ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಅಪ್ಪನಿಗೆ ಹುಟ್ಟಿದ ಮಗ, ರೌಡಿಸಂ ಮಾಡಲು ಬರಬೇಡಿ: ಜಗ್ಗೇಶ್‌ ಕಿಡಿನುಡಿ

ಟ್ವಿಟರ್‌ನಲ್ಲಿ ಲೈವ್‌ ಬಂದ ಜಗ್ಗೇಶ್‌| ಕನ್ನಡ ಸಿನಿಮಾ ರಂಗದ ಸದ್ಯದ ಪರಿಸ್ಥಿಯನ್ನು ಆಕ್ರೋಶದ ಮೂಲಕ ಹೊರಹಾಕಿದ ನಟ
Last Updated 23 ಫೆಬ್ರುವರಿ 2021, 6:05 IST
ಅಕ್ಷರ ಗಾತ್ರ

ಬೆಂಗಳೂರು: ಅಪ್ಪನಿಗೆ ಹುಟ್ಟಿದ ಮಗ ನಾನು. ನನಗೆ ಅವಮಾನ ಮಾಡಲು ಬರಬೇಡಿ. ಇದು ರೌಡಿಸಂ ವೇದಿಕೆ ಅಲ್ಲ....

ಇದು ನಟ ಜಗ್ಗೇಶ್‌ ಅವರ ಕಟು ಆಕ್ರೋಶದ ಮಾತು.

ಮೈಸೂರು ಸಮೀಪ ತಿ. ನರಸೀಪುರದ ಅತ್ತಳ್ಳಿಯಲ್ಲಿ ದರ್ಶನ್‌ ಅಭಿಮಾನಿಗಳಿಂದ ತರಾಟೆಗೆ ಒಳಗಾಗಿದ್ದ ಜಗ್ಗೇಶ್‌ ಅವರು ಘಟನೆಯ ಸಂದರ್ಭ ಇದ್ದ ಯುವಕರಿಗೆ ಹಾಗೂ ಚಿತ್ರರಂಗದ ಪ್ರಮುಖರಿಗೆ ಕಟು ಮಾತುಗಳಲ್ಲಿ ಎಚ್ಚರಿಕೆಯನ್ನೂ ನೀಡಿದರು.

‘ನನಗೆ ಬುದ್ಧಿಹೇಳಬೇಕಾದವರು ಕನ್ನಡದ ಜನ. ನನ್ನನ್ನು ಹೆತ್ತ ಜನ. ಯಾರೋ ಒಬ್ಬ ನಟ, ಅವನ ಅಭಿಮಾನಿಗಳು ನನ್ನ ಬಳಿ ಬರಲು ಆಗುವುದಿಲ್ಲ. ನನ್ನ ಪಾಡಿಗೆ ನನ್ನನ್ನು ಬಿಡಿ. ನನ್ನನ್ನು ಅವಮಾನ ಮಾಡಲು ಬರಬೇಡಿ. ಇಂಥ ಸ್ಥಿತಿಗತಿಗಳನ್ನು ಶುರು ಮಾಡಿದರೆ ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಶುರುವಾಗುತ್ತದೆ’ ಎಂದು ಅಸಹನೆ ಹೊರಹಾಕಿದರು.

‘ಇವತ್ತು ಒಬ್ಬ ನಟನ ಚಿತ್ರ ಹಿಟ್‌ ಆಯಿತು ಅಂದ್ರೆ ಇನ್ನೊಬ್ಬ ನಟ ಇನ್ನೊಂದು ಹುನ್ನಾರ ಮಾಡುತ್ತಾನೆ. ನಾನೊಬ್ಬನೇ ಉಳಿಯಬೇಕು. ನನ್ನೊಬ್ಬನ ಚಿತ್ರವೇ ಓಡಬೇಕು ಅನ್ನುವುದು ಇದೆ. ಈ ತರಹ ಘೇರಾವ್‌ ಮಾಡೋದು, ತುಳಿಯುವುದು ದರಿದ್ರ ರಾಜಕಾರಣದಲ್ಲಿ ಇದೆ.ಯಾವುದೋ ಒಂದು ಸಣ್ಣ ವಿಷಯವನ್ನಿಟ್ಟುಕೊಂಡು ಜಗ್ಗೇಶ್‌ಗೆ ಅವಮಾನ ಮಾಡುತ್ತೀದ್ದೇವೆ ಅಂತ ನೀವು ಭಾವಿಸಿದ್ದರೆ, ನನಗೆ ಯಾವ ನೋವೂ’ ಇಲ್ಲ ಎಂದಿದ್ದಾರೆ.

‘ನಿನ್ನೆ ಬಂದ ಹುಡುಗರ ಮುಂದೇನೇ ಕುಳಿತುಕೊಂಡು ಮಾತನಾಡಿದ್ದೇನೆ. ಓಡಿಹೋಗಿಲ್ಲ. ಯಾವುದಾದರೂ ಆಸ್ತಿ ಹೊಡೆಯುವ ಮಾತನಾಡಿಲ್ಲ. ಯಾವುದಾದರೂ ಕಾಂಟ್ರ್ಯಾಕ್ಟ್‌ ಬಗ್ಗೆ, ಕೋಟ್ಯಂತರ ರೂಪಾಯಿ ವಂಚನೆ ಮಾಡುವ ಬಗ್ಗೆ ಮಾತನಾಡಿದ್ದೇನಾ? ಯಾರಿಗಾದರೂ ನೋವು ಕೊಡೋಣ ಎಂದು ಮಾತನಾಡಿದ್ದೇನಾ? ಯಾರನ್ನಾದರೂ ಕೊಲೆ ಮಾಡೋಣ ಅಂತ ಮಾತನಾಡಿದ್ದೇನಾ? ಅಥವಾ ಕನ್ನಡದ ನೆಲಕ್ಕೆ ಅವಮಾನ ಆಗುವ ರೀತಿ ಮಾತನಾಡಿದ್ದೇನಾ?’ ಎಂದು ಪ್ರಶ್ನಿಸಿದ್ದಾರೆ.

‘ನಾನು ಖಾಸಗಿಯಾಗಿ ಮಾತನಾಡಿದ್ದೇನೇ ವಿನಃ, ನಿಮ್ಮ ಟಿವಿಯಲ್ಲಿ ಬಂದು ಮಾತನಾಡಿದ್ದೇನಾ? ಖಾಸಗಿಯಾಗಿ ಮಾತನಾಡಿದ್ದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಕುತಂತ್ರ ವ್ಯವಸ್ಥೆ ಇದೆ ಎಂದು ಗೊತ್ತಾಗಿದೆ. ನಾನು ತಪ್ಪೇ ಮಾತನಾಡಿಲ್ಲ. ಯಾಕೆ ಹೆದರಿಕೊಳ್ಳಲಿ?ಅಲ್ಲಿ ನನಗೆ ಯಾರಾದರೂ ಹೊಡೆಯಲು ಬಂದಿದ್ದರಾ? ಯಾರಿಗೆ ನನ್ನನ್ನು ಮುಟ್ಟುವ ಧೈರ್ಯ ಇದೆ?’ ಎಂದು ಗುಡುಗಿದ್ದಾರೆ.

‘ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ಈಗ ಜಾಲರಿ ಹಿಡಿಯುತ್ತಿರುವ ನೀವ್ಯಾರೂ (ಮಾಧ್ಯಮದವರು) ಹುಟ್ಟಿರಲಿಲ್ಲ. ನೀವು ಯಾರಿಗೆ ಬಕೀಟು ಹಿಡೀತಿದ್ದೀರಲ್ಲಾ ಅವರು ಯಾರೂ ಹುಟ್ಟಿರಲಿಲ್ಲ. ನಾನು 80ರ ದಶಕದಲ್ಲಿ ಸಿನಿಮಾರಂಗಕ್ಕೆ ಬಂದವನು. ಡಾ.ರಾಜ್‌ಕುಮಾರ್‌, ಅಂಬರೀಷ್‌, ವಿಷ್ಣುವರ್ಧನ್‌, ಪ್ರಭಾಕರ್‌ ಶಂಕರ್‌ನಾಗ್‌, ಅನಂತನಾಗ್‌ ಅವರ ಜೊತೆ ಹೆಜ್ಜೆ ಹಾಕಿದವನು, ಬದುಕಿದವನು, ನಕ್ಕವನು, ಅತ್ತವನು ನಾನು. ಇವತ್ತಿಗೂ ನಾನು ಈ ಜಾಗದಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ಕನ್ನಡಿಗರು ಕಾರಣ. ಇವತ್ತಿಗೂ ನಾನು ಬೇರೆ ಭಾಷೆಯತ್ತ ಎಡಗಾಲನ್ನೂ ಇಟ್ಟಿಲ್ಲ. ಬೇರೆ ಭಾಷೆಯವರಿಗೆ ಜಾಲರಿ ಹಿಡಿದಿಲ್ಲ. ಕನ್ನಡ ಕನ್ನಡ ಎಂದು ಸತ್ತಿದ್ದೇನೆ ಮುಂದೆ ಕೂಡಾ ಸಾಯುತ್ತೇನೆ. ನಾನು ಕಾಗೆ ಹಾರಿಸುವಂತಿದ್ದರೆ 20 ಬಾರಿ ಶಾಸಕನಾಗುತ್ತಿದ್ದೆ, ಮಂತ್ರಿಯಾಗುತ್ತಿದ್ದೆ. ಬಕೀಟು ಹಿಡಿದಿದ್ದರೆ ಬೂಟು ನೆಕ್ಕಿದ್ದರೆ ನೂರಾರು ಹುದ್ದೆಗಳನ್ನು ತೆಗೆದುಕೊಳ್ಳುತ್ತಿದ್ದೆ’ ಎಂದು ಹೇಳಿದ್ದಾರೆ.

‘ಅನ್ಯ ಭಾಷಿಗರೆಲ್ಲಾ ಬಂದು ಕರ್ನಾಟಕವನ್ನು ದಬ್ಬಾಳಿಕೆ ಮಾಡುತ್ತಿದ್ದಾರೆ. ಕನ್ನಡದ ಮಕ್ಕಳನ್ನು ಬೆಳೆಯದಂತೆ ತುಳಿಯುತ್ತಿದ್ದಾರೆ. ನಮ್ಮವರಿಗೆಲ್ಲಾ ಪರಭಾಷೆಯಲ್ಲಿ ಮಾತನಾಡುವಂತೆ ಪ್ರಚೋದನೆ ಕೊಡುತ್ತಿದ್ದಾರೆ. ಅಲ್ಲಿಗೆ ಕನ್ನಡ ಚಿತ್ರರಂಗ ಹಾಳಾಗಿ ಹೋಗಿದೆ. ಯಾರೂ ಹೇಳುವವರಿಲ್ಲ ಕೇಳುವವರಿಲ್ಲ. ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಸತ್ತ ಮಾರನೇ ದಿನವೇ ಕನ್ನಡದ ಸ್ವಾಭಿಮಾನವೂ ಸಾಯುತ್ತಿದೆ. ನೆನಪಿಟ್ಟುಕೊಳ್ಳಿ, ಉಳಿದವರು ನಾವೇ ಮೂರು ನಾಲ್ಕು ಜನ. ನಾನು, ಶಿವರಾಜ್‌ಕುಮಾರ್‌, ರವಿಚಂದ್ರನ್‌, ರಮೇಶ್‌. ನಾವೆಲ್ಲಾ ಸತ್ತ ಮೇಲೆ ನಮ್ಮ ತಿಥಿ ಮಾಡಿ. ಆನಂದಪಡಿ’ ಎಂದು ತೀವ್ರ ನೋವಿನಿಂದ ನುಡಿದಿದ್ದಾರೆ.

‘ನಾನು ಒಬ್ಬ ದೀಕ್ಷೆ ತೊಟ್ಟ ಮನುಷ್ಯ. ಮಠ, ದೇವರು, ದಿಂಡರು ಅಂತ ಬದುಕಿರುವವನು ನಾನು. ನಾನು ಒಕ್ಕಲಿಗನಾ ಎಂದು ಕೇಳಿದಾಗಲೂ ಸುಮ್ಮನಿದ್ದವನು. ನಿನ್ನೆ ನೂರಾರು ಜನ ಬಂದು ಕಿರುಚುತ್ತಿದ್ದಾಗ ನಾನು ಹೆಂಗ್ರೀ ಮಾತನಾಡೋದಿಕ್ಕಾಗುತ್ತೆ’ ಎಂದು ಪ್ರಶ್ನಿಸಿರುವ ಅವರು, ನನಗೆ ಜನ ಇಲ್ವಾ? ಕರೆದ್ರೆ ಬರೋದಿಲ್ವಾ? ನಾವು ಯಾವಾಗ ತಪ್ಪು ಮಾಡುತ್ತೇವೋ ಆಗ ಮಾತ್ರ ನನ್ನ ಚಪ್ಪಲಿ ಬಿಚ್ಚಿ ತಲೆಬಾಗಿ ಕ್ಷಮೆ ಕೇಳುತ್ತೇನೆ. ನನ್ನ ಕನ್ನಡಿಗರು ಸತ್ತು ಹೋಗಿಲ್ಲ. ಬದುಕಿದ್ದಾರೆ. ನೆನಪಿಟ್ಟುಕೊಳ್ಳಿ. ನೀವು ನನ್ನ ನಲ್ವತ್ತು ವರ್ಷದ ಶ್ರಮವನ್ನು ಅವಮಾನಿಸಿದ್ದೀರಿ. ಈ ರೀತಿ ಕುಚೇಷ್ಟೆಯ ಮಾತುಗಳನ್ನು ಆಡಬೇಡಿ. ಇಂಥ ರೌಡಿಸಂ ಮಾಡೋದಿಕ್ಕೆ ಬರಬೇಡಿ’ ಎಂದಿದ್ದಾರೆ.

‘ಮೂರುದಿನ ಜನ ಥಿಯೇಟರ್‌ ಮುಂದೆ ಬರುತ್ತಿದ್ದಾರಲ್ಲಾ, ಅದಲ್ಲ ಜೀವನ. ಒಬ್ಬೊಬ್ಬ ನಿರ್ಮಾಪಕರು ಬೀದಿಗೆ ಬರುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಇದು ಇಂದಿನ ಸ್ಥಿತಿ ಎಂದು ಭಾವುಕರಾಗಿ ಹೇಳಿದ್ದಾರೆ.

‘ನನಗೂ ಅಭಿಮಾನಿಗಳ ಸಂಘ ಇದೆ. 162 ಸಂಘಗಳಿವೆ. ಅವರು ಯಾರಿಗೂ ಪ್ರತಿಕ್ರಿಯಿಸದಂತೆ ಹೇಳಿದ್ದೇನೆ. ನಾನು ಒಕ್ಕಲಿಗ ಮನೆತನದಿಂದ ಬಂದವನು. ತಿನ್ನಲು ಅನ್ನವಿಲ್ಲದೇ, ಗೋಣಿ ಚೀಲ ಹಾಸಿಕೊಂಡು ಮಲಗಿ ಕಷ್ಟಪಟ್ಟು ಬೆಳೆದವನು. 40 ವರ್ಷಗಳಲ್ಲಿ 150 ಸಿನಿಮಾ ಮಾಡಿದ್ದೇನೆ. 29 ಚಿತ್ರಗಳನ್ನು ನಿರ್ಮಿಸಿದ್ದೇನೆ. ಎರಡು ಬಾರಿ ಶಾಸಕ ಆಗಿದ್ದೀನಿ. ಎಲ್ಲೂ ಕೂಡಾ ಹಲ್ಕಟ್‌ ಕೆಲಸ ಮಾಡಿಲ್ಲ. ತಲೆ ಹಿಡಿದಿಲ್ಲ. ಕಳ್ಳತನ ಮಾಡಿಲ್ಲ. ಲಂಚ ತಗೊಂಡಿಲ್ಲ. ಪ್ರಾಮಾಣಿಕವಾಗಿ ಬದುಕಿದ್ದೇನೆ. ಅದು ಮಂತ್ರಾಲಯದ ರಾಯರಿಗೆ ಗೊತ್ತು’ ಎಂದಿದ್ದಾರೆ.

‘ಇದು ಯಾರು ಯಾರೋ ನಟರ ನಡುವಿಗೆ ತಂದಿಟ್ಟು ತಮಾಷೆ ನೋಡುವುದು ಬಿಟ್ಟುಬಿಡಿ. ಜನರಿಗೆ ಒಂದು ದಿನ ಇದೆಲ್ಲಾ ಗೊತ್ತಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

***

ಇದನ್ನು ನೋಡಿ:ಸಿನಿ ಸಿಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT