ಶಂಕರ್ ನೆನಪು ಅಜರಾಮರ

7

ಶಂಕರ್ ನೆನಪು ಅಜರಾಮರ

Published:
Updated:
Deccan Herald

ನ.9, ಕರಾಟೆ ಕಿಂಗ್ ಎಂದೇ ಖ್ಯಾತರಾದ ನಟ ಶಂಕರ್‌ನಾಗ್ ಹುಟ್ಟುಹಬ್ಬ. ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿ ಬಹುಬೇಗ ಮಾಯವಾದ ಮರೆಯಲಾಗದ ಮಾಣಿಕ್ಯ ‘ಆಟೊರಾಜ’.

ಸುಮಾರು 28 ವರ್ಷಗಳ ಹಿಂದೆಯೇ ಮರೆಯಾದ ಶಂಕರ್ ಅವರ ನೆನಪು ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ನೆಲೆಯೂರಿದೆ. ‘ಸತ್ತ ಮೇಲೆ ನಿದ್ರಿಸುವುದು ಇದ್ದೇ ಇದೆ. ಬದುಕಿದ್ದಾಗ ಏನಾದರೂ ಸಾಧಿಸಿ’ ಎಂದು ಅವರು ಹೇಳುತ್ತಿದ್ದ ಮಾತು ಎಲ್ಲರಿಗೂ ಸ್ಫೂರ್ತಿದಾಯಕವಾದದ್ದು. 

ಸಿನಿಮಾ, ಕಿರುತೆರೆ, ರಂಗಭೂಮಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಶಂಕರ್ ಕ್ರಿಯಾಶೀಲ ವ್ಯಕ್ತಿ. ನಟನೆಯ ಹೊರತಾಗಿ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ನಾನಾ ಕನಸುಗಳನ್ನು ಕಂಡಿದ್ದ ಅವರು, ಅದನ್ನು ನನಸಾಗಿಸುವ ಮುನ್ನವೇ ಅಪಾರ ಅಭಿಮಾನಿಗಳಿಂದ ದೂರವಾಗಿದ್ದು ದುರಂತವೇ ಸರಿ. ಅವರ ಜನಮದಿನ ಸ್ಯಾಂಡಲ್‌ವುಡ್‌ಗೆ ಒಂದು ರೀತಿಯ ಸಂಭ್ರಮ. ಸುದೀಪ್, ಜಗ್ಗೇಶ್ ಹಾಗೂ ಇನ್ನಿತರು ತಮ್ಮ ಟ್ವಿಟರ್ ಖಾತೆಗಳಲ್ಲಿ ಶಂಕರ್ ಅವರ ಫೋಟೊ, ಒಕ್ಕಣೆಯನ್ನು ಪೋಸ್ಟ್ ಮಾಡಿ ಶುಭಕೋರಿದ್ದಾರೆ.

ಕಿಚ್ಚ ಸುದೀಪ್, ‘ನಮ್ಮೆಲ್ಲರ ಹೃದಯದಲ್ಲಿ ನೀವು ಇಂದಿಗೂ ಜೀವಂತ’ ಎಂದು ಶಂಕರ್‌ನಾಗ್ ಫೋಟೊ ಪೋಸ್ಟ್ ಮಾಡಿದ್ದಾರೆ. ಜಗ್ಗೇಶ್ ಸಹ, ‘ಇವರ ಜೊತೆ ಕಳೆದ ಪ್ರತಿ ಅಮೃತ ಘಳಿಗೆ ಮಾಸದೆ ಉಳಿದಿದೆ ಮನದಲ್ಲಿ.. ಮರೆಯದ ಮಾಣಿಕ್ಯನಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದಿದ್ದಾರೆ.

ಉತ್ತರ ಕನ್ನಡದ ಹೊನ್ನಾವರ ತಾಲ್ಲೂಕಿನ ಮಲ್ಲಾಪುರದಲ್ಲಿ 1954ರ ನವೆಂಬರ್ 9ರಂದು ಜನಿಸಿದ ಶಂಕರ್‌ನಾಗ್ ಅವರ ಮೊದಲ ಹೆಸರು ಶಂಕರ ನಾಗರಕಟ್ಟೆ. ಬಣ್ಣದ ನಂಟು ಬೆಳೆಸಿಕೊಂಡ ಅವರು ಅವಕಾಶ ಅರಸಿಕೊಂಡು ಹೊರಟಿದ್ದು ಮುಂಬೈಯತ್ತ. ಗಿರೀಶ್‌ ಕಾರ್ನಾಡರ ‘ಒಂದಾನೊಂದು ಕಾಲ’ದಲ್ಲಿ ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದ ಅವರು ಮುಂದೆ ‘ಗೀತಾ’, ‘ಭರ್ಜರಿ ಭೇಟೆ’, ‘ಮೂಗನ ಸೇಡು’, ‘ನ್ಯಾಯ ಎಲ್ಲಿದೆ’, ‘ಆಕ್ಸಿಡೆಂಟ್‌’, ‘ಮಿಂಚಿನ ಓಟ’, ‘ಒಂದು ಮುತ್ತಿನ ಕತೆ’ ಚಿತ್ರಗಳು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಮೋಡಿ ಮಾಡಿದ್ದರು.

ಅವರ ಅಭಿನಯದ ‘ಆಟೊರಾಜ’ ಆಟೊ ಚಾಲಕರ ಸ್ಫೂರ್ತಿದಾಯಕ ಸಿನಿಮಾ. ಪ್ರೀತಿಯ ಶಂಕರಣ್ಣ ಮತ್ತೆ ಹುಟ್ಟಿ ಬರಬಾರದೇ ಎಂಬುದು ಅಭಿಮಾನಿಗಳ ಸಾರ್ವಕಾಲಿಕ ಅಭಿಲಾಷೆ.

Tags: 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !