ಗುರುವಾರ , ಅಕ್ಟೋಬರ್ 17, 2019
24 °C

ಹಣ್ಣಜ್ಜಿಯ ಪಾತ್ರಕ್ಕೆ ಹೊಸ ಆಪ್ಶನ್‌!

Published:
Updated:

ಸುಮಾರು 70ರ ಹರೆಯದ ತುಂಬು ಜೀವದ ವೃದ್ಧೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ ಎನ್ನುವುದಕ್ಕಿಂತಲೂ ಆ ಪಾತ್ರದಲ್ಲಿ ಜೀವಿಸಿದ್ದಾರೆ ಎನ್ನುವ ಮಾತನ್ನು ‘ಸಿದ್ಧಿ ಸೀರೆ’ ಚಿತ್ರ ಬಿಡುಗಡೆ ಪೂರ್ವ ನೋಡಿದವರೂ ಹೇಳಿರುವ ಮೆಚ್ಚುಗೆ ಮಾತುಗಳಿಗೆ ಸಂತೃಪ್ತ ಭಾವದಲ್ಲಿದ್ದಾರೆ ನಟಿ ಸುಧಾ ನರಸಿಂಹರಾಜು.

‘ಚಿತ್ರದ ಕಥೆಗಾರ ರವಿಶಂಕರ್‌ ಮಿರ್ಲೆ ಅವರು ನನಗೆ ಪರಿಚಿತರು. ಚಿತ್ರತಂಡ ಹಿಂದೊಮ್ಮೆ ನನ್ನ ಬಳಿ ಬಂದು ಸಿದ್ದಿ ಪಾತ್ರ ನಿಭಾಯಿಸುವಂತೆ ಚಿತ್ರಕಥೆ ಕೊಟ್ಟಿತ್ತು. ಆಗ ಸಿನಿಮಾ ಮಾಡಲು ಮುಂದೆ ಬಂದಿದ್ದ ನಿರ್ಮಾಪಕರು ಕೊನೆಗೆ ಬಂಡವಾಳ ಹೂಡಲು ಹಿಂಜರಿದಿದ್ದರಿಂದ ಚಿತ್ರ ಸೆಟ್ಟೇರಲಿಲ್ಲ. ಐದು ವರ್ಷಗಳು ಆದ ಮೇಲೂ ಈ ಸ್ಕ್ರಿಪ್ಟ್‌ ನನ್ನನ್ನೇ ಹುಡುಕಿಬಂದಾಗ ಒಪ್ಪದೇ ಇರಲಾಗಲಿಲ್ಲ’ ಎಂದರು ಸುಧಾ.

‘ಬಹಳ ಮುಗ್ಧ ಮಹಿಳೆ ಸಿದ್ದಿಯ ಪಾತ್ರ ನನ್ನ ವಯಸ್ಸಿಗೆ ಮೀರಿದ್ದು. ನಾನೆಂದೂ ಮಾಡದೇ ಇರುವಂತಹ ಪಾತ್ರವಿದು. ಕೋಲು ಊರಿಕೊಂಡು, ಕುಂಟಿಕೊಂಡು, ಎಲೆ ಅಡಿಕೆ ಜಗಿದು ಉಗಿಯುವ ಪಕ್ಕಾ ಹಳ್ಳಿಯ ಮುದುಕಿ ಅಂದುಕೊಳ್ಳಿ. ತುಂಬಾ ಬಾಯಿ ಬಡುಕಿ, ಸ್ವಾಭಿಮಾನಿ ಕೂಡ. ಈ ಪಾತ್ರ ನಿಭಾಯಿಸುವುದು ನನಗೆ ಅತ್ಯಂತ ಸವಾಲಿನದ್ದೇ ಆಗಿತ್ತು. ಆದರೆ, ನಿರ್ದೇಶಕ ಬ್ರಹ್ಮಾನಂದ ರೆಡ್ಡಿ ಈ ಪಾತ್ರವನ್ನು ಸುಧಮ್ಮನೇ ಮಾಡಬೇಕೆಂದು ಪಟ್ಟು ಹಿಡಿದುಬಿಟ್ಟರು. ಸಿದ್ಧಿಯ ಪಾತ್ರದ ಪ್ರತಿ ಮ್ಯಾನರಿಸಂಗೂ ನಿರ್ದೇಶಕರು ಒತ್ತು ಕೊಡುತ್ತಿದ್ದರು. 

ಅಜ್ಜಮ್ಮನ ಪಾತ್ರಕ್ಕೆ ಬಿ.ಜಯಶ್ರೀ, ಉಮಾಶ್ರೀ ಅವರಂತೆ ನಮಗೆ ಮತ್ತೊಂದು ಆಪ್ಶನ್‌ ಸಿಕ್ಕಿದೆ ಎಂದು ಕೆಲವು ಮಂದಿ ಹೇಳಿರುವುದನ್ನು ಕೇಳಿದ್ದೇನೆ’ ಎನ್ನುವ ಸುಧಾ ಅವರ ಮಾತಿನಲ್ಲಿ ಇಂತಹ ವಿಭಿನ್ನ, ಪ್ರಯೋಗಾತ್ಮಕ ಪಾತ್ರಗಳಿಗೆ ಮುಂದೆಯೂ ತನ್ನನ್ನು ಒಡ್ಡಿಕೊಳ್ಳಲು ಸಿದ್ಧಳಿದ್ದೇನೆ ಎನ್ನುವ ನಿರ್ಧಾರವಿತ್ತು.

ಈ ಪಾತ್ರಕ್ಕೆ ಎಷ್ಟರ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಗೊತ್ತಿಲ್ಲ. ನಾನು ಸಿನಿಮಾ ನೋಡಿದ್ದೇನೆ. ನಮ್ಮನ್ನು ನಂಬಿ ಸಿನಿಮಾಕ್ಕೆ ಬಂಡವಾಳ ಹೂಡಿದವರು ಖುಷಿಯಾಗಿದ್ದಾರೆ, ಸಿದ್ದಿಯನ್ನು ಮೆಚ್ಚಿದ್ದಾರೆ. ಈಗಾಗಲೇ ಈ ಚಿತ್ರ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸದ್ದು ಮಾಡಿದೆ.

ಇದನ್ನೂ ಓದಿ: ಸುಧಾ ಎರಡನೇ ಇನ್ನಿಂಗ್ಸ್ - ಗಟ್ಟಿಮೇಳ

‘ನಿರ್ದೇಶಕರು ಸೇರಿದಂತೆ ಚಿತ್ರತಂಡದ ಹಲವರು., ನಿಮ್ಮ ತಂದೆ ನರಸಿಂಹರಾಜು ಅವರೇ ನಿಮ್ಮೊಳಗೆ ಇದ್ದಾರೆ ಸುಧಮ್ಮ ಎಂದು ಹೇಳಿದ್ದಾರೆ. ಈ ಮಾತು ನಿಜವೇ ಆಗಿದ್ದರೆ, ನನ್ನ ಪಾತ್ರದ ಮೂಲಕ ಸಿದ್ಧಿ ಮತ್ತೆ ಮತ್ತೆ ಬದುಕುತ್ತಾಳೆ ಎಂದಾದರೆ ನನಗಿಂತ ಅದೃಷ್ಟವಂತೆ ಮತ್ತೊಬ್ಬರಿಲ್ಲ. ಕಲಾವಿದರಿಗೆ ಪ್ರಶಂಸೆಗಳೇ ಪ್ರಶಸ್ತಿಗಿಂತ ಮಿಗಿಲು’ ಎನ್ನುವಾಗ ಅವರ ಮಾತಿನಲ್ಲಿ ಸಾರ್ಥಕ್ಯ ಇಣುಕಿತು.

Post Comments (+)