನಿಮಾ ಹಿಂದಿಕ್ಕಿದೆ.

ವಿಜಯ್ ಸಿನಿಮಾಗಳು ನೂರು ಕೋಟಿ ರೂಪಾಯಿ ಗಳಿಸಿದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸದ ಸಿನಿಮಾ ತಜ್ಞರು, ಎರಡೇ ದಿನದಲ್ಲಿ ₹ 100 ಕೋಟಿ ಗಳಿಸಿರುವುದಕ್ಕೆ ಅಚ್ಚರಿಗೊಂಡಿದ್ದಾರೆ.

ಇನ್ನು ಕರ್ನಾಟಕದಲ್ಲಿ 80ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮೊದಲ ದಿನ ಸುಮಾರು 630 ಪ್ರದರ್ಶನ ಕಂಡ ಈ ಸಿನಿಮಾ, ₹ 6.15 ಕೋಟಿ ಗಳಿಸಿದೆ. ಎರಡನೇ ದಿನ ₹ 3 ಕೋಟಿ ಕಲೆಕ್ಷನ್ ಮಾಡಿದೆಯಂತೆ.

ವಿವಾದಕ್ಕೆ ಕಾರಣ

ಈಗಾಗಲೇ ₹ 100 ಕೋಟಿಯ ಕ್ಲಬ್ ಸೇರಿರುವ ‘ಸರ್ಕಾರ್’ಗೆ ತಾಯ್ನಾಡಿನಲ್ಲೇ ಎಐಎಡಿಎಂಕೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

‘ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಜನರಿಗೆ ಉಚಿತವಾಗಿ ನೀಡಿದ ಕೆಲ ವಸ್ತುಗಳನ್ನು ರಾಜಕೀಯ ಲಾಭಕ್ಕಾಗಿ ವಿತರಿಸಲಾಗಿದೆ ಎಂಬಂತೆ ಸಿನಿಮಾದಲ್ಲಿ ವ್ಯಂಗ್ಯವಾಗಿ ಚಿತ್ರೀಕರಿಸಲಾಗಿದೆ. ಜಯಲಲಿತಾ ಅವರನ್ನು ಅಣಕಿಸುವಂತಹ ಕೆಲ ಡೈಲಾಗ್‌ಗಳಿವೆ’ ಎಂದು ಎಐಎಡಿಎಂಕೆ ಆರೋಪಿಸಿದೆ.

‘ಸರ್ಕಾರ ಉಚಿತವಾಗಿ ನೀಡಿದ ಕೆಲ ವಸ್ತುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಜನ ಅವುಗಳನ್ನು ಸುಟ್ಟು ಹಾಕುವ ದೃಶ್ಯವೂ ಇದೆ. ಇದೆಲ್ಲವೂ, ಪಕ್ಷವನ್ನು ಗುರಿಯಾಗಿಸಿಕೊಂಡೇ ಮಾಡಲಾಗಿದೆ. ಹೀಗಾಗಿ, ಆಕ್ಷೇಪಾರ್ಹ ದೃಶ್ಯಗಳನ್ನು ಸಿನಿಮಾದಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದೆ.

ಪ್ರತಿಭಟನೆ ಹೆಚ್ಚಾಗಿದ್ದರಿಂದ ಕೆಲ ಚಿತ್ರಮಂದಿರಗಳಲ್ಲಿ ಸರ್ಕಾರ್ ಪ್ರದರ್ಶನ ಮುಂದೂಡಲಾಗಿದ್ದು, ಕೆಲವೆಡೆ ಪ್ರದರ್ಶನವನ್ನೇ ರದ್ದುಪಡಿಸಲಾಗಿದೆ. ಚಿತ್ರದ ಪೋಸ್ಟರ್‌ಗಳನ್ನು ಹರಿದುಹಾಕಿ, ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಲಾಗಿದೆ. ಪ್ರತಿಭಟನೆಗೆ ಮಣಿದ ಚಿತ್ರತಂಡ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT