ಸೋಮವಾರ, ಜೂನ್ 21, 2021
29 °C

‘ಜೋಗಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 15 ವರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಹೊಡಿ ಮಗಾ ಹೊಡಿ ಮಗಾ ಬಿಡಬೇಡ ಅವ್ನ...’ –‘ಜೋಗಿ’ ಚಿತ್ರದಲ್ಲಿ ‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ಅವರು ಕೈಯಲ್ಲಿ ಲಾಂಗ್‌ ಝಳಪಿಸುತ್ತಾ ಹಾಡುವ ಈ ಹಾಡನ್ನು ಕೇಳದ ಕನ್ನಡದ ಸಿನಿಪ್ರಿಯರು ವಿರಳ. ಪ್ರೇಮ್‌ ನಿರ್ದೇಶನದ ಈ ಸಿನಿಮಾದ ಈ ಸಾಂಗ್‌ ಇಂದಿಗೂ ಜನರ ಮನದಲ್ಲಿ ಗುನುಗುತ್ತಿದೆ. ಮೊಬೈಲ್‌ ರಿಂಗ್‌ಟೋನ್‌ ಕೂಡ ಆಗಿದೆ. ಮಕ್ಕಳ ಬಾಯಲ್ಲೂ ನಲಿದಾಡುತ್ತಿದೆ.

ಅಂದಹಾಗೆ ಕನ್ನಡ ಚಿತ್ರರಂಗದಲ್ಲಿಯೇ ಹೊಸ ದಾಖಲೆ ಬರೆದ ‘ಜೋಗಿ’ ಸಿನಿಮಾ ತೆರೆಕಂಡು ಇಂದಿಗೆ ಬರೋಬ್ಬರಿ 15 ವರ್ಷಗಳಾಗಿವೆ. ಈ ಸಿನಿಮಾ ಬಿಡುಗಡೆಯಾಗಿದ್ದು 2005ರ ಆಗಸ್ಟ್‌ 19ರಂದು. ವಿಶೇಷವೆಂದರೆ ಅಂದು ವರಮಹಾಲಕ್ಷ್ಮೀ ಹಬ್ಬದ ದಿನವಾಗಿತ್ತು. ಈ ದಿನವು ಕನ್ನಡ ಚಿತ್ರಗಳ ಪಾಲಿಗೆ ಅದೃಷ್ಟದ ದಿನ ಎಂಬುದು ಇಂದಿಗೂ ಗಾಂಧಿನಗರದ ಮಂದಿಯ ನಂಬಿಕೆಯಾಗಿದೆ. ‘ಜೋಗಿ’ ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸಿದ್ದು ಇದಕ್ಕೊಂದು ನಿದರ್ಶನ.

‘ಜೋಗಿ’ ಸಿನಿಮಾ ಬಿಡುಗಡೆಯಾಗಿ ಹದಿನೈದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಶಿವಣ್ಣ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನವಾದ ಕಾಮನ್ ಡಿಸ್ಪ್ಲೇ ಪಿಕ್ಚರ್ (ಸಿಡಿಪಿ) ಅನ್ನು ಬಿಡುಗಡೆಗೊಳಿಸಿದ್ದಾರೆ. ಇದು ವೈರಲ್‌ ಆಗಿದೆ.
ಗಲ್ಲಾಪೆಟ್ಟಿಗೆಯಲ್ಲಿ ಸೂಪರ್‌ಹಿಟ್‌ ಕಲೆಕ್ಷನ್‌ ಕಂಡಿದ್ದ ಈ ಚಿತ್ರ ಶಿವರಾಜ್‌ಕುಮಾರ್‌ ಮತ್ತು ಪ್ರೇಮ್‌ ಅವರ ವೃತ್ತಿಬದುಕಿಗೂ ಹೊಸ ತಿರುವು ನೀಡಿತ್ತು. ರಾಜ್ಯದ 45 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಪ್ರದರ್ಶನ ಕಂಡಿತ್ತು. ನಾಲ್ಕು ಥಿಯೇಟರ್‌ಗಳಲ್ಲಿ 25 ವಾರಗಳ ಕಾಲ ಪ್ರದರ್ಶನ ಕಂಡಿದ್ದು ಇದರ ಹೆಗ್ಗಳಿಕೆ.

ಪರದೆ ಮೇಲೆ ಭೂಗತಲೋಕದ ಕಥನದೊಟ್ಟಿಗೆ ತಾಯಿಯ ಸೆಂಟಿಮೆಂಟ್‌ ಅನ್ನು ಹದವಾಗಿ ಬೆರೆಸಿ ಪ್ರೇಮ್‌ ಹೆಣೆದಿದ್ದ ಚಿತ್ರಕಥೆ ಫಲ ಕೊಟ್ಟಿತ್ತು. ನಟಿ ಅರುಂಧತಿ ನಾಗ್‌ ಅವರು ಶಿವರಾಜ್‌ಕುಮಾರ್‌ ಅವರ ತಾಯಿಯಾಗಿ ಬಣ್ಣ ಹಚ್ಚಿದ್ದರು. ಜೆನ್ನಿಫರ್‌ ಕೊತ್ವಾಲ್‌ ನಾಯಕಿಯಾಗಿ ನಟಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು