ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ್‌ ನಾಗ್‌ ಪುಣ್ಯಸ್ಮರಣೆ: ಸಾಮಾಜಿಕ ತಾಣಗಳಲ್ಲಿ ಆಟೊರಾಜನ ನೆನಪು

Last Updated 30 ಸೆಪ್ಟೆಂಬರ್ 2021, 8:40 IST
ಅಕ್ಷರ ಗಾತ್ರ

ಬೆಂಗಳೂರು: ಖ್ಯಾತ ನಟ ಶಂಕರ್‌ ನಾಗ್‌ ಇಹಲೋಕ ತ್ಯಜಿಸಿ ಇಂದಿಗೆ 31 ವರ್ಷಗಳಾಗಿವೆ. ಆ ಹಿನ್ನೆಲೆಯಲ್ಲಿ ಶಂಕರ್‌ ನಾಗ್‌ ಅವರ ಸಾಧನೆ ಹಾಗೂ ಕನಸುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸ್ಮರಿಸಲಾಗುತ್ತಿದೆ.

ನಾಡಿನ ಪ್ರಮುಖ ರಾಜಕಾರಣಿಗಳು ಮತ್ತು ಕರಾಟೆ ಕಿಂಗ್‌ ಅಭಿಮಾನಿಗಳು ಅವರನ್ನು ನೆನಪಿಸಿಕೊಂಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಕೆ.ಸುಧಾಕರ್‌, 'ಕನ್ನಡ ಚಿತ್ರರಂಗದ ಅಪ್ರತಿಮ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸೋಣ. ತಮ್ಮ ಅದ್ವಿತೀಯ ಸೃಜನಶೀಲತೆ ಹಾಗೂ ಕಲ್ಪನಾಶಕ್ತಿ ಮೂಲಕ ಅತ್ಯಲ್ಪ ಕಾಲದಲ್ಲೇ ವಿಶಿಷ್ಟ ಛಾಪು ಮೂಡಿಸಿದ್ದ ಶಂಕರ್ ನಾಗ್ ಅವರು ಕನ್ನಡ ಕಲಾಪ್ರೇಮಿಗಳ ಹೃದಯದಲ್ಲಿ ಎಂದೂ ಮರೆಯಲಾಗದ ಅಪರೂಪದ ಮಾಣಿಕ್ಯವಾಗಿದ್ದಾರೆ' ಎಂದು ತಿಳಿಸಿದ್ದಾರೆ.

'ಕನ್ನಡ ಚಿತ್ರರಂಗದ ದಂತಕಥೆಯಂತೆ ಬದುಕಿದ ಶ್ರೇಷ್ಠ ಕಲಾವಿದ, ನಟ, ನಿರ್ದೇಶಕ ಶ್ರೀ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ನಮನಗಳು. ವಿಭಿನ್ನವಾದ ಕಥೆ, ನಟನೆಗಳ ಮೂಲಕ ಶಂಕರ್ ನಾಗ್ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೆಲೆಯಾಗಿದ್ದಾರೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಕರಾಟೆ ಕಿಂಗ್‌ ಶಂಕರ್ ನಾಗ್‌ರನ್ನು ಸ್ಮರಿಸಿರುವ ಸಚಿವ ಗೋಪಾಲಯ್ಯ, 'ಅಪ್ರತಿಮ ನಟನೆ, ಸೃಜನಶೀಲ‌ ನಿರ್ದೇಶನದಿಂದ ಕನ್ನಡಿಗರ ಮನದಲ್ಲಿ ನೆಲೆಸಿದ ಆಟೊರಾಜ, ಚಿತ್ರರಂಗದ ಜೊತೆಗೆ ಕಿರುತೆರೆಯಲ್ಲೂ 'ಮಾಲ್ಗುಡಿ ಡೇಸ್' ನಂತಹ ಕಲಾಕೃತಿ ನೀಡಿದ ಕಲಾವಿದ ಶ್ರೀ ಶಂಕರ್ ನಾಗ್ ಅವರ ಸಂಸ್ಮರಣೆ ದಿನದ ಅನಂತ ನಮನಗಳು. ಅವರ ಪ್ರತಿಭೆ, ಕಲಾಪ್ರೌಢಿಮೆ ಚಿತ್ರಗಳ ಮೂಲಕ ಸದಾ ನಮ್ಮ ಜೊತೆಗಿದೆ' ಎಂದು ಹೇಳಿದ್ದಾರೆ.

'ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸದಾ ಹೊಸತನ್ನು ತಂದು ಜನರ ಮನರಂಜಿಸಿದ ಅತ್ಯಂತ ಕ್ರಿಯಾಶೀಲ ನಿರ್ದೇಶಕ, ನಟ ಶ್ರೀ ಶಂಕರ್ ನಾಗ್ ಅವರ ಸ್ಮೃತಿದಿನದಂದು ಗೌರವದ ಪ್ರಣಾಮಗಳು.‌ ಅಪೂರ್ವ ನಟನೆ, ವಿಭಿನ್ನ ಕಲಾಕೃತಿಗಳಿಂದ ಅವರು ಕನ್ನಡನಾಡಿನ ಕಲಾಲೋಕದ ಮರೆಯಲಾರದ ಅದ್ಭುತ ತಾರೆಯಾಗಿದ್ದಾರೆ' ಎಂದು ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

'ಬಹುಮುಖ ಪ್ರತಿಭೆ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ಗೌರವ ಪ್ರಣಾಮಗಳು. ನಿರ್ದೇಶನ ಮತ್ತು ನಟನೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ದೂರದೃಷ್ಟಿಯುಳ್ಳ ಕಲಾವಿದ. ಇವರ ನಿರ್ದೇಶನದ ಮಾಲ್ಗುಡಿ ಡೇಸ್ ವಿಶ್ವವಿಖ್ಯಾತಿ ಪಡೆದ ದಂತಕಥೆಯಾಗಿದೆ. ಸಾಧನೆಯೇ ಬದುಕಿನ ಗುರಿ ಎಂಬ ಇವರ ತತ್ವ ನಮ್ಮೆಲ್ಲರಿಗೂ ಪ್ರೇರಣೆ' ಎಂದು ಸಂಸದ ಬಿ.ವೈ.ರಾಘವೇಂದ್ರ ಟ್ವೀಟಿಸಿದ್ದಾರೆ.

'ಕನ್ನಡ ಚಿತ್ರರಂಗದ ಕ್ರಿಯಾಶೀಲ‌ ನಟ, ಕಾಲ್ಪನಿಕ ಹಳ್ಳಿ ಮಾಲ್ಗುಡಿಗೆ ಮೂರ್ತ ರೂಪ ನೀಡಿ‌, ಕನ್ನಡಿಗರ ಸೃಜನಶೀಲತೆಯನ್ನು ದೇಶಕ್ಕೇ‌ ಪರಿಚಯಿಸಿ, ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಶ್ರೀ ಶಂಕರ್ ನಾಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು' ಎಂದು ಸಚಿವ ಹಾಲಪ್ಪ ಆಚಾರ್‌ ತಿಳಿಸಿದ್ದಾರೆ.

ಇದೇ ವೇಳೆ ಬೆಂಗಳೂರಿನ ಮೆಟ್ರೊ ನಿಲ್ದಾಣವೊಂದಕ್ಕೆ ಶಂಕರ್‌ ನಾಗ್‌ ಅವರ ಹೆಸರನ್ನು ಇಡಿ ಎಂದು ಅವರ ಅಭಿಮಾನಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಟ ಶಂಕರ್ ನಾಗ್, 1990ರಲ್ಲಿ ತಮ್ಮ 35ನೇ ವಯಸ್ಸಿನಲ್ಲಿಯೇ ರಸ್ತೆ ಅಪಘಾತದಲ್ಲಿ ಮೃತಪಟ್ಟರು.

ಉತ್ತರ ಕನ್ನಡದ ಹೊನ್ನಾವರ ತಾಲ್ಲೂಕಿನ ಮಲ್ಲಾಪುರದಲ್ಲಿ 1954ರ ನವೆಂಬರ್ 9ರಂದು ಜನಿಸಿದ ಶಂಕರ್‌ನಾಗ್ ಅವರ ಮೊದಲ ಹೆಸರು ಶಂಕರ ನಾಗರಕಟ್ಟೆ. ಬಣ್ಣದ ನಂಟು ಬೆಳೆಸಿಕೊಂಡ ಅವರು ಅವಕಾಶ ಅರಸಿಕೊಂಡು ಹೊರಟಿದ್ದು ಮುಂಬೈಯತ್ತ. ಗಿರೀಶ್‌ ಕಾರ್ನಾಡರ ‘ಒಂದಾನೊಂದು ಕಾಲ’ದಲ್ಲಿ ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದ ಅವರು ಮುಂದೆ ‘ಗೀತಾ’, ‘ಭರ್ಜರಿ ಭೇಟೆ’, ‘ಮೂಗನ ಸೇಡು’, ‘ನ್ಯಾಯ ಎಲ್ಲಿದೆ’, ‘ಆಕ್ಸಿಡೆಂಟ್‌’, ‘ಮಿಂಚಿನ ಓಟ’, ‘ಒಂದು ಮುತ್ತಿನ ಕತೆ’ ಚಿತ್ರಗಳು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಮೋಡಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT