ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಡಲ್‌ವುಡ್‌ಗೆ ಬಂದ ಸಿದ್‌ ಶ್ರೀರಾಮ್‌

Last Updated 2 ಡಿಸೆಂಬರ್ 2020, 8:04 IST
ಅಕ್ಷರ ಗಾತ್ರ

ತಮಿಳು ಮತ್ತು ತೆಲುಗು ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕ ಸಿದ್‌ ಶ್ರೀರಾಮ್‌ ಈಗ ಚಂದನವನಕ್ಕೂ ಕಾಲಿಟ್ಟಿದ್ದಾರೆ. ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಗೀತ ಗೋವಿಂದಂ’, ‘ಡಿಯರ್‌ ಕಾಮ್ರೇಡ್‌’ ಚಿತ್ರಗಳಿಗೆ ಹಾಡಿದ್ದ ಸಿದ್‌ ಶ್ರೀರಾಮ್‌ ಕನ್ನಡದ ‘ಟಾಮ್‌ ಅಂಡ್‌ ಜೆರ್ರಿ’ ಚಿತ್ರದ ‘ಹಾಯಾಗಿದೆ ಎದೆಯೊಳಗೆ’ ಹಾಡಿಗೆ ಧ್ವನಿಯಾಗಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತ ಮತ್ತು ಸಿದ್ ಶ್ರೀರಾಮ್‌ ಕಂಠಸಿರಿ ಸಿನಿ ಸಂಗೀತಪ್ರಿಯರನ್ನು ಮೋಡಿಗೊಳಿಸುವ ನಿರೀಕ್ಷೆ ಹುಟ್ಟುಹಾಕಿದೆ.

ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಕೆಜಿಎಫ್’ ಚಿತ್ರಕ್ಕೆ ಸಂಭಾಷಣೆ ರಚಿಸಿ ʻಮಾತಿನ ಮಾಂತ್ರಿಕʼ ಎನಿಸಿಕೊಂಡ ರಾಘವ್ ವಿನಯ್ ಶಿವಗಂಗೆ, ಸಿದ್‌ ಶ್ರೀರಾಮ್‌ ಅವರನ್ನು ಕನ್ನಡಕ್ಕೆ ಕರೆತಂದಿದ್ದಾರೆ.

ಸಿದ್ ಶ್ರೀರಾಮ್‍ಗೆ ಕನ್ನಡದ ಚಿತ್ರಗಳಲ್ಲಿ ಹಾಡಲು ಸಾಕಷ್ಟು ಅವಕಾಶಗಳು ಬಂದರೂ, ಕನ್ನಡ ಭಾಷೆಯಲ್ಲಿ ಹಾಡುವ ಮೊದಲ ಹಾಡು ಹೀಗೆಯೇ ಇರಬೇಕೆಂದು ‘ಟಾಮ್ ಅಂಡ್ ಜೆರ್ರಿ’ಗೆ ಕಾದಿದ್ದರಂತೆ. ಈ ಚಿತ್ರದ ಸಂಗೀತ ಮತ್ತು ಸಾಹಿತ್ಯಕ್ಕೆ ಮನಸೋತು ‘ಹಾಯಾಗಿ ಎದೆಯೊಳಗೆ’ ಹಾಡನ್ನು ಖುಷಿಯಿಂದ ಹಾಡಿದ್ದಾರೆ. ಇದರ ಸಾಹಿತ್ಯವನ್ನು ‘ಮೆಲೋಡಿ ಕಿಲ್ಲರ್’ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ಅವರೇ ರಚಿಸಿದ್ದು, ಸಿದ್ ಶ್ರೀರಾಮ್ ಕಂಠ ಸಿರಿಯಲ್ಲಿನ ಈ ಹಾಡು ಖಂಡಿತವಾಗಿಯೂ ದೊಡ್ಡಮಟ್ಟದಲ್ಲಿ ಯಶಸ್ಸು ಕಾಣಲಿದೆ ಎನ್ನುವುದು ಚಿತ್ರತಂಡದ ಭರವಸೆ.

ಜೀವನದ ಏರಿಳಿತಗಳ ನಡುವೆ ಸಾಗುವ ಮಧ್ಯಮ ವರ್ಗದ ಜನರ ಬದುಕನ್ನ ಜೀವಿಸಿ, ವಿಮರ್ಶಿಸಿ ಅತ್ಯಂತ ಕಾಳಜಿಯಿಂದ ಕಥೆ-ಚಿತ್ರಕಥೆ ರಚಿಸಲಾಗಿದೆ. ಸಿನಿಮಾ ರಸಿಕರು ಇಷ್ಟಪಡುವಂತೆ ‘ಟಾಮ್ ಅಂಡ್ ಜೆರ್ರಿ’ ಚಿತ್ರ ಕಟ್ಟಿಕೊಡಲಾಗಿದೆ ಎನ್ನುವುದು ನಿರ್ದೇಶಕ ರಾಘವ್ ವಿನಯ್ ಶಿವಗಂಗೆ ಅವರ ಅನಿಸಿಕೆ.

ಕೋವಿಡ್, ಲಾಕ್‌ಡೌನ್, ವರ್ಕ್ ಫ್ರಮ್ ಹೋಮ್‌ನಿಂದ ಬೇಸತ್ತಿರುವ ಸಿನಿರಸಿಕರಿಗೆ ಒಂದೊಳ್ಳೆಯ ಮನರಂಜನೆ ನೀಡುವ ತಯಾರಿಯಲ್ಲಿದೆ ‘ಟಾಮ್ ಅಂಡ್ ಜೆರ್ರಿ’ ಚಿತ್ರತಂಡ.

ನಾಯಕನಾಗಿ ನಿಶ್ಚಿತ್ ಕರೋಡಿ ಹಾಗೂ ನಾಯಕಿಯಾಗಿ ಚೈತ್ರ ರಾವ್ ತೆರೆ ಹಂಚಿಕೊಂಡಿದ್ದಾರೆ. ಜೈ ಜಗದೀಶ್, ತಾರಾ ಅನುರಾಧ, ರಾಕ್ಲೈನ್‌ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು, ಸಂಪತ್ ಮೈತ್ರೇಯ, ಶೇಖರ್ ತಾರಾಗಣದಲ್ಲಿದ್ದಾರೆ.

ರಿದ್ಧಿ ಸಿದ್ಧಿ ಬ್ಯಾನರ್ ಅಡಿ ರಾಜು ಶೇರಿಗಾರ್ ಬಂಡವಾಳ ಹೂಡಿದ್ದಾರೆ. ಸಂಕೇತ್ ಛಾಯಾಗ್ರಹಣ, ಸೂರಜ್ ಅಂಕೋಲೆಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ರಾಜ್ ಕಿಶೋರ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT