ಗುರುವಾರ , ನವೆಂಬರ್ 14, 2019
22 °C

ಮಮ್ಮಿ, ಡ್ಯಾಡಿಯ ಅವಾಂತರ

Published:
Updated:
Prajavani

ಪೋಷಕರ ಮೊಬೈಲ್‌ ಗೀಳು ಮಕ್ಕಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಅವರ ಜೀವಕ್ಕೆ ಮುಳುವಾದ ಉದಾಹರಣೆಗಳೂ ಇವೆ. ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಚಿತ್ರದ್ದೂ ಇದೇ ಕಥಾಹಂದರ.

ಈ ಹಿಂದೆ ‘ವಾಸ್ಕೋಡಿಗಾಮ’ ಚಿತ್ರ ನಿರ್ದೇಶಿಸಿದ್ದ ಮಧುಚಂದ್ರ ಅವರೇ ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಆಕಾಶ ಬುಟ್ಟಿ ಸಿನಿಮಾಸ್‌ನಿಂದ ನಿರ್ಮಾಣವಾಗಿರುವ ಇದರಲ್ಲಿ ನಟ ಸೃಜನ್ ಲೋಕೇಶ್ ಹಾಗೂ ಮೇಘನಾ ರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಮಕ್ಕಳು ಮೊಬೈಲ್ ಗೇಮ್‌ಗಳ ಹವ್ಯಾಸಕ್ಕೆ ಸಿಲುಕುತ್ತಾರೆ. ಇದರಿಂದ ಮಾನಸಿಕ ತೊಂದರೆ ಅನುಭವಿಸುತ್ತಾರೆ. ಆಗ ಪೋಷಕರು ಅನುಭವಿಸುವ ಸಂಕಷ್ಟ ಏನು ಎನ್ನುವುದೇ ಇದರ ಕಥಾಹಂದರ. ಇದಕ್ಕೆ ಕಾಮಿಡಿ ಲೇಪನ ಹಚ್ಚಲಾಗಿದೆ ಎಂಬುದು ಚಿತ್ರತಂಡದ ವಿವರಣೆ.

ಪಬ್ಜಿ, ಬ್ಲೂವೇಲ್‌ನಂತಹ ಆಟಗಳಿಂದ ಚಿಣ್ಣರ ಬಾಲ್ಯ ಮಸುಕಾದ ನಿದರ್ಶನ ಸಾಕಷ್ಟಿವೆ. ಇದರಲ್ಲಿ ಪೋಷಕರ ಪಾತ್ರವೂ ಇದೆ. ಮಕ್ಕಳ ಆಟ, ಪಾಠದಲ್ಲಿ ಭಾಗಿಯಾಗದಿರುವುದೇ ಇದಕ್ಕೆ ಮೂಲ ಕಾರಣ. ತಂದೆ– ತಾಯಿ ಸಾಮಾಜಿಕ ಜಾಲತಾಣದಲ್ಲಿ ಮುಳುಗಿದರೆ ಅದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಸಂದೇಶ ಹೇಳಲಾಗಿದೆಯಂತೆ.

ಬೆಂಗಳೂರಿನ ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ. ಶಮಂತ್ ನಾಗ್‌ ಸಂಗೀತ ಸಂಯೋಜಿಸಿದ್ದಾರೆ. ರವೀಂದ್ರನಾಥ್‌ ಅವರ ಛಾಯಾಗ್ರಹಣವಿದೆ. ಸುರೇಶ್ ಆರ್ಮುಗಂ ಅವರ ಸಂಕಲನವಿದೆ. ಅಚ್ಯುತ್‌ ಕುಮಾರ್, ಗಿರಿಜಾ ಲೋಕೇಶ್, ದತ್ತಣ್ಣ, ಸುಂದರರಾಜ್, ಬೇಬಿಶ್ರೀ ಹಾಗೂ ಮಾಸ್ಟರ್ ಆಲಾಪ್, ಚಕ್ರವರ್ತಿ, ಅರುಣ್ ಲೋಕಿ, ಟೋನಿ, ತಿಲಕ್, ಸಿದ್ದು, ಮಂಥನಾ, ಕನ್ನಿಕಾ, ಅನಿತಾ, ಆರಾಧ್ಯ ತಾರಾಗಣದಲ್ಲಿದ್ದಾರೆ.

ಡಿಸೆಂಬರ್ ಮೊದಲ ವಾರ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ವಿಶೇಷ ಪ್ರಚಾರ ಕೂಡ ಕೈಗೊಂಡಿದೆ. ಇತ್ತೀಚೆಗೆ ಕೆಂಗೇರಿಯ ಸೇಂಟ್ ಬೆನೆಡಿಕ್ಟ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಮೊಬೈಲ್‌ ವಿರಾಮ ದಿನಾಚರಣೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಚಾಲನೆ ನೀಡಿ, ಚಿತ್ರತಂಡಕ್ಕೆ ಶುಭ ಕೋರಿದರು. 

ಪ್ರತಿಕ್ರಿಯಿಸಿ (+)